varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 13 Dec, 2021
ಪಿ.ಎ.ರೈ

ಬೇಡವೆಂದರೂ ದಿಲ್ಲಿಯಿಂದ ಒತ್ತಡ ಹಾಕಿ ಕಾಂಗ್ರೆಸ್‌ನವರು ನನ್ನನ್ನು ಮುಖ್ಯಮಂತ್ರಿ ಮಾಡಿ ಕಿರುಕುಳ ನೀಡಿದರು
 -ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
   ನಾಡೆಲ್ಲಾ ಬೇಡ ಬೇಡವೆಂದರೂ ನೀವಿನ್ನೂ ರಾಜಕೀಯದಲ್ಲಿ ಉಳಿದಿದ್ದೀರಿ. ಜನರು ಕಿರುಕುಳ ಕೊಡದೆ ಇರುತ್ತಾರೆಯೇ?


  
ಮಾಜಿ ಪ್ರಧಾನಿ ದೇವೇಗೌಡರು ನಾಯಕರನ್ನು ಸೃಷ್ಟಿಸುವ ಕಾರ್ಖಾನೆ - ಡಿ.ಸಿ.ತಮ್ಮಣ್ಣ, ಶಾಸಕ
ಆ ಪೈಕಿ ಊರವರಿಗೆ ಕಂಡಿರುವುದು, ಅವರು ತಮ್ಮ ಮನೆಯಲ್ಲಿ ಸೃಷ್ಟಿಸಿದ ಒಬ್ಬಿಬ್ಬರು ಅಸ್ವಸ್ಥ ನಾಯಕರು ಮಾತ್ರ.


ದೇಶದ ರಕ್ಷಣಾ ನೀತಿಗಳನ್ನು ವಿದೇಶಿ ನೀತಿಗಳ ಕರಿನೆರಳಿನಿಂದ ಹೊರತರಲಾಗಿದೆ - ಅಮಿತ್ ಶಾ, ಕೇಂದ್ರ ಸಚಿ

  ಅಂದರೆ ಅದನ್ನೂ ಅದಾನಿ ತರದವರ ಕೈಗೆ ಮಾರಿ ಬಿಟ್ಟಿರಾ?


ಕೃಷಿಯಲ್ಲಿ ತೊಡಗಿಸಿಕೊಂಡು ಉತ್ತಮ ಫಸಲು ತೆಗೆಯುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ - ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
  ಹಾಗೆಂದು ಎಲ್ಲರೂ ದಕ್ಷಿಣೆಯನ್ನು ಅವಲಂಬಿಸಿ ಬದುಕಲಿಕ್ಕಾಗುತ್ತದೆಯೇ?


ಕಾಂಗ್ರೆಸ್ ವರಿಷ್ಠ ನಾಯಕರಿಗೆ ಸಲಹೆ ನೀಡುವುದೇ ಅಪರಾಧವಾಗಿ ಕಾಣುತ್ತದೆ - ಗುಲಾಮ್ ನಬಿ ಆಝಾದ್, ಕಾಂಗ್ರೆಸ್ ಮುಖಂಡ
  ಇದು, ನಿಮಗೆ ಸಲಹೆ ನೀಡಿದ ಜೂನಿಯರ್‌ಗಳ ನಿತ್ಯಾನುಭವ.


   ರಾಜ್ಯದಲ್ಲಿ ಒಬ್ಬಿಬ್ಬರಿಂದಾಗಿ ಕಾಂಗ್ರೆಸ್ ಉಸಿರಾಡುತ್ತಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
   ಆ ಇಬ್ಬರಲ್ಲಿ ಒಬ್ಬರು ನೀವೇ ಇರಬೇಕು.


ಕಾಂಗ್ರೆಸ್ ವಯಸ್ಸಾದ ಪಕ್ಷ. ಅದನ್ನು ವಿಸರ್ಜಿಸುವ ಕಾಲ ಸನ್ನಿಹಿತವಾಗಿದೆ - ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

  ಕಾಂಗ್ರೆಸ್‌ನ ವಯಸ್ಸಾದವರಿಗೆ ಬಿಜೆಪಿಯಲ್ಲಿ ಪ್ರತ್ಯೇಕ ಗೋಶಾಲೆಗಳಿವೆಯಂತೆ.


