varthabharthi


ವೈವಿಧ್ಯ

ಕಾಮಿಡಿಯನ್ ಮುನವ್ವರ್ ಫಾರೂಕಿಗಾಗಿ ಒಂದು ಪತ್ರ-ಕವನ

ವಾರ್ತಾ ಭಾರತಿ : 3 Dec, 2021
ಮೇಘಾಲೀ ಮಿತ್ರ

ರವಿವಾರ ಬೆಂಗಳೂರಿನ ಗುಡ್ ಶೆಫರ್ಡ್ ಆಡಿಟೋರಿಯಮ್‌ನಲ್ಲಿ ಖ್ಯಾತ ಕಾಮಿಡಿಯನ್ ಮುನವ್ವರ್ ಇಕ್ಬಾಲ್ ಫಾರೂಕಿಯ ಕಾರ್ಯಕ್ರಮವೊಂದು ನಿಗದಿಯಾಗಿತ್ತು. ಕಾರ್ಯಕ್ರಮದ ಟಿಕೆಟ್‌ಗಳನ್ನು ಮಾರಿ ಬಂದ ಹಣವನ್ನು ದಿವಂಗತ ನಟ ಪುನೀತ್‌ರಾಜ್‌ಕುಮಾರ್‌ರ ಪರೋಪಕಾರಿ ಸಂಘಟನೆಯೊಂದಕ್ಕೆ ದೇಣಿಗೆ ನೀಡಲು ಸಂಘಟಕರು ನಿರ್ಧರಿಸಿದ್ದರು. ಆದರೆ, ಈ ವಿಷಯವನ್ನು ಸಂಘಟಕರು ಮೊದಲೇ ಬಹಿರಂಗ ಪಡಿಸಿರಲಿಲ್ಲ. ಯಾಕೆಂದರೆ ಪರೋಪಕಾರಿ ಸಂಘಟನೆಯ ಹೆಸರಿನಲ್ಲಿ ಟಿಕೆಟ್‌ಗಳನ್ನು ಮಾರಲು ಅವರು ಬಯಸಿರಲಿಲ್ಲ. ಅವರ ಕಾರ್ಯಕ್ರಮ ‘ಡೊಂಗ್ರಿ ಟು ನೋವೇರ್’ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ‘ಕಾನೂನು ಮತ್ತು ವ್ಯವಸ್ಥೆ’ಯ ಕಾರಣವನ್ನು ಮುಂದೊಡ್ಡಿ, ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಬೆಂಗಳೂರು ಪೊಲೀಸರು ಸಂಘಟಕರಿಗೆ ಸೂಚಿಸಿದರು.

ಎರಡು ತಿಂಗಳುಗಳ ಅವಧಿಯಲ್ಲಿ 20ಕ್ಕೂ ಅಧಿಕ ಕಾರ್ಯಕ್ರಮಗಳು ರದ್ದಾದ ಬಳಿಕ, ಬೆಂಗಳೂರಿನಲ್ಲೂ ಅದೇ ಪರಿಸ್ಥಿತಿ ಮುಂದುವರಿಯಿತು. ಈ ಎಲ್ಲ ಘಟನೆಗಳು ಕಾಮಿಡಿಯನ್‌ರನ್ನು ನಿರಾಶೆಯ ಅಂಚಿಗೆ ನೂಕಿದೆ. 2021 ಜನವರಿಯಲ್ಲಿ ಹೇಳದ ಹಾಸ್ಯಕ್ಕಾಗಿ ಮುನವ್ವರ್ ಫಾರೂಕಿಯನ್ನು ಬಂಧಿಸಲಾಯಿತು. ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದರು.

ಈ ಘಟನೆಗಳಿಂದ ಮನನೊಂದ ಅವರು ಹೀಗೆ ಬರೆದಿದ್ದಾರೆ: ‘‘ದ್ವೇಷವು ವಿಜಯ ಸಾಧಿಸಿದೆ ಹಾಗೂ ಕಲಾವಿದ ಸೋತಿದ್ದಾನೆ... ನಾನು ಮುಗಿಸುತ್ತಿದ್ದೇನೆ’’.

