ನಿಧನ
ವಿದುಷಿ ವಸಂತಿ ರಾಮ ಭಟ್

ಉಡುಪಿ, ಡಿ.5: ರಾಗಧನದ ಹಿರಿಯ ಸದಸ್ಯೆ, ವಯೋಲಿನ್ ಕಲಾವಿದೆ ವಿದುಷಿ ವಸಂತಿ ರಾಮ ಭಟ್(82) ರವಿವಾರ ನಿಧನರಾದರು.
ಇವರು ಅಂಬಲಪಾಡಿ ಕಿದಿಯೂರಿನಲ್ಲಿರುವ ತಮ್ಮ ಮನೆಯಲ್ಲಿ ಸಂಜೆ ತನ್ನ ಶಿಷ್ಯನಿಗೆ ವಯೊಲಿನ್ ನುಡಿಸಾರಿಕೆಯನ್ನು ಹೇಳಿ ಕೊಡುತಿದ್ದಾಗ ಆಯಾಸದಿಂದ ಕುಸಿದು ಬಿದ್ದರೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಇವರು ಡಿ.3ರಂದು ಸಂಜೆ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಜರಗಿದ 43ನೆಯ ವಾದಿರಾಜ ಕನಕದಾಸ ಸಂಗೀತೋತ್ಸವದಲ್ಲಿ ಭಾಮಿನಿ ಭಟ್ ಪುತ್ತೂರು ಇವರಿಗೆ ವಯೋಲಿನ್ ಸಹವಾದನ ನೀಡಿದ್ದರು.
ಇವರು ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ದಿವಂಗತ ಪ್ರೊ.ರಾಮ ಭಟ್ ಅವರ ಪತ್ನಿ. ರಾಗಧನ ಸಂಸ್ಥೆಯ ಸಕ್ರಿಯ ಕಾರ್ಯಕಾರಿ ಸಮಿತಿ ಸದಸ್ಯೆ. ಹಲವಾರು ಸಂಗೀತಗಾರರಿಗೆ ಸಾಥ್ ಕೊಟ್ಟಿರುವ ಇವರು, ನೂರಾರು ಶಿಷ್ಯರಿಗೆ ವಯಲಿನ್ ತರಬೇತಿ ನೀಡಿದ್ದರು.
ತನ್ನ ಗುರು ಉಡುಪಿ ಲಕ್ಷ್ಮೀ ಬಾಯಿ ಹೆಸರಲ್ಲಿ ಇವರು ನಿರಂತರ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದರು. ಉತ್ತಮ ಟೆನಿಸ್ ಚಾಂಪಿಯನ್ ಕೂಡ ಆಗಿದ್ದರು. ಪ್ರಪಂಚಂ ಸೀತಾರಾಂ, ಆರ್.ಕೆ.ಪದ್ಮನಾಭ, ಲುಡ್ವಿಗ್ ಪೆಶ್ಚ್, ಕದ್ರಿ ಗೋಪಾಲನಾಥ್ ಸೇರಿದಂತೆ ಬಾಲಪಾಠದಲ್ಲಿರುವ ಮಕ್ಕಳಿಗೂ ವಯೊಲಿನ್ ಸಾಥ್ ನೀಡುತ್ತಿದ್ದರು.
ಮೃತರು ಪುತ್ರರಾದ ನೇತ್ರ ತಜ್ಞ ಡಾ.ಸತೀಶ್ ಹಾಗೂ ಮೃದಂಗ ವಿದ್ವಾನ್ ದೇವೇಶ್ ಭಟ್, ಪುತ್ರಿ ಕಂಪ್ಯೂಟರ್ ಇಂಜಿನಿಯರ್ ವಿನಯ ಅವರನ್ನು ಅಗಲಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