varthabharthi


ವೈವಿಧ್ಯ

ಪ್ರತೀ ಬರಹಗಾರನೂ ತನ್ನಷ್ಟಕ್ಕೆ ಒಬ್ಬ ಚಳವಳಿಕಾರ: ದಾಮೋದರ್ ಮಾವಜೊ

ವಾರ್ತಾ ಭಾರತಿ : 12 Dec, 2021
ಸಂದರ್ಶಕರು : ಕಿಶೂ ಬಾರ್ಕೂರು

‘‘ಜೀವಕೊಡಲೇ? ಚಹ ಕುಡಿಯಲೇ’’- ಕೃತಿಗಾಗಿ ಜ್ಞಾನಪೀಠ ಪ್ರಶಸ್ತಿ ಪಡೆದ ಕೊಂಕಣಿ ಭಾಷೆಯ ಸಾಹಿತಿ ದಾಮೋದರ್ ಮಾವಜೊ ಅವರನ್ನು ಕಿಶು ಬಾರ್ಕೂರು ಅವರು ಸಂದರ್ಶಿಸಿದ್ದಾರೆ. ಬಹುವಚನ ಪ್ರಕಾಶನ ಪ್ರಕಟಿಸಿದ ಕೃತಿಯಿಂದ ಈ ಸಂದರ್ಶನದ ಆಯ್ದ ಭಾಗವನ್ನು ಪ್ರಕಟಿಸಿದ್ದೇವೆ.

 ನೀವು ಕಾರ್ಯಕರ್ತರಾಗಿ ಹಲವು ಚಳವಳಿಗಳ ಮಂಚೂಣಿಯಲ್ಲಿದ್ದೀರಿ. ನಿಮ್ಮ ರಾಜಕೀಯ ಧೋರಣೆಯನ್ನು ಯಾವುದೇ ಮುಲಾಜಿಲ್ಲದೆ ಹೇಳುತ್ತೀರಿ. ಬಶೀರ್, ಚಾಫ್ರಾ ಮಹಾಶ್ವೇತಾ ದೇವಿ, ನಾರಾಯಣ ಸುರ್ವೆ ಮತ್ತು ನಿಮ್ಮದೇ ಕಾಲದ ಪಾವ್ಲ್ ಮೋರಾಸ್‌ರಂತಹ ಬರಹಗಾರರು ತಮ್ಮನ್ನು ಸಾಮಾಜಿಕ ರಾಜಕೀಯ ಧೋರಣೆಗಳೊಂದಿಗೆ ತೀವ್ರವಾಗಿ ಗುರುತಿಸಿಕೊಂಡರು. ಇವರಲ್ಲಿ ಯಾರಾದರೂ ನಿಮ್ಮ ಆದರ್ಶವೆಂದು ಹೇಳಬಹುದೆ? ಈ ಚಳವಳಿಗಳು ನಿಮ್ಮ ಕಥಾಸಾಹಿತ್ಯದಲ್ಲಿ ಯಾವ ಪಾತ್ರವಹಿಸುತ್ತವೆ?

