ಜನರಲ್ ರಾವತ್‌ರಿದ್ದ ಹೆಲಿಕಾಪ್ಟರ್ ದುರಂತಕ್ಕೆ ಕಾರಣಗಳೇನು?
ತಮಿಳುನಾಡಿನ ನೀಲಗಿರಿ ಕೂನೂರಿನ ಬಳಿ ಭಾರತದ ಮೂರೂ ಸೇನಾಪಡೆಗಳ ಮೊದಲ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಇತರ 12 ಮಂದಿಯನ್ನು ಬಲಿತೆಗೆದುಕೊಂಡ ವಾಯುಪಡೆಯ ಹೆಲಿಕಾಪ್ಟರ್ ಅಪಘಾತದ ಕುರಿತು ಸಾಮಾಜಿಕ ಜಾಲಗಳಲ್ಲಿ ತರತರದ ಊಹಾಪೋಹಗಳು, ಕಪೋಲಕಲ್ಪಿತ ಕತೆಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಸೇನಾ ಮತ್ತು ವಾಯುಯಾನ ತಜ್ಞರ ಅಭಿಪ್ರಾಯಗಳನ್ನಷ್ಟೇ ಆಧರಿಸಿ ಮಾಡಲಾದ ವಿಶ್ಲೇಷಣೆ ಇದು.
ಅತ್ಯಂತ ವಿಶ್ವಾಸಾರ್ಹ ಹೆಲಿಕಾಪ್ಟರ್
ಬಿಪಿನ್ ರಾವತ್ ಅವರಿದ್ದ ವಾಯುಸೇನೆಯ ಹೆಲಿಕಾಪ್ಟರ್- ರಶ್ಯ ನಿರ್ಮಿತ, ವಾಯಸೇನೆಯಲ್ಲಿ ವ್ಯಾಪಕವಾಗಿ ಬಳಸಲಾಗುವ ಎಂಐ 17 ವಿ-5- ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ರಾಷ್ಟ್ರಪತಿ, ಪ್ರಧಾನಿ ಮುಂತಾದ ಅತೀಗಣ್ಯ ವ್ಯಕ್ತಿಗಳ ಪ್ರಯಾಣಕ್ಕೂ ವಾಯುಪಡೆ ಇದೇ ಹೆಲಿಕಾಪ್ಟರ್ ಒದಗಿಸುತ್ತದೆ. ಕೊಯಮತ್ತೂರಿನ ಬಳಿ ಸೂಲೂರು ವಾಯುಸೇನಾ ನೆಲೆಯಿಂದ ಜನರಲ್ ಬಿಪಿನ್ ರಾವತ್ ಅವರನ್ನು ಬೆಟ್ಟಗಾಡು ಜಿಲ್ಲೆಯಾದ ನೀಲಗಿರಿಯಲ್ಲಿರುವ ವೆಲ್ಲಿಂಗ್ಟನ್‌ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿಗೆ ಕೊಂಡೊಯ್ಯಲು ಸರಿಯಾದ ಹೆಲಿಕಾಪ್ಟರನ್ನೇ ಆಯ್ಕೆ ಮಾಡಲಾಗಿದೆ ಎಂದು ತಜ್ಞರು ಹೇಳುತ್ತಾರೆ.
