ಲಾಕಪ್ಡೆತ್ಗೆ ಬಲಿಯಾಗುತ್ತಿರುವವರು ಯಾರು?
ಇಂದು ವಿಶ್ವ ಮಾನವ ಹಕ್ಕುಗಳ ದಿನ
ಸಾಂದರ್ಭಿಕ ಚಿತ್ರ (Source: PTI)
ವಿಚಾರಣೆಯಿಂದ ಪೊಲೀಸ್ ಠಾಣೆಯಿಂದ ಹೊರಬರುವ ಆರೋಪಿಗೂ ಮತ್ತು ಲಾಕಪ್ಡೆತ್ನಿಂದ ಸಾವಿಗೀಡಾಗುವ ಸಂಬಂಧಿಸಿದ ಕುಟುಂಬಗಳಿಗೂ ಇದೊಂದು ಮರೆಯಲಾರದ ಘಟನೆಯಾಗಿ ಉಳಿದುಕೊಳ್ಳುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳು ಪದೇಪದೇ ಪೊಲೀಸ್ ಠಾಣೆಗೆ ಭೇಟಿ ನೀಡಬೇಕಾಗುತ್ತದೆ. ಇದು ಸಹ ಆರೋಗ್ಯ, ಕೌಟುಂಬಿಕ, ಸಾಮಾಜಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ. ಈ ಘಟನೆಗಳು ಜೀವನದ ಮೇಲೆ ಆಳವಾದ ಗಾಯಗಳನ್ನು ಉಂಟು ಮಾಡುತ್ತವೆ.
ಪೊಲೀಸರು ತಮ್ಮ ಜೀವವನ್ನೇ ಒತ್ತೆ ಇಟ್ಟು ಕೆಲಸ ಮಾಡುತ್ತಾರೆ. ಕಠೋರ ಅಪರಾಧಿಗಳನ್ನು ಬಂಧಿಸುತ್ತಾರೆ. ಎಷ್ಟೋ ಪೊಲೀಸರು ಈ ವಿಚಾರದಲ್ಲಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆದರೆ ಇದಕ್ಕೆಲ್ಲ ಕಪ್ಪುಚುಕ್ಕೆಯಂತೆ ಲಾಕಪ್ಡೆತ್ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. 1980-90ರ ದಶಕದಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದ ಲಾಕಪ್ಡೆತ್ ವಿವಾದ ಈ ಮಧ್ಯೆ ಕಡಿಮೆಯಾದಂತೆ ಭಾಸವಾಗುತ್ತಿತ್ತು. ಆದರೆ ಈಗ ಲಾಕಪ್ಡೆತ್ ಮತ್ತೆ ಸುದ್ದಿ ಮಾಡುತ್ತಿದೆ. ಕೇಂದ್ರ ಸರಕಾರದ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ 348 ಮಂದಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರೆ, 5,221 ಮಂದಿ ನ್ಯಾಯಾಂಗ ಬಂಧನದಲ್ಲಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶ ಇದರಲ್ಲಿ ಮೊದಲ ಸ್ಥಾನದಲ್ಲಿದೆ. ಮಾನವ ಹಕ್ಕು ವರದಿ ಪ್ರಕಾರ ಪೊಲೀಸ್ ಕಸ್ಟಡಿಯಲ್ಲಿ 23 ಸಾವುನೋವುಗಳು ಸಂಭವಿಸಿದ್ದರೆ ಅದೇ ಸಮಯದಲ್ಲಿ ನ್ಯಾಯಾಂಗ ಬಂಧನದಲ್ಲಿ ಸುಮಾರು 1,295 ಸಾವುಗಳು ಸಂಭವಿಸಿವೆ. ಭಾರತದಲ್ಲಿ 2019ರ ಚಿತ್ರಹಿಂಸೆ ಕುರಿತ ವಾರ್ಷಿಕ ವರದಿಯಲ್ಲಿ ಒಟ್ಟು 1,731 ಜನರು ಕಳೆದ ಮೂರು ವರ್ಷಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವು ವರದಿಗಳ ಪ್ರಕಾರ 1,606 ಸಾವುಗಳು ನ್ಯಾಯಾಂಗ ಬಂಧನದಲ್ಲಿ ಮತ್ತು 125 ಪೊಲೀಸ್ ಕಸ್ಟಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿವೆ ಎನ್ನಲಾಗುತ್ತಿದೆ. 2019ರ ಅವಧಿಯಲ್ಲಿ ಭಾರತದಲ್ಲಿ ಪ್ರತಿದಿನ ಸುಮಾರು ಐದು ಸಾವುಗಳು ಪೊಲೀಸ್ ಕಸ್ಟಡಿಯಲ್ಲಿ ಉಂಟಾಗಿವೆ ಎನ್ನಬಹುದು.
