varthabharthi


ಸಂಪಾದಕೀಯ

ಆನ್‌ಲೈನ್ ಸುಳಿಯೊಳಗೆ ಸಿಲುಕಿರುವ ವಿದ್ಯಾರ್ಥಿಗಳು

ವಾರ್ತಾ ಭಾರತಿ : 13 Dec, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕೊನೆಗೂ ಭಾಗಶಃ ಶಾಲೆಗಳು ತೆರೆದಿವೆ. ಆದರೆ ಆನ್‌ಲೈನ್ ತರಗತಿಗಳು ಬೀರಿರುವ ದುಷ್ಪರಿಣಾಮಗಳಿಂದ ಮಕ್ಕಳು ಕಳಚಿಕೊಳ್ಳುವುದು ಅಷ್ಟು ಸುಲಭವಿಲ್ಲ. 'ಆನ್‌ಲೈನ್ ತರಗತಿಗಳು' ಎನ್ನುವ ಆತ್ಮವಂಚನೆ, ಇಂದು ನಮ್ಮ ಮಕ್ಕಳನ್ನು 'ಪರೋಕ್ಷ ಅನಕ್ಷರಸ್ಥ'ರನ್ನಾಗಿಸಿದೆ. ಹೆಚ್ಚಿನ ಶಾಲೆಗಳು ಶುಲ್ಕ ವಶೀಲಿಗಾಗಿಯಷ್ಟೇ ತರಗತಿಗಳನ್ನು ಆರಂಭಿಸಿದ್ದವು. ಪರೀಕ್ಷೆಗಳೂ ಇಲ್ಲಿ ಕಾಟಾಚಾರಕ್ಕಷ್ಟೇ ನಡೆಯುತ್ತಿದ್ದವು. ವಸೂಲಿ ಮಾಡಿದ ಶುಲ್ಕದ ಋಣ ಸಂದಾಯ ಮಾಡುವಂತೆ, ಪರೀಕ್ಷೆಗಳಲ್ಲಿ ಎಲ್ಲ ಮಕ್ಕಳು ಉತ್ತೀರ್ಣರಾಗುತ್ತಿದ್ದರು. ಒಟ್ಟಿನಲ್ಲಿ ತರಗತಿಯಿಂದ ಭಡ್ತಿ ಪಡೆದರೂ, ಅವರು ಎಷ್ಟರ ಮಟ್ಟಿಗೆ ಶಿಕ್ಷಣವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಪರೀಕ್ಷಿಸಲು ಹೊರಟರೆ ನಮಗೆ ನಿರಾಸೆಯಾಗುತ್ತದೆ. ಮೊತ್ತ ಮೊದಲಾಗಿ ಆನ್‌ಲೈನ್ ಶಿಕ್ಷಣದ ಪ್ರಯೋಜನ ಎಲ್ಲರಿಗೂ ದೊರಕಲಿಲ್ಲ. ರಾಜ್ಯದಲ್ಲಿ ಶೇ. 30ರಷ್ಟು ಮಕ್ಕಳಿಗೆ ಮಾತ್ರ ಆನ್‌ಲೈನ್ ಶಿಕ್ಷಣ ಲಭ್ಯವಾಗಿತ್ತು. ಉಳ್ಳವರ ಮಕ್ಕಳು ಆನ್‌ಲೈನ್ ಶಿಕ್ಷಣವನ್ನು ಪಡೆಯುತ್ತಿರುವಾಗ ಇಲ್ಲದವರ ಮಕ್ಕಳು ದುಡಿಮೆಯ ಕಡೆಗೆ ಮುಖ ಮಾಡಿದ್ದರು. ಬಡವರ ಮಕ್ಕಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹತಾಶೆ, ಖಿನ್ನತೆಯಿಂದ ನರಳುವ ಸನ್ನಿವೇಶ ನಿರ್ಮಾಣವಾಯಿತು. ಇತ್ತ ಮೊಬೈಲ್ ಮೂಲಕ ಶಿಕ್ಷಣ ಕಲಿತವರೇನೂ ಅದರಿಂದ ದೊಡ್ಡ ಲಾಭವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬದಲಿಗೆ ಅವರು ಇಂಟರ್‌ನೆಟ್ ಎನ್ನುವ ಮಹಾ ಸುಳಿಗೆ ಸಿಲುಕಿಕೊಂಡರು. ಆನ್‌ಲೈನ್ ಶಿಕ್ಷಣವನ್ನು ಪಡೆದ ಮಕ್ಕಳಲ್ಲಿ ಶೇ. 