ದಾಮೋದರ್ ಮಾವಜೊ: ನನ್ನ ಪ್ರಕಾರ ಪ್ರತೀ ಬರಹಗಾರನೂ ತನ್ನಷ್ಟಕ್ಕೆ ಒಬ್ಬ ಚಳವಳಿಕಾರ, ಅವನೊಳಗಿನ ಈ ಚಳವಳಿಯೇ ಆತನನ್ನು ಒಬ್ಬ ಬರಹಗಾರನ್ನಾಗಿಸುತ್ತೆ. ಬಹುಷಃ ನನ್ನ ಹೋರಾಟಗಳು ನನ್ನ ಬರಹಗಾರನ ಪರಿಧಿಯನ್ನು ಮೀರಿ ಹೋಗುತ್ತವೆ. ನಾನು ಪಕ್ಷ ರಾಜಕೀಯವನ್ನಾಡುವುದಿಲ್ಲ. ಯಾವುದೇ ಚಿಂತನೆಯನ್ನು ಅಟ್ಟಕ್ಕೇರಿಸುವ ಅಥವಾ ಕೊಚ್ಚೆಗೆ ದೂಡುವುದನ್ನು ನಾನು ನಂಬುವುದಿಲ್ಲ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಅಥವಾ ಆ ಮಟ್ಟಿಗೆ ಹೇಳುವುದಾದರೆ ನಮ್ಮ ಸಂವಿಧಾನದಲ್ಲಿ ಸೂಚಿಸಿರುವ ಯಾವುದೇ ರೀತಿಯ ಸ್ವಾತಂತ್ರ್ಯಗಳ ಮೇಲಿನ ಯಾವುದೇ ಅತಿಕ್ರಮಣವನ್ನು ನಾನು ವಿರೋಧಿಸುತ್ತೇನೆ. ಹೌದು, ನನ್ನ ಸಾಮಾಜಿಕ-ರಾಜಕೀಯ ಧೋರಣೆಗಳನ್ನು ಸಾರ್ವಜನಿಕವಾಗಿ ಹೇಳುತ್ತೇನೆ. ನಾನು ಜೋರಾಗಿಯೇ ಹೇಳುತ್ತೇನೆ. ಆದರೆ ಕಠಿಣ ಭಾಷೆಯನ್ನು ಬಳಸುವುದಿಲ್ಲ. ನನ್ನ ಅಭಿಪ್ರಾಯ ಮತ್ತು ನಿಲುವುಗಳಲ್ಲಿ ಯಾವತ್ತೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಆದರೆ ನನ್ನ ಓದುಗರ ಗಂಟಲಿನಲ್ಲಿ ಅವುಗಳನ್ನು ಬಲವಂತವಾಗಿ ದೂಡುವುದೂ ಇಲ್ಲ. ನಾನು ಅನುಸರಿಸುವ ಸತ್ಯ, ಸಮಾಜದ ಒಳಿತಿಗಾಗಿದೆ ಎಂದು ನಾನು ನಂಬುತ್ತೇನೆ. ಪೀಠದ ಮೇಲೆ ನಿಂತು ಪ್ರವಚಿಸುವುದು ನನಗಿಷ್ಟವಿಲ್ಲ ಮತ್ತು ನನ್ನನ್ನೇ ನಾನು ಇತರರಿಗಿಂತ ಮೇಲೂ ಎಂದುಕೊಳ್ಳುವುದಿಲ್ಲ. ನಾನು ಸ್ವಭಾವತ ಚಳವಳಿಕಾರ ಮತ್ತು ಅವಿತುಕೊಂಡು ಹುಡುಕಿಸಿಕೊಳ್ಳುವ ಕಣ್ಣುಮುಚ್ಚಾಲೆ ಆಟದಲ್ಲಿ ನನಗೆ ನಂಬಿಕೆಯಿಲ್ಲ.

ಮಾತಿನಲ್ಲಿ ಹೋರಾಟಗಾರರಾಗಿರುವ ಹಲವು ಬರಹಗಾರರನ್ನು ನಾನು ಬಲ್ಲೆ. ಮಹಾಶ್ವೇತಾ ದೇವಿ, ಯು.ಆರ್.ಅನಂತಮೂರ್ತಿ, ನಾರಾಯಣ ಸುವೆರ್ ನಾಮ್ದೇವ ಧಸಾಲ್ ಮತ್ತು ನಮ್ಮವರೇ ಆದ ಚಾಫ್ರಾ ದೆ ಕೊಸ್ಟಾರಂತಹ ದಂತಕಥೆಗಳಂತಿದ್ದ ಕೆಲ ಬರಹಗಾರರನ್ನು ವೈಯುಕ್ತಿಕವಾಗಿ ಭೆಟ್ಟಿಯಾಗಿದ್ದೇನೆ. ಅವರಿಂದ ತುಂಬಾ ಪ್ರಭಾವಿತನಾಗಿದ್ದೇನೆ. ನನಗೆ ಒಬ್ಬ ಆದರ್ಶ ಅಂತ ಹೇಳುವುದಾದರೆ ಅದು ಯು.ಆರ್.ಅನಂತಮೂರ್ತಿ ಅವರು ಈ ಮೂಲಭೂತವಾದಿಗಳನ್ನು ಧೈರ್ಯವಾಗಿ ಎದುರಿಸಿ ನಿಂತರು. ಇವತ್ತಿಗೆ ನಾನು ಗಣೇಶ್ ದೇವಿಯವರ ಪರಿಧಿಯಿಲ್ಲದ ಹೋರಾಟದ ಅಭಿಮಾನಿ.

