2024ರ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಎದುರು ನೋಡುತ್ತಿದ್ದೇನೆ: ಮಮತಾ ಬ್ಯಾನರ್ಜಿ
ಕೊಲ್ಕತ್ತಾ: 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದೇಶಾದ್ಯಂತ ಸೋಲು ಅನುಭವಿಸಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಂತೆ ಎಲ್ಲೆಡೆ ಬಿಜೆಪಿ ಪರಾಭವಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಈ ತಿಂಗಳ 19ರಂದು ನಡೆಯುವ ಕೊಲ್ಕತ್ತಾ ಮಹಾನಗರ ಪಾಲಿಕೆ ಚುನಾವಣೆಯ ಸಂಬಂಧ ಫೂಲ್‌ಬಾಗನ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿದ ಬಳಿಕ ತಮ್ಮ ಏಕೈಕ ಗುರಿ ಎಂದರೆ ಉದ್ಯಮಗಳನ್ನು ತರುವುದು ಮತ್ತು ಉದ್ಯೋಗ ಸೃಷ್ಟಿ ಎಂದು ಸ್ಪಷ್ಟಪಡಿಸಿದರು.
"ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ರಾಜ್ಯದಲ್ಲಿ ಅನಾವರಣಗೊಳಿಸಿದ ಪ್ರಚಾರವನ್ನು ನಾವು ನೋಡಿದ್ದೇವೆ. ಎಲ್ಲರೂ ಆ ಬಗ್ಗೆ ಭೀತಿ ಹೊಂದಿದ್ದರು. ಆದರೆ ರಾಜ್ಯದ ಜನತೆ ಅವರನ್ನು ಸೋಲಿಸಿದರು. ಬಂಗಾಲ ಕೋಮುಸಾಮರಸ್ಯದ ತಾಣ. ಬಂಗಾಲ ಇಂದು ಏನು ಯೋಚಿಸುತ್ತದೆಯೋ ಅದನ್ನು ಭಾರತ ನಾಳೆ ಯೋಚಿಸುತ್ತದೆ. ನಾವು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಏನಾಯಿತೋ ಅದೇ ಲೋಕಸಭಾ ಚುನಾವಣೆಯಲ್ಲೂ ಆಗಲಿದೆ" ಎಂದು ಬಣ್ಣಿಸಿದರು.
ಎರಡು ದಿನಗಳ ರಾಜಕೀಯ ಪ್ರವಾಸದ ಬಳಿಕ ಗೋವಾದಿಂದ ಮಂಗಳವಾರ ಆಗಮಿಸಿದ ಬಳಿಕ ಮೊದಲ ರ್ಯಾಲಿಯಲ್ಲಿ ಮಾತನಾಡಿದ ಅವರು, "2024ರ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ನಾನು ಎದುರು ನೋಡುತ್ತಿದ್ದೇನೆ. ಇದು ಮತ್ತೆ "ಖೇಲಾ ಹೋಬ್" ಆಗಿರುತ್ತದೆ ಎಂದು ಬಣ್ಣಿಸಿದರು.
ಕಳೆದ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಟಿಎಂಸಿಯ ಖೇಲಾ ಹೋಬ್ ಘೋಷಣೆ ಅತ್ಯಂತ ಜನಪ್ರಿಯವಾಗಿತ್ತು. ನಾವು ಗೋವಾದಲ್ಲಿ ಹೊಸ ಘಟಕ ತೆರೆದಿದ್ದೇವೆ. ತ್ರಿಪುರಾದಲ್ಲೂ ನಾವು ವಿಸ್ತರಿಸಿದ್ದೇವೆ. ತ್ರಿಪುರಾದಲ್ಲಿ ನಾವು ಹಲವು ದೌರ್ಜನ್ಯ ಎದುರಿಸಿದ್ದೇವೆ ಎಂದು ವಿವರಿಸಿದರು. ಗೋವಾ ಹಾಗೂ ತ್ರಿಪುರಾದಲ್ಲಿ 2022 ಮತ್ತು 2023ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.