varthabharthi


ಕಲೆ - ಸಾಹಿತ್ಯ

ಕಾ.ವೆಂ.ಶ್ರೀ. ಸಾಹಿತ್ಯ ಸಂಪುಟಗಳು ಇಂದು ಬಿಡುಗಡೆಯಾಗಲಿವೆ

ಡಾ. ಕಾ.ವೆಂ.ಶ್ರೀ. ಸಾಹಿತ್ಯ ಸಂಪುಟ: ಕನ್ನಡಕ್ಕೆ ಬೇಕಾದ ಅಮೂಲ್ಯ ಆಕರ ಗ್ರಂಥಗಳು

ವಾರ್ತಾ ಭಾರತಿ : 4 Dec, 2021
ಗುಂಡೀಗೆರೆ ವಿಶ್ವನಾಥ್

ಡಾ. ಕಾ.ವೆಂ.ಶ್ರೀನಿವಾಸಮೂರ್ತಿ ಕನ್ನಡ ಅಸ್ಮಿತೆಯ ಭಾಗ. ಈ ಅಸ್ಮಿತೆಯನ್ನು ಕಾಪಿಟ್ಟುಕೊಳ್ಳಲು ಸದಾ ತುಡಿವ ಜೀವ. ಮೂಲತಃ ಪ್ರಾಧ್ಯಾಪಕರಾಗಿ, ಕವಿಯಾಗಿ, ಚಿಂತಕರಾಗಿ, ವಿಮರ್ಶಕರಾಗಿ ಹಾಗೆಯೇ ಸಹೃದಯತೆಯ ಒಡಲ ಸಾಕಾರ ರೂಪವಾಗಿ ಎಲ್ಲರ ಪ್ರೀತಿ, ಅಭಿಮಾನ ಗಳಿಸಿದಂತಹವರು. ಕನ್ನಡದ ಬಹುಮುಖಿ ನೆಲೆಯಲ್ಲಿ ಬಹುಮುಖಿ ವ್ಯಕ್ತಿತ್ವದೊಡನೆ, ಬಹುಮುಖಿ ಆಯಾಮದಲ್ಲಿ ಕಾರ್ಯ ನಿರ್ವಹಿಸಿದವರು. ಇದೀಗ ಕನ್ನಡಕ್ಕೆ ತನ್ನದೇ ಆಸ್ತಿಯನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಅವೇ ಈ ಕಾ.ವೆಂ.ಶ್ರೀ. ಸಾಹಿತ್ಯ ಸಂಪುಟಗಳು. ಇವುಗಳನ್ನು ಪ್ರಾಮಾಣಿಕವಾಗಿ ಹೇಳುವುದಾದರೆ ‘‘ಕನ್ನಡಕ್ಕೆ ಬೇಕಾದ ನೈಜ ಮತ್ತು ಅಮೂಲ್ಯ ಆಕರ ಗ್ರಂಥಗಳು’’ ಎಂದೇ ಬಣ್ಣಿಸಬಹುದಾಗಿದೆ.

ಪ್ರಾಧ್ಯಾಪಕರಾಗಿ ಕನ್ನಡತನ, ಕನ್ನಡ ಬೋಧನೆಯನ್ನು ಗಟ್ಟಿಗೊಳಿಸುತ್ತಿರುವ ಕಾ.ವೆಂ. ತಮ್ಮ ಅಧ್ಯಾಪನ, ಅಧ್ಯಯನ ವೃತ್ತಿ ಮತ್ತು ಪ್ರವೃತ್ತಿಗಳೊಡನೆ ಸಮತೋಲನ ಮತ್ತು ಸಮನ್ವಯ ಸಾಧಿಸುತ್ತಾ ಬಹುಮುಖಿ ನೆಲೆಯಲ್ಲಿ ಚಿಂತಿಸುತ್ತಾ ಈ ಐದು ಸಂಪುಟಗಳ ಮೂಲಕ ಕನ್ನಡಿಗರಿಗೆ, ಕನ್ನಡಕ್ಕೆ ಉತ್ತಮ ವರದಾನ ಕಲ್ಪಿಸಿದ್ದಾರೆ.

