ಒಡಿಶಾದ ಪುರಿ ಸಮೀಪ ‘ಜವಾದ್’ ಅಪ್ಪಳಿಸುವ ಸಾಧ್ಯತೆ
ಹೊಸದಿಲ್ಲಿ, ಡಿ. 3: ಚಂಡಮಾರುತ ‘ಜವಾದ್’ ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗಗಳಿಗೆ ರವಿವಾರ ಬೆಳಗ್ಗೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಚಂಡಮಾರುತದಿಂದಾಗಿ ಭಾರೀ ಮಳೆ ಹಾಗೂ ಗಂಟೆಗೆ 100 ಕಿ.ಮೀ. ವೇಗದ ಗಾಳಿ ಬೀಸಲಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ತೀವ್ರಗೊಂಡು ಶುಕ್ರವಾರ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಅನಂತರ ಅದು ವಾಯುವ್ಯದತ್ತ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಹೇಳಿದೆ. ಚಂಡಮಾರುತ ‘ಜವಾದ್’ ಒಡಿಶಾ ಕರಾವಳಿಯ ಸಮೀಪದ ಪುರಿಯ ಸುತ್ತಮುತ್ತ ರವಿವಾರ ಅಪರಾಹ್ನ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾದ ದಕ್ಷಿಣ ಕರಾವಳಿಯಾದ್ಯಂತ ಎನ್‌ಡಿಆರ್‌ಎಫ್, ರಾಜ್ಯ ಅಗ್ನಿ ಶಾಮಕ ದಳ ಹಾಗೂ ಒಡಿಸಾ ವಿಪತ್ತು ಕ್ಷಿಪ್ರ ಕಾರ್ಯ ಪಡೆ (ಒಡಿಆರ್‌ಎಎಫ್) ಸೇರಿದಂತೆ 266 ರಕ್ಷಣಾ ತಂಡಗಳನ್ನು ನಿಯೋಜಿಸಲು ಒಡಿಶಾ ಸರಕಾರ ಯೋಜಿಸಿದೆ. ಕರಾವಳಿಯಲ್ಲಿ ಮೀನುಗಾರಿಕೆ ಚಟುವಟಿಕೆ ಸ್ಥಗಿತಗೊಳಿಸುವಂತೆ ಒಡಿಶಾ ಸರಕಾರ ಮುನ್ನೆಚ್ಚರಿಕೆ ನೀಡಿದೆ. ಆಂಧ್ರಪ್ರದೇಶ ಸರಕಾರ ಕೂಡ ಮುನ್ನೆಚ್ಚರಿಕೆ ನೀಡಿದೆ. ಅಲ್ಲದೆ, ಉತ್ತರ ಕರಾವಳಿಯೊಂದಿಗೆ ಇತರ ಮೂರು ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಶ್ರಿಕಾಕುಲಂ, ವಿಝಿಯನಾಗರಮ್ ಹಾಗೂ ವಿಶಾಖಪಟ್ಟಣಂ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ಮಾತುಕತೆ ನಡೆಸಿದ್ದಾರೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿದ್ದಾರೆ. ‘ಜವಾದ್’ ಚಂಡ ಮಾರುತ ಪಶ್ಚಿಮಬಂಗಾಳ ಕರಾವಳಿಯಲ್ಲಿ ಕೂಡ ಭಾರೀ ಮಳೆ ಸುರಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.