varthabharthi


ಸಂಪಾದಕೀಯ

ಬಿಸಿಯೂಟದ ಜೊತೆಗೆ ಮೊಟ್ಟೆ: ಹೊಟ್ಟೆ ತುಂಬಿದವರ ಪ್ರತಿಭಟನೆ

ವಾರ್ತಾ ಭಾರತಿ : 6 Dec, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಭಾರತ ತನ್ನ ಅಪೌಷ್ಟಿಕತೆಗಾಗಿ ಈಗಾಗಲೇ ವಿಶ್ವದಲ್ಲಿ ಸುದ್ದಿ ಮಾಡುತ್ತಿದೆ. ಇಲ್ಲಿನ ಮಕ್ಕಳ ಸ್ಥಿತಿಯಂತೂ ಚಿಂತಾಜನಕವಾಗಿದೆ ಎಂದು ಅಂತರ್‌ರಾಷ್ಟ್ರೀಯ ಮಟ್ಟದ ವರದಿ ಹೇಳುತ್ತದೆ. ಇದೇ ಸಂದರ್ಭದಲ್ಲಿ ಕೊರೋನ ಮತ್ತು ಲಾಕ್‌ಡೌನ್‌ನಿಂದಾಗಿ ಮಕ್ಕಳ ಶಿಕ್ಷಣದ ಮೇಲೂ ಭಾರೀ ಪ್ರಹಾರ ಬಿದ್ದಿದೆ. ಸಹಸ್ರಾರು ಮಕ್ಕಳು ಶಾಲೆಯಿಂದ ಹೊರ ದಬ್ಬಲ್ಪಟ್ಟಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಲಾಕ್‌ಡೌನ್‌ನಿಂದಾಗಿ ಹಲವು ಕುಟುಂಬಗಳು ಆರ್ಥಿಕವಾಗಿ ಸಂಪೂರ್ಣ ತತ್ತರಿಸಿರುವುದು. ಕುಟುಂಬವನ್ನು ಮತ್ತೆ ಎತ್ತಿ ನಿಲ್ಲಿಸಬೇಕಾದರೆ ಮಕ್ಕಳನ್ನು ದುಡಿಯುವುದಕ್ಕೆ ಕಳುಹಿಸುವುದು ಅನಿವಾರ್ಯ ಎಂಬ ಸ್ಥಿತಿ ಗ್ರಾಮೀಣ ಪ್ರದೇಶದಲ್ಲಿದೆ. ಇಂತಹ ಸಂದರ್ಭದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಮತ್ತು ಪೌಷ್ಟಿಕತೆ ಎರಡನ್ನು ಏಕಕಾಲದಲ್ಲಿ ಸಮದೂಗಿಸಬೇಕಾದ ತುರ್ತು ಸನ್ನಿವೇಶ ನಿರ್ಮಾಣವಾಗಿದೆ. ಕೊರೋನ ಪೂರ್ವದಲ್ಲಿ ‘ಬಿಸಿಯೂಟ’ ಯೋಜನೆ ಶಾಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿತ್ತು. ಹಸಿವು ಮತ್ತು ಶಿಕ್ಷಣ ಒಟ್ಟೊಟ್ಟಿಗೆ ಸಾಗುವುದಿಲ್ಲ ಎನ್ನುವ ಅಂಶವನ್ನು ಇದು ಬಹಿರಂಗಪಡಿಸಿತು. ಒಂದು ಹೊತ್ತಿನ ಊಟವಾದರೂ ಮಕ್ಕಳಿಗೆ ಸಿಗುತ್ತದಲ್ಲ ಎನ್ನುವ ಆಸೆಯಿಂದ ಗ್ರಾಮೀಣ ಪ್ರದೇಶದ ಬಡವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಆರಂಭಿಸಿದರು. ಮಧ್ಯಾಹ್ನದ ಬಿಸಿಯೂಟ ಮಕ್ಕಳಿಗೆ ಜೀವನ ವೌಲ್ಯವನ್ನು ಕೂಡ ಕಲಿಸತೊಡಗಿತು. ಎಲ್ಲ ಮಕ್ಕಳು ಒಂದೇ ಶಾಲೆಯಲ್ಲಿ, ಒಂದೇ ಪಂಕ್ತಿಯಲ್ಲಿ ಜಾತಿ ಭೇದ ಮರೆತು ಉಣ್ಣುವುದು ಕೂಡ ಶಿಕ್ಷಣದ ಭಾಗವೇ ಆಗಿ ಹೋಯಿತು. ಮಕ್ಕಳು ಈ ಮೂಲಕ ಸಮಾನತೆ, ಸೌಹಾರ್ದದ ವೌಲ್ಯಗಳನ್ನು ಅರಿತರು. ಜೊತೆಗೆ ಮಕ್ಕಳ ಪೌಷ್ಟಿಕತೆಗೂ ಈ ಬಿಸಿಯೂಟ ಬಹುದೊಡ್ಡ ಕೊಡುಗೆಯನ್ನು ನೀಡಿದೆ.

