varthabharthi


ವೈವಿಧ್ಯ

ಅಗಲಿದ ಚಳವಳಿಯ ಸಂಗಾತಿಯ ನೆನಪಿನಲ್ಲಿ

ವಾರ್ತಾ ಭಾರತಿ : 14 Dec, 2021
ಡಾ.ಎಂ.ವೆಂಕಟಸ್ವಾಮಿ

ಡಿಸೆಂಬರ್ 4, 2021ರ ರಾತ್ರಿ ಫೇಸ್ಬುಕ್ ನೋಡುತ್ತಿದ್ದೆ, ಪಿಚ್ಚಳ್ಳಿ ಶ್ರೀನಿವಾಸ್, ಹೀಗೊಂದು ಪೋಸ್ಟ್ ಮಾಡಿದ್ದ. ‘ಕೋಲಾರ ಜಿಲ್ಲೆಯ ದಲಿತ ಚಳವಳಿಯ ಸಂಗಾತಿ ಒ.ಕೆ. ಹೇರ್‌ಸ್ಟೈಲ್ ಬಾಬು ಇನ್ನಿಲ್ಲ ಎನ್ನುವುದು ನಂಬಲಾಗುತ್ತಿಲ್ಲ. ನನ್ನ ಮಾರ್ಗದರ್ಶಕ, ಅಣ್ಣನಂತಿದ್ದ ಒಡನಾಡಿಗೆ ಭಾವಪೂರ್ಣ ಸಾಷ್ಟಾಂಗ ನಮನಗಳು. ವರ್ಷಗಳ ಗೆಳೆತನದ ಒಂದು ಕೊಂಡಿ ಕಳಚಿಕೊಂಡಂತೆ ತುಸು ಭಯ ತುಂಬಿಕೊಂಡು ಹಾಗೇ ಮಲಗಿಕೊಂಡೆ.

...ಅದು 1970-71. ಕೆಜಿಎಫ್‌ಗೆ 10 ಕಿ.ಮೀ. ದೂರದ ನಮ್ಮ ಹಳ್ಳಿ ಯರ್ರಗೊಂಡ ಬ್ಯಾಟರಾಯನಹಳ್ಳಿಯಿಂದ ನನ್ನ ತಂದೆ ನನ್ನನ್ನು ಕರೆದುಕೊಂಡುಬಂದು ಉರಿಗಾಂಪೇಟೆಯಲ್ಲಿದ್ದ ನನ್ನ ಮಾವನ ಮನೆಯಲ್ಲಿ ಬಿಟ್ಟುಹೋಗಿ ದ್ದರು. ನನ್ನ ಸ್ವಂತ ಅತ್ತೆಯನ್ನು ಮದುವೆ ಮಾಡಿಕೊಂಡಿದ್ದ ಪಿ.ನಾಗಭೂಷಣಂ ರಾಬರ್ಟ್‌ಸನ್‌ಪೇಟೆಯ ಎಂ.ಜಿ. ಮಾರುಕಟ್ಟೆಯಲ್ಲಿ (ಬ್ರಿಟಷರು ಕಟ್ಟಿದ) ಬಿಲ್ ಕಲೆಕ್ಟರ್ ಆಗಿದ್ದರು. ಅವರ ಎರಡನೇ ತಮ್ಮ ಪಿ.ಕೃಷ್ಣಪ್ಪನನ್ನನ್ನು ಕರೆದುಕೊಂಡೋಗಿ ರಾಬರ್ಟ್‌ಸನ್‌ಪೇಟೆಯ ಮುನಿಸಿಪಲ್ ಬಾಯ್ಸಿ ಹೈಸ್ಕೂಲ್‌ನಲ್ಲಿ 8ನೇ ತರಗತಿಗೆ ಸೇರಿಸಿದ್ದರು. ಗ್ರಾನೈಟ್ ಕಲ್ಲುಕಟ್ಟಡದ ಶಾಲೆಯಲ್ಲಿ 8ನೇ ತರಗತಿಯ 7 ಕೋಣೆಗಳಿದ್ದು ಅದರಲ್ಲಿ ಕನ್ನಡ ಎರಡನೇ ಭಾಷೆಯ 2, ಉರ್ದು ಭಾಷೆಯ 1 ಮತ್ತು ತಮಿಳು ಭಾಷೆಯ 4 ತರಗತಿಗಳಿದ್ದವು. ಅದೇ ರೀತಿ 9 ಮತ್ತು 10ನೇ ತರಗತಿಗಳ ಕೋಣೆಗಳೂ ಇದ್ದವು.

ಕನ್ನಡ ಭಾಷೆಯ ಎರಡು ತರಗತಿಗಳಲ್ಲಿ ಕನ್ನಡ ಮತ್ತು ತೆಲುಗು ಮಾತನಾಡುವ ವಿದ್ಯಾರ್ಥಿಗಳು ಮಾತ್ರ ಇದ್ದೆವು. ನಾನು, ಕೆಲವು ಬ್ರಾಹ್ಮಣ ಹುಡುಗರ ಜೊತೆಗೆ ಮುಂದಿನ ಎರಡು ಅಥವಾ ಮೂರನೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆ. ಬಿಜಿಎಸ್ ಎಂಬ ಕೆಂಪನೆ ಶೂಟು ಬೂಟು ಟೈದಾರಿ ಹಿಂದಿ ಮೇಷ್ಟ್ರು ‘‘ಬೀಫ್ ಯಾರ್ಯಾರು ತಿನ್ನುತ್ತೀರ ಕೈಎತ್ತಿ’’ ಎಂದು ಕೇಳಿ ನಿಂತುಕೊಳ್ಳುತ್ತಿದ್ದವರನ್ನು ಕೋಲಿನಲ್ಲಿ ನಾಲ್ಕಾರು ಬಾರಿಸುತ್ತಿದ್ದರು. ಅದು ಒಂದೆರಡು ಸಲ ಆದ ಮೇಲೆ ಎಷ್ಟೇ ಕೇಳಿದರೂ ಯಾರೂ ಕೈ ಎತ್ತಲಿಲ್ಲ. ಅಂತಹ ಕೆಲವು ವಿದ್ಯಾರ್ಥಿಗಳು ಅವರ ತರಗತಿಗೆ ಚಕ್ಕರ್ ಹಾಕಿಬಿಡುತ್ತಿದ್ದರು. ಸಣ್ಣಗೆ ಉದ್ದನೆ ಸಣಕಲು ಶ್ವೇತಉಡುಗೆ, ಪಿಳ್ಳೆಜುಟ್ಟಿನ ಕನ್ನಡ ಮೇಷ್ಟ್ರು ನನಗೆ ವಿಚಿತ್ರವಾಗಿ ಕಾಣಿಸುತ್ತಿದ್ದರು. ಕೊಮ್ಮರ್ ಕಟ್ ಎಂಬ ಅಡ್ಡ ಹೆಸರಿನ ಬೋಳುತಲೆಯ ಹೆಡ್ ಮಾಸ್ಟರ್ ಶೆಟ್ಟಿ ಇದ್ದರು. ಎಂ.ಜಿ. ಮಾರುಕಟ್ಟೆಯ ಮುಂದೆ ಸೇಠ್ ಮಾಲಕತ್ವದ ಎರಡಂತಸ್ತಿನ ಸಂಕೀರ್ಣದಲ್ಲಿ ಕೆಳಗಡೆ ಸೆಲೂನ್ ಅಂಗಡಿ ಇಟ್ಟುಕೊಂಡಿದ್ದ ವೆಂಕಟರಾಮಯ್ಯನ ಇಬ್ಬರು ಮಕ್ಕಳು ವಿ.ರವಿಂದ್ರನಾಥ್ (ರವಿ) ಮತ್ತು ವಿ.ಪ್ರಸಾದ್‌ಬಾಬು (ಬಾಬು) ನಮ್ಮ ಶಾಲೆಯಲ್ಲಿ ಓದುತ್ತಿದ್ದು ಬಾಬು ನನ್ನ ತರಗತಿಯಲ್ಲಿದ್ದನು.