ನನ್ನ ನಿಲುವುಗಳು ನನ್ನ ಸೃಜನಾತ್ಮಕ ಬರವಣಿಗೆಯಲ್ಲಿ ಅರಿವಿಲ್ಲದೆಯೇ ಖಂಡಿತಾ ಸೋಸಿಹೋಗಿವೆ. ನನ್ನ ಬರಹಗಳಲ್ಲಿ ಹೋರಾಟಗಾರನ ನಿಲುವುಗಳನ್ನು ಹುಡುಕಿ ಪಟ್ಟಿಮಾಡುವುದು ಸಾಹಿತ್ಯದ ವಿಮರ್ಶಕರಿಗೆ ಬಿಟ್ಟದ್ದು, ನನ್ನ ಹಲವು ಕಥೆಗಳಲ್ಲಿ ಮತ್ತು ನನ್ನ ಒಟ್ಟು ಸಾಹಿತ್ಯದಲ್ಲಿ ಸಮಸ್ಯೆಗಳನ್ನು ಚಾಕಚಕ್ಯತೆಯಿಂದ ಮತ್ತು ಕಲಾತ್ಮಕವಾಗಿ ಎದುರಿಸಿದ್ದೇನೆಂದು ನಾನು ನಂಬುತ್ತೇನೆ.

 ನೀವು ಬರವಣಿಗೆಯ ಜಗತ್ತನ್ನು ಪ್ರವೇಶಿಸುವುದರ ಹಿಂದೆ ಯಾವುದಾದರೂ ಘಟನೆಯಿದೆಯೆ? ನಿಮ್ಮ ಬರವಣಿಗೆಯ ಶುರುವಾತು ಹೇಗಾಯಿತು?