   ಮುಂದಿನ ಚುನಾವಣೆಯವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ -ಈಶ್ವರಪ್ಪ, ಸಚಿವ
ಹಾಗೆಲ್ಲಾ ನಿರಾಶರಾಗಿ ಜೀವನದಲ್ಲಿ ಜಿಗುಪ್ಸೆ ಬೆಳೆಸಿಕೊಳ್ಳಬೇಡಿ. ಬದುಕಿನ ಈ ಹಂತದಲ್ಲಿ ಆಶಾವಾದವನ್ನು ಉಳಿಸಿಕೊಳ್ಳಿ.


   ಸಿನೆಮಾದವರು ಮಾಡುವಷ್ಟು ಕನ್ನಡದ ಕೊಲೆಯನ್ನು ಬೇರೆ ಯಾರೂ ಮಾಡುವುದಿಲ್ಲ - ಅನಂತ್ ನಾಗ್, ನಟ
  ಸಂಸ್ಕೃತ ಪ್ರಿಯರು ಬೇರೆ ಕ್ಷೇತ್ರಗಳಲ್ಲೂ ಅಷ್ಟೇ ದಕ್ಷವಾಗಿ ಆ ಕ್ರೌರ್ಯ ಮೊೆಯುತ್ತಿದ್ದಾರೆ.


   ಶಾಸಕರಾಗಿ ಆಯ್ಕೆಯಾಗುವ ಎಲ್ಲರಿಗೂ ಸಚಿವರಾಗುವ ಆಸೆ ಇರುತ್ತದೆ - ಅರವಿಂದ ಬೆಲ್ಲದ್, ಶಾಸಕ
  ಇಲ್ಲಿ ವಿಶೇಷ ಎಂದರೆ, ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆ ಇರುವುದು.

 
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವಳಲ್ಲ. ಯಾರು ರಾಷ್ಟ್ರೀಯವಾದಿಯಾಗಿರುತ್ತಾರೋ ಅವರ ಪರ - ಕಂಗನಾ ರಣಾವತ್, ನಟಿ
  ವಿದೂಷಕರು ಯಾರ ಪರವಾಗಿದ್ದರೇನಂತೆ, ತಮ್ಮ ಪಾತ್ರ ನಿರ್ವಹಿಸುತ್ತಿದ್ದರೆ ಸಾಕು.


   ನಾವು ಕಷ್ಟ ಬಂದಾಗ ದೇವರ ಬಳಿ ಹೋಗುವಂತೆ ದೇವೇಗೌಡರು ಚುನಾವಣೆ ಬಂದಾಗ ಪ್ರಧಾನಿಯನ್ನು ಭೇಟಿಯಾಗಿ ಬರುತ್ತಾರೆ - ಸಿ.ಪಿ.ಯೋಗೇಶ್ವರ್, ವಿ.ಪ.ಸದಸ್ಯ
  ಈ ಬಾರಿ, ಮಾಜಿಪ್ರಧಾನಿಯಾಗಲು ಸಿದ್ಧತೆ ನಡೆಸುತ್ತಿರುವ ಮೋದಿಯವರೇ, ಆ ಬದುಕು ಹೇಗಿರುತ್ತದೆಂದು ಅರಿಯಲು ಗೌಡರನ್ನು ಕರೆಸಿಕೊಂಡಿದ್ದರಂತೆ.

 ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ -ದೇವೇಗೌಡ, ಮಾಜಿ ಪ್ರಧಾನಿ
   ಎಂದೋ ಮುಗಿದದ್ದನ್ನು ಯಾರಾದರೂ ಮತ್ತೆ ಮುಗಿಸೋದು ಹೇಗೆ ಸಾರ್?


 ಒಂದು ವೇಳೆ ಕೋವಿಡ್‌ನಿಂದಾಗಿ ಶಾಲೆಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾದರೆ ಆ ವಿಷಯದಲ್ಲಿ ಹಿಂದೇಟು ಹಾಕುವುದಿಲ್ಲ - ಬಿ.ಸಿ.ನಾಗೇಶ್, ಸಚಿವ
  ನೀವು ಹಿಂದೇಟು ಹಾಕುವುದು ಉಪಯುಕ್ತವಾದುದನ್ನು ತೆರೆಯುವ ವಿಷಯದಲ್ಲೇ ಹೊರತು ಮುಚ್ಚುವ ವಿಷಯದಲ್ಲಿ ಅಲ್ಲ ಎಂಬುದು ನಾಡಿಗೆಲ್ಲಾ ಗೊತ್ತಿದೆ.


