varthabharthi


ಸಂಪಾದಕೀಯ

ದೇಶವನ್ನು ಆಳುತ್ತಿರುವ ನಿರುದ್ಯೋಗ

ವಾರ್ತಾ ಭಾರತಿ : 10 Dec, 2021

ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ, ರಾಮಮಂದಿರದ ಜೊತೆಗೆ ಮಥುರಾ, ಕಾಶಿಯೂ ಸುದ್ದಿಯಲ್ಲಿದೆ. ಮಸೀದಿಯಲ್ಲಿ ಕೃಷ್ಣನನ್ನು ಸ್ಥಾಪಿಸುವ ಮಾತುಗಳನ್ನು ರಾಜಕಾರಣಿಗಳು ವೇದಿಕೆಯಲ್ಲಿ ಆಡತೊಡಗಿದ್ದಾರೆ. ಆದರೆ ಇದೇ ಉತ್ತರಪ್ರದೇಶದಲ್ಲಿ ಸರಕಾರಿ ಶಾಲೆಯ ಶಿಕ್ಷಕಿಯಾಗಬೇಕೆಂದು ಹಂಬಲಿಸುತ್ತಿರುವ ಸುಶಿಕ್ಷಿತ ಮಹಿಳೆಯೊಬ್ಬರು ನೂರು ಅಡಿ ಎತ್ತರದಲ್ಲಿರುವ ನೀರಿನ ಟ್ಯಾಂಕ್ ಏರಿ ಧರಣಿ ನಡೆಸುತ್ತಿದ್ದಾರೆ. ಶಿಕ್ಷಣಶಾಸ್ತ್ರದಲ್ಲಿ ಪದವಿಪಡೆದಿರುವ ಆಕೆ, ಉ.ಪ್ರ. ಸರಕಾರ ಆಯೋಜಿಸಿದ್ದ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆ ರಾಜ್ಯದಲ್ಲಿ ಸುಮಾರು 26 ಸಾವಿರ ಶಿಕ್ಷಕ ಹುದ್ದೆಗಳು ಖಾಲಿ ಬಿದ್ದಿದ್ದು, ಅವುಗಳನ್ನು ಶಿಖಾಪಾಲ್ ಅವರಂತಹ ಅರ್ಹ ಅಭ್ಯಥಿಗಳಿಂದ ಭರ್ತಿ ಮಾಡಬಹುದಾಗಿದೆ. ಶಿಖಾಪಾಲ್ ಅವರ ಸತ್ಯಾಗ್ರಹದಲ್ಲಿ ಆಕೆಯ ಸಹದ್ಯೋಗಿಗಳು ಕೂಡಾ ಕೈಜೋಡಿಸಿದ್ದು, ಟ್ಯಾಂಕ್‌ನ ಕೆಳಗೆ ನಿಂತುಕೊಂಡೇ ಆಕೆಗೆ ನೈತಿಕ ಹಾಗೂ ಭೌತಿಕ ಬೆಂಬಲವನ್ನು ನೀಡುತ್ತಿದ್ದಾರೆ. ಹೋರಾಟ ನಿರತ ಶಿಖಾಪಾಲ್‌ಗೆ ನೀರಿನ ಟ್ಯಾಂಕೇ ತಾತ್ಕಾಲಿಕ ಆಶ್ರಯತಾಣವಾಗಿದೆ. ಬೇಸಿಗೆಯ ಸುಡುಬಿಸಿಲು ಹಾಗೂ ಮಳೆಯ ಆರ್ಭಟವನ್ನು ಎದುರಿಸಿರುವ ಆಕೆ ಈಗ ಮೈಕೊರೆಯುವಂತಹ ಚಳಿಯನ್ನು ಸಹಿಸಿಕೊಳ್ಳಬೇಕಾಗಿದೆ. ಶಿಖಾಪಾಲ್ ಅವರ ಈ ಕಥೆಯು, ವರ್ಷವಿಡೀ ಪ್ರತಿಕೂಲ ಹವಾಮಾನವನ್ನು ಎದುರಿಸಿ ದಿಲ್ಲಿಯಲ್ಲಿ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ ಕೃಷಿಕರ ದಿಟ್ಟಹೋರಾಟದ ಜೊತೆ ಹೆಚ್ಚುಕಡಿಮೆ ಸಾಮ್ಯತೆಯನ್ನು ಹೊಂದಿದೆ.

ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂದೆಗೆದುಕೊಳ್ಳಬೇಕೆಂದು ಆಗ್ರಹಿಸಿ ಇರೋಮ್ ಶರ್ಮಿಳಾ ಅವರು 16 ವರ್ಷಗಳ ಕಾಲ ಸುದೀರ್ಘ ನಿರಶನ ಹಾಗೂ ಶಿಖಾಪಾಲ್ ಅವರ ಸತ್ಯಾಗ್ರಹವನ್ನು ಬಿಟ್ಟರೆ ಇತರ ಯಾವುದೇ ಮಹಿಳೆಯು ತನ್ನ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಷ್ಟೊಂದು ದೀರ್ಘವಾದ ಮುಷ್ಕರವನ್ನು ನಡೆಸಿದ ನಿದರ್ಶನಗಳಿಲ್ಲ. ಉತ್ತರ ಪ್ರದೇಶದ ಜನರ ನಿಜವಾದ ಅವಶ್ಯಕತೆ ಏನು ಎನ್ನುವುದನ್ನು ಈ ಶಿಖಾಪಾಲ್ ದೇಶಕ್ಕೆ ಸಾರುತ್ತಿದ್ದಾರೆ. ಭಾರತವು ಉದಾರೀಕರಣ ಹಾಗೂ ಖಾಸಗೀಕರಣದ ನೀತಿಗಳನ್ನು ಅಪ್ಪಿಕೊಂಡ ಬಳಿಕ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉದ್ಯೋಗಗಳಲ್ಲಿ ಖಾಯಂ ಆಗಿ ನೇಮಕಗೊಂಡಿರುವವರ ಸಂಖ್ಯೆಯನ್ನು ಕಡಿಮೆಗೊಳಿಸಲು ಯೋಚಿಸುತ್ತಿಎೆ. ಖಾಲಿ ಬಿದ್ದಿರುವ ಹುದ್ದೆಗಳನ್ನು ಭರ್ತಿ ಮಾಡದೆ ಇರುವುದು, ಖಾಯಂ ಹುದ್ದೆಗಳನ್ನು ಗುತ್ತಿಗೆಯ ಉದ್ಯೋಗಗಳಾಗಿ ಮಾರ್ಪಡಿಸುವುದು, ಮಾನವಸಂಪನ್ಮೂಲಗಳಿಗಾಗಿ ಖಾಸಗಿ ಏಜೆನ್ಸಿಗಳಿಗೆ ಹೊರಗುತ್ತಿಗೆ ನೀಡುವುದು ಇತ್ಯಾದಿ ಕ್ರಮಗಳನ್ನು ಅನುಸರಿಸುವ ಮೂಲಕ ಸರಕಾರಗಳು ಖಾಯಂ ಹುದ್ದೆಗಳನ್ನು ಕಡಿತಗೊಳಿಸುತ್ತಾ ಬರುತ್ತಿವೆ. ಇದರಿಂದಾಗಿ ದೇಶದಲ್ಲಿ ಹೆಚ್ಚುತ್ತಿರುವ ಯುವಜನಸಂಖ್ಯೆ ಬದುಕಿಗೆ ಭದ್ರತೆ ನೀಡಬಲ್ಲ ಉದ್ಯೋಗಗಳನ್ನು ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ.

ಸರಕಾರ ಆತ್ಮನಿರ್ಭರ ಘೋಷಣೆಯನ್ನು ಮಾಡಿದೆಯಾದರೂ, ಲಾಕ್‌ಡೌನ್ ಈ ಆತ್ಮನಿರ್ಭರತೆಯನ್ನು ಹಂಗಿಸುತ್ತಿದೆ. ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಯುವಕರ ಮೇಲೆ ಲಾಕ್‌ಡೌನ್ ಭೀಕರ ಪರಿಣಾಮ ಉಂಟು ಮಾಡಿದೆ. ಆತ್ಮನಿರ್ಭರತೆಯೆಂದರೆ ‘ನಿಮಗೆ ಉದ್ಯೋಗ ನೀಡಲು ನಾನು ಬಾಧ್ಯಸ್ಥನಲ್ಲ, ನಿಮ್ಮ ಉದ್ಯೋಗ ನೀವೇ ಹುಡುಕಿಕೊಳ್ಳಿ’ ಎನ್ನುವುದರ ಪರೋಕ್ಷ ಘೋಷಣೆಯಾಗಿದೆ. ನೋಟು ನಿಷೇಧ ಮತ್ತು ಲಾಕ್‌ಡೌನ್ ಜನರ ಇರುವ ಸ್ವ ಉದ್ಯೋಗಗಳನ್ನು ನಾಶ ಮಾಡಿರುವುದರಿಂದ, ಜನರಿಗೆ ಉದ್ಯೋಗ ನೀಡುವುದು ಸರಕಾರದ ಹೊಣೆಗಾರಿಕೆಯಾಗಿದೆ. ಉದ್ಯೋಗ ಜನರ ಮೂಲಭೂತ ಹಕ್ಕಾಗಿ ಪರಿವರ್ತನೆಯಾಗಲು ಇದು ಸಕಾಲವಾಗಿದೆ. ಇಂದಿನ ಭಾರತದಲ್ಲಿ ಒಂದೆಡೆ ಜಗತ್ತಿನ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಸ್ಥಾನವನ್ನು ಪಡೆಯುತ್ತಿದ್ದರೆ ಇನ್ನೊಂದೆಡೆ ದೇಶದ ಜನಸಂಖ್ಯೆಯ ಅರ್ಧದಷ್ಟು ಮಂದಿ ತಮ್ಮ ಮಕ್ಕಳಿಗೆ ಚೆನ್ನಾಗಿ ಉಣಿಸಲೂ ಸಾಧ್ಯವಿಲ್ಲದಷ್ಟು ಕಡುಬಡತನದಲ್ಲಿ ಬದುಕುವಂತಹ ಪರಿಸ್ಥಿತಿಯಿದೆ. ದೇಶದಲ್ಲಿ ಅತಿ ಶ್ರೀಮಂತರು ಹಾಗೂ ಕಡುಬಡವರ ನಡುವಿನ ಆದಾಯವು ಹತ್ತುಪಟ್ಟಿಗಿಂತ ಅಧಿಕವಾಗದಂತೆ ನೋಡಿಕೊಳ್ಳಬೇಕೆಂಬ ಡಾ. ರಾಮಮನೋಹರ ಲೋಹಿಯಾ ಅವರ ಸಿದ್ಧಾಂತವನ್ನು ಭಾರತವು ಅನುಸರಿಸಲೇ ಬೇಕಾದ ಸಂದರ್ಭ ಇದು. ಶಿಕ್ಷಣ ಹಾಗೂ ಆರೋಗ್ಯವು ಸಂಪೂರ್ಣವಾಗಿ ಸರಕಾರದ ಜವಾಬ್ದಾರಿಯಾಗಬೇಕು. ಎಲ್ಲ ಮೂಲಭೂತ ಸೇವೆಗಳು ಸರ್ವರಿಗೂ ಸಮಾನವಾಗಿ ಲಭ್ಯವಾಗುವಂತೆ ಸರಕಾರವು ನೋಡಿಕೊಳ್ಳಬೇಕಾಗಿದೆ.