ದಾಮೋದರ್ ಮಾವಜೊ :  ನಾನು ಓದಿದ ಪುಸ್ತಕಗಳೇ ನನ್ನನ್ನು ಬರೆಯಲು ಪ್ರೇರೇಪಿಸಿದವು. ನಾನು 1963ರಲ್ಲಿ ನನ್ನ ಮೊದಲ ಕಥೆಯನ್ನು ಬರೆದಿದ್ದು, ಅದರಲ್ಲಿನ ಕಥಾನಾಯಕ ಹಲವಾರು ವರ್ಷಗಳ ನಂತರ ಗೋವೆಗೆ ತನ್ನ ಬಾಲ್ಯದ ಪ್ರಿಯತಮೆಯನ್ನು ನೋಡಲು ಬರುತ್ತಾನೆ ಮತ್ತು ಊರಿಗೆ ತಲುಪಿದ ರಾತ್ರಿ ಅವನಿಗೆ ತಾನು ಭೇಟಿಯಾದಾಕೆ ಹಲವು ವರ್ಷಗಳ ಹಿಂದೆಯೇ ಸತ್ತಿದ್ದಾಳೆಂದು ತಿಳಿಯುತ್ತದೆ. ಆ ಕಥೆಗೆ ಬಹಳ ಒಳ್ಳೆಯ ಪ್ರತಿಕ್ರಿಯೆ ದೊರೆತು ನಂತರ ಅದು ಈವ್ಸ್ ವೀಕ್ಲಿಯಲ್ಲಿ ಇಂಗ್ಲಿಷಿಗೆ ಅನುವಾದಗೊಂಡು ಪ್ರಕಟಿಸಲ್ಪಟ್ಟಿತು. ಆದರೆ ನನ್ನ ಒಬ್ಬ ಸ್ನೇಹಿತ ನನ್ನ ಭೂತದ ಕಥೆಗೆ ನನ್ನನ್ನು ಅಭಿನಂದಿಸಿದಾಗ ನಾನು ತಪ್ಪು ದಾರಿ ಹಿಡಿಯುತ್ತಿದ್ದುದರ ಅರಿವಾಯಿತು. ಆ ದಿನ ನನ್ನಲ್ಲಿನ ಚಿಂತಕ, ನಾನು ನಂಬದೇ ಇದ್ದದ್ದನ್ನು ಎಂದಿಗೂ ಬರೆಯಲಾರೆ ಎಂದು ಪಣತೊಟ್ಟೆ. 1964ರ ಬೇಸಿಗೆಯಲ್ಲಿ ನಾನು ‘ಮರಣ್ ಯೇನಾ ಮ್ಹಣ್’ (ಸಾವು ಬರುವುದಿಲ್ಲವೆಂದು) ಎಂಬ ನಿರುಪದ್ರವಿ ನೀರೊಳ್ಳೆಯ ಬದುಕಿನ ಸಂಘರ್ಷದ ಕಥೆಯನ್ನು ಬರೆದೆ. ಮೇ ತಿಂಗಳಿನಲ್ಲಿ ಮುಂಬೈಯಲ್ಲಿ ನನ್ನ ಇಂಟರ್ ಕಾಮರ್ಸ್ ಪರೀಕ್ಷೆ ಬರೆದು ಹಿಂದಿರುಗಿದ್ದೆನಷ್ಟೆ. ಉರಿಬೇಸಿಗೆಯ ಒಂದು ಮಧ್ಯಾಹ್ನ ಬರೆಯುವ ಗೀಳು ಹಿಡಿದು ಮಧ್ಯಾಹ್ನ ಎರಡು ಗಂಟೆಗೆ ಬರೆಯಲಾರಂಭಿಸಿದ ಕಥೆಯನ್ನು ನಾಲ್ಕು ಗಂಟೆಗೆಲ್ಲ ಬರೆದು ಮುಗಿಸಿದೆ. ತಕ್ಷಣವೇ ಎಂಟು ಕಿಲೋಮೀಟರ್ ದೂರದ ಮಡಗಾಂವಿಗೆ ಸೈಕಲ್ ಹೊಡೆದುಕೊಂಡು ಹೋಗಿ, ‘ನವೇಂ ಗೋಂಯ್’ ಪತ್ರಿಕೆಯ ಸಂಪಾದಕರ ಮೇಜಿನ ಮೇಲಿಟ್ಟು ಹಿಂದಿರುಗಿದೆ. ಸಂಪಾದಕ ಗುರುನಾಥ ಕೇಳೆಕರ್ ಆ ಹೊತ್ತಿನಲ್ಲಿ ಕಚೆೇರಿಯಲ್ಲಿರಲಿಲ್ಲ. ಮರುದಿನ ಮಧ್ಯಾಹ್ನ ಸುಮಾರು ಮೂರು ಗಂಟೆಯ ಹೊತ್ತಿಗೆ ನನ್ನನ್ನು ಯಾರೋ ನೋಡಲು ಬಂದಿದ್ದಾರೆಂದು ತಿಳಿಯಿತು. ಹೊರಹೋಗಿ ನೋಡಿದರೆ ನಮ್ಮ ಮನೆಯಿಂದ ಅನತಿ ದೂರದಲ್ಲಿ ಗುರುನಾಥರು ತಮ್ಮ ಮೋಟರ್ ಬೈಕಿನ ಮೇಲೆ ಕೂತು ನನ್ನ ಹಾದಿ ನೋಡುತ್ತಿದ್ದರು. ಹತ್ತಿರಕ್ಕೆ ಹೋದಂತೆ ಆ ಕಥೆಯನ್ನು ಬರೆದವನು ನಾನೆ ತಾನೇ ಎಂದು ಸೀದಾ ಕೇಳಿದರು. ನನಗೆ ಗಾಬರಿಯಾಯಿತು. ಆದರೂ ಅದು ನಾನೇ ಬರೆದಿದ್ದು ಎಂದು ಒಪ್ಪಿಕೊಂಡೆ. ಅವರು ನನ್ನನ್ನು ಅಲ್ಲಿಯೇ ತಬ್ಬಿಕೊಂಡು ಆ ಕಥೆ ಅವರಿಗೆ ತುಂಬಾ ಹಿಡಿಸಿತು ಎಂದು ಹೇಳಿ ತಕ್ಷಣವೇ ಹೋಗಿಬಿಟ್ಟರು. ನಾನು ಅಲ್ಲಿಯೇ ಮೈಮರೆತು ನಿಂತುಬಿಟ್ಟೆ. ಈ ಕಥೆಗೆ ತುಂಬಾ ಹೊಗಳಿಕೆ ದೊರತು, ಅದನ್ನು ಮರಾಠಿಯ ಸಾಹಿತ್ಯಲೋಕದಲ್ಲಿ ಖ್ಯಾತ ಕಥಾಲೇಖಕ ಲಕ್ಷಣ್‌ರಾವ್ ಸರ್ದೇಸಾಯಿ ತಕ್ಷಣ ಮರಾಠಿಗೆ ಅನುವಾದಿಸಿದರು. ಹೆಸರು ಮತ್ತು ಖ್ಯಾತಿಯ ಜೊತೆ ಇದು ನನಗೆ ನನ್ನ ಇಷ್ಟದ ಸಾಹಿತ್ಯ ಪ್ರಕಾರವಾದ ಸಣ್ಣಕಥೆಗಳನ್ನು ಬರೆಯಲು ತುಂಬಾ ಪ್ರೋತ್ಸಾಹ ಕೊಟ್ಟಿತು. ಅದರ ನಂತರದ ಶುರುವಿನ ಕಥೆಗಳಲ್ಲಿ ‘ತೆರೆಜಾಲೊ ಘೋವ್’ (ತೆರೆಜಾಳ ಗಂಡ) ಕಥೆಗೂ ಅದ್ಭುತ ಸ್ವಾಗತ ದೊರೆತು ಅದೂ ಮರಾಠಿ ಕಾಲ್ಪನಿಕ ಸಾಹಿತ್ಯದ ದಿಗ್ಗಜರಲ್ಲೊಬ್ಬರಾದ ಸುಭಾಶ್ ಭಿಂಡೆಯವರಿಂದ ಮರಾಠಿಗೆ ಅನುವಾದಿಸಲ್ಪಟ್ಟಿತು. ಇಂತಹ ಕೆಲ ಪ್ರತಿಕ್ರಿಯೆಗಳು ನನ್ನ ಆತ್ಮವಿಶ್ವಾಸಕ್ಕೆ ನೀರೆರೆದು ಬರೆಯುವ ನನ್ನ ಹುರುಪನ್ನು ಹೆಚ್ಚಿಸಿದವು. ಅದರ ನಂತರ ಹಿಂದಕ್ಕೆ ತಿರುಗಿದ್ದೇ ಇಲ್ಲ.