ಕಳೆದ 10 ವರ್ಷಗಳಲ್ಲಿ 1,004 ಜನರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ವರದಿ ಮಾಡಿದೆ, ಅದರಲ್ಲಿ 40 ಪ್ರತಿಶತದಷ್ಟು ಜನರು ಪೊಲೀಸ್ ಕಸ್ಟಡಿಯಲ್ಲಿ ಸ್ವಾಭಾವಿಕವಾಗಿ ಅಥವಾ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಮತ್ತು 29 ಪ್ರತಿಶತದಷ್ಟು ಜನರು ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಗ್ಯೂ, ಈ ವರದಿಗಳು ಅನಾರೋಗ್ಯವು ದೀರ್ಘಕಾಲದ್ದಾಗಿದೆಯೇ ಅಥವಾ ಪೊಲೀಸ್ ಚಿತ್ರಹಿಂಸೆಯಿಂದ ಸಂಭವಿಸಿದೆಯೇ ಎಂಬುದನ್ನು ಎಲ್ಲಿಯೂ ಸ್ಪಷ್ಟಪಡಿಸುವುದಿಲ್ಲ. ಆದರೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳು ಕಸ್ಟಡಿ ಸಾವುಗಳ ಮೇಲೆ ಗಣನೀಯವಾಗಿ ಭಿನ್ನವಾಗಿವೆ ಎನ್ನುವುದಂತೂ ಸತ್ಯ.
ಕಳೆದ ಮೂರು ವರ್ಷಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ 125 ಸಾವುಗಳು ಉತ್ತರ ಪ್ರದೇಶದಲ್ಲಿ, 14 ಸಾವುಗಳು ತಮಿಳುನಾಡಿನಲ್ಲಿ, ಪಂಜಾಬ್ನಲ್ಲಿ 11 ಸಾವುಗಳು ಮತ್ತು ಬಿಹಾರದಲ್ಲಿ 10 ಸಾವುಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಚಿತ್ರಹಿಂಸೆ ವಿರುದ್ಧದ ಅಭಿಯಾನ ಪ್ರಕಟಿಸಿದೆ. ಆ ಕ್ರಮದಲ್ಲಿರುವ ಇತರ ರಾಜ್ಯಗಳು ಎಂದರೆ ಮಧ್ಯಪ್ರದೇಶ, ಗುಜರಾತ್, ದಿಲ್ಲಿ ಮತ್ತು ಒಡಿಶಾ, ಜಾರ್ಖಂಡ್, ಛತ್ತೀಸ್ಗಡ, ಮಹಾರಾಷ್ಟ್ರ ಮತ್ತು ರಾಜಸ್ಥಾನ, ಆಂಧ್ರಪ್ರದೇಶ, ಹರ್ಯಾಣ, ಕೇರಳ, ಕರ್ನಾಟಕ. ಪೊಲೀಸ್ ಕಸ್ಟಡಿಯಲ್ಲಿರುವ ಸಾವಿನ ಪ್ರಕರಣಗಳಲ್ಲಿ, ಶೇ.74.4 ಆರೋಪಿಗಳು ಚಿತ್ರಹಿಂಸೆಯಿಂದ ಸಾವನ್ನಪ್ಪಿದ್ದರೆ, 19.2 ಅನುಮಾನಾಸ್ಪದ ಸಂದರ್ಭಗಳಲ್ಲಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಆತ್ಮಹತ್ಯೆ, ಅನಾರೋಗ್ಯ ಮತ್ತು ಗಾಯಗಳು ಸೇರಿವೆ. ಇತರ ಐದು ಶೇಕಡಾ ಪ್ರಕರಣಗಳಲ್ಲಿ ಕಸ್ಟಡಿ ಸಾವಿಗೆ ಕಾರಣಗಳು ತಿಳಿದಿಲ್ಲ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವರದಿ ಹೇಳಿದೆ.
