ಲೆಕ್ಕ ಪತ್ರ ಸಮಿತಿಯ ಮಧ್ಯಂತರ ವರದಿ ಮಂಡನೆಗೆ ಅನುಮತಿ ನೀಡದ ಸ್ಪೀಕರ್
ಕೋವಿಡ್ ವೆದ್ಯಕೀಯ ಸಲಕರಣೆ ಖರೀದಿ ಅವ್ಯವಹಾರ
ಬೆಂಗಳೂರು: ಕೋವಿಡ್-19ನ್ನು ನಿಯಂತ್ರಿಸಲು ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಕುರಿತು ಪರಿಶೀಲನೆ ನಡೆಸಿದ್ದ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸಲ್ಲಿಸಿದ್ದ ಮಧ್ಯಂತರ ವರದಿಯನ್ನು ಮಂಡಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇದುವರೆಗೂ ಯಾವುದೇ ನಿಲುವು ತಳೆದಿಲ್ಲ.
ಆದರೆ ಇದೇ ಸಮಿತಿಯು ಉನ್ನತ ಶಿಕ್ಷಣ ಇಲಾಖೆ, ಹೇಮಾವತಿ, ಯಗಚಿ ಜಲಾಶಯ, ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ವರದಿಯನ್ನು ಮಂಡಿಸಲು ಸ್ಪೀಕರ್ ಕಾಗೇರಿ ಅವರು ಅನುಮತಿ ನೀಡಿದ್ದಾರೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಾಗಿರುವ ಭ್ರಷ್ಟಾಚಾರದ ಕುರಿತು ಸಮಿತಿ ಸಲ್ಲಿಸಿದ್ದ ಮಧ್ಯಂತರ ವರದಿಯನ್ನು ಬೆಳಗಾವಿಯಲ್ಲಿ ಇದೇ ಡಿಸೆಂಬರ್ 13ರಿಂದ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸಲು ಅನುಮತಿ ನೀಡದಿರುವುದು ಚರ್ಚೆಗೆ ಕಾರಣವಾಗಿದೆ.
ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿಯೂ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದವು. ಆ ಸಂದರ್ಭದಲ್ಲಿಯೂ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿದ್ದ ಎಚ್.ಕೆ. ಪಾಟೀಲ್ ಅವರು ವಿಸ್ತೃತವಾಗಿ ಪರಿಶೀಲನೆ ನಡೆಸಿ ಮಧ್ಯಂತರ ವರದಿ ಸಲ್ಲಿಸಿದ್ದರು. ಆದರೆ ಆ ವರದಿಯನ್ನೂ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು ಅನುಮತಿ ನೀಡಿರಲಿಲ್ಲ. ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಮಿತಿ ಸಲ್ಲಿಸಿದ್ದ ಮಧ್ಯಂತರ ವರದಿಯನ್ನು ಮಂಡಿಸಲು ಈ ಬಾರಿಯೂ ಅನುಮತಿ ದೊರೆತಿಲ್ಲ.
ಶಾಸನಬದ್ಧವಾಗಿ ರಚನೆಯಾಗಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು(ಸಿಎಜಿ) ನೀಡುವ ವರದಿ ಆಧಾರದ ಮೇಲೆ ಸಭೆಗಳಲ್ಲಿ ಚರ್ಚೆ ನಡೆಸುತ್ತದೆ. ವರದಿ ಮೇಲೆ ಇಲಾಖೆಗಳು ಕೈಗೊಂಡಿರುವ ಕ್ರಮ ಮತ್ತು ಸರಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ ವಸೂಲಿ, ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು ಮತ್ತು ವಿಷಯವಾರು ಶಿಫಾರಸುಗಳನ್ನು ಮಾಡುವ ಮೂಲಕ ವರದಿಯನ್ನು ತಯಾರಿಸುತ್ತದೆ.
ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ತನಿಖೆ ನಡೆಸಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ದೂರು ನೀಡಿದ್ದೆವು. ಈ ಬಗ್ಗೆ ಸಮಿತಿಯು ಎರಡು ಮಧ್ಯಂತರ ವರದಿಗಳನ್ನು ತಯಾರಿಸಿದೆ. ಆದರೆ ವಿಧಾನ ಸಭಾಧ್ಯಕ್ಷರು ಇಲ್ಲಿಯವರೆಗೂ ವರದಿಗಳನ್ನು ಮಂಡಿಸಲು ಅನುಮತಿ ನೀಡದೇ ಇರುವುದು ಇದರಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದೆ. ಈ ವಿಚಾರದಲ್ಲಿ ಸಭಾಧ್ಯಕ್ಷರು ಸರಕಾರದ ಪರವಾಗಿ ಪಕ್ಷಪಾತ ಮಾಡಿರುವುದು ಅವರ ಸ್ಥಾನಕ್ಕೆ ಮಾಡಿರುವ ಅಪಚಾರ.
ದೀಪಕ್, ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ
ಕೋವಿಡ್ ಅವ್ಯವಹಾರಗಳ ಕುರಿತು ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸಲ್ಲಿಸಿರುವ ಮಧ್ಯಂತರ ವರದಿಯನ್ನು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬೇಕು. ಈ ಮೂಲಕ ಸರಕಾರವು ಪಾರದರ್ಶಕತೆ ತೋರಬೇಕು. ಕೋವಿಡ್ ಎರಡನೇ ಅಲೆ ವೇಳೆಯಲ್ಲಿ ರಾಜ್ಯದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಕೆಲ ಪ್ರಭಾವಿ ಸಚಿವರು ಹಾಗೂ ಅಧಿಕಾರಿಗಳು ಮಾನವೀಯತೆ ಮರೆತು ಔಷಧ, ಉಪಕರಣ ಖರೀದಿಯಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆಸಿದ್ದಾರೆ. ಈ ಕುರಿತು ಆಮ್ ಆದ್ಮಿ ಪಕ್ಷವು ದಾಖಲೆ ಸಮೇತ ದೂರು ನೀಡಿತ್ತು. ಇದನ್ನಾಧರಿಸಿ ಪರಿಶೀಲನೆ ನಡೆಸಿರುವ ಸಮಿತಿಯು ತಯಾರಿಸಿರುವ ವರದಿಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಅನುವು ಮಾಡಿಕೊಡಬೇಕು.
ಜಗದೀಶ್ ವಿ. ಸದಂ, ಆಮ್ ಆದ್ಮಿ ಪಕ್ಷ