ಆರ್ಮ್‌ಸ್ಟಾಂಗ್ ಮರೆತುಬಿಟ್ಟಿದ್ದ ಆ ಆರ್ಟಿಕಲ್!
ಸಾಮಾನ್ಯವಾಗಿ ಇಂಗ್ಲಿಷ್‌ನ್ನು ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕಲಿಯುವ ಯಾವುದೇ ದೇಶದ ಜನರೂ 'Alphabet'ಗಳನ್ನು ಕಲಿತಾದ ನಂತರ ಗ್ರಾಮರ್‌ನ ಭಾಗವಾಗಿ ಕಲಿಯುವ ಮೊದಲ ವಸ್ತು ವಿಷಯವೇ 'Articles'ಗಳು. ತಮಾಷೆಯೆಂದರೆ ವಿದೇಶಿ ಭಾಷೆಯಾಗಿ ಇಂಗ್ಲಿಷನ್ನು ಕಲಿತವರೆಲ್ಲರೂ ಹೆಚ್ಚು ತಪ್ಪು ಮಾಡುವುದು ಕೂಡ 'ArticlesArticles ' ವಿಷಯದಲ್ಲೇ. ಪ್ರಾಥಮಿಕ ಶಾಲಾ ಹಂತದಿಂದ (ಈಗಿನ ಮಕ್ಕಳಿಗೆ ಬಿಡಿ. ಎಲ್.ಕೆ.ಜಿ., ಯು.ಕೆ.ಜಿ.ಯಿಂದಲೇ ಇಂಗ್ಲಿಷ್ ಕಲಿಕೆಯ ಅವಕಾಶ ಇದೆ) ಕಲಿತಿದ್ದರೂ ಮಾತನಾಡುವಾಗ, ಬರೆಯುವಾಗ, ಪ್ರಬಂಧ ಮಂಡಿಸುವಾಗ, ಸಣ್ಣಪುಟ್ಟ ಅನುವಾದಗಳನ್ನು ಮಾಡುವಾಗ ಅನೇಕ ತಪ್ಪುಗಳು ನುಸುಳುವುದು ಸಹಜ. ಅಲ್ಲದೆ ಅವು ತಪ್ಪುಎಂಬುದು ಬಹುತೇಕ ಬಾರಿ ತಿಳಿಯುವುದೂ ಇಲ್ಲ. ಆದರೆ ಶಾಸ್ತ್ರಬದ್ಧವಾಗಿ ಕಲಿತದ್ದನ್ನು ಸರಿಯಾಗಿ ಭಾಷೆಗೆ ಅಳವಡಿಸುವವರಿಗೆ ಇಂತಹ ತಪ್ಪುಗಳು ಸುಲಭವಾಗಿ ಗೋಚರಿಸುತ್ತವೆ. ಅಲ್ಲದೆ ನೀವೊಬ್ಬ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಯಾಗಿದ್ದರಂತೂ ಪದವಿ ಹಂತದ ಬಹುತೇಕ ಪರೀಕ್ಷೆಗಳಲ್ಲಿ 'Articles'' ಮೇಲೆ ಕನಿಷ್ಠ ಒಂದಾದರೂ ಪ್ರಶ್ನೆ ಇದ್ದೇ ಇರುತ್ತದೆ. ಬಹುತೇಕ ಪರೀಕ್ಷಾರ್ಥಿಗಳ ಮನಸ್ಸಿನಲ್ಲಿ ಇದಕ್ಕೆ ಸಂಬಂಧಿಸಿದಂತೆ ಅತಿ ದೊಡ್ಡ ತಪ್ಪುತಿಳಿವಳಿಕೆ ಒಂದಿದೆ.
