ಭಾಷಾ ಸೌಜನ್ಯವಿಲ್ಲದ ಸಂಸ್ಕೃತಿಯ ಹರಿಕಾರರು
ಅಡ್ಡಂಡ ಕಾರ್ಯಪ್ಪ
ಮೈಸೂರು ರಂಗಾಯಣದ ಸುತ್ತ ವಿವಾದ ದಿನದಿಂದ ದಿನಕ್ಕೆ ವಿಭಿನ್ನ ತಿರುವುಗಳನ್ನು ಪಡೆದು ಕೊಳ್ಳುತ್ತಿದೆ. ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವ ಮೂಲಕ ರಾಜ್ಯದ ಕಲೆ, ಸಂಸ್ಕೃತಿ, ರಂಗಭೂಮಿ ಮತ್ತು ಸಾಹಿತ್ಯ ವಲಯದ ಹೊಸ ಪ್ರತಿಭೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬೇಕಾದ ಜವಾಬ್ದಾರಿ ಇರುವ ರಂಗಾಯಣ ಮೂರು ದಶಕಗಳ ಕಾಲ ತನ್ನ ಅಸ್ಮಿತೆ ಮತ್ತು ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ ಎಂದರೆ ಅದಕ್ಕೆ ಕಾರಣ ಈ ಸಂಸ್ಥೆಯನ್ನು ಕಟ್ಟಿಬೆಳೆಸಿದ ಸಾಂಸ್ಕೃತಿಕ ಮನಸ್ಸುಗಳು ಮತ್ತು ಬೌದ್ಧಿಕ ಚೇತನಗಳು. ಭಾರತದ ಶತಮಾನಗಳ ಇತಿಹಾಸವನ್ನೇ ಅಲ್ಲಗಳೆದು ಹೊಸ ವ್ಯಾಖ್ಯಾನಗಳನ್ನು ಸೃಷ್ಟಿಸಲೆತ್ನಿಸುತ್ತಿರುವ ಬಲಪಂಥೀಯ ಸಾಂಸ್ಕೃತಿಕ ರಾಜಕಾರಣ, ಸುದೀರ್ಘ ಚಾರಿತ್ರಿಕ ಪಯಣದ ಹೆಜ್ಜೆ ಗುರುತುಗಳನ್ನು ಅಳಿಸಿಹಾಕುವುದರಲ್ಲೇ ತಮ್ಮ ಹಿರಿಮೆಯನ್ನು ಕಂಡುಕೊಳ್ಳುತ್ತಿದೆ. ಒಂದು ದೇಶದ ಸಾಂಸ್ಕೃತಿಕ ವಾತಾವರಣವನ್ನು ಅಧಿಕಾರ ರಾಜಕಾರಣದ ಲಾಲಸೆಗಳು ಆಕ್ರಮಿಸಿಕೊಂಡಾಗ ಹೀಗಾಗುವುದು ಸಹಜ. ಏಕೆಂದರೆ ಒಂದು ಈ ಸಾಂಸ್ಕೃತಿಕ ನೆಲೆಯ ವಾರಸುದಾರರಂತೆ ಬಿಂಬಿಸಿಕೊಳ್ಳುವ ನಿರ್ದಿಷ್ಟ ಗುಂಪುಗಳು ತಮ್ಮ ಪ್ರಾತಿನಿಧಿಕ ಅಸ್ತಿತ್ವವನ್ನು ಮರೆತು ಪಾರಮ್ಯ ಸಾಧಿಸಲು ಮುಂದಾಗುತ್ತವೆ.
ಭಾರತದ ಸಂದರ್ಭದಲ್ಲಿ ಕಲಾಭಿವ್ಯಕ್ತಿಯ, ಸಾಹಿತ್ಯಾಭಿವ್ಯಕ್ತಿಯ ಮಾರ್ಗಗಳು ವಾಣಿಜ್ಯೀಕರಣಗೊಂಡು ಆಳುವ ವರ್ಗಗಳೊಡನೆ ಗುರುತಿಸಿಕೊಳ್ಳುವ ಪ್ರಕ್ರಿಯೆ ಹಲವು ದಶಕಗಳ ಹಿಂದೆಯೇ ಆರಂಭವಾಗಿದೆ. ಕಲೆಗಾಗಿ ಕಲೆ, ಸಾಹಿತ್ಯಕ್ಕಾಗಿ ಸಾಹಿತ್ಯ ಎನ್ನುವ ವ್ಯಕ್ತಿನಿಷ್ಠ ನೆಲೆಯ ಚಿಂತನೆಗಳನ್ನು ಮೀರಿ ಈ ಸಾಂಸ್ಕೃತಿಕ ಭೂಮಿಕೆಗಳನ್ನು ಸಾಮಾಜಿಕ ಮನ್ವಂತರ ಹಾದಿಗಳನ್ನಾಗಿ ಮಾಡುವ ಪ್ರಯತ್ನಗಳನ್ನು ಹಂತ ಹಂತವಾಗಿ ಇಲ್ಲವಾಗಿಸುವ ನಿಟ್ಟಿನಲ್ಲಿ ಈ ಪ್ರಕ್ರಿಯೆ ಸಾಕಷ್ಟು ಯಶಸ್ಸನ್ನೂ ಗಳಿಸಿದೆ. ಕಲೆ ಮತ್ತು ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎಂಬ ಬೌದ್ಧಿಕ ಚಿಂತನೆ ಈ ಅಭಿವ್ಯಕ್ತಿಯ ಸಾಧನಗಳನ್ನು ಜನಮಾನಸದಿಂದ ವಿಮುಖವಾಗಿಸಲು ನೆರವಾಗುತ್ತಿದೆ. ಈ ಚಿಂತನೆಯ ಹಿಂದೆ ಅಧಿಕಾರ ರಾಜಕಾರಣ ಇರುವಷ್ಟೇ ಪ್ರಭಾವಶಾಲಿಯಾಗಿ ಮಾರುಕಟ್ಟೆ ಆರ್ಥಿಕತೆಯೂ ಇರುವುದನ್ನು ಗಮನಿಸಬೇಕಿದೆ.
ಕಲೆ ಅಥವಾ ಸಾಹಿತ್ಯ ಸಾಮಾಜಿಕ ಪರಿವರ್ತನೆಯ ಮಾರ್ಗಗಳಾಗು ವುದು ಸಾಧ್ಯವೇ ಎಂಬ ಪ್ರಶ್ನೆ ಎದುರಾದಾಗ, ಈ ಅಭಿವ್ಯಕ್ತಿ ಮಾರ್ಗಗಳಲ್ಲಿ ವ್ಯಕ್ತವಾಗಬಹುದಾದ ಆಕ್ರೋಶ, ಸಿಟ್ಟು, ಸೆಡವು, ಹತಾಶೆ ಮತ್ತು ಭರವಸೆಯ ಆಶಯಗಳೇ ತಕ್ಕ ಉತ್ತರವೂ ಆಗುತ್ತದೆ. ಸಾಮಾಜಿಕ ಅನ್ಯಾಯಗಳ ವಿರುದ್ಧ, ಸಾಂಸ್ಕೃತಿಕ ದಬ್ಬಾಳಿಕೆಯ ವಿರುದ್ಧ ಮತ್ತು ಸಾಮಾಜಿಕ, ಆರ್ಥಿಕ ಅಸಮಾನತೆ ತಾರತಮ್ಯಗಳ ವಿರುದ್ಧ ಅಕ್ಷರಗಳ ಮೂಲಕ, ಅಭಿನಯದ ಮೂಲಕ, ಕುಂಚಗಳ ಮೂಲಕ, ಧ್ವನಿಯ ಮೂಲಕ ಪ್ರಕಟವಾಗಬಹುದಾದ ಸದಾಭಿಪ್ರಾಯಗಳೇ ಸಾಮಾಜಿಕ ಮನ್ವಂತರಕ್ಕೆ ಕಚ್ಚಾವಸ್ತುಗಳಾಗಿ ಪರಿಣಮಿಸುತ್ತವೆ. ಇಲ್ಲಿ ಉತ್ಪತ್ತಿಯಾಗುವ ಸಂಯಮ, ಸಂವೇದನೆ ಮತ್ತು ಸಾಮಾಜಿಕ ಕಾಳಜಿ ಹಲವು ಪೀಳಿಗೆಗಳನ್ನು ಪ್ರಭಾವಿಸುವ ಮೂಲಕ ಸಮಾಜದ ಗರ್ಭದಲ್ಲೇ ಹೊಸ ಚಿಂತನೆಗಳು ಕವಲೊಡೆಯಲು ನೆರವಾಗುತ್ತದೆ. ಈ ಮೊಳಕೆಯೊಡೆದ ಚಿಂತನೆಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಆಳುವ ವರ್ಗಗಳಿಗೆ, ಸಾಂಸ್ಕೃತಿಕ ಶ್ರೇಷ್ಠತೆಯ ಹರಿಕಾರರಿಗೆ ಮತ್ತು ಮಾರುಕಟ್ಟೆ ಶಕ್ತಿಗಳಿಗೂ ಇರುತ್ತದೆ. ಸಾಂಸ್ಕೃತಿಕ ವಲಯದಲ್ಲಿ ರಾಜಕೀಯ ಹಿತಾಸಕ್ತಿಗಳ ಪ್ರವೇಶ ಈ ಬೆಳವಣಿಗೆಗೆ ನಾಂದಿ ಹಾಡುತ್ತದೆ. ಇಂದು ಕನ್ನಡ ಸಾಂಸ್ಕೃತಿಕ ಲೋಕ ಈ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಧಿಕಾರ ರಾಜಕಾರಣದ ವಕ್ತಾರರು, ಕಲಾಭಿವ್ಯಕ್ತಿಯ ಕೇಂದ್ರಗಳ ವಾರಸುದಾರರಂತೆ ವರ್ತಿಸಲಾರಂಭಿಸಿದಂತೆಲ್ಲಾ ಕಲೆ, ಸಾಹಿತ್ಯ, ಸಂಗೀತ ಎಲ್ಲವೂ ಹರಾಜು ಮಾರುಕಟ್ಟೆಯ ಸರಕುಗಳಾಗಿಬಿಡುತ್ತವೆ. ಒಂದು ಪ್ರಶಸ್ತಿ, ಒಂದು ಸನ್ಮಾನ ಸಾಂಸ್ಕೃತಿಕ ಅಭಿವ್ಯಕ್ತಿಯ ಎಲ್ಲ ಹಾದಿಗಳಲ್ಲೂ ಕಂದಕಗಳನ್ನು ತೋಡಿಬಿಡುತ್ತದೆ. ಕಲೆ ಮತ್ತು ಸಾಹಿತ್ಯದ ಉನ್ನತಾದರ್ಶದ ಪರಿಕಲ್ಪನೆಗಳು ಹಿಂಬದಿಗೆ ಸರಿದು, ಸಾಮಾಜಿಕ ಕಳಕಳಿಯನ್ನೂ ಅಳಿಸಿಹಾಕಿ ಅಸ್ತಿತ್ವ ಮತ್ತು ಅಸ್ಮಿತೆಯ ಆಕರಗಳಾಗಿಬಿಡುತ್ತದೆ. ಕನ್ನಡ ಸಾಂಸ್ಕೃತಿಕ ಲೋಕ ಈ ಸಂದಿಗ್ಧತೆಯನ್ನು ಎದುರಿಸುತ್ತಿದೆ. ಈ ಬೆಳವಣಿಗೆಯ ಫಲಾನುಭವಿಗಳೇ ಸಾಹಿತ್ಯ ಕಲೆಯಿಂದ ಸಾಮಾಜಿಕ ಪರಿವರ್ತನೆ ಅಸಾಧ್ಯ ಎಂಬ ಶುಷ್ಕ ವಾದವನ್ನೂ ಮಂಡಿಸುತ್ತಿದ್ದಾರೆ. ಈ ಸಂದರ್ಭದಲ್ಲೇ ಬಲಪಂಥೀಯ ರಾಜಕಾರಣ ಪ್ರಬಲವಾಗುತ್ತಿರು ವುದರಿಂದ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ನಿರ್ದಿಷ್ಟ ಮತೀಯ ಚೌಕಟ್ಟಿನಲ್ಲಿ ನಿಷ್ಕರ್ಷೆ ಮಾಡಲಾಗುತ್ತಿದೆ. ಧಾರ್ಮಿಕ ಆಚರಣೆಗಳನ್ನು ಸಂಸ್ಕೃತಿಯೊಡನೆ ಸಮೀಕರಿಸುವುದೊಂದೆಡೆಯಾದರೆ, ಪಂಥೀಯ ಪರಿಕಲ್ಪನೆಗಳನ್ನು ಸಾಂಸ್ಕೃತಿಕ ಬೇರುಗಳೊಡನೆ ಕಸಿ ಮಾಡುವ ಪ್ರಕ್ರಿಯೆಯೂ ಬಲಗೊಳ್ಳುತ್ತಿದೆ. ಧಾರ್ಮಿಕ ನೆಲೆಯಲ್ಲಿ ವ್ಯಕ್ತವಾಗುವ ಅಭಿವ್ಯಕ್ತಿಗೂ, ಸಾಮಾಜಿಕ ನೆಲೆಯಲ್ಲಿ ವ್ಯಕ್ತವಾಗುವ ಅಭಿವ್ಯಕ್ತಿಗೂ ಇರುವ ಸೂಕ್ಷ್ಮ ವ್ಯತ್ಯಾಸವೇ ಸಾಂಸ್ಕೃತಿಕ ಅಭಿವ್ಯಕ್ತಿಯ ಅಸ್ತಿತ್ವವನ್ನೂ ನಿರ್ಧರಿಸುತ್ತದೆ. ಕಲೆ, ರಂಗಭೂಮಿ, ಸಾಹಿತ್ಯ ಮತ್ತು ಸಂಗೀತ ಈ ನಾಲ್ಕೂ ಕ್ಷೇತ್ರಗಳಲ್ಲಿ ಈ ಸೂಕ್ಷ್ಮ ಅಂತರ ಮತ್ತು ವ್ಯತ್ಯಾಸಗಳನ್ನು ಗುರುತಿಸುವಲ್ಲಿ ಎಡವಿದರೆ, ಸಾಂಸ್ಕೃತಿಕ ವಲಯವೂ ಸಹ ಲುಂಪನೀಕರಣ (Lumpenisation
)ಕ್ಕೊಳಗಾಗುತ್ತದೆ. ರಂಗಾಯಣದ ಇತ್ತೀಚಿನ ಬೆಳವಣಿಗೆಗಳು ಇದನ್ನೇ ಸೂಚಿಸುತ್ತವೆ. ಒಂದು ಸಾಂಸ್ಕೃತಿಕ ಭೂಮಿಕೆಯಾಗಿ ರಂಗಾಯಣ ಮೂರು ದಶಕಗಳ ಕಾಲ ತನ್ನ ಅಸ್ತಿತ್ವವನ್ನು, ಹಿರಿಮೆಯನ್ನು ಕಾಪಾಡಿಕೊಂಡು ಬಂದಿರುವುದಕ್ಕೆ ಯಾವುದೇ ಪಂಥೀಯ ನೆಲೆಗಳು ಕಾರಣವಲ್ಲ. ಎಡ-ಬಲ-ನಡು ಪಂಥೀಯ ಚಿಂತಕರು, ವಾಗ್ಮಿಗಳು, ಕಲಾವಿದರು, ಸಾಹಿತಿಗಳು ಮತ್ತು ಚಿಂತಕರು ಈ ಸಂಸ್ಥೆಗೆ ಹೆಗಲು ನೀಡಿ ಔನ್ನತ್ಯಕ್ಕೇರಿಸಿದ್ದಾರೆ. ಇಲ್ಲಿ ನಡೆಯುವ ನಿತ್ಯ ಚಟುವಟಿಕೆಗಳು ಮತ್ತು ವಾರ್ಷಿಕ ಉತ್ಸವಗಳು ಭಾರತೀಯ ಸಮಾಜದ ಬಹುತ್ವ ಸಂಸ್ಕೃತಿಯನ್ನು, ಭಾರತದ ಜನಸಂಸ್ಕೃತಿಯ ನೆಲೆಗಳನ್ನು ಮತ್ತು ನೆಲ ಸಂಸ್ಕೃತಿಯ ಮೂಲ ಬೇರುಗಳನ್ನು ಇಡೀ ಜಗತ್ತಿಗೆ ಬಿಂಬಿಸುವ ಮೂಲಕ ಕರ್ನಾಟಕದ ಹಿರಿಮೆಯನ್ನು ಎತ್ತಿಹಿಡಿಯಲು ಸಾಧ್ಯವಾಗಿದೆ. ಸಾಹಿತ್ಯ ಅಕಾಡಮಿ, ಸಾಹಿತ್ಯ ಪರಿಷತ್ತು ಮತ್ತು ಇತರ ಸಾಂಸ್ಕೃತಿಕ ನೆಲೆಗಳಂತೆಯೇ ರಂಗಾಯಣವೂ ರಾಜಕೀಯ ಸೋಂಕಿನಿಂದ ಕಲುಷಿತವಾಗಿರುವುದನ್ನು ಅಲ್ಲಗಳೆಯಲೂ ಸಾಧ್ಯವಿಲ್ಲ. ಏಕೆಂದರೆ ಅಧಿಕಾರ ರಾಜಕಾರಣ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಲು ಇಂತಹ ಅಭಿವ್ಯಕ್ತಿ ಮಾರ್ಗಗಳ ಮೇಲೆ ತನ್ನ ಆಧಿಪತ್ಯ ಸಾಧಿಸಲು ಸದಾ ಹವಣಿಸುತ್ತಿರುತ್ತದೆ. ಆದಾಗ್ಯೂ ರಂಗಾಯಣ ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡು ಬಂದಿದ್ದರೆ ಅದಕ್ಕೆ ಕಾರಣ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮನಸ್ಸುಗಳಲ್ಲಿದ್ದ ಕಲಾಭಿವ್ಯಕ್ತಿಯ ಮೂಲ ಸೆಲೆ. ಈ ಸಂಸ್ಥೆಯ ನಿರ್ದೇಶಕ ಸ್ಥಾನವನ್ನಲಂಕರಿಸಿದ ಅನೇಕರು ಪ್ರಶ್ನಾತೀತರೇನಲ್ಲ, ದೋಷಾತೀತರೂ ಅಲ್ಲ ಆದರೆ ಅವರಾರೂ ತಮ್ಮ ವ್ಯಕ್ತಿಗತ ಸೈದ್ಧಾಂತಿಕ ನಿಲುಮೆಗಳನ್ನು, ರಾಜಕೀಯ ಒಲುಮೆಯನ್ನು ರಂಗಾಯಣದ ನಿರ್ವಹಣೆಯ ಸಂದರ್ಭದಲ್ಲಿ ತೋರಿರಲಿಲ್ಲ. ತಮ್ಮ ತಾತ್ವಿಕ ರಾಜಕೀಯ ನಿಲುವುಗಳನ್ನು ಎದೆತಟ್ಟಿ ಘೋಷಿಸಿಕೊಂಡಿರಲಿಲ್ಲ. ಅಥವಾ ತಮ್ಮ ವ್ಯಕ್ತಿಗತ ನಂಬಿಕೆಗಳನ್ನು ರಂಗಾಯಣದ ಕಾರ್ಯಕ್ರಮಗಳ ಸಂದರ್ಭದಲ್ಲಿ ಹೇರುವ ಪ್ರಯತ್ನವನ್ನೂ ಮಾಡಿರಲಿಲ್ಲ. ಹಾಗಾಗಿಯೇ ಕಳೆದ ಮೂವತ್ತೊಂದು ವರ್ಷಗಳಲ್ಲಿ ರಂಗಾಯಣದ ಚಟುವಟಿಕೆಗಳು, ಬಹುರೂಪಿಯನ್ನೂ ಸೇರಿದಂತೆ, ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡುಬಂದಿವೆ.
ಈ ಜೀವಂತಿಕೆಯನ್ನು ಉಳಿಸಿಕೊಂಡು ಹೋಗುವ ನೈತಿಕ ಹೊಣೆ ಈಗಿನ ರಂಗಾಯಣ ನಿರ್ದೇಶಕರ ಮೇಲಿದೆ. ಅಡ್ಡಂಡ ಕಾರ್ಯಪ್ಪಅವರ ಇತ್ತೀಚಿನ ಕೆಲವು ಹೇಳಿಕೆಗಳು ಇದಕ್ಕೆ ವ್ಯತಿರಿಕ್ತವಾಗಿಯೇ ಕಾಣುತ್ತಿದೆ. ಈ ಸಂಸ್ಥೆಯ ನಿರ್ದೇಶಕ ಸ್ಥಾನದ ಜವಾಬ್ದಾರಿಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಶ್ರೀಯುತ ಕಾರ್ಯಪ್ಪನವರು ತಮ್ಮ ಹಿಂದುತ್ವ-ಸಂಘಪರಿವಾರದ ಬಾಸಿಂಗವನ್ನು ಬದಿಗಿಟ್ಟು ವರ್ತಿಸುವುದು ಸೌಜನ್ಯಯುತ ಎನಿಸುತ್ತದೆ. ಮಾವೋವಾದ ಎಂದರೇನು ಎಂಬುದನ್ನೇ ಅರಿಯದೆ, ರಂಗಾಯಣದ ಈವರೆಗಿನ ಹೆಜ್ಜೆಗಳನ್ನೆಲ್ಲಾ ಮಾವೋವಾದಿ ಎಂದು ವೂದಲಿಸುವುದು ಅಪ್ರಬುದ್ಧತೆಯ ಲಕ್ಷಣ. ತಾವು ಅಲಂಕರಿಸಿರುವ ಹುದ್ದೆಯ ತಳಪಾಯದಲ್ಲಿ ಆಗಿಹೋಗಿರುವ ಮತ್ತು ಇಂದಿಗೂ ಆಗಬರುತ್ತಿರುವ ಸಾಂಸ್ಕೃತಿಕ ಕಲಾಭಿವ್ಯಕ್ತಿಯ ಚೇತನಗಳು ಇನ್ನೂ ಉಸಿರಾಡುತ್ತಿವೆ ಎಂಬ ವಾಸ್ತವವನ್ನು ನಿರ್ದೇಶಕರು ಅರ್ಥಮಾಡಿಕೊಳ್ಳಬೇಕಿದೆ.
ಜನಸಾಮಾನ್ಯರ ನಡುವೆ ಹರಿದಾಡುವ ಒಂದು ಅಕ್ಷರಾಭಿವ್ಯಕ್ತಿಯಲ್ಲಿ ಬಳಸಲು ಸಂಕೋಚವಾಗುವಂತಹ ಅಸಭ್ಯ ಅಶ್ಲೀಲ ಪದಗಳನ್ನು ಬಳಸುವುದು ರಂಗಾಯಣದಂತಹ ಉನ್ನತ ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕರಿಗೆ ಶೋಭಿಸುವುದಿಲ್ಲ. ಎಲ್ಲ ಪ್ರತಿರೋಧದ ದನಿಗಳನ್ನೂ ‘‘ಮಾವೋವಾದಿಗಳು’’ (ಪ್ರಭುತ್ವದ ಪರಿಭಾಷೆಯಲ್ಲಿ ಕಾನೂನು ಭಂಜಕರು) ಎಂದು ಮೂದಲಿಸುವುದು, ಬುದ್ಧಿಜೀವಿ ವರ್ಗವನ್ನು ‘‘ಲದ್ದಿಜೀವಿಗಳು’’ ಎಂದು ಹೀಗಳೆಯುವುದು, ಭಿನ್ನಮತೀಯರನ್ನು ‘‘ಪುಟಗೋಸಿಗಳು’’ ಎಂದು ಹೀಯಾಳಿಸುವುದು ಮತ್ತು ತಾನು ನಡೆದದ್ದೇ ದಾರಿ ಎಂದು ಅಡ್ಡ ಬಂದವರನ್ನೆಲ್ಲಾ ಸಂಹರಿಸುವ ಮಾತುಗಳನ್ನಾಡುವುದು ಸಾಂಸ್ಕೃತಿಕ ವಲಯಕ್ಕೆ ಶೋಭಿಸುವಂತಹುದಲ್ಲ. ಭಾಷಾ ಸೌಜನ್ಯ ಮತ್ತು ಸಭ್ಯತೆ ಇಲ್ಲದ ಯಾವುದೇ ವ್ಯಕ್ತಿ ರಂಗಾಯಣ ದಂತಹ ಒಂದು ಅತ್ಯುನ್ನತ ಸಾಂಸ್ಕೃತಿಕ ಸಂಸ್ಥೆಯನ್ನು ಮುನ್ನಡೆಸುವ ಅರ್ಹತೆಯನ್ನೂ ಕಳೆದುಕೊಳ್ಳುವುದು ಸಹಜ.