ರಾಷ್ಟ್ರೀಯ ಚಿತ್ರಹಿಂಸೆ ವಿರುದ್ಧದ ಅಭಿಯಾನದ ವಿಶ್ಲೇಷಣೆಯ ಪ್ರಕಾರ ಲಾಕಪ್ಡೆತ್ಗಳಲ್ಲಿ ಶೇ. 60 ದುರ್ದೈವಿಗಳು ಬಡ ಮತ್ತು ಅಂಚಿನ ಸಮುದಾಯಗಳಿಗೆ ಸೇರಿದ್ದಾರೆ ಎಂದು ಮೊದಲ ಬಾರಿಗೆ ಬಹಿರಂಗಪಡಿಸಿತು. ಅವರಲ್ಲಿ ಶೇ. 13 ದಲಿತ ಮತ್ತು ಬುಡಕಟ್ಟು ಸಮುದಾಯಗಳು ಮತ್ತು ಶೇ. 15 ಮುಸ್ಲಿಮರು ಸಹ ಸೇರಿದ್ದಾರೆ. ಇದರಲ್ಲಿ ಶೇ.35 ಮಂದಿ ಸಣ್ಣ ಅಪರಾಧಗಳಿಗೆ ಬಂಧಿತರಾಗಿದ್ದರು. ಅವರಲ್ಲಿ ಹೆಚ್ಚಿನವರು ಚಿಂದಿ ಆಯುವವರು, ನಿರಾಶ್ರಿತರು, ಭದ್ರತಾ ಸಿಬ್ಬಂದಿ, ಚಾಲಕರು, ಕಾರ್ಮಿಕರು ಮತ್ತು ರೈತರು ಇತ್ಯಾದಿ. ಇನ್ನು ಬಂಧನದಲ್ಲಿ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಾರೆ ಮತ್ತು ಇಂತಹ ಬಲಿಪಶುಗಳು ಹೆಚ್ಚಾಗಿ ದುರ್ಬಲ ವರ್ಗಗಳಿಗೆ ಸೇರಿದವರು ಎನ್ನುತ್ತದೆ ಅದೇ ವರದಿ. 2019ರಲ್ಲಿ, ಪೊಲೀಸ್ ಕಸ್ಟಡಿಯಲ್ಲಿ ಕನಿಷ್ಠ ನಾಲ್ಕು ಮಹಿಳೆಯರ ಸಾವು ವರದಿಯಾಗಿದೆ ಎಂದು ಅದು ಹೇಳಿದೆ. ಒಂದು ಸ್ಥಳದಲ್ಲಿ ಎಂತಹದೇ ಘಟನೆ ಸಂಭವಿಸಿದರೂ ಭಾರತದಲ್ಲಿ ಮೊದಲು ಪೊಲೀಸರ ತನಿಖೆಗೆ ಗುರಿಯಾಗುವುದು ರಸ್ತೆ ಬದಿ ವ್ಯಾಪಾರಿಗಳು, ಚಿಂದಿ ಆಯುವ ಹುಡುಗರು, ಬಾಲ ಕಾರ್ಮಿಕರು, ಬೀದಿ ಬದಿಯ ಮಕ್ಕಳು ಮತ್ತು ನಿರ್ಗತಿಕರು ಮಾತ್ರ. ಲಾಕಪ್ಡೆತ್ಗೆ ಕಾರಣಗಳ ಕುರಿತು ಪೊಲೀಸ್ ಅಧಿಕಾರಿಗಳು ಹೀಗೆ ಹೇಳುತ್ತಾರೆ: ಬಂಧಿತ ವ್ಯಕ್ತಿಯನ್ನು ಪೊಲೀಸ್ ಠಾಣೆಯ ಲಾಕ್ಅಪ್ಗೆ ಕರೆತರುವ ಮೊದಲು ಅಧಿಕಾರಿಗಳು ಆರೋಪಿಯ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸುವುದಿಲ್ಲ. ವಿಚಾರಣೆಯ ಸಮಯದಲ್ಲಿ ಹೆಚ್ಚಿನ ಬಲ ಪ್ರಯೋಗ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಆರೋಪಿಯ ಬಂಧನಕ್ಕೆ ಸಂಬಂಧಿಸದೆ ಇರುವ ಇತರ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತಾರೆ. ತುರ್ತು ಸಮಯದಲ್ಲಿ ಯಾವುದೇ ವೈದ್ಯಕೀಯ ನೆರವು ನೀಡುವುದಿಲ್ಲ ಅಥವಾ ಗಾಯಗೊಂಡ ಆರೋಪಿಯ ಬಗ್ಗೆ ನಿಗಾ ವಹಿಸುವುದಿಲ್ಲ. ಇಂತಹ ನಿರ್ಲಕ್ಷ್ಯದಿಂದ ಸಹ ಪೊಲೀಸ್ ಕಸ್ಟಡಿಯಲ್ಲಿ ಸಾವು ಸಂಭವಿಸುತ್ತದೆ. ಕೆಲವರ ಪ್ರಕಾರ ಪೊಲೀಸ್ ಸಿಬ್ಬಂದಿಯಲ್ಲಿ ತಾಳ್ಮೆಯ ಕೊರತೆ. ಏಕೆಂದರೆ ಅವರು ಆರೋಪಿಗಳ ತಕ್ಷಣ ತಪ್ಪೊಪ್ಪಿಗೆಯನ್ನು ಬಯಸುತ್ತಾರೆ. ಆರೋಪಿಯು ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದರೆ ತಕ್ಷಣವೇ ಬಲವನ್ನು ಬಳಸುತ್ತಾರೆ. ಎಲ್ಲಾ ರೀತಿಯ ಆರೋಪಿಗಳಿಗೆ ಒಂದೇ ರೀತಿಯ ತನಿಖೆ ನಡೆಸುವುದು ಮತ್ತು ಆರೋಪಿಗಳ ಮಾನಸಿಕ ಸ್ಥಿತಿಯ ಬಗ್ಗೆ ನಿರ್ಲಕ್ಷ್ಯ ಸಹ ಹೆಚ್ಚಿನ ಲಾಕಪ್ಡೆತ್ಗೆ ಕಾರಣ.
ಭಾರವಾದ ಮತ್ತು ಚೂಪಾದ ವಸ್ತುಗಳಿಂದ ಹೊಡೆಯುವುದು, ಥಳಿಸುವುದು, ಸುಡುವುದು, ಒದೆಯುವುದು ಇವೆಲ್ಲವೂ ಸಹ ಲಾಕಪ್ಡೆತ್ಗೆ ಕಾರಣ ಎನ್ನುತ್ತಾರೆ ತಜ್ಞರು. ಸಾಮಾಜಿಕ ಕಾರ್ಯಕರ್ತರ ಪ್ರಕಾರ ಕೈದಿಗಳಿಗೆ ಚಿತ್ರಹಿಂಸೆ ನೀಡುವುದನ್ನು ವಿರೋಧಿಸುವ ಮತ್ತು ಕಾನೂನು ಚೌಕಟ್ಟನ್ನು ಮಾತ್ರ ಬಳಸುವ ಪೊಲೀಸರ ಸಂಖ್ಯೆ ನಮ್ಮಲ್ಲಿ ಬಹಳ ಕಡಿಮೆ. ಪೊಲೀಸರು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಿಲ್ಲ ಎಂದು ಇಂದು ಯಾರೂ ನಂಬುವುದಿಲ್ಲ. ಲಾಕಪ್ಡೆತ್ಗೆ ಸಂಬಂಧಿತ ಪೊಲೀಸ್ ಸಿಬ್ಬಂದಿಯ ಬಂಧನಗಳು ಮತ್ತು ತ್ವರಿತ ಶಿಕ್ಷೆ ದೇಶದಲ್ಲಿ ವಾಸ್ತವಿಕವಾಗಿ ಸಂಪೂರ್ಣ ಶೂನ್ಯವಾಗಿವೆ. 2016ರಿಂದ 2018ರವರೆಗೆ, ಕಸ್ಟಡಿ ಸಾವು ಮತ್ತು ಚಿತ್ರಹಿಂಸೆ ವಿಚಾರದಲ್ಲಿ ಪೊಲೀಸ್ ಸಿಬ್ಬಂದಿ ವಿರುದ್ಧ ಸುಮಾರು 200 ಪ್ರಕರಣಗಳು ದಾಖಲಾಗಿವೆ. ಆದರೆ ಯಾವುದೇ ಒಬ್ಬ ಪೊಲೀಸ್ ಅಧಿಕಾರಿಯ ಬಂಧನವಿಲ್ಲ ಎನ್ನುತ್ತವೆ ಸುದ್ದಿ ಪತ್ರಿಕೆಗಳು. ಇದಕ್ಕೆ ಯಾರು ಹೊಣೆ? 1993ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಒಂದು ಲಾಕಪ್ಡೆತ್ ಪ್ರಕರಣ ಕುರಿತಾಗಿ ಹೈಕೋರ್ಟ್ ವಿಚಾರಣೆಯಲ್ಲಿ 18 ವರ್ಷಗಳ ನಂತರ ಇಂದು ಎಲ್ಲರೂ ಖುಲಾಸೆಗೊಂಡಿದ್ದಾರೆ! ಮಾನವ ಹಕ್ಕು ಆಯೋಗ ಪರಿಹಾರವನ್ನು ಶಿಫಾರಸು ಮಾಡಲು ಅಥವಾ ಒಳಗೊಂಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸುವ ಅಧಿಕಾರವನ್ನು ಮಾತ್ರ ಹೊಂದಿವೆ.
