varthabharthi


ಕರ್ನಾಟಕ

ಮತಾಂತರ ನಿಷೇಧ ಅಂದರೆ ತಳ ಸಮುದಾಯಗಳ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತೆ: ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ

ವಾರ್ತಾ ಭಾರತಿ : 6 Dec, 2021

ಮೈಸೂರು,ಡಿ.6: ಮತಾಂತರ ನಿಷೇಧ ಅಂದರೆ ತಳ ಸಮುದಾಯಗಳ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತೆ. ಹಾಗಾಗಿ ಮತಾಂತರ ನಿಷೇಧ ಕಾಯಿದೆ ಜಾರಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಒತ್ತಾಯಿಸಿದರು.  

ಕರ್ನಾಟಕ ದಲಿತ ವೆಲ್ ಫೇರ್ ಟ್ರಸ್ಟ್ ಡಾ.ಬಿ.ಆರ್.ಅಂಬೇಡ್ಕರ್ ಅವರ 65ನೇ ಮಹಾಪರಿನಿಬ್ಬಾಣದ ಅಂಗವಾಗಿ ಇನ್‍ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮತಾಂತರ ನಿಷೇಧ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪರಂಪರೆಯಿಂದ ಸಹಜವಾಗಿ ನಡೆದುಕೊಂಡ ಪ್ರಕ್ರಿಯೆ ಮತಾಂತರ. ನಿಷೇಧವು ಹರಿಯುವ ನೀರಿಗೆ, ಬೀಸುವ ಗಾಳಿಗೆ ಕಾಲುಕಟ್ಟುವ ಪ್ರಕ್ರಿಯೆಯಂತೆ ಕಾಣಿಸುತ್ತಿದೆ. ಪ್ರಾಕೃತಿಕ ಸಹಜತೆಗೆ ಅಡೆತಡೆ ಒಡ್ಡಿದರೆ ಸಂಘರ್ಷಕ್ಕೆ ಅನುವು ಮಾಡಿಕೊಟ್ಟು ಛಿದ್ರೀಕರಣಕ್ಕೆ ಅವಕಾಶ ಮಾಡಿಕೊಟ್ಡಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮತಾಂತರ ಪಿಡುಗು ಅಲ್ಲ. ಮತಾಂತರ ನಿಷೇಧ ಎನ್ನುವುದೇ ದೊಡ್ಡ ಪಿಡುಗು. ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇದೆ. ಮತಾಂತರಕ್ಕೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ, ನೈತಿಕತೆಗೆ ಸಂಬಂಧಿಸಿದಂತೆ ಮಿತಿಗಳಿವೆ. ಮುಕ್ತವಾಗಿ ಧರ್ಮವನ್ನು ಬೋಧಿಸುವ ಪಾಲಿಸುವ ಪ್ರಚಾರಕ್ಕೆ ಹಕ್ಕನ್ನು ನೀಡಲಾಗಿದೆ.

ಅಸೆ ಆಮಿಷಗಳನ್ನು ಒಡ್ಡಿ ಬಲವಂತವಾಗಿ ಮತಾಂತರ ಮಾಡುವುದನ್ನು ನಿಷೇಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಪ್ರತ್ಯೇಕವಾಗಿ ಕಾಯ್ದೆ ಮಾಡುವ ಅಗತ್ಯ ಇಲ್ಲ. ಈ ಅಂಶ ಈಗಾಗಲೇ ಸಂವಿಧಾನದಲ್ಲೇ ಇದೆ. ಮುಖ್ಯಮಂತ್ರಿ ಇನ್ನೊಮ್ಮೆ ಪರಿಶೀಲಿಸಬೇಕು. ಇಲ್ಲದಿದ್ದರೆ ಕೋಮುವಾದ, ದಬ್ಬಾಳಿಕೆ, ದೌರ್ಜನ್ಯ ಹೆಚ್ಚುತ್ತದೆ ಎಂದರು. 

ನಾಲ್ಕು ಸಂಗತಿಗಾಗಿ ಮತಾಂತರ ಅಗತ್ಯವಾಗಿದೆ.  ಸಶಕ್ತರಾಗಲು ಸಂಘಟಿತರಾಗಲು, ಸಮಾನತೆ ಸಾಧಿಸಿ ಸ್ವಾತಂತ್ರ್ಯ ಪಡೆಯಲು, ಅಕಾರವನ್ನು ಸಂಪಾದಿಸಲು ಹಾಗೂ ಹೊರದೇಶದಿಂದ ಪ್ರೋತ್ಸಾಹ ಸಿಗುತ್ತದೆ. ಆದ್ದರಿಂದ ಮತಾಂತರ ಅಗತ್ಯವಾಗಿದೆ ಎಂದು ಹೇಳಿದರು. 
ಅಂಬೇಡ್ಕರ್ ಅವರ ಮಹಾ ಪರಿನಿಬ್ಬಾಣ ಆಚರಣೆಯನ್ನು ಅಂಬೇಡ್ಕರ್ ವಿಚಾರ ಧಾರೆಗಳನ್ನು ಹಂಚಿಕೊಳ್ಳುವ, ಅದರ ಬಗ್ಗೆ ಜಾಗೃತಿ ಮೂಡಿಸುವ ಉತ್ಸವವಾಗಿ  ಆಚರಿಸಬೇಕಿದೆ ಎಂದು ಸಲಹೆ ನೀಡಿದರು.