ಐದು ಸಂಪುಟಗಳಲ್ಲಿ ವಿಸ್ತರಿಸಿಕೊಂಡಿರುವ ಇವರ ಸಮಗ್ರ ಬರಹ, ಚಿಂತನೆ, ಕವಿತೆ, ವಿಮರ್ಶೆ ಹೀಗೆ ವಿವಿಧ ಆಯಾಮಗಳ ಒಟ್ಟು ಸಾರ ಸಂಗ್ರಹ ರೂಪ ಇದಾಗಿದೆ. ಮೊದಲನೇ ಸಂಪುಟವು ಕನ್ನಡ ಚಿಂತನೆಗೆ ಮೀಸಲಾದರೆ ಎರಡು ಮತ್ತು ಮೂರನೇ ಸಂಪುಟಗಳು ಸಾಹಿತ್ಯ ವಿಮರ್ಶೆಗೆ ತೆರೆದುಕೊಂಡಿವೆ. ಇನ್ನು ನಾಲ್ಕು ಮತ್ತು ಐದನೇ ಸಂಪುಟಗಳಲ್ಲಿ ಸಂಕೀರ್ಣ ಪ್ರಕಾರದಲ್ಲಿ ವಿಚಾರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ ಹಾಗೂ ಇವರ ಇದುವರೆಗಿನ ಒಟ್ಟು ಕವಿತೆ, ಹಾಡು, ಭಾವಗೀತೆ, ಹೋರಾಟದ ಹಾಡುಗಳು, ಜನಪರ ಗೀತೆಗಳೆಲ್ಲಾ ಒಟ್ಟಾಗಿ ‘ಭಾವಗೀತೆ’ಯೆಂಬ ಸಂಪುಟದಲ್ಲಿ ಮೈದಾಳಿವೆ.

ಈ ಸಾಹಿತ್ಯ ಸಂಪುಟಗಳು ಕನ್ನಡ ಸಾಹಿತ್ಯ ಪರಂಪರೆಯ ಭಾಗಗಳೇ ಆಗಿ ಹೊಸ ಆಲೋಚನೆ, ಹೊಸ ಚಿಂತನೆಗಳೊಟ್ಟಿಗೆ ಕನ್ನಡ ಸಾಹಿತ್ಯ ಪರಂಪರೆಯ ಒಟ್ಟು ಚಿತ್ರಣವನ್ನು ಕಟ್ಟಿಕೊಟ್ಟಿವೆ. ‘‘ಕವಿರಾಜಮಾರ್ಗ ಮತ್ತು ನಾಡು-ನುಡಿ ಜಿಜ್ಞಾಸೆಯಿಂದ ಹಿಡಿದು ನವ ವಸಾಹತು ಸಂದರ್ಭ, ಕನ್ನಡ ಕಾವ್ಯ ಮತ್ತು ನಾಡು-ನುಡಿ ಚಿಂತನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು; ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಇದು ಕ್ಲೀಷೆಯಾಗಬಾರದು’’ ಎನ್ನುವ ವಿಮರ್ಶಾತ್ಮಕ ಹೊಸ ಚಿಂತನೆಯವರೆಗೆ ಈ ಸಂಪುಟದಲ್ಲಿ ಕಟ್ಟಿಕೊಟ್ಟಿದ್ದಾರೆ.

