ಹೊಸ ವೀಕೆಂಡ್: ಕೆಲಸದ ಅವಧಿಯನ್ನು ಕಡಿತಗೊಳಿಸಿದ ಯುಎಇ
Photo: Gulfnews
ದುಬೈ, ಡಿ.7: ವಾರಕ್ಕೆ ನಾಲ್ಕೂವರೆ ದಿನದ ಕೆಲಸ, ಶುಕ್ರವಾರ ಮಧ್ಯಾಹ್ನದ ಬಳಿಕ , ಶನಿವಾರ ಹಾಗೂ ರವಿವಾರ ವೀಕೆಂಡ್ ಎಂಬ ಹೊಸ ಕೆಲಸದ ವೇಳಾಪಟ್ಟಿಯನ್ನು ಜಾರಿಗೊಳಿಸುವುದಾಗಿ ಯುಎಇ ಘೋಷಿಸಿದೆ.
ಹೊಸ ನಿಯಮದ ಪ್ರಕಾರ, ಉದ್ಯೋಗಿಗಳು ಸೋಮವಾರದಿಂದ ಗುರುವಾರದವರೆಗೆ 8 ಗಂಟೆಗಳ ಕೆಲಸ, ಶುಕ್ರವಾರ 4.5 ಗಂಟೆಗಳ ಕೆಲಸ ಮಾಡಬೇಕು. ಶುಕ್ರವಾರ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನೂ ಸರಕಾರಿ ಉದ್ಯೋಗಿಗಳಿಗೆ ನೀಡಲಾಗಿದೆ. ಶುಕ್ರವಾರದ ಪ್ರಾರ್ಥನೆ ಮತ್ತು ಧಾರ್ಮಿಕ ಉಪನ್ಯಾಸ ಮಧ್ಯಾಹ್ನ 1:15ಕ್ಕೆ ನಡೆಯಲಿದೆ. ಹೊಸ ನಿಯಮ 2022ರ ಜನವರಿ 1ರಿಂದ ಜಾರಿಗೆ ಬರಲಿದ್ದು ಎಲ್ಲಾ ಫೆಡರಲ್ ಸರಕಾರಿ ಇಲಾಖೆಗಳಿಗೆ ಇದು ಅನ್ವಯಿಸುತ್ತದೆ ಎಂದು ಸರಕಾರಿ ಸ್ವಾಮ್ಯದ 'ವ್ಯಾಮ್ ಸುದ್ಧಿಸಂಸ್ಥೆ ವರದಿ ಮಾಡಿದೆ. ಯುಎಇ ಹಾಗೂ ಇತರ ಗಲ್ಫ್ ದೇಶಗಳಲ್ಲಿ ಪ್ರಸ್ತುತ ಶುಕ್ರವಾರ, ಶನಿವಾರ ವೀಕೆಂಡ್ ರಜಾದಿನ ಆಗಿದೆ. ಈ ಪರಿವರ್ತನೆಯು ಆರ್ಥಿಕ ಮತ್ತು ವ್ಯಾವಹಾರಿಕ ಕ್ಷೇತ್ರಗಳಲ್ಲಿ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಜಾಗತಿಕ ಬೆಳವಣಿಗೆಯೊಂದಿಗೆ ಮುಂದೆ ಸಾಗುವ ಯುಎಇ ಪರಿಕಲ್ಪನೆಗೆ ಅನುಗುಣವಾಗಿದೆ ಎಂದು ವರದಿ ಹೇಳಿದೆ.
ಖಾಸಗಿ ಕ್ಷೇತ್ರದ ಸಂಸ್ಥೆಗಳಿಗೆ ಹಾಗೂ ಶಾಲೆಗಳಿಗೆ ಈ ನಿಯಮ ಅನ್ವಯಿಸುತ್ತದೆಯೇ ಎಂಬ ಬಗ್ಗೆ ಘೋಷಣೆಯಲ್ಲಿ ಉಲ್ಲೇಖಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರ ಒದಗಿಸಬಹುದು ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ.