ಲಖಿಂಪುರ ಖೇರಿ ಹಿಂಸಾಚಾರ:ಕೇಂದ್ರ ಸಚಿವರ ಪುತ್ರನ ವಿರುದ್ಧ ಪ್ರತ್ಯೇಕ ಎಫ್‌ಐಆರ್ ಮನವಿ ತಿರಸ್ಕರಿಸಿದ ನ್ಯಾಯಾಲಯ
ಹೊಸದಿಲ್ಲಿ: ಪತ್ರಕರ್ತ ರಮಣ್ ಕಶ್ಯಪ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ, ಅವರ ಪುತ್ರ ಆಶಿಶ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಲಖಿಂಪುರ ಖೇರಿ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ಅಕ್ಟೋಬರ್ 3 ರಂದು ಕೇಂದ್ರ ಸಚಿವರ ಬೆಂಗಾವಲು ವಾಹನವು ಪ್ರತಿಭಟನಾ ನಿರತ ರೈತರ ಗುಂಪಿನ ಮೇಲೆ ಹರಿದ ಪರಿಣಾಮ ನಾಲ್ವರು ರೈತರೊಂದಿಗೆ ಪತ್ರಕರ್ತ ರಮಣ್ ಕಶ್ಯಪ್ ಕೂಡ ಮೃತಪಟ್ಟಿದ್ದರು.
ಕಶ್ಯಪ್ ಅವರ ಸಹೋದರ ಪವನ್ ಅವರು ಅರ್ಜಿ ಸಲ್ಲಿಸಿದ್ದಾರೆ.
ನಾಲ್ವರು ರೈತರು ಹಾಗೂ ಕಶ್ಯಪ್ ಅವರನ್ನು ಸಚಿವರ ಬೆಂಗಾವಲು ಪಡೆ ಹರಿದು ಸಾಯಿಸಿದ ನಂತರ, ಇಬ್ಬರು ಬಿಜೆಪಿ ಕಾರ್ಯಕರ್ತರು ಹಾಗೂ ಚಾಲಕನನ್ನು ಪ್ರತಿಭಟನಾಕಾರರ ಗುಂಪು ಹತ್ಯೆ ಮಾಡಿದೆ ಎಂದು ಆರೋಪಿಸಲಾಗಿದೆ. ಇಲ್ಲಿಯವರೆಗೆ, ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಒಂದು ರೈತರ ಹತ್ಯೆ ಹಾಗೂ ಇನ್ನೊಂದು ಬಿಜೆಪಿ ಕಾರ್ಯಕರ್ತರ ಹತ್ಯೆ ಗೆ ಸಂಬಂಧಿಸಿ ಟಿಕೋನಿಯಾ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಪತ್ರಕರ್ತನ ಕುಟುಂಬವು ಅವರ ಸಾವಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣವನ್ನು ಬಯಸಿದೆ ಮತ್ತು ಕೇಂದ್ರ ಸಚಿವ ಮಿಶ್ರಾ ಹಾಗೂ ಅವರ ಮಗನನ್ನು ಬಂಧಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿತ್ತು.
ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ರಮಣ್ ಅವರ ಹೆಸರನ್ನು ಉಲ್ಲೇಖಿಸಿಲ್ಲ, ಹೀಗಾಗಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಬೇಕೆಂದು ಅವರು ಬಯಸಿದ್ದರು ಎಂದು ಪವನ್ ಹೇಳಿದ್ದಾರೆ.
.