 ನಾವು ಯಾವತ್ತೂ ಯಂತ್ರದ ಗುಲಾಮರಾಗಬಾರದು -ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಮುಖಂಡ
  ಮಂತ್ರದ ಮೂಲಕ ಸಮಾಜವನ್ನು ದಾಸ್ಯಕ್ಕೊಳಪಡಿಸುವಲ್ಲಿ ಯಶಸ್ವಿಯಾದವರಿಗೆ ಯಂತ್ರದ ಅಗತ್ಯವೇ ಎಲ್ಲಿದೆ?


   ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ - ಅನ್ವರ್ ಮಾಣಿಪ್ಪಾಡಿ, ರಾಜ್ಯ ಬಿಜೆಪಿ ವಕ್ತಾರ
  ನೀವು ನಿರೀಕ್ಷಿಸಿದ್ದ ಯಾವುದಾದರೂ ಸ್ಥಾನ ನಿಮಗೆ ಸಿಕ್ಕಿದ್ದರೆ ಈ ದುರಂತ ಸಂಭವಿಸುತ್ತಿತ್ತೇ?


ನನ್ನದು ಮಾತೃ ಹೃದಯ. ಜನ ಕಷ್ಟ ಹೇಳಿದಾಗ ಕಣ್ಣೀರು ಬರುತ್ತದೆ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಪಾಪ ಪ್ರಜ್ಞೆ ಅಷ್ಟರ ಮಟ್ಟಿಗೆ ಕಾಡುತ್ತಿರಬೇಕು.


ಬಿಜೆಪಿಗೆ ಸೇರುವುದಿಲ್ಲ ಎಂದಿದ್ದಕ್ಕೆ ನನ್ನನ್ನು ಜೈಲಿಗೆ ಕಳುಹಿಸಿದರು - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಜೈಲಿನಿಂದ ಬಿಟ್ಟದ್ದು ಯಾವ ಕಾರಣಕ್ಕೆ ಎನ್ನುವ ಗುಟ್ಟನ್ನು ಬಹಿರಂಗ ಪಡಿಸಿ.


2022ರ ಉ.ಪ್ರ.ವಿಧಾನ ಸಭೆ ಚುನಾವಣೆಯಲ್ಲಿ ನನ್ನ ಪಕ್ಷ ಸ್ಪಷ್ಟ ಬಹುಮತ ಪಡೆದು ದೃಢ ಸರಕಾರ ರಚಿಸಲಿದೆ - ಮಾಯಾವತಿ, ಬಿಎಸ್ಪಿ ಅಧ್ಯಕ್ಷೆ

ಬಹುಷಃ ಬಿಜೆಪಿಯೊಂದಿಗೆ ವಿಲೀನವಾಗುವ ಯೋಜನೆ ಇರಬೇಕು.


ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಗೋಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ - ಯು.ಟಿ.ಖಾದರ್, ಮಾಜಿ ಸಚಿವ
ಜನತೆ ಹಸಿವಿನಿಂದ ಸಾಯುತ್ತಿರುವ ನಾಡಿನಲ್ಲಿ ಗೋವುಗಳ ಸೌಭಾಗ್ಯ ನೋಡಿ.


ಆಳುವವರಿಗೂ ಗೋಚಿಂತೆ, ಪ್ರತಿಪಕ್ಷದವರಿಗೂ ಗೋಚಿಂತೆ. ದಲಿತರು ನಮಗೆ ಕೇವಲ ಮತಬ್ಯಾಂಕ್ ಅಲ್ಲ, ನಮ್ಮ ಆಡಳಿತದ ಪಾಲುದಾರರು - ಸಿ.ಟಿ.ರವಿ, ಶಾಸಕ

 ನಿಮ್ಮ ಸಂಪುಟದಲ್ಲಿ ದಲಿತರಿಗೆ ಎಷ್ಟು ಪಾಲು ಕೊಟ್ಟಿದ್ದೀರಿ?