ಚಿಂತಕ ನಾ.ದಿವಾಕರ ಮಾತನಾಡಿ, ಮತಾಂತರ ಪ್ರಶ್ನೆ ಧರ್ಮ ಮತ್ತು ಚುನಾವಣೆಗೆ ಸಂಬಂಧಪಟ್ಟದ್ದು. ಬಿಜೆಪಿಗೆ ಅಪಾಯ ಸಂಭವಿಸಿದಾಗ, ಅಧಿಕಾರ ಉಳಿಸಿಕೊಳ್ಳಲು ಈ ವಿಷಯ ಮುನ್ನೆಲೆಗೆ ಬರುತ್ತದೆ. ಮತಾಂತರದ ಹೆಸರಿನಲ್ಲಿ ಅನೈತಿಕ ಪೊಲೀಸ್ ಗಿರಿ, ಮತೀಯ ಕಾವಲುಪಡೆಗಳು ಘರ್ಜಿಸುತ್ತಿವೆ ಎಂದು ಕಿಡಿಕಾರಿದರು.

ಬಲವಂತವಾಗಿ ಆಮಿಷವೊಡ್ಡಿ ಮತಾಂತರ ಮಾಡಿರುವುದಕ್ಕೆ ಸಾಕ್ಷ್ಯಧಾರ, ಪುರಾವೆ ಒದಗಿಸುವವರು ಯಾರು? ಅಸ್ಪೃಶ್ಯತೆ ಅನುಭವಿಸಿ ಹಿಂದೂ ಧರ್ಮದಲ್ಲಿ ಇರಬೇಕೆ? ದಲಿತರು ಬೌದ್ಧ ಧರ್ಮಕ್ಕೆ ಹೋಗುವುದನ್ನು ಸಹಿಸುತ್ತಿಲ್ಲ. ಅದು ಯಾವಾಗ ಹೆಚ್ಚಾಗುವುದೋ ಎಂಬ ಆತಂಕವಿದೆ. ಸಾಂತ್ವನದ ನೆಲೆಗಳನ್ನು ಹುಡುಕಿಕೊಂಡು ಹೋಗುವುದನ್ನು ತಪ್ಪು ಎನ್ನಲಾಗದು ಎಂದು ಹೇಳಿದರು. 

ಸಾಹಿತಿ ಪ್ರೊ.ಕಾಳೇಗೌಡ ಮಾತನಾಡಿ, ಪ್ರಸ್ತುತ ಸಾಂಪ್ರದಾಯಿಕ ಚಿಂತನೆಗಳು ಉಲ್ಬಣಗೊಂಡಿದ್ದು, ಆರೋಗ್ಯಕರ ಸಮಾಜ ಕಟ್ಟುವ ಸಾಮಾಜಿಕ ಹೊಣೆಗಾರಿಕೆ ಬಗ್ಗೆ ಚಿಂತಿಸಬೇಕಿದೆ ಎಂದು ತಿಳಿಸಿದರು.

ಕರ್ನಾಟಕ ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಸಾಹಿತಿ ಪ್ರೊ.ಕೆ.ಎಸ್.ಭಗವಾನ್,  ವಿಶ್ರಾಂತ ಕುಲಪತಿ ಪ್ರೊ.ಪದ್ಮಶೇಖರ್, ಪ್ರೊ.ಶಬೀರ್ ಮುಸ್ತಾಫ, ಶಿವಪ್ಪ, ಲೇಖಕ ಸಿದ್ದಸ್ವಾಮಿ, ಚಿಕ್ಕಂದಾನಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ದೇಶದಲ್ಲಿ ಘರ್ ವಾಪಾಸಿ, ಮರ್ಯಾದೆ ಹತ್ಯೆ ವಿಚಾರಗಳ ಬಗ್ಗೆ  ಗಮನ ಹರಿಸುತ್ತಿರುವ ಆರ್‍ಎಸ್‍ಎಸ್ ಮತ್ತು  ವಿಎಚ್‍ಪಿ ಸಂಘಟನೆಗಳು, ದೇಶದ ಅಖಂಡತೆಯತ್ತ ಗಮನ ಹರಿಸಬೇಕಾಗಿದೆ. ತಮ್ಮ ಸಂಘಟನೆಗಳಿಗೆ ಸೇರುವವರಿಗೆ ಅಂತರ ಜಾತಿ ವಿವಾಹ ಕಡ್ಡಾಯ ಎಂದು ಹೇಳುವ ಮೂಲಕ ದೇಶದಲ್ಲಿ ಅಖಂಡತೆಯ ಪರಿಕಲ್ಪನೆ ಸೃಷ್ಟಿಸಬೇಕು. ಆಗ ಮತಾಂತರದ ಪ್ರಶ್ನೆಯೇ ಇರುವುದಿಲ್ಲ.

-ಪ್ರೊ.ಅರವಿಂದ ಮಾಲಗತ್ತಿ,  ಸಾಹಿತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)