ಇದಕ್ಕೂ ಮೊದಲು ಮುಂಬೈಯಲ್ಲಿ ನಡೆಯಬೇಕಾಗಿದ್ದ ಅವರ ಕಾರ್ಯಕ್ರಮಗಳನ್ನೂ ಸಂಘಟಕರು ರದ್ದುಗೊಳಿಸಬೇಕಾಯಿತು. ಕಾರ್ಯಕ್ರಮವನ್ನು ರದ್ದುಗೊಳಿಸದಿದ್ದರೆ ಹಿಂಸಾಚಾರ ನಡೆಸುವುದಾಗಿ ಗುಜರಾತ್‌ನಿಂದ ಬಂದ ಬಜರಂಗದಳ ಕಾರ್ಯಕರ್ತರು ಸಭಾಭವನದ ಮಾಲಕರಿಗೆ ಬೆದರಿಕೆ ಹಾಕಿದ್ದರು. ಆಗ ಫಾರೂಕಿ ಹೀಗೆ ಟ್ವೀಟ್ ಮಾಡಿದ್ದರು: ‘‘ಸಭಿಕರ ಸುರಕ್ಷತೆ ನನಗೆ ಅತ್ಯಂತ ಮುಖ್ಯ. ನಾನು ಅನುಭವಿಸುತ್ತಿರುವ ಹಿಂಸೆಯನ್ನು ನನ್ನ ಸಭಿಕರು ಅನುಭವಿಸುವುದನ್ನು ನಾನು ಬಯಸುವುದಿಲ್ಲ’’.

 ನಾನು ನವೆಂಬರ್ 20ರಂದು ಮೊದಲ ಬಾರಿಗೆ ಮುನವ್ವರ್‌ರನ್ನು ಭೇಟಿಯಾದೆ. ಇವರು ಶ್ರದ್ಧೆಯಿಂದ ಹೋರಾಟ ನಡೆಸಬಹುದಾದ ನನ್ನ ಬದುಕಿನಲ್ಲಿರುವ ಕೆಲವೇ ಜನರ ಪೈಕಿ ಒಬ್ಬರು ಎಂಬುದನ್ನು ನಾನು ಬೇಗನೇ ಅರ್ಥ ಮಾಡಿಕೊಂಡೆ. ಈ ವ್ಯಕ್ತಿಯನ್ನು ಭೇಟಿಯಾದ ಯಾರೇ ಆದರೂ, ಅವರ ಪ್ರಾಮಾಣಿಕತೆಗೆ ಸಾಟಿಯಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸ್ವಂತಿಕೆಗಾಗಿ ಕಲಾವಿದನೊಬ್ಬನನ್ನು ಶಿಕ್ಷಿಸುವುದು ಸರ್ವಾಧಿಕಾರಿ ಧೋರಣೆಯಾಗಿದೆ.

ಒಂದು ಮಾತು ನೆನಪಿರಲಿ. ಕೇಸರಿ ಪಡೆಯು ಅವರ ಮೇಲೆ ಪದೇ ಪದೇ ದಾಳಿ ನಡೆಸುವುದು ಅವರು ಏನಾದರೂ ಹೇಳಿದ್ದಾರೆ ಎನ್ನುವ ಕಾರಣಕ್ಕಾಗಿ ಅಲ್ಲ. ಮಾಡದ ಹಾಸ್ಯಕ್ಕಾಗಿ ಅವರನ್ನು ಜೈಲಿಗೆ ಕಳುಹಿಸಲಾಯಿತು. ‘‘ನನ್ನನ್ನು ವೇದಿಕೆಯಿಂದಲೇ ಎಳೆದುಕೊಂಡು ಹೋಗುತ್ತಾರೆ’’ ಎಂಬುದಾಗಿ ಅವರು ಯಾವಾಗಲೂ ಹಾಸ್ಯ ಮಾಡುತ್ತಾರೆ. ಅವರು ಮುಸ್ಲಿಮ್ ಆಗಿದ್ದಾರೆ, ಅವರು ‘ಅನ್ಯ’ರಾಗಿದ್ದಾರೆ, ಅವರನ್ನು ಜನರು ಪ್ರೀತಿಸುತ್ತಾರೆ ಎನ್ನುವ ಒಂದೇ ಕಾರಣಕ್ಕಾಗಿ ಅವರ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ.

35 ದಿನಗಳನ್ನು ಅನ್ಯಾಯವಾಗಿ ಜೈಲಿನಲ್ಲಿ ಕಳೆದಿರುವುದು ಹಾಗೂ 22 ಕಾರ್ಯಕ್ರಮಗಳು ರದ್ದಾಗಿರುವುದು ಅವರಿಗೆ ಅಪಾರ ನೋವನ್ನು ತಂದಿದೆ. ಆದರೆ, ಈ ಯುದ್ಧದಲ್ಲಿ ಅವರು ಏಕಾಂಗಿಯಲ್ಲ.

ರವಿವಾರ ಕೋಣೆಯ ಅಸಹಜ ಮೌನದಲ್ಲಿ ನಾನು ಬರೆದ ಪತ್ರವಿದು:

ಪ್ರಿಯ ಮುನವ್ವರ್, 

ನೀವು ಅಳಬೇಡಿ

ಈ ಜಗತ್ತು ಸ್ವತಃ ತನ್ನ ಶತ್ರುವಾಗಿದೆ,

ಅದು ಮುಗ್ಧರ ಮನೆಗಳನ್ನು ದೋಚುತ್ತದೆ

ಮತ್ತು ಸಂತ್ರಸ್ತರಲ್ಲಿ ದೇವರನ್ನು ಹುಡುಕುತ್ತದೆ.