ಕಸ್ಟಡಿ ಹಿಂಸಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾದ ನಂತರ, ಅವರ ಪ್ರಭಾವದ ವ್ಯಾಪ್ತಿಯೊಳಗೆ ತನಿಖೆ ನಡೆಯುತ್ತದೆ. ತನಿಖೆ ನಡೆಸುವ ಎಲ್ಲರೂ ಆರೋಪಿ ಪೋಲೀಸರ ಸಹೋದ್ಯೋಗಿ ಅಥವಾ ಸ್ನೇಹಿತರಾಗಿರುತ್ತಾರೆ. ಇವರು ಎಂತಹ ತನಿಖಾ ವರದಿ ನೀಡಬಹುದು ನೀವೇ ಯೋಚಿಸಿ. ಕೊನೆಗೆ ಕೇವಲ ವರ್ಗಾವಣೆಯೊಂದಿಗೆ ಆ ಪ್ರಕರಣ ಖತಂ. ಆದರೆ ಇನ್ನು ಕೆಲವರ ಪ್ರಕಾರ ಹೆಚ್ಚಿನ ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಏಕಾಏಕಿ ಪ್ರಕರಣ ದಾಖಲು ಸಾಧ್ಯವಿಲ.್ಲ ಏಕೆಂದರೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣವನ್ನು ಸರಕಾರದ ಅನುಮತಿಯ ನಂತರ ಮಾತ್ರ ದಾಖಲಿಸಬಹುದು ಮತ್ತು ಸರಕಾರಗಳು ನಿಜವಾಗಿಯೂ ಅನುಮತಿ ನೀಡುವುದಿಲ್ಲ. ಪ್ರಕರಣ ದಾಖಲಿಸಿದರೂ ತಕ್ಷಣ ಜಾಮೀನು ಪಡೆದು ಹೊರಬರುತ್ತಾರೆ. ಪ್ರತಿ ಪೊಲೀಸ್ ಅಧಿಕಾರಿಗಳಿಗೆ ಇಂದು ರಾಜಕೀಯ ಶ್ರೀ ರಕ್ಷೆ ಇದೆ. ಇದು ಯಾವುದೇ ಸಮಾಜಕ್ಕೂ ಅಪಾಯಕಾರಿ ಸಂಗತಿಯಾಗಿದೆ. ಪೊಲೀಸ್ ಕಸ್ಟಡಿಗೆ ಒಳಗಾದವರನ್ನು ಆರೋಪಿಗಳು ಎಂದು ಮಾತ್ರ ಪರಿಗಣಿಸಬೇಕು. ಯಾವುದೇ ಕಾನೂನು ಪೊಲೀಸರಿಗೆ ಬಂಧನದಲ್ಲಿ ಕ್ರೂರವಾಗಿ ವರ್ತಿಸುವ ಹಕ್ಕನ್ನು ನೀಡುವುದಿಲ್ಲ. ಅಂತಹ ವಿಷಯಗಳ ಬಗ್ಗೆ ಕಾನೂನು ಸ್ಪಷ್ಟವಾಗಿದೆ ಮತ್ತು ಎಲ್ಲಾ ಪೊಲೀಸ್ ಅಧಿಕಾರಿಗಳು ಅವರು ಯಾವುದೇ ಸ್ಥಾನದಲ್ಲಿದ್ದರೂ ಕಾನೂನು ಕ್ರಮ ಜರುಗಿಸಬೇಕು. ಲಾಕಪ್ಡೆತ್ ವಿಷಯದ ಬಗ್ಗೆ ಅಧಿಕಾರಿಗಳನ್ನು ಸಂವೇದನಾಶೀಲಗೊಳಿಸಬೇಕು.
