ಕುವೈತ್ : ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ರಕ್ತದಾನ ಶಿಬಿರ
ಕುವೈತ್ ಸಿಟಿ: ಕನ್ನಡ ನಟ ಹಾಗೂ ಸಮಾಜ ಸೇವಕ ಪುನೀತ್ ರಾಜ್ ಕುಮಾರ್ ಅವರ ಜೀವನ ಮತ್ತು ಕಾರ್ಯಗಳನ್ನು ಸ್ಮರಿಸಿ ಗೌರವಿಸುವ ಸಲುವಾಗಿ ಕುವೈತ್ ನ ಭಾರತೀಯ ಪ್ರವಾಸಿ ಪರಿಷತ್ (ಬಿಪಿಪಿ) ಕರ್ನಾಟಕ ವಿಭಾಗ ಮತ್ತು 'ಬಿಡಿಕೆ ಕುವೈತ್' ಜಂಟಿಯಾಗಿ ರಕ್ತದಾನ ಶಿಬಿರವನ್ನು ಆದಾನ್ ಕೊಅಪರೇಟಿವ್ ಬ್ಲಡ್ ಟ್ರಾನ್ಸ್‌ಫ್ಯೂಸನ್ ಸೆಂಟರ್‌ನಲ್ಲಿ ಇತ್ತೀಚೆಗೆ ಆಯೋಜಿಸಿತ್ತು.
ಬಿಪಿಪಿ ಅಧ್ಯಕ್ಷ ರಾಜ್ ಭಂಡಾರಿ ತಿರುಮಲೆಗುತ್ತು ಅವರ ಅಧ್ಯಕ್ಷತೆಯಲ್ಲಿ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು. ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ಶಾಖೆಯ ವ್ಯವಸ್ಥಾಪಕ ಅಬ್ದುಲ್ ರಝಾಕ್ ಅವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.
'ಕೋಸ್ಟಲ್ ವೈಬ್ಸ್' ಮೂಲಕ ವಿವಿಧ ವಿಷಯಗಳಲ್ಲಿ ಸಮುದಾಯದೊಂದಿಗೆ ಸಂವಾದ ನಡೆಸುತ್ತಿರುವ ಅರಲ್ ಜಾನ್ ಡಿಸೋಜ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪುನಿತ್ ರಾಜ್ ಕುಮಾರ್ ಅವರ ಜೀವನವು ಪರೋಪಕಾರಿ ಮತ್ತು ಮಾನವೀಯತೆಗೆ ಮಾದರಿ ಎಂದು ಈ ಸಂದರ್ಭದಲ್ಲಿ ಬಣ್ಣಿಸಲಾಯಿತು. ಈ ಶಿಬಿರವನ್ನು ಭಾರತ-ಕುವೈತ್ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 60ನೇ ವಾರ್ಷಿಕೋತ್ಸವ ಮತ್ತು ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವನ್ನು ಆಚರಿಸುವ ಸಲುವಾಗಿಯೂ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದರು.
ತುಳುಕೂಟ ಕುವೈತ್ ನ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಕುವೈತ್ ಬಿಲ್ಲವ ಸಂಘದ ಉಪಾಧ್ಯಕ್ಷರಾದ ಸುಷ್ಮಾ ಮನೋಜ್, ಪ್ರಧಾನ ಕಾರ್ಯದರ್ಶಿ ಸವಿನಯ, ಮನೋಜ್ ಆರ್ಟ್ ಗ್ಯಾಲರಿಯ ಮನೋಜ್ ಕುಮಾರ್ ಅವರು ಅಭಿನಂದನಾ ಸಂದೇಶ ನೀಡಿದರು.
ಸಮಾಜ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಕ್ಕಾಗಿ ಭಾರತೀಯ ಪ್ರವಾಸಿ ಪರಿಷತ್ ಗೆ 'ಬಿಡಿಕೆ'ಯ ಸಲಹಾ ಮಂಡಳಿಯ ಸದಸ್ಯ ರಾಜನ್ ತೊಟ್ಟತ್ತಿಲ್ ಅವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಸುಮಾರು 125 ದಾನಿಗಳು ರಕ್ತದಾನ ಮಾಡಿದರು. ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬಿಡಿಕೆ ಕಾರ್ಯಕರ್ತ ನಿಮಿಷ್ ಕಾವಳಂ ಕಾರ್ಯಕ್ರಮವನ್ನು ಸಂಯೋಜಿಸಿದರು. ಉಪಾಧ್ಯಕ್ಷ ಮಾಧವ ನಾಯ್ಕ, ಖಜಾಂಚಿ ವಿಜೀತ್ ತುಂಬೆ, ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಅರುಣ್ ರಾಮ್, ಜಂಟಿ ಕ್ರೀಡಾ ಕಾರ್ಯದರ್ಶಿ ಪ್ರಶಾಂತ್ ಕುಂದರ್, ಕುವೈತ್ ಕರ್ನಾಟಕ ವಿಭಾಗದ ಬಿಪಿಪಿಯ ವಿಶು ಕಾರ್ಯಕಾರಿ ಸದಸ್ಯರಾದ ಗುರುರಾಜ್, ಕಥಾಮಸ್ ಜಾನ್, ಮಾರ್ಟಿನ್, ಚಾರ್ಲ್ಸ್, ವಿನೋದ್, ಮುನೀರ್, ಜಾಲಿ, ಬಿಡಿಕೆಯ ವೇಣುಗೋಪಾಲ್, ಜಯನ್, ದೀಪು, ಪ್ರೇಮಕಿರಣ್, ಅನಿತಾ ನಾಯರ್ ಮತ್ತು ಯಮುನಾ ಶಿಬಿರದ ಯಶಸ್ವಿ ಕಾರ್ಯನಿರ್ವಹಣೆಗೆ ಸ್ವಯಂಪ್ರೇರಿತ ಸೇವೆ ಸಲ್ಲಿಸಿದರು.
ರಘುಬಾಳ್ ಬಿಡಿಕೆ ಸ್ವಾಗತಿಸಿದರು, ಬಿಪಿಪಿ-ಕರ್ನಾಟಕ ವಿಭಾಗದ ಜಂಟಿ ಕಾರ್ಯದರ್ಶಿ ಚಿತ್ರರಂಜನ್ ದಾಸ್ ವಂದಿಸಿದರು.
ಸಮಾಜ ಸೇವಾ ಉತ್ಸಾಹಿಗಳು ಮತ್ತು ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸಲು, ಕೇಂದ್ರ ರಕ್ತ ಬ್ಯಾಂಕ್ ಮತ್ತು ಸ್ವಯಂಪ್ರೇರಿತ ರಕ್ತದಾನಿಗಳ ಸೇವೆಗಳ ಸಹಯೋಗದೊಂದಿಗೆ ಜಾಗೃತಿ ಮೂಡಿಸಲು ಕೇರಳದ ರಕ್ತದಾನಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.