ನಾನು ಪ್ರಧಾನಿ ಮೋದಿಯ ವಿರೋಧಿಯಲ್ಲ, ಅವರು ಅನುಸರಿಸುತ್ತಿರುವ ನೀತಿಯ ವಿರೋಧಿ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

  ನಿಮ್ಮಂಥವರು ವಿರೋಧಿಸಿದಾಗಲೆಲ್ಲ, ಮೋದಿಯವರಲ್ಲಿ ಏನೋ ಒಳ್ಳೆಯತನ ಇರಬೇಕೆಂದು ಜನರು ಸಂಶಯಿಸಲಾರಂಭಿಸುತ್ತಾರೆ.


ಅಸದುದ್ದೀನ್ ಉವೈಸಿಯ ಎಐಎಂಐಎಂ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿಯ ‘ಬಿ’ಟೀಂ ಎಂಬುದರಲ್ಲಿ ಅನುಮಾನವೇ ಇಲ್ಲ - ಎಂ.ಬಿ.ಪಾಟೀಲ್, ಶಾಸಕಕಾಂಗ್ರೆಸ್ ’ಸಿ’ ಟೀಮ್ ಆಗಿ ಬಿಟ್ಟಿತಲ್ಲ?


ಕಾಂಗ್ರೆಸ್ ಇಲ್ಲದೆ ವಿಪಕ್ಷಗಳ ಒಕ್ಕೂಟ ಸಾಧ್ಯವಿಲ್ಲ - ಸಂಜಯ್ ರಾವತ್, ಶಿವಸೇನೆ ವಕ್ತಾರ

ಬಹುಷಃ ಕಾಂಗ್ರೆಸ್ ಇಲ್ಲದೆ ಶಿವಸೇನೆ ಇಲ್ಲ ಎನ್ನುವುದು ನಿಮಗೆ ಖಚಿತ ಆಗಿರಬೇಕು.


ನಾನು ರಾಜಕೀಯಕ್ಕೆ ಶ್ರಮಿಕನ ಮಗನಾಗಿ ಬಂದೆ, ಧನಿಕನ ಮಗನಾಗಿ ಅಲ್ಲ - ರಮೇಶ್ ಜಾಧವ್, ಸಂಸದ

ಈಗ ಮಾತ್ರ ಧನಿಕನ ಅಪ್ಪಆಗಿದ್ದೀರಿ.


ರೈತರ ಹೆಸರು ಹೇಳಿ ತಲೆಮಾರು ಬೆಳೆಸುವ ಅಗತ್ಯ ನಮಗಿಲ್ಲ - ಎಚ್.ಡಿ.ರೇವಣ್ಣ, ಶಾಸಕ

 ರೈತರ ಹೆಸರಲ್ಲಿ ರಾಜಕೀಯ ಮಾಡಿದರೆ ಮತ ಸಿಗುವುದಿಲ್ಲ ಎನ್ನುವುದು ಗೊತ್ತಾಗಿರಬೇಕು.


ಮನಃಪೂರ್ವಕ ಮತಾಂತರ ಓಕೆ, ಒತ್ತಡ, ಆಮಿಷ ಹೇರಿದರೆ ಜೋಕೆ- ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ

   ಎಷ್ಟೋ ಮಂದಿ ಬ್ರಾಹ್ಮಣ ಪುರೋಹಿತರಾಗಿ ಮತಾಂತರಗೊಳ್ಳಲು ಮನಃಪೂರ್ವಕ ತವಕಿಸುತ್ತಿದ್ದಾರಲ್ಲಾ!


ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಡಿಕೆಶಿ ಸೋಲಿಸುತ್ತಾರೆ. ಖರ್ಗೆಯವರನ್ನು ಪರಮೇಶ್ವರ್ ಸೋಲಿಸುತ್ತಾರೆ - ನಳೀನ್‌ಕುಮಾರ್ ಕಟೀಲು, ಸಂಸದ
ನಿಮ್ಮ ಪಾಳಯದಲ್ಲಿ ಯಾರನ್ನು ಯಾರು ಸೋಲಿಸುತ್ತಾರೆಂಬ ಪಟ್ಟಿಯನ್ನು ಯಾವಾಗ ಬಿಡುಗಡೆ ಗೊಳಿಸುತ್ತೀರಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು