ನಾಗಾಲ್ಯಾಂಡ್ನ ನೆತ್ತರು ಭಾರತದ ಕೈಗೆ ಮೆತ್ತಿಕೊಂಡಿದೆ!
ಹಿಂಸೆಯ ಸಹಕಾರವಿಲ್ಲದೆ ಸುಳ್ಳು ಮಾನ್ಯಗೊಳ್ಳುವುದಿಲ್ಲ, ಸುಳ್ಳು ಬೆನ್ನಿಗಿಲ್ಲದೆ ಹಿಂಸೆಯೂ ಮಾನ್ಯಗೊಳ್ಳುವುದಿಲ್ಲ. ಹಿಂಸೆ ಮತ್ತು ಸುಳ್ಳುಗಳ ಈ ರಾಜನೈತಿಕ ಸಹಕಾರದಲ್ಲಿ ಈಶಾನ್ಯ ಭಾರತದಲ್ಲಿ ಮತ್ತು ಕಾಶ್ಮೀರದಲ್ಲಿ ದೇಶ ರಕ್ಷಣೆಯ ಹೆಸರಿನಲ್ಲಿ ಒಂದು 'Conflict Economy'ಯೇ ಸೃಷ್ಟಿಯಾಗಿದೆಯೆಂದು ಮತ್ತು ಅದು ದಂಗೆಯ ವಾತಾವರಣವಿಲ್ಲದಿದ್ದರೂ 'ಸರಕಾರಿ ಪ್ರತಿದಂಗೆ ತಂತ್ರ'ಗಳ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುವ ಪಟ್ಟಭದ್ರ ಹಿತಾಸಕ್ತಿಗಳನ್ನು ಸೇನೆಯಲ್ಲೂ, ಆ ಸಮಾಜದಲ್ಲೂ ಸೃಷ್ಟಿಸಿದೆ ಎಂದು ಈ ಪುಸ್ತಕದಲ್ಲಿ 'ತಪ್ಪೊಪ್ಪಿಗೆ' ಮಾಡಿಕೊಂಡಿರುವ ಅಧಿಕಾರಿ ಸ್ಪಷ್ಟಪಡಿಸುತ್ತಾರೆ.
ಮೊನ್ನೆ ನಾಗಾಲ್ಯಾಂಡ್ನ ಗಡಿಹಳ್ಳಿಯಲ್ಲಿ ದಿನದ ಕೆಲಸ ಮುಗಿಸಿಕೊಂಡು ಹಿಂದಿರುಗುತ್ತಿದ್ದ ನಿರಾಯುಧ ನಾಗರಿಕರನ್ನು ಭಯೋತ್ಪಾದಕರೆಂದು ಶಂಕಿಸಿ ಭಾರತದ ಸೈನಿಕರು ಸಾಯಿಸಿದ್ದಾರೆ. ಇದರಿಂದ ಸಹಜವಾಗಿ ಸಿಟ್ಟಿಗೆದ್ದ ಗ್ರಾಮಸ್ಥರು ಸೇನಾ ಶಿಬಿರಕ್ಕೆ ಮುತ್ತಿಗೆ ಹಾಕಿದಾಗ ಮತ್ತೆ ಗೋಲಿಬಾರ್ ಮಾಡಿ ಇನ್ನಷ್ಟು ಅಮಾಯಕ ನಾಗರಿಕರನ್ನು ಸೈನಿಕರು ಕೊಂದುಹಾಕಿದ್ದಾರೆ. ಸತ್ತ ನಾಗರಿಕರು ಆಮಾಯಕ ಗ್ರಾಮಸ್ಥರೆಂದೂ, ಸೇನೆಯು ತಪ್ಪು ಮಾಡಿದೆಯೆಂದೂ ಭಾರತದ ಸೇನಾಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಕಾನೂನಿನ ಪ್ರಕಾರ ಕೋರ್ಟ್ ಮಾರ್ಷಲ್ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದಾಗಿ ನಿನ್ನೆಯ ಮಟ್ಟಿಗೆ ಭಾರತ ಸರಕಾರವೂ ಹೇಳಿಕೆ ಇತ್ತಿದೆ. ನಾಗಾಲ್ಯಾಂಡ್ನ ಬಿಜೆಪಿ ಪಕ್ಷವೂ ಸೇನೆಯ ಮೇಲೆ ಕೆಂಡಕಾರಿದೆ. ನಾಳೆ ಇದೇ ಕಥೆಯೇ ಇರುತ್ತದೆಯೋ ಅಥವಾ ಸತ್ತವರೆಲ್ಲಾ ದಿಢೀರ್ ಭಯೋತ್ಪಾದಕರಾಗಿ ಮಾರ್ಪಾಡಾಗಿ ಕೊಂದ ಸೈನಿಕರೇ ಹೀರೋಗಳಾಗುತ್ತಾರೆಯೋ ಗೊತ್ತಿಲ್ಲ. ಏಕೆಂದರೆ ಈವರೆಗೆ ಈ ಸರಕಾರ ತಾನು ಮಾಡಿದ ಯಾವುದೇ ತಪ್ಪನ್ನು ಒಪ್ಪಿಕೊಂಡಿಲ್ಲ. ಅಷ್ಟು ಮಾತ್ರವಲ್ಲ. ಮೋದಿ ಸರಕಾರದ ಭದ್ರತಾ ಸಲಹೆಗಾರ ದೋವಲ್ ಮೊನ್ನೆ ತಾನೇ ದೇಶ ರಕ್ಷಣೆಗೆ ಸೈನ್ಯ ಮತ್ತು ಪೊಲೀಸರು ನಾಲ್ಕನೇ ಬಗೆಯ ಯುದ್ಧತಂತ್ರಗಳನ್ನು ಕಲಿಯಬೇಕು. ಈ ಯುದ್ಧದಲ್ಲಿ ಶತ್ರುಗಳು ನಾಗರಿಕ ಸಮಾಜದ ಸದಸ್ಯರೇ ಆಗಿರುತ್ತಾರೆಂದು ಘೋಷಿಸಿದ್ದಾರೆ. ಹೀಗಾಗಿ ಈಗ ಮೋದಿ ಸರಕಾರವು ಭಾರತದ ಎಲ್ಲಾ ನಾಗರಿಕರನ್ನು ಶತ್ರುಗಳೆಂದೇ ಅನುಮಾನಿಸಲಿದೆ. ಹೀಗಾಗಿ ಇನ್ನು ಮುಂದೆ ಕಾಶ್ಮೀರ, ಈಶಾನ್ಯ ಭಾರತಗಳಲ್ಲಿ ಮಾತ್ರ ನಾಗರಿಕರ ಮೇಲೆ ಮೋದಿ ಸೇನೆ ನಡೆಸುತ್ತಿದ್ದ ಯುದ್ಧಗಳು ದೇಶಾದ್ಯಂತ ವಿಸ್ತರಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಸೇನಾಪಡೆಗಳ ಸ್ವೇಚ್ಛಾಚಾರಕ್ಕೆ ಅಧಿಕೃತ ಪರವಾನಿಗೆ AFSPA- ಅದೇನೇ ಇರಲಿ. ಭಾರತ ಸೇನೆ ನಾಗಾಲ್ಯಾಂಡ್ನಲ್ಲಿ ಮೊನ್ನೆ ನಡೆಸಿದ ಈ ಹತ್ಯಾಕಾಂಡ ಆಕಸ್ಮಿಕವಾದದ್ದೂ ಅಲ್ಲ. ಅಪರೂಪದ್ದು ಅಲ್ಲ. ಏಕೆಂದರೆ ಈಶಾನ್ಯ ಭಾರತದ ಈ ಏಳು ರಾಜ್ಯಗಳಲ್ಲಿ ಮತ್ತು ಕಾಶ್ಮೀರದಲ್ಲಿ ಭಾರತದ ಸೇನೆಗೆ ಯಾರ ಮೇಲಾದರೂ ಭಯೋತ್ಪಾದಕ ಎಂದು ಅನುಮಾನ ಬಂದರೂ ಸಾಕು, ಬಂಧನ, ನ್ಯಾಯವಿಚಾರಣೆ, ನ್ಯಾಯಾಂಗದ ಮೇಲುಸ್ತುವಾರಿ ಯಾವುದೂ ಇಲ್ಲದೆ ಯಾರನ್ನು ಬೇಕಾದರೂ ಕೊಂದು ಹಾಕಬಹುದಾದ ವಿಶೇಷ ಅಧಿಕಾರವನ್ನು Armed Force Special Powers Act- AFSPA - ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ- ಅಲ್ಲಿ ಕೆಲಸ ಮಾಡುವ ಸೈನಿಕರಿಗೆ ಕೊಡುತ್ತದೆ. ಬ್ರಿಟಿಷರ ಕಾಲದಲ್ಲಿ ಭಾರತೀಯರನ್ನು ದಮನಿಸಲು ಇಂತಹ ವಸಾಹತುಶಾಹಿ, ದಮನಕಾರಿ ಕಾನೂನು ಜಾರಿಯಲ್ಲಿತ್ತು. ಆದರೆ ಅವೂ ಕೂಡ ಇಷ್ಟು ಭೀಕರವಾಗಿರಲಿಲ್ಲ. ಆದರೆ 20ನೇ ಶತಮಾನದ ಇತಿಹಾಸವು ಎಂತಹ ಕ್ರೂರ ವಸಾಹತುಶಾಹಿಗಳೂ ಕೂಡಾ ಅಧೀನವಾಗಿರಲು ಒಲ್ಲದ ಮತ್ತೊಂದು ರಾಷ್ಟ್ರೀಯತೆಯನ್ನು ಅಥವಾ ಜನಾಂಗಗಳನ್ನು ದಮನ ಮತ್ತು ದಬ್ಬಾಳಿಕೆಗಳ ಮೂಲಕ ಬಲವಂತದಿಂದ ಆಳಲು ಸಾಧ್ಯವಿಲ್ಲ ಎಂಬುದನ್ನು ರುಜುವಾತುಪಡಿಸುತ್ತದೆ. ಆದರೂ ಸ್ವತಂತ್ರ ಭಾರತದ ಭಾರತೀಯ ಸರಕಾರ 1958ರಿಂದಲೂ ಈಶಾನ್ಯ ಭಾರತ ಮತ್ತು ಕಾಶ್ಮೀರಗಳಲ್ಲಿ ಜನರ ಪ್ರತಿಭಟನೆಯನ್ನು ಹತ್ತಿಕ್ಕಲು ಇಂತಹ ಕ್ರೂರ ಕಾನೂನನ್ನು ಬಳಸುತ್ತಾ ಬಂದಿದೆ.
ಕಳೆದ 63 ವರ್ಷಗಳಲ್ಲಿ ಈ AFSPA ಕಾಯ್ದೆಯಿಂದಾಗಿ 'ಭಯೋತ್ಪಾದನೆಯನ್ನು' ಹತ್ತಿಕ್ಕಲೂ ಅಗಿಲ್ಲ. ಭಾರತದ ಒಕ್ಕೂಟದಲ್ಲಿ ಸ್ವಇಚ್ಛೆಯಿಂದ ಪಾಲ್ಗೊಳ್ಳಲು ಅಲ್ಲಿನ ಜನರನ್ನು ಸಂಪೂರ್ಣವಾಗಿ ಒಪ್ಪಿಸಲೂ ಆಗಿಲ್ಲ. ಬದಲಿಗೆ ಸಾವಿರಾರು ಅಮಾಯಕ ನಾಗರಿಕರನ್ನು ಭಾರತ ಸೈನಿಕರು ಬಲಿತೆಗೆದುಕೊಳ್ಳುವುದೂ ತಪ್ಪಿಲ್ಲ. ಇದರಿಂದ ಅಲ್ಲಿಯ ಜನರು ಭಾರತದ ಬಗ್ಗೆ ಅಸಹನೆ ಮತ್ತು ಆಕ್ರೋಶವನ್ನು ಇನ್ನೂ ಹೆಚ್ಚಾಗಿ ಬೆಳೆಸಿಕೊಳ್ಳುತ್ತಿರುವುದನ್ನು ಬಿಟ್ಟರೆ ರಾಜಕೀಯವಾಗಿ ಇನ್ಯಾವ ಸಾಧನೆಯೂ ಆಗಿಲ್ಲ. ಮೊನ್ನೆ ನಾಗಾಲ್ಯಾಂಡ್ನ ಹಳ್ಳಿಯಲ್ಲಿ ನಡೆದ ಕಗ್ಗೊಲೆ ಈಶಾನ್ಯ ಭಾರತ ಹಾಗೂ ಕಾಶ್ಮೀರಗಳಲ್ಲಿ ಕಳೆದ 63 ವರ್ಷಗಳಿಂದ ದಿನನಿತ್ಯ ನಡೆಯುವ ವಿದ್ಯಮಾನಗಳಾಗಿಬಿಟ್ಟಿವೆ. ಆದರೆ ಇಂತಹ ಒಂದು ಮೃಗೀಯತೆ ಒಂದು ನಾಗರಿಕ ಸಮಾಜಕ್ಕೆ ಮತ್ತು ಅದರಿಂದ ಆಯ್ಕೆಯಾಗುವ ಪ್ರಜಾತಾಂತ್ರಿಕ ಸರಕಾರಕ್ಕೆ ಹೇಗೆ ಸಾಧ್ಯವಾಗುತ್ತದೆ? ಅದು ಸಾಧ್ಯವಾಗುವುದು ಒಂದು ಸರಕಾರಕ್ಕೆ ತನ್ನ ಜನರ ಜೊತೆಗೆ ಬೇಟೆಗಾರ ಹಾಗೂ-ಬಲಿಪಶುಗಳಂತಹ ಸಂಬಂಧಗಳಿದ್ದಾಗ ಮಾತ್ರ. ಭಾರತೀಯರ ಬಗ್ಗೆ ಬಹುಪಾಲು ಬ್ರಿಟಿಷ್ ಅಧಿಕಾರಿಗಳು ಅದೇ ಧೋರಣೆ ತಳೆದಿದ್ದರು. ವಾಸ್ತವವಾಗಿ ಸ್ವಾತಂತ್ರ್ಯಾನಂತರದಲ್ಲಿ ಎಲ್ಲಾ ಪಕ್ಷಗಳ ಸರಕಾರಗಳು ಕಾಶ್ಮೀರ ಹಾಗೂ ಈಶಾನ್ಯ ಭಾರತದೊಂದಿಗೆ ಒಂದು ವಸಾಹತುಶಾಹಿ ಧೋರಣೆಯೊಂದಿಗೇ ನಡೆದುಕೊಳ್ಳುತ್ತ ಬಂದಿದೆ.
AFSPA- ಕಾಯ್ದೆ ಮತ್ತು ಮೊನ್ನೆ ನಡೆದ ಹತ್ಯಾಕಾಂಡ ಅದಕ್ಕೆ ಮತ್ತೊಂದು ಪುರಾವೆ. ಭಾರತ ಸೇನೆಯ ಇಂತಹ ಹತ್ತಾರು ಬರ್ಬರ ಹಾಗೂ ಅನಾಗರಿಕ ಕೃತ್ಯಗಳು ಹೊರಗೆ ಬರದಿರಲು ಕಾರಣ ಈ ಬರ್ಬರತೆಯು ಭಯೋತ್ಪಾದನೆ ನಿಗ್ರಹ ಹಾಗೂ ದೇಶ ರಕ್ಷಣೆ ಎನ್ನುವ ರಾಜಕೀಯ ಕವಚವನ್ನು ಹೊದ್ದಿರುತ್ತವೆ ಮತ್ತು ಸೇನೆಯೂ ಇತರ ಸರಕಾರಿ ಸಂಸ್ಥೆಗಳಂತೆ ಭ್ರಷ್ಟತೆ ಮತ್ತು ದುಷ್ಟತೆಗೆ ಈಡಾಗಬಹುದಾದ ಒಂದು ಪ್ರಭುತ್ವದ ಅಂಗವೆಂಬ ಸಹಜ ಗ್ರಹಿಕೆಯನ್ನೂ ಹುಸಿ ದೇಶಪ್ರೇಮದ ರಾಜಕಾರಣ ಮರೆಮಾಚುವುದರಿಂದ. ಈ ಹುಸಿ ರಾಷ್ಟ್ರವಾದಿ ರಾಜಕಾರಣವೇ 'ಸಂಘರ್ಷ ಪ್ರಾಂತ'ಗಳಲ್ಲಿ ದೇಶದ ಹೆಸರಿನಲ್ಲಿ ನಡೆಯುತ್ತಿರುವ ಬಂದೂಕಿನ ಸರ್ವಾಧಿಕಾರಕ್ಕೆ ಜನತೆಯ ಮೌನ ಸಮ್ಮತಿಯನ್ನು ರೂಢಿಸಿಕೊಟ್ಟಿದೆ. ಆದರೂ ಒಮ್ಮಿಮ್ಮೆ ಕೆಲವು ಪ್ರಾಮಾಣಿಕ ಸೇನಾಧಿಕಾರಿಗಳು ತಮ್ಮ ಪ್ರಾಣದ ಹಂಗು ತೊರೆದು ಇಂತಹ ಕೊಳೆಯುತ್ತಿರುವ ವ್ಯವಸ್ಥೆಯನ್ನೂ ಬಯಲು ಮಾಡುವುದುಂಟು. ಹಾಗೆಯೇ ಕೆಲವು ಜನಪರ ಪತ್ರಕರ್ತರು ತಮ್ಮ ಭವಿಷ್ಯವನ್ನು ಹಾಗೂ ಬದುಕನ್ನು ಬಲಿಗೊಟ್ಟು ಅದನ್ನು ದೇಶದ ಮುಂದೆ ಬಿಚ್ಚಿಡುವುದೂ ಉಂಟು.
ನಾಗಾಲ್ಯಾಂಡ್ನಲ್ಲಿ ಮೊನ್ನೆ ನಡೆದ ಘಟನೆ ಇಂತಹ ಒಂದು ಪ್ರಯತ್ನವನ್ನು ಹಾಗೂ ಈಶಾನ್ಯ ಭಾರತದಲ್ಲಿ ಸೇನೆ ನಡೆಸಿರುವ ಅತ್ಯಾಚಾರಗಳನ್ನು ಸೇನಾಧಿಕಾರಿಯೇ ಬಯಲು ಮಾಡಿದ ಪುಸ್ತಕವೊಂದನ್ನು ತಟ್ಟನೆ ನೆನಪಿಗೆ ತಂದಿತು.
"Blood on My hands' - ಅನಾಮಧೇಯ ಅಧಿಕಾರಿಯೊಬ್ಬನ ಆತ್ಮನಿವೇದನೆ
"Blood on My hands- Confession Of Staged Encounters - ನನ್ನ ಕೈಗೆ ಅಂಟಿದ ನೆತ್ತರು- ಇದು ಈಶಾನ್ಯ ಭಾರತ ಮತ್ತು ಕಾಶ್ಮೀರಗಳಲ್ಲಿ ಕೌಂಟರ್-ಇನ್ಸರ್ಜೆನ್ಸಿ (ದಂಗೆ-ನಿಗ್ರಹ ಪ್ರತಿತಂತ್ರಗಳು) ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದ ಸೇನಾಧಿಕಾರಿಯೊಬ್ಬರ ಸುದೀರ್ಘ ತಪ್ಪೊಪ್ಪಿಗೆ ಹೇಳಿಕೆ. ದೇಶ ಭದ್ರತೆಯ ಹೆಸರಿನಲ್ಲಿ ಭಾರತದ ಸೇನಾಪಡೆಯ ಅಧಿಕಾರಿ ಗಣದ ಹಲವರು ಪ್ರಶಸ್ತಿ, ಭಡ್ತಿ ಮತ್ತು ಹಣದ ಬೆನ್ನುಹತ್ತಿ ವ್ಯವಸ್ಥಿತವಾಗಿ ನಡೆಸುತ್ತಿರುವ ಅಮಾಯಕರ ಕಗ್ಗೊಲೆ-ದರೋಡೆಗಳಿಗೆ ಸಾಕ್ಷಿಯಾಗಿದ್ದ ಭಾರತ ಸೇನೆಯ ಅನಾಮಧೇಯ ಅಧಿಕಾರಿಯೊಬ್ಬ ಈ ದೇಶದ ಅತ್ಯಂತ ಪ್ರತಿಷ್ಠಿತ ಪತ್ರಕರ್ತರೊಬ್ಬರ ಎದುರು ಮಾಡಿಕೊಂಡ ಪಾಪನಿವೇದನೆ. ತನ್ನ ನಿವೇದನೆಯಲ್ಲಿ ಹೇಗೆ ಈ ಹಿಂಸಾಚಾರವು ಇಂದು 'ಬೃಹತ್ ಆರ್ಥಿಕ ವ್ಯವಹಾರ'ವಾಗಿ ಪಟ್ಟಭದ್ರ ಹಿತಾಸಕ್ತಿಯಾಗಿ, ಒಂದು ಮಾಫಿಯಾ ಆಗಿ ಬೆಳೆದುನಿಂತಿದೆ ಎಂಬ ಬಗ್ಗೆ ನೀಡುವ ಪುರಾವೆಗಳು ನಿಜವಾದ ದೇಶಭಕ್ತರು ಮತ್ತು ಪ್ರಜಾತಂತ್ರವಾದಿಗಳೆಲ್ಲರೂ ತಲ್ಲಣಿಸುವಂತೆ ಮಾಡುತ್ತದೆ. ಪ್ರಜಾಸತ್ತೆ ಕೊಳೆಯಲು ಶುರುವಾದಾಗ ಮಾತ್ರ ಸೇನೆಯಂತಹ ಪ್ರಭುತ್ವ ಸಂಸ್ಥೆಗಳಿಂದ ಹೆಣದ ವಾಸನೆ ಬರಲು ಶುರುವಾಗುತ್ತದೆ. ಉದಾಹರಣೆಗೆ ಜನರಲ್ ದಲ್ಬೀರ್ ಸಿಂಗ್ ಅವರು ಹಲವು ವರ್ಷಗಳ ಹಿಂದೆ ಮಾಜಿ ಜನರಲ್ ವಿ.ಕೆ. ಸಿಂಗ್ ಅವರು ತಮ ಭಡ್ತಿಯನ್ನು ತಡೆಯಲೆಂದೇ ತಮ್ಮ ವಿರುದ್ಧ ಸುಳ್ಳು ದೂರನ್ನು ದಾಖಲಿಸಿದ್ದಾರೆ ಎಂದು ಸುಪ್ರಿಂ ಕೋರ್ಟ್ಗೆ ಅಫಿಡವಿಟ್ ಒಂದನ್ನು ಸಲ್ಲಿಸಿದ್ದರು. ಮಾಧ್ಯಮಗಳು ಸೇನಾ ಜನರಲ್ ಅವರು ಹೇಳಿದ್ದನ್ನೇ ಸತ್ಯವೆಂದು ವರದಿ ಮಾಡುವ ಕಾರಕೂನ ವರದಿಗಾರಿಕೆಯಿಂದ ಹೊರಬಂದು ಸ್ವಲ್ಪ ಸ್ವತಂತ್ರ ತನಿಖಾ ವೃತ್ತಿಪರತೆಯಿಂದ ಆ ಅಫಿಡವಿಟ್ನ ವಿವರಗಳನ್ನು ವರದಿ ಮಾಡಿದ್ದರೂ ಈ ಪುಸ್ತಕದಲ್ಲಿರುವ ಸತ್ಯದ ಝಲಕ್ ಎಲ್ಲಾ ವರದಿಗಾರರಿಗೂ ದಕ್ಕುತ್ತಿತ್ತು.
ಜನರಲ್ ಸಾಹೇಬರ ಅಫಿಡವಿಟ್
ಜನರಲ್ ದಲ್ಬೀರ್ ಸಿಂಗ್ ಅವರು ಈಶಾನ್ಯ ಭಾರತದ ದೀಮಾಪುರ್ನ ಕಾರ್ಪ್-3 ಯ ಜನರಲ್ - ಆಫೀಸರ್- ಕಮ್ಯಾಂಡಿಂಗ್ ಆಗಿದ್ದಾಗ ಮಿಲಿಟರಿ ಇಂಟೆಲಿಜೆನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೇಜರ್ ರವಿ ಕಿರಣ್ ಅವರು ತಮ್ಮ ಸಹೋದ್ಯೋಗಿ ಸೇನಾಧಿಕಾರಿಗಳು ಮೂವರು ನಾಗರಿಕರನ್ನು ವಶದಲ್ಲಿಟ್ಟುಕೊಂಡು ವಿನಾಕಾರಣ ಕೊಂದುಹಾಕಿದ್ದಾರೆಂದೂ, ಮತ್ತದನ್ನು ಎನ್ಕೌಂಟರಿನಲ್ಲಿ ಮಿಲಿಟೆಂಟ್ಗಳ ಹತ್ಯೆಯೆಂದು ಸುಳ್ಳು ವರದಿ ನೀಡಿದ್ದಾರೆಂದು ದಲ್ಬೀರ್ ಸಿಂಗ್ ಅವರಿಗೂ, ಪೂರ್ವ ವಿಭಾಗದ ಸೇನಾ ಮುಖ್ಯಸ್ಥರಿಗೂ ಮತ್ತು ಅಂದಿನ ಸೇನಾ ಜನರಲ್ ಆಗಿದ್ದ ವಿ.ಕೆ. ಸಿಂಗ್ ಅವರಿಗೂ ಪತ್ರ ಬರೆದಿದ್ದರು. ಎರಡು ವರ್ಷಗಳಾದರೂ ಅದರ ಬಗ್ಗೆ ತನಿಖೆಯೇ ನಡೆಯದಾದಾಗ ವಿ.ಕೆ. ಸಿಂಗ್ ಅವರು ದಲ್ಬೀರ್ ಸಿಂಗ್ ಅವರಿಗೆ 'ಕಾರಣ ಕೋರಿ' ನೋಟಿಸ್ ಜಾರಿ ಮಾಡಿದ್ದಲ್ಲದೆ ಅವರನ್ನು 'ವಿಚಕ್ಷಣಾ' ಪಟ್ಟಿಯಲ್ಲಿರಿಸಿದರು. ಜನರಲ್ ದಲ್ಬೀರ್ ಸಿಂಗ್ ಅವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಇದೆಲ್ಲವೂ ತನ್ನ ಭಡ್ತಿಯನ್ನು ತಡೆಯಲು ಆಗಿನ ಜನರಲ್ ವಿ.ಕೆ. ಸಿಂಗ್ ಹೂಡಿದ ತಂತ್ರವೆಂದು ವಾದಿಸಿದ್ದಾರೆ. ಇದರಲ್ಲಿ ಯಾವ ಜನರಲ್ ಸರಿ ಯಾವ ಜನರಲ್ ತಪ್ಪೆಂದು ಕೋರ್ಟು ನಿರ್ಧರಿಸುತ್ತದೆ. ಆದರೆ ಅಮಾಯಕರ ಹತ್ಯೆ ಮಾಡಿ ಅದನ್ನು ಎನ್ಕೌಂಟರೆಂದು ತೋರಿಸಿದ ಸತ್ಯ ನಿರಾಕರಣೆಯಾಗಿಲ್ಲವೆಂಬುದು ನಾಗರಿಕ ಸಮಾಜಕ್ಕೆ ಅತಿಮುಖ್ಯವಾದದ್ದು. ಪ್ರಕರಣದಲ್ಲಿರುವ ಈ ಸತ್ಯವನ್ನು ಯಾವ ಮಾಧ್ಯಮಗಳೂ ಬಯಲಿಗೆಳೆಯಲು ಹಿಂಜರಿದಾಗ ಅದನ್ನು ಸಮಾಜದ ಎದುರು ಬಿಚ್ಚಿಟ್ಟಿದ್ದು ಕಳೆದ ಇಪ್ಪತ್ತು ವರ್ಷಗಳಿಂದ ಈಶಾನ್ಯ ಭಾರತದಲ್ಲಿ ರಾಷ್ಟ್ರೀಯ ಮಾಧ್ಯಮಗಳಿಗೆ ಪತ್ರಕರ್ತರಾಗಿ ಕೆಲಸ ಮಾಡಿರುವ ಕಿಶಾಲಯ್ ಭಟ್ಟಾಚಾರ್ಜಿ.