ಎಂಐ-17ವಿ-5 ಎತ್ತರ ಪ್ರದೇಶದ ಹಾರಾಟಕ್ಕೆ ಅತ್ಯಂತ ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೆಲಿಕಾಪ್ಟರ್. ಇವುಗಳನ್ನು ಉತ್ತರಾಖಂಡದಂತಹ ಅತ್ಯಂತ ಎತ್ತರದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ನೀಲಗಿರಿಯ ಬೆಟ್ಟಗಳಲ್ಲಿ ಹಾರಾಟದ ಅನುಭವವಿರುವ ಪ್ಲ್ಯಾನೆಟ್ ಎಕ್ಸ್ ಏರೋಸ್ಪೇಸ್ ಸರ್ವಿಸಸ್ ಸಂಸ್ಥೆಯ ಸಿಇಒ ನಿವೃತ್ತ ವಿಂಗ್ ಕಮಾಂಡರ್ ಎ. ಸತೀಶ್ ಕುಮಾರ್ ಹೇಳುತ್ತಾರೆ. ಈ ಹೆಲಿಕಾಪ್ಟರ್ ಚಾಲನೆ ಮಾಡುತ್ತಿದ್ದ ತಂಡ ಅತ್ಯುತ್ತಮವಾಗಿದ್ದು, ವಿಂಗ್ ಕಮಾಂಡರ್ ಪಿ.ಎಸ್. ಚೌಹಾಣ್ ಮತ್ತು ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್ ಎಂಬ ಉನ್ನತ ಶ್ರೇಣಿಯ ಅನುಭವಿ ಅಧಿಕಾರಿಗಳನ್ನು ಹೊಂದಿತ್ತು. ಅವರಿಬ್ಬರೂ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಪೊಲೀಸ್ ಹೇಳಿಕೆಯ ಸುಳಿವು
ತಮಿಳುನಾಡು ಪೊಲೀಸರು ಜನರಲ್ ಬಿಪಿನ್ ರಾವತ್ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಿದ್ದರು. ಅವರು ಒಂದು ವೇಳೆ ರಸ್ತೆ ಮೂಲಕ ಹೋಗಲು ನಿರ್ಧರಿಸಿದರೆ ಇರಲಿ ಎಂದು ಉದ್ದಕ್ಕೂ ಸಿಬ್ಬಂದಿಯನ್ನು ನೇಮಿಸಲಾಗಿತ್ತು ಎಂದು ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿದ ಪತ್ರಿಕಾ ವರದಿಗಳಿವೆ. ಕೂನೂರಿನ ಪೊಲೀಸ್ ಇನ್‌ಸ್ಪೆಕ್ಟರ್ ಅಪಘಾತದ ಬಳಿಕ ವೆಲ್ಲಿಂಗ್ಟನ್‌ನ ಹೆಲಿಪ್ಯಾಡಿಗಿಂತ ಸುಮಾರು ಹತ್ತು ಕಿಲೋ ಮೀಟರ್ ದೂರದಲ್ಲಿರುವ ಅಪಘಾತ ಸ್ಥಳಕ್ಕೆ ಧಾವಿಸಿದ ಮೊದಲಿಗರಲ್ಲಿ ಒಬ್ಬರು. ಇವರ ಪ್ರಕಾರ ಹೆಲಿಕಾಪ್ಟರ್ ಪತನವನ್ನು ಕಂಡ ಪ್ರತ್ಯಕ್ಷ ಸಾಕ್ಷಿಯೊಬ್ಬರು ಇದ್ದಾರೆ. ‘‘ಅಪಘಾತ ಸ್ಥಳದ ಸಮೀಪವೇ ವಾಸಿಸುವ ನಿವಾಸಿ ಹೇಳುವಂತೆ, ಅವರು ಈ ಹೆಲಿಕಾಪ್ಟರ್ ತೀರಾ ಕೆಳಮಟ್ಟದಲ್ಲಿ ಹಾರಾಡುವುದನ್ನು ಕಂಡರು. ಅದು ಸುತ್ತು ತಿರುಗಿ ಸ್ಫೋಟದೊಂದಿಗೆ ಹಲಸಿನ ಮರಕ್ಕೆ ಢಿಕ್ಕಿ ಹೊಡೆಯಿತು. ಅವರ ಪ್ರಕಾರ ಆಕಾಶದಲ್ಲಿ ಹೆಚ್ಚು ಮೋಡಗಳಿರಲಿಲ್ಲ’’ ಎಂದು