ಇಂಗ್ಲಿಷ್‌ನಲ್ಲಿ 2 ರೀತಿಯ ಆರ್ಟಿಕಲ್‌ಗಳಿವೆ:
A An Indefinite Article
The-Definite Article
1. ಮತ್ತು 2. ಈ ಮೂರು ಆರ್ಟಿಕಲ್‌ಗಳನ್ನು ಹೇಗೆ ಬಳಸಬೇಕೆಂದು, ಯಾವ ಸಂದರ್ಭದಲ್ಲಿ ಯಾವ ಆರ್ಟಿಕಲ್‌ನ್ನು ಬಳಸಬೇಕೆಂದು ತಿಳಿದರೆ ನಮ್ಮ ದಿನನಿತ್ಯದ ಇಂಗ್ಲಿಷ್ ಬಳಕೆಯಲ್ಲಿ ಒಂದಿಷ್ಟು ಭಾಷಾಶುದ್ಧಿ ಆಗುವುದಂತೂ ಹೌದು. ಆದರೆ ಅದಕ್ಕೂ ಮುಂಚೆ ಆರ್ಟಿಕಲ್‌ಗಳ ಬಳಕೆಯಲ್ಲಿ ಒಂದು ವೇಳೆ ತಪ್ಪಾದರೆ ಎಂತಹ ಯಡವಟ್ಟುಗಳಾಗುವ ಸಾಧ್ಯತೆಯಿದೆ ಎಂಬುದಕ್ಕೆ ಒಂದು ನೈಜ ಘಟನೆಯನ್ನು ವಿವರಿಸುತ್ತೇನೆ. ಪ್ರಾಯಶಃ ಈ ಘಟನೆ ತಿಳಿದರೆ ಆರ್ಟಿಕಲ್‌ಗಳನ್ನು ಕರಾರುವಾಕ್ಕಾಗಿ ಬಳಸಬೇಕಾದುದರ ಮಹತ್ವವೂ ತಿಳಿಯಬಹುದು.
ಆರ್ಮ್‌ಸ್ಟಾಂಗ್ ಮರೆತಿದ್ದೇಕೆ ಆ ಆರ್ಟಿಕಲ್?
'That's one small step for man, one giant leap for mankind' 1969ರ ಜುಲೈ 20ರಂದು ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ ಮೊತ್ತ ಮೊದಲ ಮಾನವ ನೀಲ್ ಆರ್ಮ್‌ಸ್ಟಾಂಗ್ ಹೇಳಿದ ವಾಕ್ಯವನ್ನು ನೀವು ಕೇಳಿರುತ್ತೀರಿ. ಅವನ ಜೊತೆ ಎಡ್ವಿನ್ ಆಲ್ಡ್ರಿನ್ ಮತ್ತು ಮೈಕೇಲ್ ಕೊಲಿನ್ಸ್ ಎಂಬ ಇನ್ನಿಬ್ಬರು ಗಗನಯಾತ್ರಿಗಳಿದ್ದರೂ, ವ್ಯೋಮನೌಕೆಯಿಂದಿಳಿದು ಚಂದ್ರನ ಮೇಲೆ ಪ್ರಥಮವಾಗಿ ಹೆಜ್ಜೆಯಿಟ್ಟಿದ್ದು ಆರ್ಮ್‌ಸ್ಟಾಂಗ್. ಹಾಗೆ ಹೆಜ್ಜೆಯಿಟ್ಟ ಆರ್ಮ್‌ಸ್ಟಾಂಗ್ ಮೊದಲು ಮಾಡಿದ್ದೇನು ಗೊತ್ತೆ? ಭೂಮಿಯಿಂದ ಹೊರಡುವಾಗಲೇ ಬರೆದು ಬಾಯಿಪಾಠ ಮಾಡಿಕೊಂಡಿದ್ದ ಒಂದು ವಾಕ್ಯವನ್ನು ಪುನರುಚ್ಚರಿಸಿದ. ಆ ವಾಕ್ಯವನ್ನು ಅನೇಕ ಸಂದರ್ಭಗಳಲ್ಲಿ ಮಾನವ ಸಾಧನೆಯ ಸಾಧ್ಯತೆಗಳನ್ನು ಹೇಳಲು ಉದಾಹರಿಸಲಾಗುತ್ತದೆ. ಎಂದು ಹೇಳಿ ತನ್ನ ಸಂಭ್ರಮಾಚರಣೆ ಮಾಡಿದ್ದ. ಈ ವಾಕ್ಯಕ್ಕೆ ಸಂಬಂಧಿಸಿದಂತೆ ಒಂದು ಸ್ವಾರಸ್ಯಕರ ಗೊಂದಲವಿದೆ. ಆರ್ಮ್‌ಸ್ಟಾಂಗ್ ನಿಜಕ್ಕೂ ಹೇಳಬೇಕಾದ ವಾಕ್ಯದಲ್ಲಿನ ಒಂದು ಪದವನ್ನು ಬಿಟ್ಟು ಹೇಳಿದ್ದಾನೆ ಎಂಬುದೇ ಆ ವಾದ. ಅಂದರೆ ಆತ ಹೇಳಬೇಕಿದ್ದುದು, ''That's one small step for a man, one giant leap for mankind'' ಎಂದು. ಆದರೆ ಈ ವಾಕ್ಯದಲ್ಲಿನ ಆರ್ಟಿಕಲ್ 'a'ಯನ್ನು ಮರೆತು, ಉಳಿದ ವಾಕ್ಯವನ್ನು ಆತ ಹೇಳಿದ್ದ. ಹಾಗಾದರೆ ಈ ಎರಡು ವಾಕ್ಯಗಳಲ್ಲಿ ಏನಾದರೂ ವ್ಯತ್ಯಾಸವಿದೆಯೇ, 'a' ಎಂಬ ಆರ್ಟಿಕಲ್ ಇಲ್ಲದೇ ಹೋದರೆ ಅಂತಹ ದೊಡ್ಡ ಅರ್ಥ ವ್ಯತ್ಯಾಸವೇನಾದರೂ ಆಗುತ್ತದೆಯೇ ಎಂದು ನೋಡೋಣ.
