varthabharthi


ಕರ್ನಾಟಕ

ಕ್ಷೇತ್ರದ ಅಭಿವೃದ್ದಿಗೆ ಆಗ್ರಹಿಸಿ ಸುವರ್ಣಸೌಧಕ್ಕೆ ಡಿ.12ಕ್ಕೆ ಪಾದಯಾತ್ರೆ: ಶಾಸಕಿ ಅಂಜಲಿ ನಿಂಬಾಳ್ಕರ್

ವಾರ್ತಾ ಭಾರತಿ : 6 Dec, 2021

ಬೆಳಗಾವಿ, ಡಿ. 6: ಅಕಾಲಿಕ ಮಳೆಯಿಂದ ಆಗಿರುವ ಹಾನಿ ಹಾಗೂ ಬೆಳೆ ನಷ್ಟಕ್ಕೆ ಪರಿಹಾರ, ಹದಗೆಟ್ಟ ರಸ್ತೆ, ಶಾಲೆಗಳ ಅಭಿವೃದ್ಧಿಗೆ ಆಗ್ರಹಿಸಿ ವಿಧಾನ ಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಸರಕಾರದ ಗಮನ ಸೆಳೆಯಲು ಡಿ.12ಕ್ಕೆ ಖಾನಾಪುರದಿಂದ ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಪಾದಯಾತ್ರೆ ನಡೆಸಲಾಗುವುದು ಎಂದು ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ತಿಳಿಸಿದ್ದಾರೆ.

ಸೋಮವಾರ ಖಾನಾಪುರದಲ್ಲಿನ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾನಾಪುರ ಕ್ಷೇತ್ರದ ಅಭಿವೃದ್ಧಿಗೆ ಆಗ್ರಹಿಸಿ ಸುವರ್ಣಸೌಧ ಚಲೋ ಪಾದಯಾತ್ರೆಗೆ ನಿರ್ಧರಿಸಲಾಗಿದೆ. ಡಿ.12ರ ಮಧ್ಯಾಹ್ನ 3 ಗಂಟೆಗೆ ಪಾದಯಾತ್ರೆ ಆರಂಭಿಸಲಾಗುವುದು. ಖಾನಾಪುರದಿಂದ ಬೆಳಗಾವಿಯ ಸುವರ್ಣ ವಿಧಾನಸೌಧವರೆಗೆ 40 ಕಿಮೀ ಪಾದಯಾತ್ರೆ ನಡೆಯಲಿದೆ ಎಂದರು.

ಪಾದಯಾತ್ರೆ ಮಾಡಿ ಡಿ.13 ಕ್ಕೆ ಪಾದಯಾತ್ರೆ ಸುವರ್ಣಸೌಧ ತಲುಪಲಿದೆ. ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಒಟ್ಟಾರೆ 3,632 ಹೆಕ್ಟೇರ್ ಪ್ರದೇಶ ಭತ್ತ ಹಾನಿಯಾಗಿದೆ. ಎನ್‍ಡಿಆರ್‍ಎಫ್ ನಿಯಮಾವಳಿ ಪ್ರಕಾರ ಪ್ರತಿ ಎಕರೆಗೆ 2,720 ರೂ.ಪರಿಹಾರ ನೀಡಲಾಗುತ್ತದೆ. ಆದರೆ, 1 ಎಕರೆ ಭತ್ತ ಬೆಳೆಯಲು 15 ಸಾವಿರ ರೂ.ಗೂ ಹೆಚ್ಚು ಹಣ ಖರ್ಚಾಗುತ್ತದೆ. ರೈತರಿಗೆ ಪರಿಹಾರ ನೀಡುವಲ್ಲಿ ಸರಕಾರದ ಜವಾಬ್ದಾರಿ ಇಲ್ಲವೇ? ಎಂದು ಅವರು ಪ್ರಶ್ನಿಸಿದರು.

ತಾಲೂಕಿನಲ್ಲಿ 66 ಶಾಲೆಗಳಿದ್ದು ಒಟ್ಟು 255 ಶಾಲೆಯ ಕೊಠಡಿಗಳು ಮಳೆಯಿಂದ ಹಾನಿಯಾಗಿವೆ. ನೂರಕ್ಕೂ ಮನೆಗಳು ಬಿದ್ದಿವೆ. ಆದರೆ, ಸರಕಾರ ಕೇವಲ ಪರಿಹಾರ ಘೋಷಣೆ ಮಾಡಿ ಕೈತೊಳೆದುಕೊಂಡಿದೆ. ಆದರೆ, ಒಬ್ಬರಿಗೂ ಈವರೆಗೂ ಪರಿಹಾರ ನೀಡಿಲ್ಲ. ಒಂದು ಕಡೆ ಕೋವಿಡ್, ಮತ್ತೊಂದು ಕಡೆ ಪೆಟ್ರೋಲ್, ಡೀಸೆಲ್ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂಕಷ್ಟದಿಂದ ಜನತೆ ಬೇಸತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ರಸ್ತೆ, ಸೇತುವೆ ಸಂಪೂರ್ಣ ಹದಗೆಟ್ಟಿದೆ. ಖಾನಾಪುರ ಕ್ಷೇತ್ರದಲ್ಲಿ ಹೆಚ್ಚಿನ ಭಾಗ ಅರಣ್ಯ ಪ್ರದೇಶದಲ್ಲಿದ್ದು ಇರುವ ರಸ್ತೆಗಳನ್ನು ದುರಸ್ತಿ ಮಾಡಲು ಸಾಧ್ಯವಾಗದೆ ಜನತೆ ಹಲವು ಕಿಲೋಮೀಟರ್ ದೂರ ಕಾಲ್ನಾಡಿಗೆಯಲ್ಲೆ ಸಂಚಾರ ಮಾಡಬೇಕಿದೆ. ಹೀಗಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡಬೇಕು. ಜೊತೆಗೆ ಅಕಾಲಿಕ ಮಳೆ ಹಾನಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪಾದಯಾತ್ರೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)