ಅನಾಮಿಕ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಹೈಟೆನ್ಷನ್ ವಿದ್ಯುತ್ ತಂತಿಗೆ ತಾಗಿರಬಹುದಾದ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸ್ ಹೇಳಿಕೆ ಮಹತ್ವ ಪಡೆಯುತ್ತದೆ. ಉನ್ನತ ಹಾರಾಟದ ಸಾಮರ್ಥ್ಯವಿರುವ ಈ ಹೆಲಿಕಾಪ್ಟರ್ ಏಕೆ ಕೆಳಮಟ್ಟದಲ್ಲಿ ಹಾರುತ್ತಿತ್ತು ಎಂಬುದು ಕೂಡಾ ತನಿಖೆ ಹಿಡಿಯಬಹುದಾದ ಒಂದು ದಿಕ್ಕು. ಹೆಲಿಕಾಪ್ಟರ್ ಮರಕ್ಕೆ ಅಪ್ಪಳಿಸಿ ಸ್ಫೋಟಿಸಿದ ಬಳಿಕ ಅಪ್ಪಳಿಸಿತೇ ಎಂಬುದು ಕೂಡಾ ನಿರ್ಣಾಯಕವಾಗಿದ್ದು, ಪ್ರತ್ಯಕ್ಷದರ್ಶಿಯ ಸಾಕ್ಷಿ ಮಹತ್ವ ಪಡೆಯುತ್ತದೆ. ಎಟಿಸಿ, ಅಂದರೆ ಏರ್ ಟ್ರಾಫಿಕ್ ಕಂಟ್ರೋಲ್ ಅಥವಾ ಆರ್ಮಿ ಗ್ರೌಂಡ್ ಕಂಟ್ರೋಲಿಗೆ ಪೈಲಟ್‌ಗಳಿಂದ ಏನಾದರೂ ತುರ್ತು ಸಂದೇಶ ಇತ್ತೆ ಎಂಬ ಪ್ರಶ್ನೆಗೆ ಉತ್ತರಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ನಡೆದಿರಬಹುದಾದ್ದು ಏನು?
ಅಪಘಾತದ ವೇಳೆ ಏನು ನಡೆದಿರಬಹುದು ಎಂಬುದರ ಬಗ್ಗೆ ವೈಮಾನಿಕ ತರಬೇತಿ ಪೈಲಟ್ ಮತ್ತು ವಾಯುಯಾನ ಸುರಕ್ಷಾ ತಜ್ಞ ಕ್ಯಾಪ್ಟನ್ ಎ. ಮೋಹನ್ ರಂಗನಾಥನ್ ಅವರು ಕೆಲವು ಸಾಧ್ಯತೆಗಳನ್ನು ಮುಂದಿಟ್ಟಿದ್ದಾರೆ.
ಎಂಐ-17ವಿ-5 ಎರಡು ಅತ್ಯಂತ ಶಕ್ತಿಶಾಲಿ ಇಂಜಿನ್ ಹೊಂದಿದೆ. ಅದರ ಕೆಳಮುಖ ಒತ್ತಡದ ಸುಳಿಯು ಅತ್ಯಂತ ಶಕ್ತಿಶಾಲಿಯಾಗಿರುತ್ತದೆ. ಅದು ಕೆಳಗಿನ ಭೂಪ್ರದೇಶ ಕಾಣಲಿ ಎಂದು ಕೆಳಮಟ್ಟದಲ್ಲಿ ಹಾರುತ್ತಿದ್ದರೆ, ಈ ಸುಳಿಯು ಮರಗಳನ್ನೂ ತಿರುಗಿಸಿ ಕಣ್ಕಟ್ಟನ್ನು, ಭ್ರಮೆಯನ್ನು ಉಂಟುಮಾಡಿರುವ ಸಾಧ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ ಅನುಭವಿ ಪೈಲಟ್‌ಗಳೂ ಮೋಸಹೋಗುತ್ತಾರೆ. ಈ ಹೆಲಿಕಾಪ್ಟರ್ ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ. ಆದರೆ, ಕೆಳಮಟ್ಟದ ಮೋಡಗಳಿದ್ದು, ಹೆಚ್ಚೇನೂ ಕಾಣದಿರುವ ಸಂದರ್ಭದಲ್ಲಿ ಇಳಿಯುವ ತಾಣವನ್ನು ಹುಡುಕುತ್ತಿದ್ದಲ್ಲಿ- ಪೈಲಟ್‌ಗಳಿಬ್ಬರು ಹೊರಗೆ ನೋಡುತ್ತಿದ್ದರೇ ಅಥವಾ ತಮ್ಮ ಇನ್‌ಸ್ಟ್ರೂಮೆಂಟ್ ಪ್ಯಾನಲ್‌ಗಳನ್ನು ನೋಡುತ್ತಿದ್ದರೇ ಎಂಬುದು ಮುಖ್ಯವಾಗುತ್ತದೆ.
