varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 6 Dec, 2021
ಪಿ.ಎ.ರೈ

ನನಗೆ ಅಧಿಕಾರ ಬೇಕಿಲ್ಲ. ನಾನಿರುವುದೇ ಜನರ ಸೇವೆಗಾಗಿ - ನರೇಂದ್ರ ಮೋದಿ, ಪ್ರಧಾನಿ
   ತಕ್ಷಣ ರಾಜೀನಾಮೆ ಕೊಟ್ಟು, ಯಾರಾದರೂ ವಿದ್ಯಾವಂತರಿಗಾಗಿ ಹುದ್ದೆ ತರವುಗೊಳಿಸಿ, ಆ ಮೂಲಕ ನಿಮ್ಮ ಪ್ರಾಮಾಣಿಕತೆ ಸಾಬೀತು ಪಡಿಸಿ ಮತ್ತು ದೇಶಕ್ಕೆ ಮುಕ್ತಿ ನೀಡಿ.


ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ 'ಮರಿ ರಾಜಾಹುಲಿ' - ಎಸ್.ಟಿ.ಸೋಮಶೇಖರ್, ಸಚಿವ
   ಅವರೊಬ್ಬ ಮನುಷ್ಯ ಎಂಬುದನ್ನು ಒಪ್ಪಲು ನೀವು ಅಷ್ಟೊಂದು ಹಿಂಜರಿಯುವುದೇಕೆ?


  ದೇಶದಲ್ಲಿ ಕಾಶ್ಮೀರ ಬಿಟ್ಟರೆ ಬೇರೆಡೆ ಎಲ್ಲಿಯೂ ಭಯೋತ್ಪಾದನೆ ಇಲ್ಲ- ನಳಿನ್ ಕುಮಾರ್ ಕಟೀಲು, ಸಂಸದಬೇರೆ ಕಡೆ ನಡೆಯುವ ಹಿಂಸೆ, ಕೊಲೆ ಮತ್ತು ವಿವಿಧ ವಿಧ್ವಂಸ ಇತ್ಯಾದಿಯನ್ನೆಲ್ಲ ರಾಷ್ಟ್ರವಾದಿ ಪ್ರೇಮೋತ್ಪಾದನೆ ಎಂದು ಕರೆದರಾಯಿತು.


ರಾಜ್ಯದಲ್ಲಿ ಇನ್ನೂ 45ಲಕ್ಷ ಮಂದಿ ಕೋವಿಡ್ ಲಸಿಕೆಯನ್ನೇ ಪಡೆದಿಲ್ಲ - ಡಾ.ಸುಧಾಕರ್, ಸಚಿವ

   ಆದರೂ ಜೀವಂತವಿದ್ದಾರಲ್ಲ! ಲಸಿಕೆ ಪಡೆದ ಬಳಿಕವೂ ಸತ್ತವರ ಸಂಖ್ಯೆ ತಿಳಿಸಿ.


ನಳಿನ್ ಕುಮಾರ್ ಕಟೀಲು ಒಬ್ಬ ಭಯೋತ್ಪಾದಕ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಅವರು ಕಾಶ್ಮೀರದವರಲ್ಲವಾದ್ದರಿಂದ ಅವರೇನು ಮಾಡಿದರೂ ಹಾಗೆಲ್ಲಾ ಹೇಳಬಾರದು.


ನಮ್ಮ ನಾಯಕ ಮುರುಗೇಶ್ ನಿರಾಣಿ ಇಂದಲ್ಲ ನಾಳೆ ಮುಖ್ಯಮಂತ್ರಿಯಾಗುವುದು ಖಚಿತ - ಈಶ್ವರಪ್ಪ, ಸಚಿವ

 ಅದು ಆಗಲಿ, ಆಗದಿರಲಿ, ಸದ್ಯ ನೀವಂತೂ ಮುಖ್ಯಮಂತ್ರಿಯಾಗುವುದಿಲ್ಲ ಎಂದು ನೀವೇ ಹೇಳಿರುವುದು ಜನತೆಯ ಪಾಲಿಗೆ ನೆಮ್ಮದಿದಾಯಕವಾಗಿದೆ.


ರೈತರು ಕೃಷಿ ಸುಧಾರಣಾ ಕಾಯ್ದೆಗೆ ಒತ್ತಾಯಿಸುವ ಕಾಲ ಬರಲಿದೆ - ಸಿ.ಟಿ.ರವಿ, ಶಾಸಕ

   ನೀವು ಬಾಬರಿ ಮಸೀದಿ ನಿರ್ಮಾಣಕ್ಕಾಗಿ ಅನ್ನಸತ್ಯಾಗ್ರಹ ಮಾಡುವ ಕಾಲದಲ್ಲೇ?