ಬಹುಮುಖಿ ವ್ಯಕ್ತಿತ್ವ ಮತ್ತು ಒಲವುಗಳು ಎಲ್ಲರಿಗೂ ಸಿದ್ಧಿಸಲು ಸಾಧ್ಯವಿಲ್ಲ. ಆದರೆ ಈ ಪ್ರತಿಭೆ ಮತ್ತು ವ್ಯಕ್ತಿತ್ವ ಡಾ. ಕಾ.ವೆಂ.ರವರಿಗೆ ಸಿದ್ಧಿಸಿದೆ. ಕನ್ನಡ ಪ್ರಾಧ್ಯಾಪಕರಾಗಿಯೇ ತಮ್ಮ ವಿಮರ್ಶಾ ಒಳಗಣ್ಣಿನಿಂದ ಈ ಕನ್ನಡ ಸಾಹಿತ್ಯ ಪರಂಪರೆಯನ್ನು ಗ್ರಹಿಸಿರುವ ಕಾ.ವೆಂ. ಇಂತಹ ಕನ್ನಡಕ್ಕೆ ಬೇಕಾದ ಗ್ರಹಿಕೆಯ ಹೊಸ ದೃಷ್ಟಿ ಕೋನವನ್ನು ಮಾದರಿಯಾಗಿ ಕಟ್ಟಿಕೊಟ್ಟಿದ್ದಾರೆ. ಈ ವಿಮರ್ಶಾ ಸಂಪುಟದಲ್ಲಿ ಮಾರ್ಗ ಮತ್ತು ದೇಸಿಗಳ ಚರ್ಚೆ, ಸಾಹಿತ್ಯ ಮತ್ತು ಅನ್ಯ ಸಂಬಂಧ, ವಚನ ಚಳವಳಿಯ ವಿಮರ್ಶೆ, ಚಿಂತನ-ಮಂಥನ, ದಾಸ ಪರಂಪರೆ, ಸೂಫಿ ಚಿಂತನೆ, ಕನ್ನಡದ ಆಧುನಿಕ ಬರಹಗಾರರ ಬಗೆಗಿನ ಮತ್ತು ಇವರ ಸಾಹಿತ್ಯಿಕ ಕೊಡುಗೆಗಳ ಬಗೆಗೆ ವಿಮರ್ಶಾತ್ಮಕ ಅರ್ಥಪೂರ್ಣ ಚಿಂತನೆಯ ವಿಶ್ಲೇಷಣಾತ್ಮಕ ಬರಹಗಳೊಂದಿಗೆ ಹೊಸ ತಲೆಮಾರಿನ ಬರಹಗಾರರು, ಓದುಗರಿಗೆ ಇವುಗಳನ್ನು ಪರಿಚಯಿಸಿದ್ದಾರೆ. ಹಳೆಬೇರು, ಹೊಸ ಚಿಗುರು ಕೂಡಿರಲು ಮರ ಸೊಗಸು ಎನ್ನುವ ದೃಷ್ಟಿಕೋನದಿಂದ ಕುವೆಂಪು, ಬೇಂದ್ರೆ, ಕಾರಂತ, ಗೋಕಾಕ್, ಚಿತ್ತಾಲ, ಕಂಬಾರ, ಲಂಕೇಶ್ ಮುಂತಾದ ಕನ್ನಡದ ಪ್ರಮುಖ ಲೇಖಕರ ಜೊತೆಗೆ ಹೊಸ ತಲೆಮಾರಿನ ಬರಹಗಾರರಾದ ಡಾ. ಕೋ.ವೆಂ. ರಾಮಕೃಷ್ಣೇಗೌಡ, ವೆಂಕಟಾಪು ಸತ್ಯ, ಸಿಸಿರಾ, ವಸಂತಕುಮಾರ್, ಹಲ್ಲೇಗೆರೆ ಶಂಕರ್, ಸಿ.ಜಿ. ಹಳ್ಳಿಮೂರ್ತಿ, ಗುಂಡೀಗೆರೆ ವಿಶ್ವನಾಥ್ ಮುಂತಾದ ಲೇಖಕರ ಕೃತಿಗಳ ಕುರಿತಾದ ವಿಮರ್ಶೆಯೂ ಇಲ್ಲಿದೆ.

ವಿಚಾರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ ಮಾಡುವ ನಾಲ್ಕನೇ ಸಂಪುಟವು ಕಾ.ವೆಂ.ಶ್ರೀ. ಸಾಹಿತ್ಯ ಸಂಪುಟಗಳಲ್ಲಿನ ಸಂಕೀರ್ಣ ಸಂಪುಟ. ಜಾಗತೀಕರಣ ಸಂದರ್ಭಗಳು, ಆತಂಕ ಮತ್ತು ಕೊಳ್ಳುಬಾಕ ಸಂಸ್ಕ ೃತಿಯ ಅಪಾಯಗಳು, ಕಮ್ಯುನಿಸ್ಟ್ ಚಳವಳಿ ಮತ್ತು ದಲಿತ ಚಳವಳಿಗಳ ಆಳ ಚಿತ್ರಣ, ಬದಲಾಗುತ್ತಿರುವ ಕಾಲ ಜಗತ್ತಿನಲ್ಲಿ ಶಿಕ್ಷಣದ ಬಗೆಗಿನ ಕಾ.ವೆಂ.ರವರು ವಹಿಸಿರುವ ಆಸ್ಥೆ ಮತ್ತು ಕಾಳಜಿ ಅಷ್ಟೇ ಪ್ರಮುಖವಾದದ್ದು. ನಾಲ್ಕು ಭಾಗಗಳಲ್ಲಿ ಹರಡಿಕೊಂಡಿರುವ ಈ ಸಂಪುಟವು ಗಾಂಧಿ, ಅಂಬೇಡ್ಕರ್, ಲಾಲ್ ಬಹದ್ದೂರ್ ಶಾಸ್ತ್ರಿ ಮುಂತಾದ ಮಹಾನ್ ನಾಯಕರ ಬಗೆಗಿನ ಚಿತ್ರಣ ಹಾಗೂ ಅವರ ಚಿಂತನೆಗಳ ಹೂರಣ, ಒಳನೋಟ ಹಾಗೂ ವಿಮರ್ಶೆಯನ್ನು ಒಳಗೊಂಡಿವೆ. ಇವರ ಜೊತೆಗೆ ಕನ್ನಡದ ವಿದ್ವಾಂಸರು, ಚಿಂತಕರು, ಬರಹಗಾರರಾದ ಡಾ. ಎಸ್. ವಿದ್ಯಾಶಂಕರ್, ಬಿ.ವಿ. ಕಾರಂತ, ನಲ್ಲೂರು ಪ್ರಸಾದ್, ಟಿ.ಪಿ. ರಮೇಶ, ಡಾ. ವೆಂಕಟಸ್ವಾಮಿ ಮುಂತಾದವರ ಬಗೆಗಿನ ಪರಿಚಯಾತ್ಮಕ ಹಾಗೂ ವಿಶ್ಲೇಷಣಾತ್ಮಕ ಲೇಖನಗಳು ಇವೆ.