70 ವಿದ್ಯಾರ್ಥಿಗಳು ಮೊಬೈಲ್ ವ್ಯಸನಕ್ಕೆ ಸಿಲುಕಿಕೊಂಡಿದ್ದಾರೆ ಎನ್ನುವ ಆತಂಕಕಾರಿ ವರದಿಯನ್ನು ಕರ್ನಾಟಕ ಚೈಲ್ಡ್ ರೈಟ್ಸ್ ಟ್ರಸ್ಟ್ ಅಬ್ಸರ್ವೇಟರಿ (ಕೆಸಿಆರ್‌ಒ) ಬಹಿರಂಗಪಡಿಸಿದೆ.

ಆನ್‌ಲೈನ್ ಶಿಕ್ಷಣಕ್ಕೆ ಮೊದಲೇ ಮಕ್ಕಳು ಇಂಟರ್‌ನೆಟ್, ಮೊಬೈಲ್‌ಗಳಿಗೆ ಬಲಿಯಾಗುತ್ತಿರುವ ಸಮಸ್ಯೆ ಚರ್ಚೆಯಲ್ಲಿತ್ತು. ಆದರೂ ಪಾಲಕರು ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡಲು ಸಾಕಷ್ಟು ಪ್ರಯತ್ನ ಪಡುತ್ತಿದ್ದರು. ಆದರೆ ಯಾವಾಗ ಆನ್‌ಲೈನ್ ಶಿಕ್ಷಣ ಆರಂಭವಾಯಿತೋ ಆಗ ಮಕ್ಕಳ ಕೈಗೆ ಮೊಬೈಲ್‌ನ್ನು ಕೊಡುವುದು ಪಾಲಕರಿಗೆ ಅನಿವಾರ್ಯವಾಯಿತು. ದೊಡ್ಡವರೇ ಮೊಬೈಲ್‌ನ ಸಹವಾಸದಿಂದ ಕೆಡುತ್ತಿರುವಾಗ, ಒಳಿತು ಕೆಡುಕಿನ ಅರಿವಿಲ್ಲದ ಮಕ್ಕಳು ಮೊಬೈಲ್‌ಗಳನ್ನು ದುರುಪಯೋಗ ಪಡಿಸಿಕೊಂಡರೆ ಅಚ್ಚರಿಯೇನೂ ಇಲ್ಲ. ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಆನ್‌ಲೈನ್ ಕಲಿಕೆಯ ಹೆಸರಿನಲ್ಲಿ ಮೊಬೈಲ್ ವ್ಯಸನಕ್ಕೆ ಒಳಗಾಗಿದ್ದಾರೆ. ಪಾಲಕರಿಗೆ 'ಆನ್‌ಲೈನ್‌ನಲ್ಲಿ ಕಲಿಯುತ್ತಿದ್ದೇನೆ' ಎಂಬ ಭ್ರಮೆ ಹುಟ್ಟಿಸಿ, ಗೇಮ್ಸ್, ಚಾಟಿಂಗ್, ಅಶ್ಲೀಲ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದರಲ್ಲಿ ತಲ್ಲೀನರಾಗಿ ಬಿಡುತ್ತಿದ್ದರು. ಪಾಲಕರಿಗೂ ಮಗ ಆನ್‌ಲೈನ್‌ನಲ್ಲಿ ಕಲಿಯುತ್ತಿದ್ದಾನೆ ಎಂಬ ಸಮಾಧಾನ. ಆದರೆ ಇತ್ತ ಮಕ್ಕಳು ಶಿಕ್ಷಣದ ಬದಲಿಗೆ, ಇತರ ದುರಭ್ಯಾಸಗಳಿಗೆ ಬಲಿಯಾಗುತ್ತಿದ್ದರು. ಇದು ಪಾಲಕರು ಮಕ್ಕಳ ಕೈಯಿಂದ ಮೊಬೈಲ್‌ಗಳನ್ನು ಕಿತ್ತುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಷ್ಟರಮಟ್ಟಿಗೆ ಮುಂದುವರಿದಿದೆ.