ಈ ಬಾಬು ಯಾವಾಗ ಬರುತ್ತಿದ್ದ ಯಾವಾಗ ಹೋಗುತ್ತಿದ್ದ ಯಾವ ಬೆಂಚಿನಲ್ಲಿ ಕೂರುತ್ತಿದ್ದ ಎಂಬುದು ನನಗೆ ಗೊತ್ತಾಗುತ್ತಿರಲಿಲ್ಲ. ಆಗಾಗ ತರಗತಿಯ ಹೊರಗೆ ತಮಿಳು ಮತ್ತು ಮುಸ್ಲಿಮ್ ಹುಡುಗರ ಜೊತೆಗೆ ಕಾಣಿಸಿಕೊಳ್ಳುತ್ತಿದ್ದ. ಅದೇಗೆ ಬಾಬು ನನಗೆ ಹತ್ತಿರವಾದನೋ ಜ್ಞಾಪಕಕ್ಕೆ ಬರುತ್ತಿಲ್ಲ. ನಾನು 10ನೇ ತರಗತಿಗೆ ಬರುವಷ್ಟರಲ್ಲಿ ಸಾಯಂಕಾಲ ಆಗಾಗ ಅವರ ಸೆಲೂನ್‌ಗೆ ಹೋಗಿ ಕುಳಿತುಕೊಳ್ಳುತ್ತಿದ್ದೆ. ಅಂಗಡಿಯ ಗೋಡೆ ಮೇಲೆ ಅವರ ತಾತನ ಒಂದು ಗಡಸು ಮುಖದ ಫೋಟೊ ನೇತಾಡುತ್ತಿತ್ತು. ಬಾಬು ತಂದೆ ವೆಂಕಟರಾಮಯ್ಯ ಸಣಕಲು ವ್ಯಕ್ತಿ. ನಾನು ಅವರು ನಕ್ಕಿದ್ದಾಗಲಿ, ಮಾತನಾಡಿದ್ದಾಗಲಿ ನೋಡಲೇ ಇಲ್ಲ. ಅವರು ಅಂಗಡಿಯಲ್ಲಿದ್ದಾಗ ಗಿರಾಕಿಗಳಲ್ಲದೆ ಬೇರೆ ಯಾರೇ ಆಗಲಿ ಸುಮ್ಮನೆ ಬಂದು ಕುಳಿತುಕೊಳ್ಳುವುದೆಂದರೆ ತುಂಬಾ ಕಷ್ಟದ ಕೆಲಸವಾಗಿತ್ತು. ಅದೂ ನನ್ನಂತಹ ವಿದ್ಯಾರ್ಥಿಗಳು. ಯಾಕೆಂದರೆ ವೆಂಕಟರಾಮಯ್ಯ ಗಿರಾಕಿಗಳಿಗೆ ಕಟ್ಟಿಂಗ್/ಸೇವಿಂಗ್ ಮಾಡುತ್ತಾ ಮುಖವನ್ನು ಬಿಗಿಸಿಕೊಂಡು ಸುಮ್ಮನೆ ಕುಳಿತಿದ್ದವರನ್ನು ಕಣ್ಣುಗಳಲ್ಲೇ ಯಾಕೆ ಬಂದೆ ಎನ್ನುವಂತೆ ತಿವಿಯುತ್ತಿದ್ದರು. ಬಾಬು, ರವಿ ತುಟಿಕ್ ಪಿಟಿಕ್ ಎನ್ನದೇ ಗಿರಾಕಿಗಳಿಗೆ ಕಟ್ಟಿಂಗ್/ಸೇವಿಂಗ್ ಮಾಡುತ್ತಿದ್ದರು. ತೀರಾ ಮುಂಗೋಪಿ ವೆಂಕಟರಾಮಯ್ಯ ಇಬ್ಬರು ಮಕ್ಕಳನ್ನೂ ಯದ್ವಾತದ್ವಾ ಬಯ್ಯುತ್ತಿದ್ದರು. ವಿಶೇಷವೆಂದರೆ ಅವರ ಅಂಗಡಿಯಲ್ಲಿ ಕನ್ನಡ, ತಮಿಳು ಮತ್ತು ಇಂಗ್ಲಿಷ್ ಪತ್ರಿಕೆಗಳು ಬರುತ್ತಿದ್ದವು. ಕನ್ನಡ ಪತ್ರಿಕೆಗಳನ್ನು ಒಂದೂ ಬಿಡದೆ ಓದುತ್ತಿದ್ದೆ. ಅವರೆಲ್ಲರೂ ಶಿಫ್ಟ್‌ನಲ್ಲಿ ಮನೆಗೆ ಹೋಗಿ ಊಟ ಮಾಡಿ ಬರುತ್ತಿದ್ದರು. ವೆಂಕಟರಾಮಯ್ಯ ಅಂಗಡಿಯಿಂದ ಹೊರಕ್ಕೆ ಹೋಗಿದ್ದೆ ಬಾಬು ಗಲ್ಲಾಪೆಟ್ಟಿಗೆ ಎಳೆದು ಒಂದೊ ಎರಡೊ ಕಾಯಿನ್‌ಗಳನ್ನು ಜೇಬಿಗೆ ಹಾಕಿಕೊಂಡು ‘ರಾ ಮಚ್ಚಾ’ ಎನ್ನುತ್ತ ನನ್ನನ್ನು ಕರೆದುಕೊಂಡು ಹೊರಕ್ಕೆ ಬರುತ್ತಿದ್ದ. ರವಿ, ‘‘ಅಲ್ಲೇ ಇದ್ದುಬಿಡಬೇಡ ಬೇಗನೆ ಬಾ’’ ಎನ್ನುತ್ತಿದ್ದ. ಹತ್ತಿರದ ಟೀ ಅಂಗಡಿಯಲ್ಲಿ ಬೈಟು ಟೀ ಹೇಳಿ ಬಾಬು, ನಾನು ಮಾತನಾಡುತ್ತ ನಿಂತುಕೊಳ್ಳುತ್ತಿದ್ದೆವು. ಇದು ನಾನು ಕೆಜಿಎಫ್‌ನಲ್ಲಿ ಬಿ.ಎಸ್ಸಿ ಮುಗಿಯುವವರೆಗೂ ನಡೆದಿತ್ತು. ಕೆನರಾ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕೆ.ರಾಮಯ್ಯ ನನಗೆ ಪರಿಚಯವಾಗಿದ್ದು ಇದೇ ಒ.ಕೆ. ಸಲೂನ್‌ನಲ್ಲಿ. ಆಗ ಕೋಲಾರ ಜಿಲ್ಲೆಯಲ್ಲಿ ಡಿಎಸ್‌ಎಸ್ ಗರಿಗೆದರುತ್ತಿದ್ದ ಕಾಲ. ಕೆಜಿಎಫ್‌ನಲ್ಲಿ ಡಿಎಸ್‌ಎಸ್ ಪ್ರಾರಂಭವಾಗಿದ್ದು ರಾಮಯ್ಯನಿಂದಲೇ ಎನ್ನಬಹುದು. ಬರುಬರುತ್ತಾ ಒ.ಕೆ. ಸೆಲೂನ್ ಡಿಎಸ್‌ಎಸ್, ಕಮ್ಯುನಿಸ್ಟ್, ರೈತಸಂಘ ಮತ್ತು ಬಂಡಾಯ ಸಾಹಿತ್ಯ ಗೆಳೆಯರಿಗೆ ಒಂದು ಗುರುತಿನ ಸ್ಥಳವಾಗಿ ಮಾರ್ಪಟ್ಟಿತ್ತು. ಸಿದ್ದಲಿಂಗಯ್ಯ, ದೇವನೂರು, ಬರಗೂರು, ಡಿ.ಆರ್.ನಾಗರಾಜ್ ಹೀಗೆ ಅನೇಕರು ಅಲ್ಲಿಗೆ ಬರುತ್ತಿದ್ದರು. ಇನ್ನು ಸ್ಥಳೀಯ ಯುವಕರಾದ ದಿ.ರಾಮಚಂದ್ರ, ದಿ.ರಂಗನಾಥ್. ದಿ.ಮಹೇಂದ್ರ ಇನ್ನಿತರರು ಅಲ್ಲಿಗೆ ಬರುತ್ತಿದ್ದರು. ಸೆಲೂನ್‌ಗಳೆಂದರೆ ಅಲ್ಲಿ ಎಲ್ಲಾ ರೀತಿಯ ಜನರು ಮತ್ತು ನಗರದ ಎಲ್ಲಾ ವಿಷಯಗಳು ವಿನಿಮಯವಾಗುವ ಕೇಂದ್ರಗಳಾಗಿರುತ್ತವೆ. ಸೆಲೂನ್‌ಗೆ ಪೊಲೀಸರು, ಸರಕಾರಿ ಅಧಿಕಾರಿಗಳು, ವ್ಯಾಪಾರಿಗಳು ಮತ್ತು ಸಾರ್ವಜನಿಕರು ಬರುತ್ತಿದ್ದರು. ಹಳ್ಳಿಗಳ ಜನರು ಒಮ್ಮೆ ಬಂದರೆ ಮತ್ತೆ ಬರುತ್ತಿರಲಿಲ್ಲ. ಕಾರಣ ಚಾರ್ಜಸ್ ಸ್ವಲ್ಪದುಬಾರಿಯಾಗಿತ್ತು. ಅದಕ್ಕೆ ಕಾರಣ ಅಂಗಡಿ ಇದ್ದ ಸ್ಥಳ ಮತ್ತು ಬಾಡಿಗೆ. ಈ ಅಂಗಡಿ ಈಗಲೂ ಇದ್ದು ಅದನ್ನು ರವಿಯ ಮಗ ನೋಡಿಕೊಳ್ಳುತ್ತಿದ್ದು ಕೊರೋನದಿಂದ ತತ್ತರಿಸಿಹೋಗಿದೆ. ಒ.ಕೆ. ಸಲೂನ್ ಮಂಗಳವಾರ ರಜಾ ಇರುವುದರಿಂದ ಆ ದಿನ ತಪ್ಪಿಸಿಕೊಳ್ಳದೆ ಶಾಲೆಗೆ ಹಾಜರಾಗುತ್ತಿದ್ದ ಬಾಬು ನನ್ನನ್ನು ಮ್ಯಾಟಿನಿ ಸಿನೆಮಾಗೆ ಕರೆದುಕೊಂಡು ಹೋಗುತ್ತಿದ್ದ. ಅದೇ ರೀತಿ ನನ್ನ ತರಗತಿಯಲ್ಲಿ ನರಸಿಂಹಮೂರ್ತಿ ಎಂಬ ಬ್ರಾಹ್ಮಣ ಹುಡುಗನಿದ್ದು ಅವನು ಸಾಯಂಕಾಲವಾಗಿದ್ದೆ ರಾಬರ್ಟ್‌ಸನ್‌ಪೇಟೆ ಗೀತಾ ರಸ್ತೆಯ ಮೂಲೆಯಲ್ಲಿದ್ದ ಒಂದು ಸಣ್ಣ ಅಂಗಡಿ ಮುಂದೆ ಸ್ಟೌವ್ ಒತ್ತಿಸಿ ಬೋಂಡಾ, ವಡೆಗಳನ್ನು ಸುಡುತ್ತಿದ್ದ. ನಾನು ಅಲ್ಲಿಗೆ ಹೋದರೆ ಒಂದೋ ಎರಡೋ ಬೋಂಡಾ ವಡೆ ಕೊಟ್ಟು ತಿನ್ನು ಎನ್ನುತ್ತಿದ್ದ. ಅವನ ಮಾವ ಗಣಿಯಲ್ಲಿ ಕೆಲಸ ಮಾಡುತ್ತಿದ್ದು ಅವನು ಯಾಕೊ ಏನೊ ನನ್ನನ್ನು ‘ಬಸವ’ ಎಂದು ಕರೆಯುತ್ತಿದ್ದ. ನರಸಿಂಹಮೂರ್ತಿ ಬೋಂಡಾ ಅಂಗಡಿಯಿಂದ, ಬಾಬು ಸೆಲೂನ್ ಗಲ್ಲಾದಿಂದ, ನಾನು ನನ್ನ ಮಾವನ ಜೇಬಿನಿಂದ ಆಗಾಗ ಚಿಲ್ಲರೆ ಹಣ ಎಗರಿಸಿಕೊಂಡು ಬಂದು ಸಿನೆಮಾಗಳನ್ನು ನೋಡುತ್ತಿದ್ದೆವು. ನಾವು ಮೂವರು ಮತ್ತು ಪ್ರತ್ಯೇಕವಾಗಿ ನಾನು ಶಾಲೆಗೆ ಚಕ್ಕರ್ ಹೊಡೆದು ಅದೆಷ್ಟು ಸಿನೆಮಾಗಳನ್ನು ನೋಡಿದ್ದೇನೋ ಲೆಕ್ಕವಿಲ್ಲ. ತಮಿಳು, ತೆಲುಗು, ಹಿಂದಿ, ಕನ್ನಡ, ಇಂಗ್ಲಿಷ್, ಮಲಯಾಳಂ ಸಿನೆಮಾಗಳನ್ನು ಬಿಡುತ್ತಿರಲಿಲ್ಲ. ಕೆಜಿಎಫ್ ಥಿಯೇಟರ್‌ಗಳಲ್ಲಿ ನೋಡಿದ ಸಿನೆಮಾಗಳು ಮತ್ತು ಮಾತನಾಡಲು ಕಲಿತುಕೊಂಡ ಭಾಷೆಗಳಿಂದ ನಾನಂತೂ ದೇಶ, ವಿದೇಶಗಳ ಓಡಾಟಗಳಲ್ಲಿ ಯಾವುದೇ ಭಾಷೆಗಳ ತೊಂದರೆಯನ್ನೂ ಅನುಭವಿಸಲಿಲ್ಲ. ಹೆಚ್ಚು ಭಾಷೆಗಳು ಬರುವುದರಿಂದ ಹೆಚ್ಚು ಜ್ಞಾನ ಬರುತ್ತದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ರವಿ ಒಂದು ವರ್ಷದ ಹಿಂದೆಯೇ ಕೊರೋನ ಕಾಲದಲ್ಲಿ ತೀರಿಕೊಂಡಿದ್ದ. ಬಾಬು ಮತ್ತು ರವಿಗೆ ಮಕ್ಕಳಾಗಿ, ಮಕ್ಕಳಿಗೆ ಮದುವೆಗಳಾಗಿ ಅವರಿಗೂ ಮಕ್ಕಳಾಗಿವೆ. ವಿಪರ್ಯಾಸವೆಂದರೆ ರವಿ, ಬಾಬು ಇಬ್ಬರೂ ಎಸೆಸೆಲ್ಸಿಯಲ್ಲಿ ನಾಲ್ಕಾರು ಸಲ ಫೇಲಾಗಿ ಅವರಪ್ಪ ನೆಟ್ಟ ಆಲದ ಮರದ ಕತೆಗೆ ಸೀಮಿತಗೊಂಡಿದ್ದರು. ಕೆಲವು ದಿನಗಳಾದ ಮೇಲೆ ವೆಂಕಟರಾಮಯ್ಯ ಸತ್ತುಹೋಗಿ ಅವರ ಫೋಟೋ ಗೋಡೆಯ ಮೇಲೆ ನೇತಾಡುತ್ತಿತ್ತು. ಮುಂದೆ ರವಿ ಮತ್ತು ಬಾಬುಗೆ ತಲಾ ಒಂದು ಗಂಡು ಮಕ್ಕಳಾಗಿ ಅವರೂ ಕೂಡ ಹೆಚ್ಚು ಓದಲಾಗದೆ ಅದೇ ಸೆಲೂನ್ ಕೆಲಸಕ್ಕೆ ಒಗ್ಗಿಕೊಳ್ಳಬೇಕಾಯಿತು. ಬಾಬು, ರವಿ ಒಂದು ರೀತಿಯಲ್ಲಿ ಸಾಧಾರಣ ವ್ಯಕ್ತಿಗಳಾದರೂ ಅಸಾಧಾರಣ ಸಾಮಾಜಿಕ ಕಳಿಕಳಿಯನ್ನು ಹೊಂದಿದ್ದರು. ಇಬ್ಬರೂ ಡಿಎಸ್‌ಎಸ್ ಅಲ್ಲದೆ ಬುದ್ಧಿಜೀವಿಗಳು, ಚಿನ್ನದ ಗಣಿಗಳ ಯೂನಿಯನ್ ನಾಯಕರ ಸಂಪರ್ಕವನ್ನು ಹೊಂದಿದ್ದರು. ನನ್ನನ್ನು ಕೊನೆಯವರೆಗೂ ‘ಮಚ್ಚಾ’ ಎಂದು ಕರೆಯುತ್ತಿದ್ದ ಬಾಬು, ಕೆಲವೊಮ್ಮೆ ‘‘ಮಚ್ಚಾ, ನಮ್ಮವರು ಡೋಲು ಬಾರಿಸಿಕೊಂಡು, ಮೇಳ ಊದಿಕೊಂಡೇ ಇದ್ದುಬಿಟ್ಟರು. ಮದುವೆಗಳಲ್ಲಿ ಹೋಗಿ ವಾದ್ಯಗಳನ್ನು ಬಾರಿಸಿ ಬಂದುಬಿಟ್ಟರೆ ಅದೊಂದು ದೊಡ್ಡ ಘನಕಾರ್ಯ ಅಂದುಕೊಂಡುಬಿಟ್ಟಿದ್ದಾರೆ. ಸ್ವಾತಂತ್ರ್ಯ ಬಂದು ಆರೇಳು ದಶಕಗಳಾದರೂ ಇವರನ್ನು ಯಾರೂ ಮನೆಗಳ ಒಳಕ್ಕೆ ಸೇರಿಸುವುದಿಲ್ಲ. ಎಲ್ಲಿಗಾದರೂ ಹೋಗುವಾಗ ನಮ್ಮವರು ಅಡ್ಡಬಂದುಬಿಟ್ಟರೆ, ಅಮಂಗಲ ಅಂತ ಹಿಂದೆ ಸರಿಯುತ್ತಾರೆ. ಅಂಬೇಡ್ಕರ್ ಬಂದು ಮೀಸಲಾತಿ ಕೊಡಿಸಿದರು. ಅಂಬೇಡ್ಕರ್ ಈ ದೇಶದಲ್ಲಿ ಹುಟ್ಟದೆ ಇದ್ದಿದ್ದರೆ ಈ ದೇಶ ಇನ್ನೂ ಹೇಗಿರುತ್ತಿತ್ತೊ ಏನೋ? ನಮ್ಮವರಿಗೆ ಮೀಸಲಾತಿ ಅನ್ನುವುದು ಒಂದಿದೆ, ಅದನ್ನು ಯಾರ ಹತ್ತಿರ ಹೋಗಿ ಕೇಳಬೇಕು? ಹೇಗೆ ಅದನ್ನು ಪಡೆದುಕೊಳ್ಳಬೇಕು, ಒಂದೂ ಗೊತ್ತಿಲ್ಲ’’ ಎನ್ನುತ್ತಿದ್ದ. ಬಾಬು ಮತ್ತು ರವಿ ಅವರ ಸಂಘದ ಮೂಲಕ ಮೀಸಲಾತಿಗೆ ಪ್ರಯತ್ನ ಮಾಡಿ ಸೋತಿದ್ದರು.

ಇದೇ ಸೆಪ್ಟಂಬರ್ 13ನೇ ತಾರೀಕು ನಾನು ಮತ್ತು ಬಾಬು ಕ್ಲಾಸ್‌ಮೇಟ್ ನಾರಾಯಣ (ಬಿಎಸ್‌ಎನ್‌ಎಲ್) ಇಬ್ಬರೂ ಬಾಬು ಮನೆಗೆ ಹೋಗಿ ಎರಡು ಗಂಟೆಗಳ ಕಾಲ ಕುಳಿತುಕೊಂಡು ಹರಟೆ ಹೊಡೆದಿದ್ದೆವು. ಬಾಬು ಯಾವಾಗಲೂ ನನ್ನ ಬಗ್ಗೆ ಹೆಮ್ಮೆಯಿಂದ ಗೆಳೆಯರಲ್ಲಿ ಹೇಳಿಕೊಳ್ಳುತ್ತಿದ್ದ. ಮೂವರು ಟೀ ಕುಡಿದ ಮೇಲೆ, ನಾನು, ನಾರಾಯಣ ಮನೆಯಿಂದ ಹೊರಕ್ಕೆ ಬಂದುಬಿಟ್ಟೆವು. ಬರುವುದಕ್ಕೆ ಮುಂಚೆ ಬಾಬು ತನ್ನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ. ನಾಲ್ಕಾರು ವರ್ಷಗಳಿಂದ ನ್ಯೂರಾಲಜಿಕಲ್ ಸಮಸ್ಯೆಯಿಂದ ಬಳಲುತ್ತಿದ್ದ ಬಾಬುವಿಗೆ ಸರಿಯಾಗಿ ನಡೆದಾಡಲು ಆಗುತ್ತಿರಲಿಲ್ಲ. ಇದು ಅವನನ್ನು ಭೇಟಿಯಾದ ಕೊನೆ ದಿನ. ಇಷ್ಟು ಬೇಗನೆ ಹೋಗಿಬಿಡುತ್ತಾನೆ ಎಂದುಕೊಂಡಿರಲಿಲ್ಲ. ಮರುದಿನ ಬೆಂಗಳೂರಿನಿಂದ ಬಂದ ನಾನು ಮಧ್ಯಾಹ್ನ ಎರಡು ಗಂಟೆಗೆ ಬಾಬು ಮನೆಗೆ ಹೋದೆ. ಬಾಕ್ಸ್ ಒಳಗಿದ್ದ ಬಾಬು ‘ರಾ ಮಚ್ಚಾ’ ಎಂದು ಕರೆಯದೆ ತಣ್ಣಗೆ ಮಲಗಿಕೊಂಡಿದ್ದ. ರಾತ್ರಿಯಿಂದ ಅವನ ಮತ್ತು ನನ್ನ ನಡುವಿನ ಸಂಬಂಧಗಳು ಒಂದೊಂದಾಗಿ ನನ್ನಲ್ಲಿ ಇಣಿಕಿಇಣಿಕಿ ನೋಡುತ್ತಲೇ ಇದ್ದವು. ಬಾಕ್ಸ್ ಮೇಲೆ ಹಾರ ಹಾಕಿ ಒಂದೆರಡು ನಿಮಿಷಗಳು ಅವನ ಮುಖವನ್ನೇ ನೋಡುತ್ತಾ ನಿಂತುಕೊಂಡೆ. ಯಾಕೋ ನನಗೆ ಅಳು ಬರಲೇ ಇಲ್ಲ. ಕಳೆದ ಎರಡು ವರ್ಷಗಳಿಂದ ಈ ಕೆಟ್ಟ ಕೊರೋನದಿಂದ ಅನೇಕ ಆಪ್ತ ಗೆಳೆಯರನ್ನು ಕಳೆದುಕೊಂಡಿರುವ ಮನಸ್ಸು ಮರಗಟ್ಟಿ ಹೋಗಿದ್ದರಿಂದಲೋ ಏನೋ ಗೊತ್ತಾಗಲಿಲ್ಲ. ಆನಂತರ ಎದ್ದು ನಿಧಾನವಾಗಿ ನಡೆದು ಬರುತ್ತಿದ್ದಂತೆ ಬಾಬು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸುಬ್ರಮಣಿ ಎಂಬ ಹುಡುಗ (ಈಗ ಅವನು ತಾತನಾಗಿದ್ದಾನೆ) ಎದುರಿಗೆ ಬರುತ್ತಿದ್ದ. ಕೊರೋನಕ್ಕೆ ಹೆದರಿ ಅವನ ಭುಜವನ್ನು ಕೈಯಿಂದ ತಟ್ಟಿದೆ. ಅವನು ಮಾಸ್ಕ್ ಇದ್ದರೂ ನನ್ನನ್ನು ಗುರುತುಹಿಡಿದು ‘ಅಣ್ಣ’ ಎಂದ. ಸುಬ್ರಮಣಿ, ‘‘ಬಹಳ ಹಿಂದೆ ಬಾಬಣ್ಣನನ್ನು ಪೊಲೀಸರು ಎತ್ತಾಕಿಕೊಂಡು ಹೋಗಿಬಿಟ್ಟಿದ್ದರು. ಎಲ್ಲೆಲ್ಲಿ ಹುಡುಕಿದರೂ ಸಿಗಲಿಲ್ಲ. ಕೊನೆಗೆ ಪೊಲೀಸರೇ ಒಂದು ದಿನ ಬೆಳಗ್ಗೆ ವಾಹನದಲ್ಲಿ ಮನೆಗೆ ತಂದು ಬಿಟ್ಟೋಗಿದ್ದರು. ಆಗ ಚೆನ್ನಾಗಿ ಪಾದಗಳಿಗೆ ಲಾಳ ಕಟ್ಟಿದ್ದರಿಂದ ವಯಸ್ಸಾದ ಮೇಲೆ ನರಗಳ ಪ್ರಾಬ್ಲಮ್ ಆಗಿ ಹೀಗಾಯಿತು’’ ಎಂದ. ಯಾರೋ ರೆಡ್ಡಿಯೊಬ್ಬ ಬಾಬು ಮೇಲೆ ಸುಳ್ಳು ದೂರು ಕೊಟ್ಟಿದ್ದ ಕಾರಣ ಪೊಲೀಸರು ಬಾಬುನನ್ನು ಹಿಡಿದುಕೊಂಡು ಹೋಗಿದ್ದರು ಎಂಬ ವಿಚಾರವನ್ನು ಬಾಬು ನನಗೆ ಅನೇಕ ಸಲ ಹೇಳಿದ್ದ. ಕಳೆದ ನಾಲ್ಕಾರು ವರ್ಷಗಳಿಂದ ನ್ಯೂರಾಲಜಿಕಲ್ ಸಮಸ್ಯೆಯಿಂದ ನರಳುತ್ತಿದ್ದ ಬಾಬುನನ್ನು ನಿಮ್ಹಾನ್ಸ್‌ಗೆ ಕರೆದುಕೊಂಡೋಗಿ ಅಲ್ಲಿ ಅವರು ಒಂದೆರಡು ದಿನ ಟ್ರೀಟ್‌ಮೆಂಟ್ ಮಾಡಿ ಏನೂ ಪ್ರಯೋಜನ ಇಲ್ಲ ಎಂದು ಹಿಂದಕ್ಕೆ ಕಳುಹಿಸಿದರಂತೆ. ಅಲ್ಲಿಂದ ಬಂದು ಕೋಲಾರ್ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಸೇರಿಸಿದ ಮೇಲೆ ಶನಿವಾರ ರಾತ್ರಿ ಬ್ರೇನ್ ಸ್ಟ್ರೋಕ್ ಹೊಡೆದು ಪ್ರಾಣ ಹೋಗಿದೆ. ಕೊನೆಗೆ ಅವನ ಪಾರ್ಥಿವ ಶರೀರದ ಹಿಂದೆಯೇ ಹೋಗಿ ಒಂದು ಹಿಡಿ ಮಣ್ಣಾಕಿ ಬಂದೆ. ಐದು ದಶಕಗಳ ಒಡನಾಟದ ಕೊಂಡಿಯೊಂದು ನನ್ನಿಂದ ಕಳಚಿಕೊಂಡಿದೆ. ಆದರೆ ಅವನ ನೆನಪುಗಳು ಮಾತ್ರ ಸಾಯುವವರೆಗೂ ನನ್ನ ಜೊತೆಗೆ ಹಾಗೇ ಉಳಿದುಕೊಳ್ಳುತ್ತವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)