ವಿಚಾರಣೆಯಿಂದ ಪೊಲೀಸ್ ಠಾಣೆಯಿಂದ ಹೊರಬರುವ ಆರೋಪಿಗೂ ಮತ್ತು ಲಾಕಪ್ ಡೆತ್ನಿಂದ ಸಾವಿಗೀಡಾಗುವ ಸಂಬಂಧಿಸಿದ ಕುಟುಂಬಗಳಿಗೂ ಇದೊಂದು ಮರೆಯಲಾರದ ಘಟನೆಯಾಗಿ ಉಳಿದುಕೊಳ್ಳುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳು ಪದೇಪದೇ ಪೊಲೀಸ್ ಠಾಣೆಗೆ ಭೇಟಿ ನೀಡಬೇಕಾಗುತ್ತದೆ. ಇದು ಸಹ ಆರೋಗ್ಯ, ಕೌಟುಂಬಿಕ, ಸಾಮಾಜಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ. ಈ ಘಟನೆಗಳು ಜೀವನದ ಮೇಲೆ ಆಳವಾದ ಗಾಯಗಳನ್ನು ಉಂಟು ಮಾಡುತ್ತವೆ. ಕಾರಣವಿಲ್ಲದೆ ಬಂಧಿಸಲ್ಪಟ್ಟ ಮತ್ತು ಚಿತ್ರಹಿಂಸೆಗೊಳಗಾದ ಅನೇಕ ಜನರು ಆಘಾತದಿಂದ ಮಾತ್ರವಲ್ಲದೆ ನಿರಂತರ ಪೊಲೀಸ್ ಕಣ್ಗಾವಲಿನ ಪ್ರಭಾವದಿಂದಲೂ ಬದುಕಬೇಕಾಗುತ್ತದೆ. ಕುಟುಂಬಗಳು, ಸ್ನೇಹಿತರು ಮತ್ತು ಉದ್ಯೋಗದ ನಿರೀಕ್ಷೆಗಳು ಸಹ ಕಣ್ಮರೆಯಾಗುತ್ತವೆ. ಹಣಬಲ, ರಾಜಕೀಯ ಬಲ ಇರುವವರು ಒಂದೇ ದಿನಕ್ಕೆ ಹೊರಬರುತ್ತಾರೆ. ಆದರೆ ಬಡವರು, ಸಾಮಾಜಿಕವಾಗಿ ಹೊರಗುಳಿದವರು, ಅಂಚಿನ ಸಮುದಾಯದವರು, ಯಾವುದೇ ರಾಜಕೀಯ ಬಲ ಇಲ್ಲದವರು ಇಂತಹ ಅವ್ಯವಸ್ಥೆಗೆ ಬೇರೆ ಬೇರೆ ಹೆಸರಿನಲ್ಲಿ ಬಲಿಯಾಗುತ್ತಾರೆ. ಇಂತಹವರ ಬಗ್ಗೆ ಮಾತನಾಡಲು ಯಾರಿಗೂ ಸಮಯ ಮತ್ತು ಆಸಕ್ತಿ ಎರಡೂ ಇರುವುದಿಲ್ಲ. ಪೊಲೀಸ್ ಠಾಣೆಗೆ ಶಂಕಿತ ಆರೋಪಿಗಳನ್ನು ಕರೆತಂದು ವಿಚಾರಣೆ ಮಾಡುವುದು ತಪ್ಪಲ್ಲ, ಕಾನೂನು ಪ್ರಕಾರ ಅದು ಸರಿ. ಆದರೆ ಅದಕ್ಕೊಂದು ರೀತಿರಿವಾಜುಗಳು ಇರುತ್ತವೆ. ಆರೋಪಿ ಕೇವಲ ಆರೋಪಿ ಅಷ್ಟೇ. ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುವ ಪೊಲೀಸರ ಬಗ್ಗೆ ಸಮಾಜಕ್ಕೆ ನಿಜಕ್ಕೂ ಒಳ್ಳೆ ಅಭಿಪ್ರಾಯವಿದೆ. ಆದರೆ ಆಗಾಗ ಹೊಣೆಗೇಡಿ ಪೊಲೀಸರ ಅಚಾತುರ್ಯದಿಂದ ಉಂಟಾಗುವ ಇಂತಹ ಲಾಕಪ್ ಡೆತ್ ಪ್ರಕರಣಗಳಿಂದ ಪೊಲೀಸ್ ಇಲಾಖೆಗೆ ಒಂದು ಕಪ್ಪುಚುಕ್ಕೆ.