ಮುನವ್ವರ್, ನಿಮ್ಮ ಮುಗ್ಧತೆಯಲ್ಲಿ

ನೋವುಗಳೂ ನೆಮ್ಮದಿ ಕಂಡಿವೆ

ಆದರೆ ದುಷ್ಟರು ಅದನ್ನು ದೇಶದ್ರೋಹವೆನ್ನುತ್ತಾರೆ

ಹಾಗೂ ದೇಶವನ್ನು ಅದರ ಶಕ್ತಿಯೊಂದಿಗೆ ಸುಡುತ್ತಾರೆ.

ಮುನವ್ವರ್, ನೀವು ಯಾಕೆ ಅಳಬೇಕು?

ಘಾಸಿಗೊಂಡ ಹೃದಯಗಳು ಅವರಿಗೆ ಬೇಡ

ಅವರು ಕೆಲಸಗಾರರ ಗೋರಿಗಳ ಮೇಲೆ

ಭವ್ಯ ರಾಜ್ಯಗಳನ್ನು ಕಟ್ಟುತ್ತಾರೆ.

ಮುನವ್ವರ್, ಹತಾಶರಾಗಬೇಡಿ,

ಈ ದೇಶದ ಪ್ರತಿಯೊಂದು ಆತ್ಮವೂಒದ್ದಾಡುತ್ತಿದೆ

ಕೆಲವು ಪ್ರಭುವಿನ ಪಾದದ ಅಡಿಯಲ್ಲಿ ಉಸಿರುಗಟ್ಟುತ್ತಿವೆ,

ಕೆಲವು ಅವುಗಳ ಕೊಳೆತ ಮನಸ್ಸಿನ ಬಂದಿಗಳಾಗಿವೆ.

ಮುನವ್ವರ್, ನಿಮ್ಮ ಅಗಾಧ ದುಃಖದಲ್ಲಿ

ನಾವು ನಮ್ಮದೇ ವೈಫಲ್ಯಗಳನ್ನು ನೋಡುತ್ತಿದ್ದೇವೆ

ಆದರೆ, ಈ ಮರಳಿನ ಬಿರುಗಾಳಿ ನಿಮ್ಮನ್ನು ಮಾತ್ರ ಬಲಿ ತೆಗೆದುಕೊಳ್ಳುವುದಲ್ಲ,

ನಮ್ಮ ಪಾದಗಳ ಅಡಿಯ ಮಣ್ಣೇ ಅಲುಗಾಡುತ್ತಿದೆ.

ಮುನವ್ವರ್, ದೂರುಗಳ ಮಹಾಪೂರದ ನಡುವೆ,

ನಗುವುದು ಹೇಗೆನ್ನುವುದನ್ನು ನೀವು ಆತ್ಮಕ್ಕೆ ಕಲಿಸಿದ್ದೀರಿ,

ನಿಮ್ಮ ಗಟ್ಟಿ ಅಂಗೈಗಳಲ್ಲಿ ದುಃಖವನ್ನು ಆಡಿಸಿದ್ದೀರಿ

ವಿರೋಧಿಗಳಿಗೂ ನೀವು ಸ್ವರ್ಗವನ್ನು ಧಾರೆಯೆರೆದಿದ್ದೀರಿ.

ಮುನವ್ವರ್, ನಿಮ್ಮ ಅನುಪಸ್ಥಿತಿಯಲ್ಲಿ,

ಸಾವಿರಾರು ಹೃದಯಗಳು ಬಾಡುತ್ತವೆ

ಆದರೆ ನಾವು ನಿರ್ಮಿಸಿದ ಕ್ರಾಂತಿಯ ಗರ್ಜನೆಯನ್ನು

ಯಾವುದೇ ಸೇನೆಯು ಹತ್ತಿಕ್ಕಲಾರದು.

ಮುನವ್ವರ್, ಈ ಕೈಕೋಳಗಳನ್ನು

ಇನ್ನು ನಾವೆಲ್ಲರೂ ಧರಿಸುತ್ತೇವೆ

ಈ ದೇಶದ ದ್ವೇಷದ ಪರಂಪರೆ ಮುಂದುವರಿದರೆ

ಪ್ರತಿಯೊಬ್ಬ ನಾಗರಿಕನ ಪತನ ಖಚಿತ

ಆಡಬೇಕಾಗಿರುವ ಮಾತುಗಳಿನ್ನೂ ಹೊರಬಂದಿಲ್ಲ

ಕೆಲವು ನಿಮ್ಮದು, ಕೆಲವು ನಮ್ಮದು

ಆದರೆ, ಈ ಹೋರಾಟದಲ್ಲಿ ಎದೆಗುಂದದಿರಿ,

ನಮ್ಮ ಪ್ರಿಯ ಮುನವ್ವರ್ ಅಳದಿರಿ...

ಕೃಪೆ: www.thewire.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)