varthabharthi


ಸಂಪಾದಕೀಯ

ಹಗರಣಗಳನ್ನು ಮುಚ್ಚಿಹಾಕಲು ಮತಾಂತರ ನಿಷೇಧ ಮಸೂದೆ?

ವಾರ್ತಾ ಭಾರತಿ : 14 Dec, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕರ್ನಾಟಕ ಏಕೀಕರಣದ ನಂತರ ಉಪೇಕ್ಷೆಗೆ ಒಳಗಾದ ರಾಜ್ಯದ ಉತ್ತರ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ವಿಧಾನ ಮಂಡಲದ ಒಂದು ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ಈ ಹಿಂದೆ ತೀರ್ಮಾನಿಸಲಾಯಿತು. ಅದರಂತೆ ಸೋಮವಾರ ಅಲ್ಲಿ ಅಧಿವೇಶನ ಆರಂಭವಾಗಿದೆ. ಎರಡು ವರ್ಷಗಳ ನಂತರ ಅಲ್ಲಿ ನಡೆಯುತ್ತಿರುವ ಅಧಿವೇಶನದ ಬಗ್ಗೆ ಸಹಜವಾಗಿ ಆ ಭಾಗದ ಜನರಿಗೆ ತುಂಬಾ ನಿರೀಕ್ಷೆಗಳಿವೆ. ಇದರ ಜೊತೆಗೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲ ಹಗರಣಗಳ ಮೇಲೆ ಬೆಳಕು ಚೆಲ್ಲಲು ಪ್ರತಿಪಕ್ಷಗಳು ಮುಂದಾಗಿವೆ. ಆದರೆ ರಾಜ್ಯದ ಬಿಜೆಪಿ ಸರಕಾರಕ್ಕೆ ಇವು ಯಾವುದರ ಬಗೆಗೂ ಆಸಕ್ತಿ ಇದ್ದಂತಿಲ್ಲ. ಯಾವುದೇ ಕಾರಣಕ್ಕೂ ಪ್ರಸಕ್ತವಲ್ಲದ, ರಾಜ್ಯಕ್ಕೆ ಸಂಬಂಧಪಡದ, ಸಂವಿಧಾನಾತ್ಮಕವಲ್ಲದ ‘ಮತಾಂತರ ನಿಷೇಧ ಮಸೂದೆ’ ಎಂಬ ಗುರಾಣಿಯನ್ನು ಹಿಡಿದು ವಿರೋಧ ಪಕ್ಷಗಳ ದಾಳಿಯಿಂದ ಪಾರಾಗಲು ಸರಕಾರ ವ್ಯರ್ಥ ಪ್ರಹಸನ ನಡೆಸಿದೆ.

 ಈ ಸಲದ ವಿಧಾನ ಮಂಡಲ ಕಲಾಪದಲ್ಲಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕಾದ ಹಲವಾರು ಜ್ವಲಂತ ಸಮಸ್ಯೆಗಳಿವೆ. ರಾಜ್ಯದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಈ ಬಾರಿ ಅತಿವೃಷ್ಟಿಯಿಂದಾಗಿ ರೈತರ ಬೆಳೆಗಳು ಕೈಗೆ ಬರಲಿಲ್ಲ. ಮುಂಗಾರಿನ ಬೆಳೆ ನಷ್ಟ ಪರಿಹಾರವೂ ರೈತರ ಕೈ ಸೇರಿಲ್ಲ. ಕೋವಿಡ್ ಪರಿಣಾಮವಾಗಿ ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿ ನಿರುದ್ಯೋಗ ವ್ಯಾಪಕ ಸ್ವರೂಪ ಪಡೆದಿದೆ. ಉತ್ತರ ಕರ್ನಾಟಕ ಭಾಗದ ಇನ್ನೂ ಅನೇಕ ಸಮಸ್ಯೆಗಳ ಬಗ್ಗೆ ಸರಕಾರ ಉತ್ತರ ನೀಡಬೇಕಾಗಿದೆ. ಆದರೆ ಈ ಸರಕಾರಕ್ಕೆ ಇವೆಲ್ಲದಕ್ಕಿಂತ ಮತಾಂತರ ಸಮಸ್ಯೆ ಮುಖ್ಯವಾಗಿದೆ.ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ. 40ರಷ್ಟು ಲಂಚ, ಪ್ರಭಾವಿ ರಾಜಕಾರಣಿಗಳ ಮಕ್ಕಳು ಮತ್ತು ಹಿರಿಯ ಅಧಿಕಾರಿಗಳು ಭಾಗಿಯಾಗಿರುವರೆನ್ನಲಾದ ಬಿಟ್ ಕಾಯಿನ್ ಹಗರಣಗಳನ್ನು ಪ್ರಸ್ತಾಪಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿರುವ ಪ್ರತಿಪಕ್ಷಗಳ ದಾಳಿಯ ಭಯದಿಂದ ದಿಗಿಲುಗೊಂಡ ಸರಕಾರ ಮತಾಂತರ ಮಸೂದೆ ಮಂಡಿಸಿ ಚರ್ಚೆಯ ದಿಕ್ಕನ್ನೇ ಬದಲಿಸಲು ಮಸಲತ್ತು ನಡೆಸಿದಂತೆ ಕಾಣುತ್ತದೆ.

ರಾಜ್ಯ ಸರಕಾರ ಇಷ್ಟು ತರಾತುರಿಯಿಂದ ಮಸೂದೆ ಮಂಡಿಸುವ ಮುನ್ನ ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಈ ವರೆಗೆ ಎಷ್ಟು ಜನ ಮತಾಂತರ ಆಗಿದ್ದಾರೆ? ಯಾವಾಗ ಆಗಿದ್ದಾರೆ?. ಕ್ರೈಸ್ತರು ಹಾಗೂ ಮುಸ್ಲಿಮರ ಸಂಖ್ಯೆ ನೀವು ಅಧಿಕಾರಕ್ಕೆ ಬರುವ ಮುನ್ನ ಎಷ್ಟಿತ್ತು? ಈಗ ಎಷ್ಟು ಹೆಚ್ಚಾಗಿದೆ! ಈ ವಿವರಗಳನ್ನು ಮುಖ್ಯ ಮಂತ್ರಿಗಳು ಸದನದ ಮುಂದೆ ಲಿಖಿತವಾಗಿ ಮಾಡಿಸಬೇಕು. ಈ ವಿವರಗಳನ್ನು ನೀಡದೆ ಒಂದು ಶಾಸನವನ್ನು ಅಂತೆ ಕಂತೆಗಳ ಆಧಾರದಲ್ಲಿ ತರಲು ಆಗುವುದಿಲ್ಲ. ಅಷ್ಟೇ ಅಲ್ಲದೆ ಸರಕಾರ ತರಲಿರುವ ಕಾನೂನು ಸಂವಿಧಾನಾತ್ಮಕವೇ ಎಂಬುದನ್ನು ಸರಕಾರ ಕಾನೂನು ಪರಿಣಿತರನ್ನು ವಿಚಾರಿಸುವುದು ಸೂಕ್ತ. ಪ್ರತಿಪಕ್ಷಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಇಂತಹ ಕಸರತ್ತು ನಡೆಸುವುದರಲ್ಲಿ ಅರ್ಥವಿಲ್ಲ.ಸರಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ಕೈಗೊಳ್ಳುವ ಕಾಮಗಾರಿಗಳ ಗುತ್ತಿಗೆ ನಡೆಯುವ ಟೆಂಡರ್ ಸಮಯದಲ್ಲಿ ಮತ್ತು ಬಿಲ್ ಪಾವತಿ ವೇಳೆಯಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರ ಸಂಘವು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ರಾಜ್ಯದಲ್ಲಿ ಕಾಮಗಾರಿಗಳಿಗಾಗಿ ಸರಕಾರದಿಂದ ಬಿಡುಗಡೆಯಾಗುವ ಹಣದಲ್ಲಿ ಶೇಕಡಾ 40ರಷ್ಟು ಲಂಚದ ರೂಪದಲ್ಲಿ ಸರಕಾರಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಕಿಸೆಯನ್ನು ಸೇರುತ್ತಿದೆ ಎಂದು ಗುತ್ತಿಗೆದಾರರು ಮಾಡಿದ ಆರೋಪಕ್ಕೆ ಉತ್ತರ ನೀಡದೆ ಸರಕಾರ ಪಲಾಯನ ಮಾರ್ಗವನ್ನು ಅನುಸರಿಸಬಾರದು.

ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಮಾತ್ರವಲ್ಲ ರಾಜ್ಯಪಾಲರು, ಮುಖ್ಯಮಂತ್ರಿಯವರಿಗೂ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ. ರಾಜ್ಯದ ಕೆಲವು ಮಂತ್ರಿಗಳು ಲಂಚದ ಹಣ ತಲುಪಿದ ಬಳಿಕವೇ ಟೆಂಡರ್‌ಗೆ ಅನುಮತಿ ನೀಡುತ್ತಾರೆ ಎಂಬ ಗುತ್ತಿಗೆದಾರರ ಆರೋಪವನ್ನು ತಳ್ಳಿ ಹಾಕುವಂತಿಲ್ಲ. ಯಾವುದೇ ಕಾಮಗಾರಿ ಅನುಷ್ಠಾನ ಸಂದರ್ಭದಲ್ಲಿ ನೇರ ಜವಾಬ್ದಾರಿ ಹೊಂದಿರುವ ಕಿರಿಯ ಇಂಜಿನಿಯರ್‌ಗಳಿಂದ ಹಿಡಿದು ಆಯಾ ಇಲಾಖೆಯ ಹೊಣೆ ಹೊತ್ತಿರುವ ಮಂತ್ರಿಗಳವರೆಗೆ ಎಲ್ಲರೂ ಲಂಚಕ್ಕಾಗಿ ಕಿರಿ ಕಿರಿ ಮಾಡುತ್ತಾರೆಂಬ ಆರೋಪದ ಬಗ್ಗೆ ಸರಕಾರ ಈ ವರೆಗೆ ಸ್ಪಷ್ಟವಾದ ಉತ್ತರ ನೀಡಿಲ್ಲ. ಸರಕಾರಿ ಕಾಮಗಾರಿಗಳಲ್ಲಿ ಈ ರೀತಿಯ ಲಂಚದ ಹಾವಳಿ ಇದ್ದರೆ ಗುಣಮಟ್ಟದ ಕಾಮಗಾರಿ ಸಾಧ್ಯವಾಗುವುದಿಲ್ಲ. ಸರಕಾರಿ ಕಾಮಗಾರಿಗಳಲ್ಲಿ ಲಂಚದ ಆರೋಪ ಹೊಸದಲ್ಲ. ಆದರೆ ಈಗ ಗುತ್ತಿಗೆದಾರರ ಸಂಘ ಮಾಡಿರುವ ಆರೋಪ ಅತ್ಯಂತ ಗಂಭೀರವಾಗಿರುವುದರಿಂದ ಸದನದಲ್ಲಿ ಸರಕಾರ ಈ ಕುರಿತು ಸ್ಪಷ್ಟೀಕರಣ ನೀಡಬೇಕು. ಇಲ್ಲವಾದರೆ ಸಾರ್ವಜನಿಕರಲ್ಲಿ ಮೂಡಿರುವ ಸಂದೇಹ ನಿವಾರಣೆಯಾಗುವುದಿಲ್ಲ.

ಕಾಮಗಾರಿಗಳ ಗುತ್ತಿಗೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯನ್ನು ತರಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಪ್ರಭಾವಿಗಳ ಹಸ್ತಕ್ಷೇಪವನ್ನು ತಡೆಯಲು ಇ-ಸಂಗ್ರಹಣಾ ವ್ಯವಸ್ಥೆ ರೂಪಿಸಲಾಗಿದೆ. ಆದರೂ ಕಾಮಗಾರಿಗಳಲ್ಲಿ ನಡೆಯುವ ಹಗರಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹ್ಯಾಕರ್ ಕೃಷ್ಣ ಎಂಬಾತ ಹಲವಾರು ಸಲ ಇ-ಸಂಗ್ರಹಣಾ ಪೋರ್ಟಲ್‌ನ್ನು ಹ್ಯಾಕ್ ಮಾಡಿರುವುದು ಸಂದೇಹಕ್ಕೆ ಕಾರಣವಾಗಿದೆ. ಈ ಬಗ್ಗೆ ಸರಕಾರ ಸದನದಲ್ಲಿ ಉತ್ತರ ಕೊಡದೆ ತಪ್ಪಿಸಿಕೊಳ್ಳುವಂತಿಲ್ಲ.

 ಈ ಹಗರಣಗಳ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ. ಆದರೆ ಈ ಬಗ್ಗೆ ಸಮಗ್ರವಾದ ನ್ಯಾಯಾಂಗ ತನಿಖೆಯ ಅಗತ್ಯವಿದೆ. ಈ ಕುರಿತು ಮುಖ್ಯಮಂತ್ರಿಗಳು ಸದನದಲ್ಲಿ ಸವಿಸ್ತಾರವಾದ ಹೇಳಿಕೆ ನೀಡಬೇಕೆಂದು ರಾಜ್ಯದ ಜನ ಬಯಸುತ್ತಾರೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ ಮಾತು ಉಳಿಸಿಕೊಳ್ಳಬೇಕಾಗಿದೆ.

ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದ ಅವಧಿ ಹತ್ತು ದಿನ. ಹತ್ತು ದಿನಗಳ ಈ ಅಧಿವೇಶನದ ಕಲಾಪ ವಾಗ್ವಾದ, ಕಲಹ, ಸಭಾತ್ಯಾಗದಲ್ಲಿ ವ್ಯರ್ಥವಾಗಬಾರದು.ರಾಜಕೀಯ ಕಾರಣಗಳಿಗಾಗಿ ಮಂಡಿಸಬೇಕೆಂದಿರುವ ಮತಾಂತರ ನಿಷೇಧ ಮಸೂದೆಯನ್ನು ಸರಕಾರ ಕೈ ಬಿಡಬೇಕು. ಈ ಮಸೂದೆಯಿಂದ ಕ್ರೈಸ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. ಆದರೆ ಅತ್ಯಂತ ಅಲ್ಪಸಂಖ್ಯಾತ ರಾದ ಕ್ರೈಸ್ತರ ಮೇಲೆ ಕೋಮುವಾದಿ ಸಂಘಟನೆಗಳ ಪುಂಡರು ಅಲ್ಲಲ್ಲಿ ಮತಾಂತರದ ನೆಪ ಮುಂದೆ ಮಾಡಿ ದಾಳಿ ನಡೆಸಿದ್ದಾರೆ. ಬೆಳಗಾವಿಯಲ್ಲಿ ಕ್ರೈಸ್ತ ಧರ್ಮ ಗುರುವೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕೆಲವು ಕಡೆ ಚರ್ಚ್‌ಗಳಲ್ಲಿ ಪ್ರಾರ್ಥನೆಗೆ ಅಡ್ಡಿಯುಂಟು ಮಾಡುವ ಘಟನೆಗಳೂ ನಡೆದಿವೆ. ಸಂಘಪರಿವಾರದ ದೃಷ್ಟಿಯಿಂದ ಮತಾಂತರ ಎಂಬುದು ಅಸಹನೀಯವಾಗಿರಬಹುದು. ಆದರೆ ಸಂವಿಧಾನದ ಪ್ರಕಾರ ಅದು ಅಪರಾಧವಲ್ಲ. ಭಾರತದ ನಾಗರಿಕ ತನಗೆ ಇಷ್ಟ ಬಂದ ಧರ್ಮವನ್ನು ಸೇರುವ ಅವಕಾಶ ಕಾನೂನಿನಲ್ಲಿದೆ. ಬಡತನವನ್ನು ಬಳಸಿಕೊಂಡು ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ ಎಂಬ ಕೋಮುವಾದಿ ಸಂಘಟನೆಗಳ ಆರೋಪದಲ್ಲಿ ಹುರುಳಿಲ್ಲ.

ಸಾಕ್ಷ್ಯಾಧಾರವಿಲ್ಲದೆ ಯಾರದೋ ಆರೋಪದ ಮೇಲೆ ಸರಕಾರ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾದ ಕಾನೂನು ತರುವ ವ್ಯರ್ಥ ಕಸರತ್ತು ಮಾಡಬಾರದು. ಇದರಿಂದ ಬಿಜೆಪಿಗೆ ತಾತ್ಕಾಲಿಕವಾಗಿ ರಾಜಕೀಯ ಲಾಭ ಸಿಗಬಹುದು. ಆದರೆ ಭಾರತದ ಏಕತೆ ಮತ್ತು ಸಮಗ್ರತೆ ದೃಷ್ಟಿಯಿಂದ ಇದು ಸರಿಯಲ್ಲ. ಈಗಲೂ ಕಾಲ ಮಿಂಚಿಲ್ಲ. ಸರಕಾರ ಮಂಡಿಸಬೇಕೆಂದಿರುವ ಮತಾಂತರ ನಿಷೇಧ ಮಸೂದೆಯನ್ನು ವಾಪಸ್ ಪಡೆಯಬೇಕು. ಬೆಳಗಾವಿಯ ವಿಧಾನ ಮಂಡಲ ಅಧಿವೇಶನದಲ್ಲಿ ಕರ್ನಾಟಕದ ವಿಶೇಷವಾಗಿ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ರೂಪಿಸಲು ಮುಂದಾಗಲಿ. ಇನ್ನು ಮುಖ್ಯವಾದ ಅಂಶವೆಂದರೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ವರ್ಷಕ್ಕೊಮ್ಮೆ ವಿಧಾನ ಮಂಡಲದ ಉಭಯ ಸದನಗಳ ಕಲಾಪ ನಡೆಸುವುದನ್ನು ಬಿಟ್ಟರೆ ಬೇರೆ ಯಾವುದಕ್ಕೂ ಇದನ್ನು ಸದುಪಯೋಗ ಮಾಡಿಕೊಳ್ಳದೆ ಹಾಳುಗೆಡವಲಾಗಿದೆ. ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಇರುವ ಏಳು ಇಲಾಖೆಗಳ ಕಚೇರಿಗಳನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರ ಮಾಡಲು ಹೊರಡಿಸಿದ ಆದೇಶವನ್ನು ಈ ಸಲವಾದರೂ ಜಾರಿಗೊಳಿಸಬೇಕಾಗಿದೆ. ಬಸವರಾಜ ಬೊಮ್ಮಾಯಿಯವರು ತಮಗೆ ದೊರೆತ ಅನಿರೀಕ್ಷಿತ ಅವಕಾಶ ಮತ್ತು ಅಧಿಕಾರವನ್ನು ಜನೋಪಯೋಗಿ ಕಾರ್ಯಗಳಿಗಾಗಿ ಬಳಸಿಕೊಳ್ಳಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)