  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಎಲ್ಲಿಂದ ಸ್ಪರ್ಧಿಸಬೇಕು ಎನ್ನುವ ಬಗ್ಗೆ ಪಕ್ಷ ತೀರ್ಮಾನಿಸಲಿದೆ
- ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
   ಯಾವ ಪಕ್ಷ?


  ಆರೆಸ್ಸೆಸ್ ಸೇನಾ ಪಡೆಯಲ್ಲ. ಅದು ಕೌಟುಂಬಿಕ ವಾತಾವರಣ ಇರುವ ಸಂಘಟನೆ
- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
   ಆರೆಸ್ಸೆಸ್ ನವರ ಪುಕ್ಕಲುತನದ ಇತಿಹಾಸ ಬಲ್ಲವರು ಯಾರೂ ಅದು ಸೇನೆ ಎಂದು ನಂಬಿದ್ದೇ ಇಲ್ಲ.


  ಸದ್ಯಕ್ಕೆ ನನಗೆ ಮುಖ್ಯಮಂತ್ರಿಯಾಗುವ ಆಸೆ, ಆತುರ ಇಲ್ಲ
- ಮುರುಗೇಶ್ ನಿರಾಣಿ, ಸಚಿವ ಮುಂದಕ್ಕೆ ಇದೆ ಎಂದಾಯಿತು.


ಕಾಂಗ್ರೆಸ್‌ನ ಮಹಾನಾಯಕನೊಬ್ಬ ಚುನಾವಣೆಯಲ್ಲಿ ಸಂದರ್ಭಕ್ಕೆ ತಕ್ಕಂತೆ ಆಟವಾಡಿ ಅನೇಕ ಮಂದಿಯನ್ನು ಬೀದಿಗೆ ತಂದಿದ್ದಾರೆ

- ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

   ಸಂದರ್ಭಕ್ಕೆ ತಕ್ಕಂತೆ ಆಟವಾಡಿ ನಾಡಿನವರನ್ನೆಲ್ಲ ಬೀದಿಗೆ ತರುವ ವಿಷಯದಲ್ಲಿ ನಿಮ್ಮ ಪ್ರತಿಭೆಗೆ ಸಾಟಿ ಇನ್ನೊಬ್ಬರಿಲ್ಲ.


ಬಿಜೆಪಿ ಸರಕಾರ ಬಂದರೂ ಗೋಹತ್ಯೆ ಸಂಪೂರ್ಣ ನಿಂತಿಲ್ಲ ಎಂಬ ಬೇಸರವಿದೆ - ಈಶ್ವರಪ್ಪ, ಸಚಿವ

ಮನುಷ್ಯರ ಹತ್ಯೆ ಹೆಚ್ಚಾಗಿದೆಯಲ್ಲ, ಸಂತೋಷಪಡಿ.


ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಯಾರೂ ತಿರುಕನ ಕನಸು ಕಾಣುವುದು ಬೇಡ - ಆರ್.ಅಶೋಕ್, ಸಚಿವ

ಅದು ತಿರುಕನ ಕನಸು ಅಲ್ಲ, ಮನೆ ಮುರುಕನ ಕನಸು.


ಸಚಿವ ಈಶ್ವರಪ್ಪರದ್ದು ಭೂತದ ಬಾಯಿ. ಅವರ ಮುಖವನ್ನು ನೋಡಿದರೆ ಭೂತದಂತೆ ಕಾಣುತ್ತದೆ- ಧ್ರುವ ನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ

ಭೂತ ನಿಮ್ಮ ಮಾತಿನಿಂದ ಸಿಟ್ಟಾಗಿದೆಯಂತೆ.


ಸಿಎಂ ಬಸವರಾಜ ಬೊಮ್ಮಾಯಿ ಕಾಮನ್ ಮ್ಯಾನ್ ಚೀಫ್ ಮಿನಿಸ್ಟರ್- ಎಂ.ಪಿ.ರೇಣುಕಾಚಾರ್ಯ, ಶಾಸಕ

ಸದ್ಯ ಪಟ್ಟದಲ್ಲಿರುವವರನ್ನು ಹೊಗಳಿ ಮೆಚ್ಚಿಸುವ ಭರದಲ್ಲಿ, ಉತ್ತರಾಧಿಕಾರಿಗಳ ಕೆಂಗಣ್ಣಿಗೆ ತುತ್ತಾಗಬೇಡಿ.


ಯೋಗ ದೈನಂದಿನ ಜೀವನದ ಒಂದು ಭಾಗವಾಗುವಂತೆ ವಿಶ್ವದ ಜನರನ್ನು ಬಾಬಾ ರಾಮ್‌ದೇವ್ ಪ್ರೇರೇಪಿಸಿದ್ದಾರೆ
- ರಾಮನಾಥ್ ಕೋವಿಂದ್, ರಾಷ್ಟ್ರಪತಿ

ಯೋಗ, ಆಯುರ್ವೇದಗಳನ್ನೆಲ್ಲ ವ್ಯಾಪಾರೀಕರಿಸಿ ಕುಲಗೆಡಿಸಿದ ಡೋಂಗಿ ಬಾಬಾನನ್ನು ಹೊಗಳಲು ನಿಮ್ಮನ್ನು ನಿರ್ಬಂಧಿಸಿದ ಆ ನಿಮ್ಮ ಹುದ್ದೆಯ ಬಗ್ಗೆ ಜನರಿಗಿದ್ದ ಗೌರವ ಕುಸಿದಿದೆ.


ಕಾಂಗ್ರೆಸ್ ಇಲ್ಲದ ಯುಪಿಎ ಎಂದರೆ ಆತ್ಮ ಇಲ್ಲದ ದೇಹದಂತೆ - ಕಪಿಲ್ ಸಿಬಲ್, ಕಾಂಗ್ರೆಸ್ ಮುಖಂಡ

 ಅಂದ್ರೆ ಯುಪಿಎ ತನ್ನ ಜತೆ ಇಲ್ಲದಿದ್ದರೆ ಕಾಂಗ್ರೆಸ್ ನಿರ್ಗತಿಕ ಆತ್ಮದಂತೆ ದಿಕ್ಕಿಲ್ಲದೆ ಅಲೆಯುವುದೇ?


ನರೇಂದ್ರ ಮೋದಿಯವರ ಸರಕಾರ ಅತ್ಯಂತ ಕೆಟ್ಟ, ದರಿದ್ರ ಸರಕಾರ- ದೇವೇಗೌಡ, ಮಾಜಿ ಪ್ರಧಾನಿ

ಸೂಕ್ತ ಹೇಳಿಕೆ ! ದೂರಹೋದವರೆಲ್ಲ ಮರಳಿ ಬಂದ ಬಳಿಕ ಮತ್ತೆ ಮೋದಿಯ ವೈಭವೀಕರಣ ಆರಂಭಿಸಬಹುದು.


ಕಾಂಗ್ರೆಸ್ ಮತ್ತು ನಮ್ಮ ನಡುವೆ ಇರುವ ಸಂಬಂಧವೇ ಬೇರೆ- ಡೆರೆಕ್ ಒಬ್ರಿಯಾನ್, ಟಿಎಂಸಿ ಸಂಸದ

   ಸಂಬಂಧ ಅಷ್ಟೊಂದು ನಿಗೂಢವಾಗಿದ್ದರೆ ಸಾರ್ವಜನಿಕವಾಗಿ ಚರ್ಚಿಸದೆ ಇರುವುದು ಒಳ್ಳೆಯದಲ್ಲವೇ?


  ನಮ್ಮ ಪಕ್ಷ ಎಷ್ಟೇ ಪ್ರಬಲವಾಗಿದ್ದರೂ 2024ರ ಲೋಕಸಭಾ ಚುನಾವಣೆಯಲ್ಲಿ 300 ಸೀಟು ಗೆಲ್ಲುವುದು ಕಷ್ಟ
- ಗುಲಾಂ ನಬಿ ಆಝಾದ್, ಕಾಂಗ್ರೆಸ್ ಮುಖಂಡ
   ಒಂದು ಸೊನ್ನೆ ಕಡಿಮೆ ಮಾಡಿದರೆ ಏನಾದರೂ ಆಶಾವಾದ ಚಿಗುರೀತೆ?


ರಮೇಶ್ ಜಾರಕಿಹೊಳಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಮೋಸ ಮಾಡಲಾರರು - ಈಶ್ವರಪ್ಪ, ಸಚಿವ
ಅವರು ಮಾಡಿದ್ದೆಲ್ಲವೂ ಪಕ್ಷದ ಉದ್ಧಾರಕ್ಕಾಗಿ ಎಂದು ಕೂಡಾ ಹೇಳಿಬಿಡಿ. ನೀವು ಏನಂದರೂ ಜನ ಸಹಿಸಿಕೊಳ್ಳುತ್ತಾರೆ.


  ಬ್ಲೇಡ್ ಹಿಡಿದವರು, ತಲವಾರು ಹಿಡಿದವರು, ವಂಚನೆ ಮಾಡುವವರನ್ನು ಮೇಲ್ಮನೆಗೆ ಕಳುಹಿಸುವುದು ಬೇಡ
- ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
  ಅಂಥವರೆಲ್ಲಾ ಕೆಳಮನೆಯಲ್ಲೇ ಧಾರಾಳ ಸಂಖ್ಯೆಯಲ್ಲಿದ್ದು, ಸಂತೃಪ್ತರಾಗಿದ್ದಾರೆ, ಅಲ್ಲವೇ?
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು