ಕರ್ನಾಟಕದ ‘ಧಾರ್ಮಿಕ ಸ್ವಾತಂತ್ರ್ಯ’ ಮಸೂದೆಯ ಉದ್ದೇಶವೇನು?
ಗ್ರಹಾಮ್ ಸ್ಟೀವರ್ಡ್ ಸ್ಟೇನ್ಸ್ ಮತ್ತು ಅವರ ಇಬ್ಬರು ಪುತ್ರರು
‘ಧಾರ್ಮಿಕ ಸ್ವಾತಂತ್ರ್ಯ’ ಎಂಬ ಹೆಸರಿನ ಮಸೂದೆಗಳು ಪ್ರಾಥಮಿಕವಾಗಿ ಧಾರ್ಮಿಕ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುತ್ತವೆ. ಇಂತಹ ಹೆಚ್ಚಿನ ಮಸೂದೆಗಳು ಮತಾಂತರವನ್ನು ತಡೆಯುವ ಉದ್ದೇಶವನ್ನು ಹೊಂದಿವೆ. ನಮ್ಮ ಸಂವಿಧಾನವು ನಮ್ಮ ಧರ್ಮದ ಆಯ್ಕೆ, ಅನುಸರಣೆ ಮತ್ತು ಪ್ರಚಾರದ ಸ್ವಾತಂತ್ರ್ಯವನ್ನು ನೀಡಿದೆಯಾದರೆ, ಈ ಮಸೂದೆಗಳು ಅಲ್ಪಸಂಖ್ಯಾತ ಸಮುದಾಯಗಳನ್ನು ಬೆದರಿಸುತ್ತವೆ ಮತ್ತು ಕಿರುಕುಳ ನೀಡುತ್ತವೆ. ಕರ್ನಾಟಕದಲ್ಲಿ ಪ್ರಸ್ತಾಪಿಸಲಾಗಿರುವ ಇಂತಹ ಮಸೂದೆಯೂ ಇದಕ್ಕೆ ಹೊರತಲ್ಲ.
ರಾಜಕೀಯದಲ್ಲಿ ಬಲಪಂಥೀಯರ ಪ್ರಾಬಲ್ಯ ಹೆಚ್ಚುತ್ತಿರುವಂತೆಯೇ, ಹಲವು ರಾಜ್ಯಗಳು ‘ಧಾರ್ಮಿಕ ಸ್ವಾತಂತ್ರ್ಯ’ ಎಂಬ ಹೆಸರಿನ ಮಸೂದೆಗಳನ್ನು ಮಂಡಿಸಲು ಮುಂದಾಗಿವೆ. ತಮಾಷೆಯೆಂದರೆ, ‘ಧಾರ್ಮಿಕ ಸ್ವಾತಂತ್ರ್ಯ’ ಎಂಬ ಹೆಸರಿನ ಮಸೂದೆಗಳು ಪ್ರಾಥಮಿಕವಾಗಿ ಧಾರ್ಮಿಕ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುತ್ತವೆ. ಇಂತಹ ಹೆಚ್ಚಿನ ಮಸೂದೆಗಳು ಮತಾಂತರವನ್ನು ತಡೆಯುವ ಉದ್ದೇಶವನ್ನು ಹೊಂದಿವೆ. ನಮ್ಮ ಸಂವಿಧಾನವು ನಮ್ಮ ಧರ್ಮದ ಆಯ್ಕೆ, ಅನುಸರಣೆ ಮತ್ತು ಪ್ರಚಾರದ ಸ್ವಾತಂತ್ರ್ಯವನ್ನು ನೀಡಿದೆಯಾದರೆ, ಈ ಮಸೂದೆಗಳು ಅಲ್ಪಸಂಖ್ಯಾತ ಸಮುದಾಯಗಳನ್ನು ಬೆದರಿಸುತ್ತವೆ ಮತ್ತು ಕಿರುಕುಳ ನೀಡುತ್ತವೆ. ಕರ್ನಾಟಕದಲ್ಲಿ ಪ್ರಸ್ತಾಪಿಸಲಾಗಿರುವ ಇಂತಹ ಮಸೂದೆಯೂ ಇದಕ್ಕೆ ಹೊರತಲ್ಲ.
ವಿವಿಧ ರಾಜ್ಯ ಸರಕಾರಗಳು ಜಾರಿಗೆ ತರಲು ಉದ್ದೇಶಿಸಿರುವ ಈ ಕಾನೂನುಗಳು ಕ್ರೈಸ್ತ ಮತ್ತು ಮುಸ್ಲಿಮ್ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳನ್ನು ಪ್ರಮುಖವಾಗಿ ಗುರಿ ಮಾಡಿವೆ. ಪ್ರಸಕ್ತ, ಈ ಕಾಯ್ದೆಗಳ ಪ್ರಧಾನ ಬಲಿಪಶು ಕ್ರೈಸ್ತ ಸಮುದಾಯ. ಮುಖ್ಯವಾಗಿ ಕಳೆದ ನಾಲ್ಕು ದಶಕಗಳಿಂದ ಕ್ರೈಸ್ತ ವಿರೋಧಿ ವಾತಾವರಣವನ್ನು ನಿರ್ಮಿಸಲಾಗಿದೆ. ಇದರ ಮೊದಲ ಲಕ್ಷಣಗಳು ನನ್ಗಳು ಮತ್ತು ಪಾದ್ರಿಗಳ ಮೇಲೆ ನಡೆದ ದಾಳಿಗಳ ಮೂಲಕ ಗೋಚರಿಸಿದವು. ಬಳಿಕ ಹಂತ ಹಂತವಾಗಿ ದಾಳಿಗಳನ್ನು ಸಮಗ್ರ ಕ್ರೈಸ್ತ ಸಮುದಾಯಗಳಿಗೆ ವಿಸ್ತರಿಸಲಾಯಿತು.
1990ರ ದಶಕದಲ್ಲಿ ನಡೆದ ರಾಣಿ ಮರಿಯಾ ಹತ್ಯೆಯನ್ನು ಸ್ಮರಿಸಬಹುದಾಗಿದೆ. ಈ ಪಿತೂರಿಯ ಮಹತ್ವದ ಹಾಗೂ ಅತ್ಯಂತ ಭಯಾನಕ ಭಾಗವೆಂದರೆ 1999ರಲ್ಲಿ ಪಾಸ್ಟರ್ ಗ್ರಹಾಮ್ ಸ್ಟೀವರ್ಡ್ ಸ್ಟೇನ್ಸ್ ಮತ್ತು ಅವರ ಇಬ್ಬರು ಅಪ್ರಾಪ್ತ ವಯಸ್ಕ ಪುತ್ರರನ್ನು ಜೀವಂತವಾಗಿ ಸುಟ್ಟು ಕೊಂದಿರುವುದು. ಬಳಿಕ ಇದೇ ರೀತಿಯ ಹಿಂಸಾಚಾರವು ಗುಜರಾತ್ನ ಡಂಗ್ಸ್, ಮಧ್ಯಪ್ರದೇಶದ ಝಬುವ ಮತ್ತು ಒಡಿಶಾದ ಕಂದಮಾಲ್ನಲ್ಲಿ ನಡೆಯಿತು. ಕ್ರೈಸ್ತ ಮಿಶನರಿಗಳು ಅಮಾಯಕ ಆದಿವಾಸಿಗಳು ಮತ್ತು ದಲಿತರನ್ನು ಬಲವಂತವಾಗಿ, ವಂಚನೆಯಿಂದ ಹಾಗೂ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುತ್ತಿದ್ದಾರೆ ಎಂಬುದಾಗಿ ಪ್ರಚಾರ ಮಾಡಲಾಗಿತ್ತು.
1970ರ ದಶಕದಲ್ಲಿ ಡಂಗ್ಸ್ನಲ್ಲಿ ಸ್ವಾಮಿ ಅಸೀಮಾನಂದ, ಮಧ್ಯಪ್ರದೇಶದ ಝಬುವದಲ್ಲಿ ಅಸಾರಾಮ್ ಬಾಪುನ ಅನುಯಾಯಿಗಳು ಮತ್ತು ಒಡಿಶಾದ ಕಂದಮಾಲ್ನಲ್ಲಿ ಸ್ವಾಮಿ ಲಕ್ಷ್ಮಣಾನಂದ ಆದಿವಾಸಿಗಳ ಪ್ರದೇಶಗಳಲ್ಲಿ ಆಶ್ರಮಗಳನ್ನು ತೆರೆದರು. ವನವಾಸಿ ಕಲ್ಯಾಣ ಆಶ್ರಮ ಮತ್ತು ವಿಶ್ವ ಹಿಂದೂ ಪರಿಷತ್ನ ಆಶ್ರಯದಲ್ಲಿ ಈ ಆಶ್ರಮಗಳನ್ನು ತೆರೆಯಲಾಗಿತ್ತು. ಈ ಸಂಘಟನೆಗಳೊಂದಿಗೆ ಬಜರಂಗದಳವೂ ಕೈಜೋಡಿಸಿತ್ತು. ಪಾಸ್ಟರ್ ಸ್ಟೇನ್ಸ್ ಹತ್ಯೆಯಲ್ಲಿ ಪಾಲ್ಗೊಂಡಿರುವುದು ಬಜರಂಗದಳದ ದಾರಾಸಿಂಗ್ ಯಾನೆ ರಾಜೇಂದ್ರ ಪಾಲ್. ಅವನು ಈ ಅಪರಾಧಕ್ಕಾಗಿ ಈಗ ಜೈಲಿನಲ್ಲಿದ್ದಾನೆ.
ಚುನಾವಣಾ ಉದ್ದೇಶಕ್ಕಾಗಿ ಆದಿವಾಸಿಗಳನ್ನು ತಮ್ಮ ರಾಜಕೀಯ ತೆಕ್ಕೆಗೆ ಸೇರಿಸಿಕೊಳ್ಳುವುದಕ್ಕಾಗಿ ಕೋಮುವಾದಿ ಶಕ್ತಿಗಳು ಈ ಕ್ರಮಗಳನ್ನು ತೆಗೆದುಕೊಂಡಿದ್ದವು. ಜೊತೆಗೆ ಆದಿವಾಸಿಗಳನ್ನು ಹಿಂದೂಗಳನ್ನಾಗಿ ಮಾಡುವ ಕಾರ್ಯವೂ ನಡೆಯಿತು. ಇದಕ್ಕಾಗಿ ಶಬರಿ ಮತ್ತು ಹನುಮಾನ್ ದೇವಸ್ಥಾನಗಳನ್ನು ನಿರ್ಮಿಸಲಾಯಿತು. ಇದೇ ಸಂದರ್ಭದಲ್ಲಿ ಬೃಹತ್ ಶಬರಿ ಮಾಲೆಧಾರಿಗಳ ಸಮಾವೇಶವನ್ನೂ ನಡೆಸಲಾಯಿತು. ಈ ಸಮಾವೇಶಗಳಲ್ಲಿ ಆರೆಸ್ಸೆಸ್ ನಾಯಕರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬಲವಂತ, ವಂಚನೆ ಮತ್ತು ಆಮಿಷಗಳನ್ನು ಒಡ್ಡಿ ಮತಾಂತರ ಮಾಡಲಾಗುತ್ತಿದೆ ಎಂಬ ಪ್ರಚಾರದಲ್ಲಿ ಹುರುಳಿಲ್ಲ. ಕ್ರೈಸ್ತ ಧರ್ಮವು ಭಾರತದ ಹಳೆಯ ಧರ್ಮಗಳ ಪೈಕಿ ಒಂದು. ಕ್ರಿಸ್ತಶಕ 52ರಲ್ಲಿ ಮಲಬಾರ್ ಕರಾವಳಿಯಲ್ಲಿ ಸೈಂಟ್ ಥಾಮಸ್ ಭಾರತದಲ್ಲಿ ಮೊದಲು ಚರ್ಚ್ ಗಳನ್ನು ತೆರೆದರು ಎಂದು ಹೇಳಲಾಗುತ್ತಿದೆ. ಅಂದಿನಿಂದ ಭಾರತದಲ್ಲಿ ಕ್ರೈಸ್ತ ಧರ್ಮ ಆರಂಭಗೊಂಡಿತು. ಇಂದು ಭಾರತೀಯ ಜನಸಂಖ್ಯೆಯಲ್ಲಿ ಕ್ರೈಸ್ತರ ಪ್ರಮಾಣ (2011ರ ಜನಗಣತಿಯ ಆಧಾರದಲ್ಲಿ) 2.3 ಶೇಕಡ. ಇದರಲ್ಲಿಯೂ ಒಂದು ವೈಶಿಷ್ಟ್ಯವಿದೆ. ಕಳೆದ ಐದು ದಶಕಗಳ ಅವಧಿಯಲ್ಲಿ ಈ ಪ್ರಮಾಣವು ಕಿರು ಪ್ರಮಾಣದಲ್ಲಿ ಕಡಿಮೆಯಾಗುತ್ತಾ ಬಂದಿದೆ. ಜನಗಣತಿ ಅಂಕಿಸಂಖ್ಯೆಗಳ ಪ್ರಕಾರ, ಭಾರತದಲ್ಲಿರುವ ಕ್ರೈಸ್ತರ ಪ್ರಮಾಣ ಹೀಗಿದೆ: 1971- ಶೇ. 2.60, 1981- ಶೇ. 2.44, 1991- ಶೇ. 2.34, 2001- ಶೇ. 2.30 ಮತ್ತು 2011- ಶೇ. 2.30
ಪಾಸ್ಟರ್ ಸ್ಟೇನ್ಸ್ ಹತ್ಯೆಯ ಬಳಿಕ, ಅಂದಿನ ಗೃಹ ಸಚಿವ ಲಾಲ್ಕೃಷ್ಣ ಅಡ್ವಾಣಿ ವಾಧ್ವಾ ವಿಚಾರಣಾ ಆಯೋಗವನ್ನು ರಚಿಸಿದರು. ಪಾಸ್ಟರ್ನ ಕಾರ್ಯಕ್ಷೇತ್ರವಾಗಿರುವ ಮನೋಹರ್ (ಒಡಿಶಾ)ನ ಕಿಯೋಂಝಾರ್ನಲ್ಲಿ ಕ್ರೈಸ್ತರ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ ಎಂಬುದಾಗಿ ಆಯೋಗ ಹೇಳಿತು. ಈ ವಿಸ್ತೃತ ಅಂಕಿಅಂಶಗಳ ಹೊರತಾಗಿಯೂ, ಕ್ರೈಸ್ತ ಮಿಶನರಿಗಳು ಸ್ಥಳೀಯರನ್ನು ಮತಾಂತರ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ ಎನ್ನುತ್ತಾ ಕೋಮು ಸಂಘಟನೆಗಳು ತಮ್ಮ ಅಪ್ರಪ್ರಚಾರವನ್ನು ಮುಂದುವರಿಸಿದವು. ಮತಾಂತರ ಮಾಡಲು ಮಿಶನರಿಗಳು ವಿದೇಶಗಳಿಂದ ಹಣ ಪಡೆಯುತ್ತಾರೆ ಎಂಬ ಕಲ್ಪನೆಗಳೂ ಇವೆ. ಆದರೆ, ವಿದೇಶಗಳಿಂದ ಬರುವ ಎಲ್ಲ ಹಣವೂ ಗೃಹ ಸಚಿವಾಲಯದ ಉಸ್ತುವಾರಿಯಲ್ಲಿರುವ ಎಫ್ಸಿಆರ್ಎ ವ್ಯವಸ್ಥೆಯ ಮೂಲಕವೇ ಬರಬೇಕಾಗಿದೆ.
ಆರಂಭದಲ್ಲಿ ಕ್ರೈಸ್ತ ವಿರೋಧಿ ಹಿಂಸಾಚಾರವು ಆದಿವಾಸಿ ಪ್ರದೇಶಗಳು ಮತ್ತು ಹಳ್ಳಿಗಳಿಗೆ ಸೀಮಿತವಾಗಿತ್ತು. ಆದರೆ, ಈಗ ಸಣ್ಣ ನಗರಗಳು ಮತ್ತು ಕಾನ್ವೆಂಟ್ ಶಾಲೆಗಳ ಮೇಲೂ ಅವರು ದಾಳಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದ ಗಂಜ್ ಬವೋಸ್ಡದಲ್ಲಿರುವ ಸೈಂಟ್ ಜೋಸೆಫ್ ಶಾಲೆಯ ಮೇಲೆ ನಡೆದ ದಾಳಿಯನ್ನು ನೋಡಿದ್ದೇವೆ.
ಈವರೆಗೆ ಕ್ರೈಸ್ತ ಮಿಶನ್ ಶಾಲೆಗಳು ಜನರ ನೆಚ್ಚಿನ ಶಾಲೆಗಳಾಗಿದ್ದವು. ಈ ಶಾಲೆಗಳು ಉತ್ತಮ ಶಿಕ್ಷಣ ನೀಡುವುದಕ್ಕೆ ಪ್ರಸಿದ್ಧವಾಗಿವೆ. ಆದರೆ ದ್ವೇಷ ಸಿದ್ಧಾಂತವು ನಿಧಾನವಾಗಿ ಪ್ರಬಲಗೊಳ್ಳುತ್ತಿವೆ ಹಾಗೂ ಈ ಕ್ರೈಸ್ತ ಮಿಶನ್ ಶಾಲೆಗಳ ಮೇಲೂ ದಾಳಿ ನಡೆಯುತ್ತಿವೆ.
ಈ ದಾಳಿಗಳನ್ನು ನಡೆಸುವವರು ಕಾಲಾಳುಗಳು. ಈ ದಾಳಿಯ ಸೂತ್ರಧಾರಿಗಳು ದ್ವೇಷವನ್ನು ಉತ್ಪಾದಿಸಿ ಸಮಾಜಕ್ಕೆ ಹರಿಯಬಿಡುವವರು. ಅದಕ್ಕಾಗಿ ವಿವಿಧ ಮಾಧ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈಗಿನ ಜನಪ್ರಿಯ ಮಾಧ್ಯಮವೆಂದರೆ ಸಾಮಾಜಿಕ ಮಾಧ್ಯಮಗಳು.
ಇಸ್ಲಾಮ್ ಮತ್ತು ಕ್ರೈಸ್ತ ಧರ್ಮ ವಿದೇಶಿ ಧರ್ಮಗಳು ಎಂಬುದಾಗಿ ಕೋಮುವಾದಿ ರಾಜಕೀಯ ಭಾವಿಸುತ್ತದೆ. ಮಹಾತ್ಮಾ ಗಾಂಧಿ ಬರೆಯುತ್ತಾರೆ: ‘‘ತನ್ನ ಧರ್ಮವು ಇತರ ಯಾವುದೇ ಧರ್ಮದಷ್ಟೇ ಶ್ರೇಷ್ಠ ಎಂಬುದಾಗಿ ಪ್ರತಿ ದೇಶ ಭಾವಿಸುತ್ತದೆ. ಖಂಡಿತವಾಗಿಯೂ, ಭಾರತದಲ್ಲಿ ಇರುವ ಶ್ರೇಷ್ಠ ಧರ್ಮಗಳು ಅದರ ಜನತೆಗೆ ಧಾರಾಳ ಸಾಕು. ಭಾರತದಲ್ಲಿ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರದ ಅಗತ್ಯವಿಲ್ಲ.’’
ನಂತರ ಗಾಂಧೀಜಿ ಭಾರತದಲ್ಲಿರುವ ಧರ್ಮಗಳನ್ನು ಪಟ್ಟಿ ಮಾಡುತ್ತಾರೆ. ‘‘ಕ್ರೈಸ್ತ, ಯಹೂದಿ, ಹಿಂದೂ ಮತ್ತು ಅದರ ಸಹ ಧರ್ಮಗಳು, ಇಸ್ಲಾಮ್ ಮತ್ತು ರೊರೋಸ್ಟ್ರೀಯನ್ ಧರ್ಮಗಳು ಭಾರತದ ಜೀವಂತ ಧರ್ಮಗಳು’’. (ಗಾಂಧಿಯ ಸಂಗ್ರಹಿತ ಕೃತಿಗಳು, ಸಂಪುಟ 46 ಪುಟ 27-28)
ಇದನ್ನೇ ಮುಂದುವರಿಸಿ ಹೇಳುವುದಾದರೆ, ಧರ್ಮಗಳು ವಿಶ್ವವ್ಯಾಪಿಯಾಗಿವೆ ಹಾಗೂ ಯಾವುದೇ ಒಂದು ರಾಷ್ಟ್ರೀಯತೆಗೆ ಸೀಮಿತವಾಗಿಲ್ಲ. ಇಂದಿನ ಜಗತ್ತಿನಲ್ಲಿ ಹಿಂದೂಗಳು ಜಗತ್ತಿನಾದ್ಯಂತ ಹಂಚಿ ಹೋಗಿದ್ದಾರೆ. ಅಮೆರಿಕದ ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಉನ್ನತ ಹುದ್ದೆಗಳನ್ನು ಭಾರತ ಮೂಲದ (ಹೆಚ್ಚಿನವರು ಹಿಂದೂಗಳು) ಜನರು ಅಲಂಕರಿಸುತ್ತಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ.
ಈ ‘ಧಾರ್ಮಿಕ ಸ್ವಾತಂತ್ರ್ಯ’ ಮಸೂದೆಗಳು/ಕಾಯ್ದೆಗಳ ಹಿಂದಿರುವ ಕೋಮು ರಾಜಕೀಯ ಅಥವಾ ಅದರ ಒತ್ತಡವು, ‘ಅವರನ್ನು ದ್ವೇಷಿಸು’ ಎಂಬ ಸಿದ್ಧಾಂತವನ್ನು ಇನ್ನೊಂದು ಎತ್ತರಕ್ಕೆ ಒಯ್ಯುತ್ತದೆ. ಕರ್ನಾಟಕದಲ್ಲಿ ಇಂಥ ಇನ್ನೊಂದು ಮಸೂದೆ ರೂಪುಗೊಳ್ಳುತ್ತಿರುವುದು ಖಂಡಿತವಾಗಿಯೂ ಕ್ರೈಸ್ತರ ವಿರುದ್ಧದ ದ್ವೇಷವನ್ನು ತೀವ್ರಗೊಳಿಸಲಿದೆ ಹಾಗೂ ನಮ್ಮ ಸಾಮರಸ್ಯದ ಸಂಪ್ರದಾಯಕ್ಕೆ ಬೆದರಿಕೆಯಾಗಿರುವ ವಿಭಜನವಾದಿ ಪ್ರವೃತ್ತಿಗೆ ತುಪ್ಪಎರೆಯುತ್ತದೆ.
ಓರ್ವ ವ್ಯಕ್ತಿಯು ತನ್ನ ಸ್ವಂತ ಇಚ್ಛೆಯಿಂದ ಮಾತ್ರ ಮತಾಂತರಗೊಳ್ಳಲು ಸಾಧ್ಯ. ನೈತಿಕ, ಸಾಮಾಜಿಕ ಮತ್ತು ಕಾನೂನು ಮಟ್ಟದಲ್ಲಿ ನಮ್ಮ ಧರ್ಮವನ್ನು ಆರಿಸಿಕೊಳ್ಳುವ ಸಂಪೂರ್ಣ ಹಕ್ಕು ನಮಗಿದೆ. ಇದೇ ಹಕ್ಕನ್ನು ಚಲಾಯಿಸಿ ನಮ್ಮ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷ ಡಾ. ಭೀಮರಾವ್ ಬಾಬಾಸಾಹೇಬ್ ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮ ಸೇರಿದರು.
ಮತಾಂತರದ ನೆಪದಲ್ಲಿ ಕ್ರೈಸ್ತ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದಾಳಿಗಳನ್ನು ನಾವು ನೋಡುತ್ತಿರುವಂತೆಯೇ, ‘ಘರ್ ವಾಪ್ಸಿ’ ಎಂಬ ವಿಚಾರವನ್ನು ಭಿನ್ನ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಕೆಲವೇ ದಿನಗಳ ಹಿಂದೆ, ವಾಸಿಮ್ ರಿಝ್ವಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಜಿತೇಂದ್ರ ತ್ಯಾಗಿ ಆದರು. ಆದರೆ ಇದನ್ನು ವೈಭವೀಕರಿಸಲಾಗುತ್ತಿದೆ.
ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಕ್ರೈಸ್ತ ಪ್ರಾರ್ಥನಾ ಸಭೆಗಳು ಮತ್ತು ಚರ್ಚ್ಗಳ ಮೇಲೆ ನಡೆಯುತ್ತಿರುವ ದಾಳಿಗಳಲ್ಲಿ ಹೆಚ್ಚಳವಾಗಿದೆ. ಕಂದಮಾಲ್ ದಾಳಿಯಂತಹ ಆಕ್ರಮಣಗಳು ನಡೆಯದಿದ್ದರೂ, ದಾಳಿಗಳ ಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದ ಹೆಚ್ಚಳವಾಗಿದೆ.
ನಾವು ಸೌಹಾರ್ದವನ್ನು ಬೆಳೆಸಬೇಕಾಗಿದೆ, ಮಾನವೀಯ ಸಮಾಜವೊಂದನ್ನು ಸೃಷ್ಟಿಸುವುದಕ್ಕಾಗಿ ನಮ್ಮ ಧರ್ಮವನ್ನು ಆರಿಸುವ ಹಕ್ಕು ನಮ್ಮೆಲ್ಲರಿಗೂ ಇದೆ ಎನ್ನುವುದನ್ನು ನಾವು ಸ್ವೀಕರಿಸಬೇಕಾಗಿದೆ. ಹಾಗೂ ಅವರವರ ಆಯ್ಕೆಯನ್ನು ಗೌರವಿಸಲು ನಾವು ನೈತಿಕವಾಗಿ ಬದ್ಧರಾಗಬೇಕಾಗಿದೆ.