ಇವುಗಳಲ್ಲದೆ ಕನ್ನಡದ ಮೂಲ ಪರಂಪರೆಯ ಕಾವ್ಯಗಳಾದ ಮಲೆಮಾದಪ್ಪನ ಕಾವ್ಯ, ಜನಪದ ಮಹಾಭಾರತ, ಗಾದೆಗಳು, ಹಂತಿ ಹಾಡುಗಳು, ಬೀಸುವ ಪದಗಳಲ್ಲದೆ ಕನ್ನಡ ರಂಗಭೂಮಿ ಪರಂಪರೆ ಕುರಿತಾದ ವಿಭಿನ್ನ ಹಾಗೂ ಅನನ್ಯ ಒಳನೋಟವನ್ನು ಈ ಸಂಪುಟದಲ್ಲಿ ಕಾಣಬಹುದು.
ಕೊನೆಯ ಸಂಪುಟವು ಕಾ.ವೆಂ.ರವರ ಕವಿತ್ವಾ ಶಕ್ತಿ ಹಾಗೂ ಪ್ರತಿಭೆಗೆ ಸಾಕ್ಷಿಯಾಗಿ ಅವು ಕವಿತೆ, ಭಾವಗೀತೆ, ನಾಡಗೀತೆ, ಹೋರಾಟದ ಗೀತೆಗಳು, ಜನಪರ ಗೀತೆಗಳು ಹೀಗೆ ನಾನಾ ಕಾವ್ಯ ಪ್ರಕಾರಗಳಲ್ಲಿ ಮೈದಳೆದಿದ್ದು, ಬಹುಗೀತೆಗಳು ಧ್ವನಿ ಸಾಂದ್ರಿಕೆಗಳಾಗಿ ಹೊರಬಂದು ಈಗಾಗಲೇ ಕನ್ನಡ ನಾಡಿನ ಜನರ ಮನೆ-ಮನ ಮುಟ್ಟಿದಂತಹವುಗಳು. ಇವು ಯೂಟ್ಯೂಬ್ ವಿಳಾಸದ ಸಮೇತ ವಿವರಗಳನ್ನು ಒಳಗೊಂಡಿವೆ.

ಒಟ್ಟಾರೆಯಾಗಿ ಕಾ.ವೆಂ. ಒಬ್ಬರು ಕನ್ನಡ ಅಸ್ಮಿತೆಯ ಆಸ್ತಿ. ಹಾಗೆಯೇ ಅವರ ಈ ಐದು ಸಂಪುಟಗಳು ಕನ್ನಡ ಸಾಹಿತ್ಯ ಮತ್ತು ಸಾರಸ್ವತ ಪರಂಪರೆಯ ಆಸ್ತಿಗಳಾಗಿವೆ. ಕನ್ನಡ ಸಾಹಿತ್ಯಾಸಕ್ತರ, ಓದುಗರ, ಹೊಸ ತಲೆಮಾರಿನ ಬರಹಗಾರರ, ಕಾಲೇಜು ವಿದ್ಯಾರ್ಥಿಗಳ ಓದಿಗೆ, ತಿಳುವಳಿಕೆಗೆ, ವಿಚಾರಗಳಿಗೆ ಬೇಕಾದ ನೈಜ ಹಾಗೂ ಅಮೂಲ್ಯ ಆಕರ ಗ್ರಂಥಗಳಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)