varthabharthi


ರಾಷ್ಟ್ರೀಯ

ಕೇಂದ್ರಾಡಳಿತ ಪ್ರದೇಶದ ಜನರ ದಮನ ವಿರೋಧಿಸಿ ಜಂತರ್ ಮಂತರ್ನಲ್ಲಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಧರಣಿ

ವಾರ್ತಾ ಭಾರತಿ : 7 Dec, 2021

ಹೊಸದಿಲ್ಲಿ, ಡಿ. 6: ಕೇಂದ್ರಾಡಳಿತ ಪ್ರದೇಶದ ಜನರ ದಮನ ವಿರೋಧಿಸಿ ಹಾಗೂ ಅಮಾಯಕರ ಹತ್ಯೆಯನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಹೊಸದಿಲ್ಲಿಯ ಜಂತರ್ಮಂತರ್ನಲ್ಲಿ ಸೋಮವಾರ ಪ್ರತಿಭಟನಾ ಧರಣಿ ನಡೆಸಿದರು.

ಕಾಶ್ಮೀರದಲ್ಲಿ ತನ್ನ ಪ್ರತಿಭಟನೆಯನ್ನು ಎಂದಿಗೂ ಅನುಮತಿಸದ ಕಾರಣ ಹೊಸದಿಲ್ಲಿಯಲ್ಲಿ ಧರಣಿ ನಡೆಸಲು ನಿರ್ಧರಿಸಿರುವುದಾಗಿ ಜಮ್ಮು ಹಾಗೂ ಕಾಶ್ಮೀರ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದರು. ತಾನು ಪ್ರತಿಭಟನೆಗೆ ಯೋಜನೆ ರೂಪಿಸಿದ ಪ್ರತಿ ಸಂದರ್ಭ ಕೂಡ ಗೃಹ ಬಂಧನಕ್ಕೆ ಒಳಪಡಿಸಿದ್ದರು ಅಥವಾ ಪೊಲೀಸರು ದೂರ ಕರೆದೊಯ್ದಿದ್ದರು ಎಂದು ಅವರು ಹೇಳಿದ್ದಾರೆ.

ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅಸಂಖ್ಯಾತ ಪಿಡಿಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

‘‘ಜನರಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ಇಲ್ಲದೇ ಇರುವುದರಿಂದ ಕಾಶ್ಮೀರ ಕಾರಾಗೃಹವಾಗಿ ಪರಿವರ್ತಿತವಾಗಿದೆ. 2019ರಿಂದ ಅವರು ದಮನಕ್ಕೆ ಒಳಗಾಗುತ್ತಿದ್ದಾರೆ. ಸರಕಾರ ಕೆಲವು ಪಾವತಿ ಮಾಧ್ಯಮದ ನೆರವಿನಿಂದ ಕಣಿವೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಬಿಂಬಿಸುತ್ತಿದೆ ’’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘‘ಎನ್ಕೌಂಟರ್ ನಡೆದಾಗ ಹಾಗೂ ಅದರಲ್ಲಿ ಉಗ್ರರು ಹತ್ಯೆಯಾದಾಗ ಯಾರೊಬ್ಬರೂ ಪ್ರಶ್ನೆ ಮಾಡುವುದಿಲ್ಲ. ಆದರೆ, ನಾಗರಿಕರ ಹತ್ಯೆಯಾದಾಗ ಮಾತ್ರ ಜನರು ಪ್ರಶ್ನಿಸಲು ಆರಂಭಿಸುತ್ತಾರೆ’’ ಎಂದು ಅವರು ಹೇಳಿದ್ದಾರೆ.

‘‘ಕಾಶ್ಮೀರ ನೋವಿನಲ್ಲಿದೆ’’ ಎಂಬ ಪ್ರದರ್ಶನಾ ಫಲಕ ಹಿಡಿದುಕೊಂಡ ಮೆಹಬೂಬಾ ಮುಪ್ತಿ, ‘‘ನಾಗಲ್ಯಾಂಡ್ನಲ್ಲಿ ಏನು ನಡೆದಿದ ಎಂಬುದನ್ನು ನೀವು ನೋಡಿದ್ದೀರಿ. ಭದ್ರತಾ ಪಡೆ 13 ನಾಗರಿಕರನ್ನು ಹತ್ಯೆಗೈದಿದೆ. ಎಫ್ಐಆರ್ ಅನ್ನು ಕೂಡಲೇ ದಾಖಲಿಸಲಾಗಿದೆ. ನಾಗಾಲ್ಯಾಂಡ್ ಘಟನೆಗ ಬಗ್ಗೆ ವಿಷಾದ ವ್ಯಕ್ತಪಡಿಸಿದಂತೆ ಕಾಶ್ಮೀರ ವಿಷಯದಲ್ಲಿ ವಿಷಾದ ವ್ಯಕ್ತಪಡಿಸುತ್ತಿಲ್ಲ ಯಾಕೆ? ಈ ತನಿಖೆಯಿಂದ ಏನಾದರೂ ಬಹಿರಂಗವಾಗಬಹುದು ಎಂಬ ಹೆಚ್ಚು ನಿರೀಕ್ಷೆ ನನಗಿಲ್ಲ. ಈಗಲೂ ಸರಕಾರ ನಾಟಕ ಆಡುವಂತೆ ಕಾಣುತ್ತಿದೆ’’ ಎಂದು ಅವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)