ಈ ಮೊಬೈಲ್ ವ್ಯಸನ ನೂರಾರು ಮಕ್ಕಳ ಮಾನಸಿಕ ಸ್ಥಿತಿಯನ್ನು ಅಸ್ತವ್ಯಸ್ತಗೊಳಿಸಿವೆ. ಹಲವರು ಮೊಬೈಲ್‌ನಿಂದ ಹೊರಗೆ ಬರುವುದಕ್ಕೆ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ. ಗೇಮಿಂಗ್, ಹಾಡುಗಳು, ಚಲನಚಿತ್ರ ಇವುಗಳನ್ನು ಚಟವಾಗಿಸಿಕೊಂಡು, ಮರಳಿ ಓದಿನ ಕಡೆಗೆ ಹೊರಳುವುದಕ್ಕೆ ಅವರಿಗೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮೊಬೈಲ್ ಚಟಕ್ಕೆ ಅಂಟಿಕೊಂಡಿರುವ ಮಕ್ಕಳು ಪ್ರತ್ಯಕ್ಷ ಕಲಿಕೆಗೆ ತಮ್ಮನ್ನು ಒಡ್ಡಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಶಿಕ್ಷಕರ ಪಾಠಗಳ ಮೇಲೆ ಶ್ರದ್ಧೆಯಿಡುವುದು ಇವರಿಗೆ ಅಸಾಧ್ಯವಾಗುತ್ತಿದೆ. ದೊಡ್ಡ ಸಂಖ್ಯೆಯ ಮಕ್ಕಳು ಇದರಿಂದ ಖಿನ್ನತೆಗೆ, ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಜ್ಞರು ಹೇಳುತ್ತಿದ್ದಾರೆ. ಶಾಲೆಯಿಂದ ಬಂದ ಮಕ್ಕಳು ಮತ್ತೆ ಮೊಬೈಲ್ ಜೊತೆಗೆ ಅಂಟಿಕೊಳ್ಳುತ್ತಿರುವುದರಿಂದ, ಅಧ್ಯಯನದ ಮೇಲೆ ಅವರಿಗೆ ಗಮನ ಹರಿಸುವುದು ಅವರಿಗೆ ಅಸಾಧ್ಯವಾಗುತ್ತಿದೆ ಎನ್ನುವುದು ವರದಿಯಿಂದ ಬೆಳಕಿಗೆ ಬಂದಿದೆ. ಹಲವು ಮಕ್ಕಳು ಪಾಲಕರಿಗೆ ಕದ್ದು ಮುಚ್ಚಿ ತಮ್ಮದೇ ಮೊಬೈಲ್‌ಗಳನ್ನು ಹೊಂದಿಸಿಕೊಳ್ಳುತ್ತಿದ್ದಾರೆ. ಮೊಬೈಲ್ ಕೊಂಡುಕೊಳ್ಳುವುದಕ್ಕೆ, ರೀಚಾರ್ಜ್ ಮಾಡುವುದಕ್ಕೆ ಹಣಕ್ಕಾಗಿ ಅಡ್ಡ ದಾರಿಗಳನ್ನು ಹಿಡಿಯುತ್ತಿದ್ದಾರೆ. ಒಂದು ರೀತಿಯಲ್ಲಿ, ಮಾದಕ ದ್ರವ್ಯದ ಚಟಕ್ಕೆ ಒಳಗಾದವರ ಸ್ಥಿತಿ ಮಕ್ಕಳದ್ದಾಗಿದೆ. ಮೊಬೈಲ್ ಇಲ್ಲದೆ ಬದುಕೇ ಇಲ್ಲ ಎನ್ನುವಂತಹ ಮಾನಸಿಕಾವಸ್ಥೆಯಲ್ಲಿ ನೂರಾರು