ನಿಮ್ಮ ಬರವಣಿಗೆಯ ರೀತಿ ಯಾವುದು? ಬರಹಗಾರನಾಗಿ ನೀವು ಸಾಹಿತ್ಯ ರಚನೆ ಮಾಡಲೇಬೇಕೆಂದು ನಿಮ್ಮನ್ನು ತೀವ್ರವಾಗಿ ಯಾವುದು ಕಾಡುತ್ತದೆ?

ದಾಮೋದರ್ ಮಾವಜೊ: ಬರವಣಿಗೆಯ ರೀತಿ, ಬರಹಗಾರನಿಂದ ಬರಹಗಾರನಿಗೆ ಬೇರೆ ಬೇರೆ ರೀತಿಯದ್ದಾಗಿರುತ್ತವೆ. ನಾನೇನು ತುಂಬಾ ಬರೆದವನಲ್ಲ. ಕಳೆದ 57 ವರ್ಷಗಳಲ್ಲಿ ನಾನೊಂದು ನೂರು ಕಥೆ ಬರೆದಿರಬಹುದು. ನಾನು ಬರೆಯಲೇಬೇಕೆಂದೆನಿಸಿದಾಗ ಬರೆಯುತ್ತೇನೆ. ಬರೆಯಬೇಕಿನಿಸಿದಾಗ ನಾನು ಅಸ್ವಸ್ಥನಂತೆ ಒಂದೇ ಸಮನೆ ಕಥೆಯನ್ನು ಬರೆದು ಮುಗಿಸಿಬಿಡುತ್ತೇನೆ. ನನ್ನ ಯಾವುದೇ ಕಥೆಯನ್ನು ತಿದ್ದಬೇಕು ಅಥವಾ ಪುನಹ ಬರೆಯಬೇಕೆನ್ನುವ ಅವಶ್ಯಕತೆ ಯಾವತ್ತೂ ಬಂದದ್ದಿಲ್ಲ. 20 ದಿನಗಳ ಅವಧಿಯಲ್ಲಿ ಮುಗಿಸಿದ ನನ್ನ ಕಾದಂಬರಿ ‘ಕಾರ್ಮೆಲಿನ್’ ಸಂದರ್ಭದಲ್ಲಿಯೂ ಕರಡು ಪ್ರತಿಯೇ ಅಂತಿಮವಾಗಿತ್ತು. ಪ್ರಕಾಶಕರಿಗೆ ಅವರ ಹಠಾತ್ ಅಂತ್ಯಕ್ಕೆ ಆಕ್ಷೇಪವಿದ್ದು ಅವರು ಅದನ್ನು ಇನ್ನೂ ಸ್ವಲ್ಪಉದ್ದಕ್ಕೆಳೆಯಲು ಸಲಹೆ ಮಾಡಿದಾಗ ನಾನು ನಯವಾಗಿಯೇ ಅದನ್ನು ನಿರಾಕರಿಸಿದ್ದೆ. ಕಥೆಗಳು ತಮ್ಮನ್ನು ನನ್ನಿಂದ ಬರೆಯಿಸಿಕೊಳ್ಳುತ್ತವೆ. ನಾನು ಅವುಗಳನ್ನು ಬರೆಯುವುದಲ್ಲ ಎಂದು ನಾನು ನಂಬುತ್ತೇನೆ. ನನ್ನಲ್ಲಿರುವ ಕಲಾವಿದ ನಾನು ಕಥೆ ಬರೆಯುವಾಗ ಕೆಲಸ ಮಾಡುತ್ತಿರುವುದರಿಂದ ಅವನ ಸೃಜನಶೀಲತೆಗೆ ಅಡಚಣೆ ತರುವುದು ಸರಿಯಲ್ಲ.