ಈ ಗುಡ್ಡಗಾಡು ಪ್ರದೇಶದ ಹವಾಮಾನ ಮುನ್ಸೂಚನೆಯಲ್ಲಿ ಕೆಳಮಟ್ಟದ ಮೋಡಗಳು, ಹೆಚ್ಚಿನ ತೇವಾಂಶ ಮತ್ತು ಹಗುರ ಮಳೆ ಇತ್ತು. ಚಿತ್ರಗಳು ಈ ಹೆಲಿಕಾಪ್ಟರ್ ಮರಗಳಿಗೆ ಬಡಿದು ಉರುಳಿದೆ ಎಂದು ಸೂಚಿಸುತ್ತವೆ. ಈ ಹೆಲಿಕಾಪ್ಟರ್ ಬಹುಶಃ ಭೂಪ್ರದೇಶ ಕಾಣುತ್ತಿರಲಿ ಎಂದು ಕೆಳಮಟ್ಟದಲ್ಲಿ ಹಾರುತ್ತಿತ್ತು. ಸರಿಯಾಗಿ ಕಾಣದಾದಾಗ, ಮಳೆಯ ಪರಿಸ್ಥಿತಿಯಲ್ಲಿ ಉಂಟಾಗುವ ದೃಷ್ಟಿ ವಿಭ್ರಮೆಯನ್ನು ಜನರು ಮೈಮರೆಯುತ್ತಾರೆ. ಕೆಳಮಟ್ಟದಲ್ಲಿ ಮೋಡಗಳಿದ್ದಾಗ, ಅವುಗಳಿಗಿಂತ ಕೆಳಗೆ ಹಾರಾಡೋಣ ಎಂಬ ಯೋಚನೆಯಿಂದ ಇನ್ನೂ ಕೆಳಕ್ಕಿಳಿದಾಗ, ಏಕಾಏಕಿ ಬೆಟ್ಟ ಮರಗಳು ಎದುರಾದ ಸಂದರ್ಭದಲ್ಲಿ- ಅದು ಅನೇಕ ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗಿದೆ ಎಂದು ಕ್ಯಾಪ್ಟನ್ ರಂಗನಾಥನ್ ಹೇಳುತ್ತಾರೆ.
ದೊಡ್ಡ ಮರದ ಕಾಂಡಗಳು ಮುರಿದಿರುವುದು ನೋಡಿದರೆ, ಹೆಲಿಕಾಪ್ಟರ್‌ನ ರೋಟಾರ್ ಬ್ಲೇಡುಗಳು ಮರಕ್ಕೆ ಬಡಿದಿರುವುದನ್ನು ಸೂಚಿಸುತ್ತದೆ. ಇಂತಹ ಸಂದರ್ಭದಲ್ಲಿ- ಕೆಳ ಮಟ್ಟದಲ್ಲಿ, ಎತ್ತರದ ಬೆಟ್ಟಗಳಿರುವ ಪ್ರದೇಶದಲ್ಲಿ- ಏಕಾಏಕಿ ವೇಗ ಕುಂದಿದರೆ ಮತ್ತೆ ವೇಗವನ್ನು ಗಳಿಸಿಕೊಳ್ಳುವುದು ಅತ್ಯಂತ ಕಷ್ಟ. ಈ ಹೆಲಿಕಾಪ್ಟರ್ ಇಂಜಿನ್‌ಗಳಿಗೆ ಫುಲ್ ಅಥಾರಿಟಿ ಡಿಜಿಟಲ್ ಇಲೆಕ್ಟ್ರಾನಿಕ್ ಕಂಟ್ರೋಲ್ ಅಥವಾ ‘ಫಾಡೆಕ್’ ಎಂಬ ಉಪಕರಣವನ್ನು ಅಳವಡಿಸಲಾಗಿದೆ. ಒಂದು ವೇಳೆ ತುರ್ತು ಸಂದರ್ಭದಲ್ಲಿ ಪೈಲಟ್ ವೇಗವನ್ನು ತೀವ್ರವಾಗಿ ಹೆಚ್ಚಿಸಲು ಯತ್ನಿಸಿದರೂ, ‘ಫಾಡೆಕ್’ ಅದನ್ನು ತಡೆಯುತ್ತದೆ ಎಂದು ಅವರು ಹೇಳುತ್ತಾರೆ. ಕೆಲವೊಮ್ಮೆ ಸುರಕ್ಷತೆಗಾಗಿ ಅಳವಡಿಸಲಾದ ಸಾಧನಗಳೇ ಅಪಘಾತಕ್ಕೆ ಕಾರಣವಾದ ಸಂದರ್ಭಗಳು ವೈಮಾನಿಕ ಇತಿಹಾಸದಲ್ಲಿ ಹಲವು ಇವೆ.
‘‘ಇದೇ ನಡೆದಿದೆಯೇ ಎಂದು ಅಂತಿಮ ವರದಿಯಷ್ಟೇ ಹೇಳಲು ಸಾಧ್ಯ. ಇದೊಂದು ಮಿಲಿಟರಿ ಹೆಲಿಕಾಪ್ಟರ್ ಆಗಿರುವುದರಿಂದ ಸೇನೆಯ ಒಳಗೆ, ಸೇನಾ ಪ್ರಾಧಿಕಾರದ ಅಡಿಯಲ್ಲಿಯೇ ತನಿಖೆ ನಡೆಯುವುದರಿಂದ ನಮಗೆ ಸಂಪೂರ್ಣ ಕತೆ ಎಂದೆಂದಿಗೂ ತಿಳಿಯದಿರಬಹುದು’’ ಎನ್ನುತ್ತಾರೆ ಕ್ಯಾಪ್ಟನ್ ರಂಗನಾಥನ್.
ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿರುವ ರಹಸ್ಯ
ದುರಂತಕ್ಕೀಡಾದ ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ಸಿಕ್ಕಿದೆ ಎಂದು ರಕ್ಷಣಾ ಮಂತ್ರಿ ರಾಜ್‌ನಾಥ್ ಸಿಂಗ್ ಲೋಕಸಭೆಯಲ್ಲಿ ದೃಢಪಡಿಸಿದ್ದಾರೆ. ಯಾವುದೇ ವಾಯು ಅಪಘಾತದ ತನಿಖೆಗಳಲ್ಲಿ ಮೊದಲಿಗೆ ಅವಶೇಷಗಳನ್ನು ಪರಿಶೀಲಿಸಲಾಗುತ್ತದೆ. ಬಾಂಬ್, ಕ್ಷಿಪಣಿ ಇತ್ಯಾದಿಗಳ ಸುಳಿವು ಫೋರೆನ್ಸಿಕ್ ತನಿಖೆಯಿಂದ ಸಿಗುತ್ತದೆ. ಉಳಿದಂತೆ ಇಡೀ ತನಿಖೆ ಬ್ಲ್ಯಾಕ್ ಬಾಕ್ಸ್ ಮೇಲೆ ಅವಲಂಬಿಸಿದೆ.
ಅದರಲ್ಲಿ ಸಿವಿಆರ್, ಅಂದರೆ ಕಾಕ್‌ಪಿಟ್ ವಾಯ್ಸ ರೆಕಾರ್ಡರ್ ಮತ್ತು ಎಫ್‌ಸಿಡಿಆರ್, ಅಂದರೆ ಫ್ಲೈಟ್ ಕಂಟ್ರೋಲ್ ಡಾಟಾ ರೆಕಾರ್ಡರ್‌ಗಳಿರುತ್ತವೆ. ಮೊದಲನೆಯದರಲ್ಲಿ ಎಲ್ಲಾ ರೀತಿಯ ಪೈಲಟ್‌ಗಳ ಸಂಭಾಷಣೆಗಳು ಮತ್ತು ಸದ್ದುಗಳು ದಾಖಲಾಗುತ್ತವೆ. ಎರಡನೆಯದರಲ್ಲಿ ಹೆಲಿಕಾಪ್ಟರ್‌ನ ಎಲ್ಲಾ ಸಲಕರಣೆಗಳು ಮತ್ತು ಹಾರಾಟದ ವಿವರಗಳು ಡಿಜಿಟಲ್ ರೂಪದಲ್ಲಿ ದಾಖಲಾಗುತ್ತವೆ. ಇದೀಗ ಸಿಕ್ಕಿರುವ ಬ್ಲ್ಯಾಕ್ ಬಾಕ್ಸ್ ಅಂತಿಮವಾಗಿ ಈ ದುರಂತದ ಕಾರಣಗಳನ್ನು ಬಯಲು ಮಾಡುತ್ತದೆ ಎಂದು ನಾವು ಆಶಿಸಬಹುದಷ್ಟೇ!.
ಇದೇನೂ ಹೊಸದಲ್ಲ!
ಅತಿ ಗಣ್ಯರನ್ನು ಹೊತ್ತ ಹೆಲಿಕಾಪ್ಟರ್‌ಗಳು ದುರಂತ ಕಂಡಿರುವುದು ಭಾರತದಲ್ಲಿ ಇದು ಮೊದಲ ಸಲವಲ್ಲ. ಪ್ರಮುಖ ರಾಜಕಾರಣಿಗಳು ಮತ್ತು ಉನ್ನತ ಸೇನಾಧಿಕಾರಿಗಳು ಹೆಲಿಕಾಪ್ಟರ್ ದುರಂತಗಳಲ್ಲಿ ಮೃತಪಟ್ಟಿದ್ದಾರೆ. ಆದರೂ ನಾವು ಪಾಠ ಕಲಿತಂತಿಲ್ಲ ಎಂದು ಹಲವು ತಜ್ಞರು ದೂರಿದ್ದಾರೆ.
ಸೆಪ್ಟಂಬರ್ 2, 2009ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ. ವಿ. ರಾಜಶೇಖರ ರೆಡ್ಡಿಯವರ ಹೆಲಿಕಾಪ್ಟರ್ ಕರ್ನೂಲ್ ಬಳಿ ಬೆಟ್ಟಕ್ಕೆ ಬಡಿದು ಅಪಘಾತಕ್ಕೀಡಾಗಿತ್ತು. ಹವಾಮಾನ ಕೆಟ್ಟದಿದ್ದರೂ ಪೈಲಟ್ ಮೇಲೆ ಹಾರುವಂತೆ ಒತ್ತಡ ಹೇರಲಾಗಿತ್ತು. ಸಿಬಿಐ ತನಿಖೆಯನ್ನು ಮುಚ್ಚಿಹಾಕಲಾಗಿತ್ತು.
ಸೆಪ್ಟಂಬರ್ 30, 2001ರಲ್ಲಿ ಮಾಜಿ ನಾಗರಿಕ ವಾಯುಯಾನ ಸಚಿವ ಮಾಧವರಾವ್ ಸಿಂಧಿಯಾ ಅವರ ಹೆಲಿಕಾಪ್ಟರ್ ಕಾನ್ಪುರದ ದಾರಿಯಲ್ಲಿ ಕೆಟ್ಟ ಹವಾಮಾನದಿಂದಾಗಿ ಪತನಗೊಂಡಿತ್ತು. ಮಾರ್ಚ್ 3, 2002ರಲ್ಲಿ ಲೋಕಸಭಾ ಸ್ಪೀಕರ್ ಬಾಲಯೋಗಿಯವರ ಹೆಲಿಕಾಪ್ಟರ್ ಭಾರೀ ಮಳೆಯಲ್ಲಿ ನೆಲಕ್ಕುರುಳಿತ್ತು. 2011ರ ಎಪ್ರಿಲ್ ತಿಂಗಳಲ್ಲಿ ಮುಖ್ಯಮಂತ್ರಿ ಖಂಡು ಅವರ ವಿಮಾನ ಅರುಣಾಚಲ ಪ್ರದೇಶದ ತವಾಂಗ್ ಪರ್ವತ ಪ್ರದೇಶಗಳಲ್ಲಿ ಪತನಗೊಂಡಿತ್ತು. ನವೆಂಬರ್ 14, 1997ರಲ್ಲಿ ತವಾಂಗ್‌ನಲ್ಲಿಯೇ ಕೇಂದ್ರ ರಕ್ಷಣಾ ರಾಜ್ಯ ಮಂತ್ರಿ ಎನ್.ವಿ.ಎನ್. ಸೋಮು ಮತ್ತು ಮೇಜರ್ ಜನರಲ್ ಸಹಿತ ಮೂವರು ಸೇನಾಧಿಕಾರಿಗಳು ಸಾವಿಗೀಡಾಗಿದ್ದರು. ಇದಾದ 23 ವರ್ಷಗಳ ನಂತರ ತವಾಂಗ್‌ನ ಬೊಂಬ್ಡೀರ್ ಎಂಬಲ್ಲಿ ನಡೆದ ಎಂಐ 17 ಹೆಲಿಕಾಪ್ಟರ್ ಅಪಘಾತದಲ್ಲಿ ಲೈಫ್ಟಿನೆಂಟ್ ಕರ್ನಲ್ ಸಹಿತ 13 ಮಂದಿ ಮರಣ ಹೊಂದಿದ್ದರು. ಇವು ಉನ್ನತ ವ್ಯಕ್ತಿಗಳಿದ್ದ ಹೆಲಿಕಾಪ್ಟರ್ ದುರಂತಗಳು ಮಾತ್ರ. ಸೇನಾ ಸಿಬ್ಬಂದಿಯನ್ನು ಒಳಗೊಂಡ ಹೆಲಿಕಾಪ್ಟರ್ ಅಪಘಾತಗಳು ಕಾಶ್ಮೀರ, ಕರ್ನಾಟಕ ಸೇರಿದಂತೆ ಹಲವು ಕಡೆ ನಡೆದಿವೆ
ವಿಶ್ವದಾದ್ಯಂತ ವೈಮಾನಿಕ ದುರ್ಘಟನೆಗಳ ತನಿಖೆಯಲ್ಲಿ ಪರಿಗಣಿಸಲಾಗುವ ಏಳು ಪ್ರಮುಖ ಅಂಶಗಳು
1. ವಿಮಾನ ಅಥವಾ ಹೆಲಿಕಾಪ್ಟರ್‌ನ ಸ್ಥಿತಿಗತಿ, ಅದು ಹಳೆಯದೇ, ಹೊಸದೇ, ಅವುಗಳ ನಿರ್ವಹಣೆ ಯಾವ ಮಟ್ಟದಲ್ಲಿ ಇತ್ತು, ಅದರಲ್ಲಿ ಸಾಕಷ್ಟು ಪ್ರಮಾಣದ ಇಂಧನ ಇತ್ತೇ ಇತ್ಯಾದಿ.
2. ಹವಾಮಾನ. ಬಲವಾದ ಗಾಳಿ, ಮಳೆ, ಮೋಡ ಇತ್ಯಾದಿ.