ವಿದ್ಯಾರ್ಥಿಗಳು ನರಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮೊಬೈಲ್ ಹೊಂದಲು ಸಾಧ್ಯವಿಲ್ಲದ ಮಕ್ಕಳು ಮಾನಸಿಕವಾಗಿ ಕೀಳರಿಮೆ, ಖಿನ್ನತೆಗಳನ್ನೂ ಅನುಭವಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಪೋಷಕರ ಹೊಣೆಗಾರಿಕೆ ಬಹುದೊಡ್ಡದು. ಮೊಬೈಲ್ ವ್ಯಸನಿಗಳಾಗಿರುವ ಮಕ್ಕಳ ಜೊತೆಗೆ ವ್ಯವಹರಿಸುವ ಸಂದರ್ಭದಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ತೀರಾ ಒರಟಾಗಿ ಅವರೊಂದಿಗೆ ವ್ಯವಹರಿಸಿ ಅವರಿಂದ ಮೊಬೈಲ್‌ಗಳನ್ನು ಏಕಾಏಕಿ ಕಿತ್ತುಕೊಂಡರೆ, ಅದು ಬೇರೆಯೇ ದುರಂತಕ್ಕೆ ಕಾರಣವಾಗಬಹುದು. ಅವರೊಂದಿಗೆ ಆತ್ಮೀಯವಾಗಿ ವ್ಯವಹರಿಸಿ, ಅವರೊಂದಿಗೆ ಮಾತುಕತೆ ನಡೆಸಿ ಹಂತ ಹಂತವಾಗಿ ಆ ಚಟವನ್ನು ದೂರವಾಗಿಸಬೇಕು. ತೀರಾ ಕಷ್ಟಕರವಾದರೆ ಮಾನಸಿಕ ತಜ್ಞರೊಂದಿಗೆ ಕೌನ್ಸೆಲಿಂಗ್ ಏರ್ಪಡಿಸಬೇಕು. ಈವರೆಗೆ ಕೋಣೆಯಲ್ಲಿ ಬಂಧಿತರಾಗಿ ಸಹಜ ಬದುಕಿನಿಂದ ವಂಚಿತರಾಗಿರುವ ಮಕ್ಕಳಿಗೆ ಮೊಬೈಲ್ ಒಂದೇ ಸಂಗಾತಿಯಾಗಿತ್ತು. ಆ ಸಂಗಾತಿಯನ್ನು ಅವರಿಂದ ಬೇರ್ಪಡಿಸುವಾಗ, ಅವರಿಗೆ ಪರ್ಯಾಯ ಚಟುವಟಿಕೆಗಳನ್ನು ಒದಗಿಸಿಕೊಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪೋಷಕರು ಸರಕಾರೇತರ ಸಂಸ್ಥೆಗಳ ಸಹಾಯ ಪಡೆಯುವುದು ಅತ್ಯಗತ್ಯ. ಮಕ್ಕಳ ಜೊತೆಗಿದ್ದು ಅವರ ಚಟುವಟಿಕೆಗಳೊಂದಿಗೆ ಬೆರೆಯುತ್ತಾ ಅವರನ್ನು ಮತ್ತೆ ಸಹಜ ಲೋಕಕ್ಕೆ ಕರೆದುಕೊಂಡು ಬರುವ ಕೆಲಸವನ್ನು ಪೋಷಕರು ಮತ್ತು ಶಿಕ್ಷಕರು ಮಾಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)