ನಾನು ಬರೆಯುವಾಗ ಅಲಂಕಾರಿಕ ಭಾಷೆಯನ್ನು ಬಳಸುವುದಿಲ್ಲ. ನೇರ, ದಿಟ್ಟ ಬರಹವೇ ಒಂದು ಸಣ್ಣಕಥೆಯ ಸೊಬಗೆಂದು ನನ್ನ ನಂಬುಗೆ ಬಳಸುದಾರಿಗಳಿಲ್ಲದೆ, ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳಬೇಕೆನಿಸಿದ್ದನ್ನು ಹೇಳಿಬಿಡುವುದರಲ್ಲಿ ನಾನು ವಿಶ್ವಾಸವಿಟ್ಟಿದ್ದೇನೆ. ವಿವರಗಳನ್ನು ಓದುಗರ ಊಹೆಗೆ ಬಿಡುವುದರಲ್ಲಿ ನನಗೆ ಆಸಕ್ತಿಯಾದ್ದರಿಂದ ನನ್ನ ಬರಹಗಳಲ್ಲಿ ಬಹಳ ಕಡಿಮೆ ವಿವರಣೆಯಿರುತ್ತದೆ. ಒಳ್ಳೆಯ ಓದುಗರ ಊಹೆಗೆ ಬರಹಗಾರ ಅವಕಾಶ ನೀಡಿದಷ್ಟೂ ಅವರು ಆ ಬರಹವನ್ನು ಹೆಚ್ಚು ಆಸ್ವಾದಿಸುತ್ತಾರೆ.

ನನ್ನೆಲ್ಲಾ ಶುರುವಿನ ಕಥೆಗಳು ತಡರಾತ್ರಿಯಲ್ಲಿ ಬರೆದಂತಹವುಗಳು. ಇಡೀ ದಿನ ನಾನು ಅಂಗಡಿಯಲ್ಲಿರುತ್ತಿದ್ದೆ. ಆದ್ದರಿಂದಲೇ ನನ್ನ ಎರಡನೇ ಕಥಾಸಂಗ್ರಹದ ಹೆಸರೂ ‘ಝಾಗ್ರಾಣ’ (ನಿದ್ದೆಯಿಲ್ಲದ ರಾತ್ರಿಗಳು). ಆದರೆ ನಂತರ ನನ್ನ ಹೆಂಡತಿ ಶೈಲಾ, ಅಂಗಡಿಯಲ್ಲಿ ತನ್ನನ್ನು ತೊಡಗಿಸಿಕೊಂಡು ನನಗೆ ಬರೆಯಲು ಅವಕಾಶ ಮಾಡಿಕೊಟ್ಟ ನಂತರ ಈ ಶೈಲಿ ಬದಲಾಯಿತು. ಆ ಹೊತ್ತಿನಿಂದ ನನಗೆ ಸ್ವಲ್ಪ ಹೆಚ್ಚು ಸಮಯ ಸಿಕ್ಕಿದ್ದರಿಂದ ನನ್ನ ಕಥೆಗಳು ಸ್ವಲ್ಪ ಉದ್ದವಾಗಲಾರಂಭಿಸಿದವು.