'That's one small step for a man, one giant leap for mankind' ಎಂಬ ವಾಕ್ಯವು ''ಒಬ್ಬ ಮನುಷ್ಯನ ಒಂದು ಹೆಜ್ಜೆ, ಇಡೀ ಮನುಕುಲದ ದೊಡ್ಡ ಜಿಗಿತ'' ಎಂಬರ್ಥ ನೀಡಿದರೆ, ಈ ವಾಕ್ಯದಲ್ಲಿನ ಆರ್ಟಿಕಲ್ 'a' ಯನ್ನು ಬಿಟ್ಟು ಆತ ಹೇಳಿದಾಗ 'That's one small step for man, one giant leap for mankind' ಎಂಬ ವಾಕ್ಯವು ''ಮನುಷ್ಯನ ಒಂದು ಪುಟ್ಟ ಹೆಜ್ಜೆ, ಮನುಕುಲದ ದೊಡ್ಡ ಜಿಗಿತ'' ಎಂಬರ್ಥ ನೀಡುತ್ತದೆ. ಹಾಗಾಗಿ ಚಂದ್ರನ ಮೇಲೆ ಕಾಲಿಟ್ಟ ಸಂಭ್ರಮದ ಕ್ಷಣದಲ್ಲಿ, ಉದ್ವೇಗ ಉಲ್ಲಾಸಗಳಿಂದಲೋ ಏನೋ, ಭೂಮಿಯಿಂದ ಹೊರಡುವಾಗಲೇ ಬಾಯಿಪಾಠ ಮಾಡಿದ್ದ ವಾಕ್ಯವೇ ಆದರೂ 'a man' ಎಂದು ಹೇಳುವುದರ ಬದಲು ಬರೀ 'man' ಎಂದಷ್ಟೇ ಹೇಳಿದ್ದರಿಂದ ಸ್ಟ್ರಾಂಗ್ ಆಗಬೇಕಿದ್ದ ಆರ್ಮ್‌ಸ್ಟಾಂಗ್‌ನ ವಾಕ್ಯವು ವೀಕಾಗಿ ಹೋಯಿತು. ಇಡೀ ವಾಕ್ಯದಲ್ಲಿನ ಪ್ರೌಢಿಮೆ ಮತ್ತು ಸಾರ್ವತ್ರಿಕತೆ ಅದೊಂದು ಆರ್ಟಿಕಲ್ ಬಿಟ್ಟಿದ್ದರಿಂದಾಗಿ ಇಲ್ಲದಾಯಿತು.