ಒಂದೆಡೆ ಅಧಿಕ ಮಟ್ಟದ ನಿರುದ್ಯೋಗ ಪರಿಸ್ಥಿತಿ, ಇನ್ನೊಂದೆಡೆ ಇತರ ಶಾಲೆಗಳು ಹಾಗೂ ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಕೊರತೆಇರುವಂತಹ ಪರಿಸ್ಥಿತಿ ಇರಕೂಡದು. ದೇಶದ ಯಾವುದೇ ಸರಕಾರಿ ಶಾಲೆಗೆ ಭೇಟಿ ನೀಡಿದರೂ ನಿಮಗೆ ಶಿಕ್ಷಕರ ಕೊರತೆಯಿರುವುದು ಕಾಣಸಿಗುತ್ತದೆ. ದೇಶದ ಯಾವುದೇ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದಲ್ಲಿ, ಅಧಿಕ ರೋಗಿಗಳ ಹೊರೆಯನ್ನು ಅವು ಎದುರಿಸುತ್ತಿರುವುದನ್ನು ನೋಡಬಹುದಾಗಿದೆ. ಶಾಲೆಗಳು, ಆಸ್ಪತ್ರೆಗಳಂತಹ ಮೂಲಭೂತ ಸಂಸ್ಥೆಗಳ ನಿರ್ವಹಣೆಗಾಗಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ನೇಮಕ ಮಾಡದೇ ಇರಲು ಸರಕಾರಕ್ಕೆ ಅಡ್ಡಿಯಾಗಿರುವುದಾದರೂ ಏನು. ಕನಿಷ್ಠ ಆಸ್ಪತ್ರೆಗಳಿಗೆ, ಶಾಲೆಗಳಿಗೆ, ನ್ಯಾಯಾಲಯಗಳಿಗೆ , ಪೊಲೀಸ್ ಇಲಾಖೆಗಳಿಗೆ ಬೇಕಾಗಿರುವ ಅಗತ್ಯ ಸಿಬ್ಬಂದಿಯನ್ನು ತುಂಬುವುದಕ್ಕೆ ಮುಂದಾದರೂ ಆ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗಗಳನ್ನು ನೀಡಬಹುದಾಗಿದೆ. ಜೊತೆಗೆ ಸಿಬ್ಬಂದಿಯ ಕೊರತೆಯಿಂದ ಆಮೆ ಹೆಜ್ಜೆಯಿಡುತ್ತಿರುವ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ವೇಗ ನೀಡಬಹುದು. ನಾಗರಿಕ ಸುವ್ಯವಸ್ಥೆಯನ್ನು ಇನ್ನಷ್ಟು ಅಚ್ಚುಕಟ್ಟಾಗಿಸಿ ದೇಶವನ್ನು ಅಭಿವೃದ್ಧಿ ಪಥದೆಡೆಗೆ ಸಾಗಿಸಬಹುದು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)