 ನಾನು ಹುಟ್ಟು ಹೋರಾಟಗಾರ, ನನ್ನ ನಾಡು, ಭಾಷೆ, ಜನಗಳಿಗೆ ತೊಂದರೆಯಾಗಿ ನಾನು ವಿಚಲಿತನಾದಾಗ ನನ್ನಲ್ಲಿ ಹೋರಾಟ ಎದ್ದೇಳುತ್ತದೆ. ಪ್ರಕೃತಿ ನಾಶವಾಗಲಿ, ಸ್ವಂತ ರಾಜ್ಯಕ್ಕಾಗಿ ಹೋರಾಟವಿರಲಿ, ಕೊಂಕಣಿ ಭಾಷೆಯ ಅಧಿಕೃತ ಮನ್ನಣೆಯ ಬೇಡಿಕೆಯಾಗಲಿ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವನ್ನು ನೋಡಿಕೊಂಡು ನನಗೆ ಸುಮ್ಮನೆ ಕೂತು ಸಹಿಸಲಾಗದು, ನಾನು ಯಾವತ್ತೂ ಕಠಿಣವಾಗಿ ಮತ್ತು ಗಟ್ಟಿಯಾಗಿ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇನೆ. ಅನುಚಿತ ಘಟನೆಗಳು ನಡೆದಾಗ ನನ್ನಲ್ಲಿನ ಕಲಾವಿದ ಘಾಸಿಯಾಗುತ್ತಾನೆ. ಉದಾಹರಣೆಗೆ ನಾನು ಭಾಷಾ ಆಂದೋಲನದ ಮಂಚೂಣಿಯಲ್ಲಿದ್ದಾಗ ಅದು ಮುಂದೆ ಹಿಂಸೆಗೆ ತಿರುಗಿ, ಆಗಾಗ ಗೋವಾ ಬಂದ್ ಕರೆಗಳನ್ನು ನೀಡಬೇಕಾದಾಗ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದುದರಿಂದ ನನಗೆ ಕಸಿವಿಸಿಯಾಗುತ್ತಿತ್ತು. ಈ ಬಂದ್ ಕರೆಗಳನ್ನು ನೀಡುವ ಕೆಲ ಪ್ರಮುಖರಲ್ಲಿ ನಾನೂ ಒಬ್ಬನಾಗಿದ್ದರೂ, ಈ ಹೋರಾಟದ ಶಿಖರದಲ್ಲಿರುವಾಗಲೇ ‘ಬಂದ್’ ಎನ್ನುವ, ಬಂದ್ ಸಂಸ್ಕೃತಿಯನ್ನು ವಿರೋಧಿಸುವ ಕಥೆ ನಾನು ಬರೆದಿದ್ದೆ.

ನಿಮ್ಮ ಮೆಚ್ಚಿನ ಲೇಖಕರು ಯಾರು ಮತ್ತು ಏಕೆ?

ದಾಮೋದರ್ ಮಾವಜೊ: ಇಂತಹವರೇ ನನ್ನ ಮೆಚ್ಚಿನ ಲೇಖಕರೆಂದು ವಿಂಗಡಿಸಿ ಹೇಳಲು ತುಂಬಾ ಕಷ್ಟ. ನನ್ನ ಮೇಲೆ ದೀರ್ಘಕಾಲದ ಪ್ರಭಾವ ಬೀರಿದ ಲೇಖಕರು ಹಲವರಿದ್ದಾರೆ. ಚಿಂತನೆಗೆ ಚಾಲನೆ ಕೊಡುವ ರವೀಂದ್ರ ಕೇಳೆಕಾರ್‌ರವರ ಬರಹ ನನ್ನ ಮೆಚ್ಚಿನದ್ದು. ನಾನು ಚಿಕ್ಕವನಿರುವಾಗ ನನ್ನ ಇಷ್ಟದವರು ಶರದ್ಚಂದ್ರ ಚಟ್ಟೋಪಾಧ್ಯಾಯರಾಗಿದ್ದರು. ಅವರ ಆಧುನಿಕ ವಿಚಾರಸರಣಿ, ಭಾವನೆಗಳನ್ನು ಉದ್ದೀಪಿಸುವ ರೀತಿ, ಅವರ ಪಾತ್ರಗಳು ಜೀವನದ ಸಂಘರ್ಷಗಳನ್ನು ಎದುರಿಸುವ ರೀತಿಯತ್ತ ನನ್ನನ್ನು ಭಾವನಾತ್ಮಕವಾಗಿ ಜೋಡಿಸಿತು. ‘ಶ್ರಿಕಾಂತ್’ನಲ್ಲಿನ ರಾಜಲಕ್ಷ್ಮಿಯ ಪಾತ್ರಪೋಷಣೆ ನನ್ನನ್ನು ಮೊದಲೆಂದೂ ಆಗದಷ್ಟು ಅಲುಗಾಡಿಸಿಬಿಟ್ಟಿತ್ಟು. ನಂತರ, ನನಗೆ ಯು.ಆರ್. ಅನಂತಮೂರ್ತಿಯವರ ‘ಘಟಶ್ರಾದ್ಧ’ ಮತ್ತು ‘ಸಂಸ್ಕಾರ’ದ ಶೈಲಿ ಮತ್ತು ಅದರಲ್ಲಿ ವ್ಯಕ್ತಪಡಿಸಿದ ವಿಚಾರಗಳು ತುಂಬಾ ಹಿಡಿಸಿದವು, ವಿಶ್ವಾಸ್ ಪಾಟೀಲ ‘ಝದಝದಾತಿ’, ಮಹಾಶ್ವೇತಾ ದೇವಿಯವರ ‘ಅರಣ್ಯೆರ್ ಅಧಿಕಾರ್’ ಮತ್ತು ವೈಕಂ ಮಹಮದ್ ಬಶೀರರ ಸಣ್ಣಕಥೆಗಳು ನನ್ನ ಮೆಚ್ಚಿನವುಗಳು. ಪುಂಡಲಿಕ ನಾಯಕರ ’ಅದ್ಭವ’ (ದಂಗೆ) ಅಥವಾ ಮಹಾಬಲೇಶ್ವರ ಸೈಲರ ಸಣ್ಣ ಕಾದಂಬರಿ ’ಅರಣ್ಯಕಾಂಡ’ ಕೂಡಾ ನನ್ನ ಮೇಲೆ ಅಚ್ಚಳಿಯದ ಪರಿಣಾಮ ಬೀರಿದಂತಹವುಗಳು

ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ರ್ಕೆಝ್ ಅವರ ‘ಒನ್ ಹಂಡ್ರೆಡ್ ಇಯರ್ಸ್ ಒಚ್ ಸೊಲಿಟ್ಯೂಡ್’ ಓದಿದ ನಂತರ ನಾನವನ ಅಭಿಮಾನಿಯಾಗಿಬಿಟ್ಟೆ. ಅವನ ಕಾದಂಬರಿಯಲ್ಲಿನ ಮಾಂತ್ರಿಕ ವಾಸ್ತವಿಕತೆ ನನ್ನನ್ನು ಬೇರೆಯೇ ಮಟ್ಟಕ್ಕೇರಿಸಿತು. ನಾಗರಿಕತೆಯ ವಿಕಾಸ ಮತ್ತು ಆ ಕಾಲದ ಲ್ಯಾಟಿನ್ ಅಮೆರಿಕದ ಇತಿಹಾಸಕ್ಕೆ ಸಾಕ್ಷಿಯಾದ, ಜೀವನ ಸಂಘರ್ಷದ ಸಂಕೀರ್ಣತೆಯ ಬಗ್ಗೆ ಈ ಕಾದಂಬರಿ ಹೇಳುತ್ತದೆ. ಈಗ ನನ್ನ ಮೆಚ್ಚಿನ ಹರುಕಿ ಮುರಾಕಾಮಿಯ ಅಷ್ಟೇನೂ ಸಣ್ಣದ್ದಲ್ಲದ ಕಥೆಗಳು, ಅದರಲ್ಲಿಯೂ ‘ಫಸ್ಟ್ ಪರ್ಸನ್ ಸಿಂಗ್ಯುಲರ್’ ನನ್ನ ಮೇಲೆ ತುಂಬಾ ಪರಿಣಾಮ ಬೀರಿದೆ. ಅವನ ಸಂಬಂಧಗಳ ಡೈನಾಮಿಕ್ಸ್ ಅಳವಾಗಿ ಕಲಕುತ್ತವೆ. ಪಾತ್ರಗಳ ಒಂಟಿತನ ನಮ್ಮನ್ನು ಗಾಢವಾಗಿ ಹಿಡಿದಿಡುವಂತಹದ್ದು ಮತ್ತು ಅಂತ್ಯ ಊಹೆಗೆ ಸಿಲುಕದೆ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ನೀವು ಊಹಿಸಿರುವ ತಿರುವುಗಳು ಅಥವಾ ಸುಖಾಂತ್ಯಗಳಿಲ್ಲ. ಎಲ್ಲಿಯೋ ನಿಮ್ಮ ಪಯಣದಲ್ಲಿ ನೀವು ಇದ್ದಕ್ಕಿದ್ದಂತೆ ಊಹಿಸದೇ ಇದ್ದ ರೈಲು ನಿಲ್ದಾಣದಲ್ಲಿಳಿದು ನಡೆದು ಹೋದಂತೆ, ಮುರಾಕಾಮಿಯ ಕಥೆಗಳಲ್ಲಿ ಮಾಂತ್ರಿಕ ವಾಸ್ತವಿಕತೆಯೂ ತಲೆಯೆತ್ತುತ್ತದೆ.

‘ವಿಭಿನ್ನ’ನಾಗಿರುವ ಯಾವುದೇ ಲೇಖಕ, ನನ್ನ ಮೆಚ್ಚಿನವರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)