3. ಟೆರೈನ್ ಅಥವಾ ಅಪಘಾತಕ್ಕೀಡಾದ ಪ್ರದೇಶ. ಅದು ಪರ್ವತ, ಬೆಟ್ಟ ಇತ್ಯಾದಿಗಳಿಂದ ಕೂಡಿದೆಯೇ?, ಅವುಗಳ ಪರಿಚಯ ಪೈಲಟ್‌ಗೆ ಇತ್ತೇ, ಅವರು ಉಪಯೋಗಿಸುವ ನಕ್ಷೆಗಳಲ್ಲಿ ಅದನ್ನು ಸರಿಯಾಗಿ ಗುರುತಿಸಲಾಗಿದೆಯೇ ಇತ್ಯಾದಿ.
4. ಗ್ರೌಂಡ್ ಕಂಟ್ರೋಲ್ ಅಂದರೆ ನೆಲದಿಂದ ನಿರ್ದೇಶನ. ವಿಮಾನಗಳಿಗೆ ಹವಾಮಾನದಿಂದಾಗಿ ನೆಲವು ನೇರವಾಗಿ ಕಾಣದಿರುವ ಸಂದರ್ಭದಲ್ಲಿ ಪೈಲಟ್‌ಗೆ ನೀಡಲಾದ ನಿರ್ದೇಶನ ಸರಿಯಾಗಿತ್ತೇ ಇತ್ಯಾದಿ.
5. ಪೈಲಟ್ ತಪ್ಪುಗಳು. ಕ್ಷಣಮಾತ್ರದಲ್ಲಿ ನಿರ್ಧಾರಗಳನ್ನು ತೆಗೆದುಕೊಂಡು, ಕಾರ್ಯರೂಪಕ್ಕೆ ಇಳಿಸಬೇಕಾದ ನಿರ್ಣಾಯಕ ಕ್ಷಣಗಳಲ್ಲಿ ಅತ್ಯಂತ ಅನುಭವಿ ಪೈಲಟ್‌ಗಳು ಕೂಡಾ ಮಾನಸಿಕ ಒತ್ತಡ, ದಣಿವು, ನಿದ್ರೆ ಇತ್ಯಾದಿ ಕಾರಣಗಳಿಂದ ತಪ್ಪುಗಳನ್ನು ಮಾಡಿದ ಉದಾಹರಣೆಗಳು ವೈಮಾನಿಕ ಇತಿಹಾಸದಲ್ಲಿ ನೂರಾರು ಇವೆ.
6. ಹಾರಾಟಕ್ಕೆ ಮೊದಲು ನಡೆದಿರಬಹುದಾದ ಬುಡಮೇಲು ಕೃತ್ಯ, ತಾಂತ್ರಿಕವಾದ ಹಾಳುಗೆಡಹುವಿಕೆ, ವಿಮಾನದ, ಹೆಲಿಕಾಪ್ಟರ್‌ನ ಒಳಗೆ ನಡೆದಿರಬಹುದಾದ ಕ್ಷೋಭೆ ಇತ್ಯಾದಿ.
7. ಭಯೋತ್ಪಾದಕ ಕೃತ್ಯಗಳು.
ಈ ಅಂಶಗಳನ್ನೆಲ್ಲಾ ಪರಿಶೀಲಿಸಿದ ಬಳಿಕವಷ್ಟೇ ಅಪಘಾತಕ್ಕೆ ನಿಜವಾದ ಕಾರಣಗಳನ್ನು ಹುಡುಕಲು ಸಾಧ್ಯ. ಇವುಗಳಲ್ಲಿ ಕೊನೆಯದಾದ, ಭಯೋತ್ಪಾದಕ ಕೃತ್ಯ ನಡೆದಿರಬಹುದಾದ ಸಾಧ್ಯತೆಯನ್ನು ಸೇನಾಧಿಕಾರಿಗಳು ಮೊದಲ ನೋಟಕ್ಕೇ ತಳ್ಳಿಹಾಕಿರುವಂತೆ ಕಾಣುತ್ತದೆ.