ಇಂಜಿನಿಯರಿಂಗ್ ಪರೀಕ್ಷೆ ಬರೆದ ನಕಲಿ, ಅಸಲಿ ವಿದ್ಯಾರ್ಥಿಗೆ ಕಾರಾಗೃಹ ಶಿಕ್ಷೆ
ಸಾಂದರ್ಭಿಕ ಚಿತ್ರ
ಧಾರವಾಡ, ಡಿ.6: ಇಂಜಿನಿಯರಿಂಗ್ ಪರೀಕ್ಷೆ ಬರೆದ ನಕಲಿ ವಿದ್ಯಾರ್ಥಿ ಹಾಗೂ ಅಸಲಿ ವಿದ್ಯಾರ್ಥಿಗೆ ಆರು ತಿಂಗಳ ಕಾರಾಗೃಹ ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ ಧಾರವಾಡದ 3ನೆ ಹೆಚ್ಚುವರಿ ಕೋರ್ಟ್ ಆದೇಶಿಸಿದೆ.
ಅಸಲಿ ವಿದ್ಯಾರ್ಥಿ ಎಂದು ಸೋಗು ಹಾಕಿ ಮೋಸ ಮಾಡಿದ ಅಪರಾಧಕ್ಕಾಗಿ ಇಬ್ಬರೂ ಆರೋಪಿತರಿಗೆ ಆರು ತಿಂಗಳು ಕಾರಾಗೃಹ ಶಿಕ್ಷೆ ಹಾಗೂ ತಲಾ ಒಂದು ಸಾವಿರ ದಂಡ ವಿಧಿಸಲಾಗಿದೆ.
2007ನೆ ಸಾಲಿನಲ್ಲಿ ಧಾರವಾಡದ ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಸಲಾದ ಪರೀಕ್ಷೆ ಸಂದರ್ಭ ಅದೇ ಕಾಲೇಜಿನ ಓರ್ವ ವಿದ್ಯಾರ್ಥಿ ತನ್ನ ಬದಲಿಗೆ ಬೇರೊಬ್ಬ ಅಭ್ಯರ್ಥಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಅಸಲಿ ಅಭ್ಯರ್ಥಿಯನ್ನಾಗಿ ಪರೀಕ್ಷೆ ಬರೆಸಿದ್ದರು.
ನಕಲಿ ವಿದ್ಯಾರ್ಥಿ ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆಯುವಾಗ ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಾಲಜಿ ಯುನಿವರ್ಸಿಟಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ನಕಲಿ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿದ್ದರು.
ಈತನ ವಿರುದ್ಧ ಕಾಲೇಜು ಪ್ರಾಂಶುಪಾಲರು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಮೂರನೆ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ ನ್ಯಾಯಾಧೀಶ ಮಹೇಶ ಚಂದ್ರಕಾಂತ ಅವರು ಇಬ್ಬರು ಆರೋಪಿತರು ತಪ್ಪಿತಸ್ಥರು ಎಂದು ತಿರ್ಮಾನಿಸಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ವಕೀಲ ಆರ್.ಜಿ. ದೇವರೆಡ್ಡಿ ಹಾಗೂ ಅನೀಲ್ ಕುಮಾರ್ ಆರ್. ತೊರವಿ ವಕಾಲತ್ತು ವಹಿಸಿದ್ದರು.