ಅಂದರೆ 'a' ಎಂಬ ಆರ್ಟಿಕಲ್‌ನ್ನು ಬಳಸಿ ವಿಶ್ವಾತ್ಮಕವಾಗಿಸಬಹುದಾಗಿದ್ದ ಹೇಳಿಕೆಯನ್ನು 'a' ಬಿಟ್ಟಿದ್ದರಿಂದ ಸಂಕುಚಿತಗೊಳಿಸಿದಂತಾಯಿತು. ಮೊದಲೇ ಇಡೀ ವಿಶ್ವ ಚಂದ್ರಲೋಕದಲ್ಲಿ ಮಾನವ ಎಂಬುದು ಅಮೆರಿಕ ಮಾಡುತ್ತಿರುವ ಕಪಟ ನಾಟಕ ಎಂದುಕೊಳ್ಳುತ್ತಿದ್ದಾಗ ಆರ್ಮ್‌ಸ್ಟಾಂಗ್ ಬಿಟ್ಟಿದ್ದ ಆ ಆರ್ಟಿಕಲ್ ಆಮೆರಿಕದ ಅಜೆಂಡಾವನ್ನು ಜಗಜ್ಜಾಹೀರುಗೊಳಿಸಿತು ಎಂದು ವಿಶ್ವದಲ್ಲಿ ಅನೇಕರು ಮಾತಾಡಿಕೊಂಡರು. ಆದರೆ 'NASA' ಹೇಳುವ ಪ್ರಕಾರ ಅಂದು ಆರ್ಮ್‌ಸ್ಟ್ರಾಂಗ್ 'a man' ಎಂದೇ ಹೇಳಿದ್ದನಂತೆ, ''ಸ್ಟಾಟಿಕ್ ಕರೆಂಟ್'' ಶಬ್ದಮಾಲಿನ್ಯದಿಂದಾಗಿ'a' ಎಂಬ ಪದ ಕೇಳಿಸಲಿಲ್ಲವಂತೆ. ಇಂತಹ ಅಪ್ರತಿಮ ಯಶೋಗಾಥೆಯೊಂದನ್ನು ಇಡೀ ಜಗತ್ತಿನ 450 ಮಿಲಿಯನ್ ಮನುಷ್ಯರು, ವಾಯ್ಸಿ ಆಫ್ ಅಮೆರಿಕ ಮತ್ತು ಬಿಬಿಸಿಯ ಮೂಲಕ ಅವನ ಧ್ವನಿ ಕೇಳಿ ಪುಳಕಿತರಾದರು. ಸಂಭ್ರಮಾಚರಣೆಯ ಈ ಸಂದರ್ಭದಲ್ಲಿ ಆರ್ಮ್‌ಸ್ಟಾಂಗ್ ಬಿಟ್ಟಿದ್ದ ಆ ಆರ್ಟಿಕಲ್ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಾರರು. ತದನಂತರ ನಾಸಾ ತನ್ನ ಯೂನಿವರ್ಸಲ್ ಅಪ್ರೋಚನ್ನು ಸಮರ್ಥಿಸಿಕೊಳ್ಳಲು ಸ್ಟಾಟಿಕ್ ಕರೆಂಟ್‌ನ ಶಬ್ದ ಮಾಲಿನ್ಯದ ನೆಪ ಹೇಳಿತು ಎನ್ನುತ್ತಾರೆ ಕೆಲವರು. ''ಅದು ಹಾಗಲ್ಲ, ಈ ಗಗನಯಾತ್ರಿಗಳು ಸಂಚರಿಸಿದ್ದ ವ್ಯೋಮನೌಕೆಯ ಹೆಸರು ಅಪೋಲೋ-11 ಎಂದಿತ್ತು. ಹಾಗಾಗಿ ಒರಿಜಿನಲ್ ವಾಕ್ಯದಲ್ಲಿದ್ದ 12 ಪದಗಳಲ್ಲಿ ಒಂದನ್ನು ಬಿಟ್ಟರೆ ಅದೂ 11 ಪದಗಳ ವಾಕ್ಯವಾಗುತ್ತದೆ ಎಂಬ ಕಾರಣಕ್ಕೆ ಆರ್ಮ್‌ಸ್ಟಾಂಗ್ ಬೇಕೆಂತಲೇ 'a'ಯನ್ನು ಬಿಟ್ಟಿರಬಹುದು' ಎಂದು ಅಂಕಣಕಾರ ಶ್ರೀವತ್ಸ ಜೋಷಿಯವರು ಈ ಸ್ವಾರಸ್ಯಕರ ಸಂಗತಿಯ ಹಿಂದಿನ ರಹಸ್ಯವನ್ನು ಲಘುಹಾಸ್ಯದಲ್ಲಿ ವಿವರಿಸುತ್ತಾರೆ.
ಅದೇನೆ ಇರಲಿ, 'a', 'an' ಮತ್ತು 'the'ಗಳ ಬಳಕೆಯಲ್ಲಿ ಮಾಡುವ ತಪ್ಪುಗಳಿಂದ ಎಷ್ಟು ದೊಡ್ಡ ಅರ್ಥವ್ಯತ್ಯಾಸಗಳಾಗಬಹುದು ಎಂಬುದನ್ನು ವಿಷದಪಡಿಸಲು ಈ ಉದಾಹರಣೆ ನೀಡಬೇಕಾಯಿತು.
(ನೊ ಮೋರ್ ಇಂಗ್ಲಿಷ್) ಕೃತಿಯಿಂದ.