ಕೊರೋನೋತ್ತರದಲ್ಲಿ ಮಕ್ಕಳ ಪೌಷ್ಟಿಕತೆ ಮತ್ತು ಶಿಕ್ಷಣಕ್ಕಾಗಿ ಸರಕಾರ ದುಪ್ಪಟ್ಟು ಪ್ರಯತ್ನಿಸಬೇಕಾಗಿದೆ. ಕೊರೋನದಿಂದಾಗಿ ಬಡವರ ಸ್ಥಿತಿ ಚಿಂತಾಜನಕವಾಗಿದೆ. ಅವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಸ್ಥಿತಿಯಲ್ಲೇ ಇಲ್ಲ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಪೌಷ್ಟಿಕತೆಯೂ ಗಣನೀಯ ಮಟ್ಟದಲ್ಲಿ ಹೆಚ್ಚಿದೆ. ಇದರಿಂದಾಗಿ ಅವರು ತೀವ್ರ ಅನಾರೋಗ್ಯಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಅವರನ್ನು ಮತ್ತೆ ಶಾಲೆಗೆ ಸೇರಿಸುವ ಕೆಲಸ ಅಷ್ಟು ಸುಲಭವಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ವಾರಕ್ಕೆ ಮೂರು ಬಾರಿ ಬಿಸಿಯೂಟದ ಜೊತೆಗೆ ಮೊಟ್ಟೆ ಕೊಡುವ ಪ್ರಸ್ತಾವವನ್ನು ಮಾಡಿದೆ. ಹಲವು ಶಾಲೆಗಳಲ್ಲಿ ಇದು ಈಗಾಗಲೇ ಜಾರಿಗೆ ಬಂದಿದೆ. ವಿಶೇಷವೆಂದರೆ, ವಿದ್ಯಾರ್ಥಿಗಳು ಮತ್ತು ಪೋಷಕರು ಈ ಮೊಟ್ಟೆ ನೀಡುವ ಪ್ರಸ್ತಾವವನ್ನು ಪೂರ್ಣ ಪ್ರಮಾಣದಲ್ಲಿ ಸ್ವಾಗತಿಸಿದ್ದಾರೆ. ಅದನ್ನು ಪುಷ್ಟೀಕರಿಸುವಂತೆ, ಮೊಟ್ಟೆ ನೀಡುವ ದಿನ, ಶಾಲೆಯ ಹಾಜರಾತಿಯಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ ಎಂದು ಶಿಕ್ಷಕರು ಈಗಾಗಲೇ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮೊಟ್ಟೆ ತಿನ್ನದವರಿಗೆ ಬಾಳೆ ಹಣ್ಣನ್ನು ನೀಡಲಾಗುತ್ತಿದೆ. ಆದರೆ ಮಕ್ಕಳು ಮೊಟ್ಟೆಗೆ ಪೂರ್ಣ ಪ್ರಮಾಣದಲ್ಲಿ ಬೇಡಿಕೆಯಿಟ್ಟಿರುವುದರಿಂದ ಗೋದಾಮಿನಲ್ಲಿರುವ ಬಾಳೆ ಹಣ್ಣು ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಬಾಳೆ ಹಣ್ಣನ್ನು ವ್ಯರ್ಥವಾಗಲು ಬಿಡದೆ, ಸಂಜೆಯ ಸಮಯದಲ್ಲಿ ಮಕ್ಕಳಿಗೆ ನೀಡುವುದಕ್ಕ್ಕೆ ಬಳಸಬೇಕು.

ಇದೇ ಸಂದರ್ಭದಲ್ಲಿ ಮೊಟ್ಟೆ ನೀಡುವುದನ್ನು ಸಣ್ಣ ಸಂಖ್ಯೆಯ ಗುಂಪುಗಳು ಪ್ರತಿಭಟಿಸುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ‘ಮೊಟ್ಟೆಯ ಬದಲಿಗೆ ಬಾಳೆ ಹಣ್ಣು ನೀಡಬೇಕು’ ಎನ್ನುವುದು ಇವರ ವಾದ. ಯಾರೆಲ್ಲ ಮೊಟ್ಟೆ ತಿನ್ನುವುದಿಲ್ಲವೋ ಅವರಿಗೆ ಬಾಳೆ ಹಣ್ಣು ನೀಡಬೇಕು ಎಂದು ಬೀದಿಗಿಳಿದರೆ ಅದಕ್ಕೊಂದು ಅರ್ಥವಿದೆ. ಈಗಾಗಲೇ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಹೀಗಿರುವಾಗ, ಬಡವರ ಮಕ್ಕಳ ತಟ್ಟೆಯಲ್ಲಿರುವ ಮೊಟ್ಟೆಯನ್ನು ಕಸಿಯುವ ಕುತ್ಸಿತ ಬುದ್ಧಿಯನ್ನು ಕೆಲವರು ಪ್ರದರ್ಶಿಸುವುದು ‘ಅಪೌಷ್ಟಿಕ ಭಾರತ’ದ ಬಹುದೊಡ್ಡ ದುರಂತವಾಗಿದೆ. ಈ ಪ್ರತಿಭಟನೆಯಲ್ಲಿ ಸ್ವಾಮೀಜಿಗಳೂ ಭಾಗವಹಿಸಿರುವುದು ಒಂದು ವಿಪರ್ಯಾಸ. ದೇವರು, ಧರ್ಮದ ಹೆಸರಿನಲ್ಲಿ ಬಡವರ ತಟ್ಟೆಯಿಂದ ಮೊಟ್ಟೆಯನ್ನು ಕಸಿಯುವುದು ಯಾವ ನ್ಯಾಯ? ಯಾವ ಧರ್ಮದ ದೇವರಾದರೂ ಇದನ್ನು ಮೆಚ್ಚಿಯಾನೆ? ವಿಶೇಷವೆಂದರೆ, ಈಗ ಬೀದಿಯಲ್ಲಿ ಮೊಟ್ಟೆಯ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಹುತೇಕರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಇಂದು ಸರಕಾರಿ ಶಾಲೆಗಳು ಹಿಂದುಳಿದ ವರ್ಗದ ಕೆಳಸ್ತರದ ಮಕ್ಕಳಿಗೆ ಮಾತ್ರ ಎಂಬಂತಾಗಿದೆ. ಮೊಟ್ಟೆ ತಿನ್ನದ ಹಿಂದುಳಿದವರ್ಗದ ಕೆಳಸ್ತರದ ಮಕ್ಕಳೇ ಇಲ್ಲ. ಹೀಗಿರುವಾಗ ತಮ್ಮ ಮಕ್ಕಳಿಗೆ ಸಂಬಂಧವೇ ಇಲ್ಲದ ಮೊಟ್ಟೆಯ ವಿಷಯದಲ್ಲಿ ಇವರೇಕೆ ಬೀದಿಯಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನುವುದರ ಕುರಿತಂತೆ ನಾವು ಸೂಕ್ಷ್ಮವಾಗಿ ಚಿಂತಿಸಬೇಕಾಗಿದೆ.

ಇಂದು ನಾವು ಚರ್ಚಿಸಬೇಕಾದುದು, ಕೇವಲ ಮೂರು ದಿನ ಮೊಟ್ಟೆ ಕೊಟ್ಟರೆ ಸಾಕೇ? ಎನ್ನುವ ವಿಷಯದ ಕುರಿತಂತೆ. ‘ದಿನಕ್ಕೊಂದು ಮೊಟ್ಟೆ’ ಆರೋಗ್ಯಕ್ಕೆ ಪೂರಕ ಎಂದು ವೈದ್ಯಲೋಕ ಈಗಾಗಲೇ ಸಾರಿದೆ. ಆದುದರಿಂದ ಮೂರು ದಿನ ನೀಡುತ್ತಿರುವ ಮೊಟ್ಟೆಯನ್ನು ಆರು ದಿನಕ್ಕೆ ವಿಸ್ತರಿಸಲು ಮೊಟ್ಟೆ ತಿನ್ನುವ ಮಕ್ಕಳ ಪೋಷಕರು ಆಗ್ರಹಿಸಬೇಕಾಗಿದೆ. ಮೊಟ್ಟೆ ನೀಡುವುದಕ್ಕೆ ಬೇಕಾದಷ್ಟು ಆರ್ಥಿಕ ಶಕ್ತಿ ಸರಕಾರದ ಬಳಿ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಶಿಕ್ಷಣಕ್ಕೆ ಮೀಸಲಿರಿಸಿದ ಅನುದಾನವನ್ನು ಹೆಚ್ಚಿಸಬೇಕು. ಮಠಗಳಿಗೆ, ದೇವಸ್ಥಾನ, ಮಸೀದಿಗಳಿಗೆ ಅನಗತ್ಯ ಓಲೈಕೆ ಮಾಡಲು ನೀಡುವ ಅನುದಾನಗಳನ್ನು ಸ್ಥಗಿತಗೊಳಿಸಬೇಕು. ಹಾಗೆಯೇ ಗೋಶಾಲೆಯ ಹೆಸರಿನಲ್ಲಿ ಸರಕಾರದ ಹಣವನ್ನು ದೋಚುತ್ತಿರುವ ಖದೀಮರಿಗೂ ಕಡಿವಾಣಗಳನ್ನು ಹಾಕಿ ಆ ಹಣವನ್ನು ಮಕ್ಕಳ ಶಿಕ್ಷಣ ಮತ್ತು ಪೌಷ್ಟಿಕ ಆಹಾರಗಳಿಗೆ ಮೀಸಲಿಡಬೇಕು. ಇದು ಈ ಕೊರೋನ ಕಾಲದಲ್ಲಿ ಆಗಬೇಕಾದ ಅತ್ಯಗತ್ಯವಾದ ಕಾರ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)