ಅವರೇ Blood on My hands'
ನ ಲೇಖಕರು. ಮೂಲತಃ ಅಸ್ಸಾಮಿನವರಾದ ಕಿಶಾಲಯ್ ಭಟ್ಟಾಚಾರ್ಜಿ ಅವರು 18 ವರ್ಷಗಳ ಕಾಲ ಎನ್ಡಿಟಿವಿಗೆ ಈಶಾನ್ಯ ಭಾರತದ ಪ್ರತಿನಿಧಿಯಾಗಿ ಕೆಲಸ ಮಾಡಿದವರು. ಅಷ್ಟು ಮಾತ್ರವಲ್ಲ, ತಮ್ಮ ವರದಿಗಳಿಗೆ 2006ರಲ್ಲಿ ರಾಮನಾಥ ಗೊಯೆಂಕಾ ಪ್ರಶಸ್ತಿಯನ್ನು ಪಡೆದವರು. ಎಲ್ಲಕ್ಕಿಂತ ಹೆಚ್ಚಾಗಿ 2011ರಿಂದ ದೇಶದ ರಕ್ಷಣಾ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೆಲಸ ಮಾಡುವ ಸ್ವಾಯತ್ತ ಸಂಸ್ಥೆಯಾದ Institute For Defence Studies and Analysis (IDSA) ನಲ್ಲಿ ಆಂತರಿಕ ಭದ್ರತೆ ವಿಷಯಗಳ ಅಧ್ಯಯನದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವವರು. ಇವೆಲ್ಲವೂ ಈ ಪುಸ್ತಕದಲ್ಲಿರುವ ಸಂಗತಿಗಳ ಅಧಿಕೃತತೆಯನ್ನು ಇನ್ನಷ್ಟು ದೃಢೀಕರಿಸುತ್ತದಷ್ಟೆ. ಹೀಗಾಗಿಯೇ ಈವರೆಗೆ ಈ ಪುಸ್ತಕದಲ್ಲಿ ಬಯಲಾಗಿರುವ ಸಂಗತಿಗಳನ್ನು ಸೇನೆಯಾಗಲೀ, ಸರಕಾರವಾಗಲೀ, ಸ್ವಘೋಷಿತ ದೇಶಪ್ರೇಮಿ ಬ್ರಿಗೇಡ್ಗಳಾಗಲಿ ಪ್ರಶ್ನಿಸುವ ಸಾಹಸಕ್ಕೆ ಕೈಹಾಕಿಲ್ಲ. ಬದಲಿಗೆ ಯೋಜಿತ ಮೌನದಿಂದ ಈ ಪುಸ್ತಕದ ಮಹತ್ವವನ್ನೇ ಬದಿಗೆ ಸರಿಸುವ ಪ್ರಯಾಸ ನಡೆದಿದೆ. ಎನ್ಕೌಂಟರ್ ಎಕಾನಮಿ!
ಹಿಂಸೆಯ ಸಹಕಾರವಿಲ್ಲದೆ ಸುಳ್ಳು ಮಾನ್ಯಗೊಳ್ಳುವುದಿಲ್ಲ, ಸುಳ್ಳು ಬೆನ್ನಿಗಿಲ್ಲದೆ ಹಿಂಸೆಯೂ ಮಾನ್ಯಗೊಳ್ಳುವುದಿಲ್ಲ. ಹಿಂಸೆ ಮತ್ತು ಸುಳ್ಳುಗಳ ಈ ರಾಜನೈತಿಕ ಸಹಕಾರದಲ್ಲಿ ಈಶಾನ್ಯ ಭಾರತದಲ್ಲಿ ಮತ್ತು ಕಾಶ್ಮೀರದಲ್ಲಿ ದೇಶ ರಕ್ಷಣೆಯ ಹೆಸರಿನಲ್ಲಿ ಒಂದು 'Conflict Economy'ಯೇ ಸೃಷ್ಟಿಯಾಗಿದೆಯೆಂದು ಮತ್ತು ಅದು ದಂಗೆಯ ವಾತಾವರಣವಿಲ್ಲದಿದ್ದರೂ 'ಸರಕಾರಿ ಪ್ರತಿದಂಗೆ ತಂತ್ರ'ಗಳ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುವ ಪಟ್ಟಭದ್ರ ಹಿತಾಸಕ್ತಿಗಳನ್ನು ಸೇನೆಯಲ್ಲೂ, ಆ ಸಮಾಜದಲ್ಲೂ ಸೃಷ್ಟಿಸಿದೆ ಎಂದು ಈ ಪುಸ್ತಕದಲ್ಲಿ 'ತಪ್ಪೊಪ್ಪಿಗೆ' ಮಾಡಿಕೊಂಡಿರುವ ಅಧಿಕಾರಿ ಸ್ಪಷ್ಟಪಡಿಸುತ್ತಾರೆ.
(ನಾಳೆಯ ಸಂಚಿಕೆಗೆ)