varthabharthi


ನಿಮ್ಮ ಅಂಕಣ

ಸಾಂಸ್ಕೃತಿಕ ಸಂಘಟನೆಗಳು ಮತ್ತು ಸಂಘಪರಿವಾರ

ವಾರ್ತಾ ಭಾರತಿ : 17 Dec, 2021
ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

ಸ್ವಾತಂತ್ರ್ಯಪೂರ್ವ ದಿನಗಳಿಂದಲೂ ಎಳೆಯರನ್ನು ಕ್ರೀಡೆ ಮತ್ತು ಧಾರ್ಮಿಕ-ಸಾಮಾಜಿಕ ಆಚರಣೆಗಳ ಮೂಲಕ ಆಕರ್ಷಿಸುತ್ತಾ, ಸಂಘಟಿಸುತ್ತಾ, ವಯಸ್ಸು, ಲಿಂಗ, ಉದ್ದೇಶ-ಸಂದರ್ಭಗಳಿಗನು ಗುಣವಾದ ಸಂಘಟನೆಗಳನ್ನು ಹುಟ್ಟುಹಾಕುತ್ತಾ ಹೆಮ್ಮರವಾಗಿ ಬೆಳೆದ ಸಂಘಪರಿವಾರ ಡಿಜಿಟಲ್ ಬಂಡವಾಳವಾದದ ಪ್ರಸ್ತುತ ಕಾಲಘಟ್ಟದಲ್ಲಿ ರಾಜಕೀಯ ಅಧಿಕಾರವನ್ನು ಪಡೆದುಕೊಂಡಿದೆ. ಹೀಗಾಗಿ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ಸಮೂಹ ಮಾಧ್ಯಮ ಹೀಗೆ ಭಾರತದ ಪ್ರಭುತ್ವದ ಎಲ್ಲ ಅಂಗಗಳಲ್ಲಿಯೂ ಸಂಘಪರಿವಾರದ ತಾತ್ವಿಕತೆಗೆ ಹೊದಿಸಿದ್ದ ಸಾಂಸ್ಕೃತಿಕ ಮುಸುಕನ್ನು ಕಳಚಿಹಾಕಿದ ಅಧಿಕಾರಸ್ಥರು, ಶಿಕ್ಷಣತಜ್ಞರು, ಸಂಸ್ಕೃತಿಚಿಂತಕರು, ತಾಂತ್ರಿಕ ಪರಿಣತರು ಮತ್ತು ರಾಜಕೀಯ ಕಾಲಾಳುಗಳು ಎಲ್ಲ ಕ್ಷೇತ್ರಗಳಲ್ಲೂ ಈಗ ಯಾವ ಮುಸುಕೂ ಇಲ್ಲದ ಹೆಮ್ಮೆಯ ಹಿಂದುತ್ವವಾದಿಗಳಾಗಿಯೇ ಕಾಣಸಿಗುತ್ತಾರೆ.

ಸಂಘಪರಿವಾರವು ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಎಷ್ಟೋ ಮೊದಲೇ ಹಿಂದುತ್ವದ ಸೈದ್ಧಾಂತಿಕತೆಯಲ್ಲಿ ತಮ್ಮನ್ನು ಗುರುತಿಸಿಕೊಂಡ ಜನರು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ವಿವಿಧ ರೀತಿಗಳಲ್ಲಿ ಸಕ್ರಿಯರಾಗಿದ್ದರು. ಸ್ವಾತಂತ್ರ್ಯಪೂರ್ವ ದಿನಗಳಿಂದಲೂ ಎಳೆಯರನ್ನು ಕ್ರೀಡೆ ಮತ್ತು ಧಾರ್ಮಿಕ-ಸಾಮಾಜಿಕ ಆಚರಣೆಗಳ ಮೂಲಕ ಆಕರ್ಷಿಸುತ್ತಾ, ಸಂಘಟಿಸುತ್ತಾ, ವಯಸ್ಸು, ಲಿಂಗ, ಉದ್ದೇಶ-ಸಂದರ್ಭ ಗಳಿಗನುಗುಣವಾದ ಸಂಘಟನೆಗಳನ್ನು ಹುಟ್ಟುಹಾಕುತ್ತಾ ಹೆಮ್ಮರವಾಗಿ ಬೆಳೆದ ಸಂಘಪರಿವಾರ ಡಿಜಿಟಲ್ ಬಂಡವಾಳವಾದದ ಪ್ರಸ್ತುತ ಕಾಲಘಟ್ಟದಲ್ಲಿ ರಾಜಕೀಯ ಅಧಿಕಾರವನ್ನು ಪಡೆದುಕೊಂಡಿದೆ. ಹೀಗಾಗಿ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ಸಮೂಹ ಮಾಧ್ಯಮ ಹೀಗೆ ಭಾರತದ ಪ್ರಭುತ್ವದ ಎಲ್ಲ ಅಂಗಗಳಲ್ಲಿಯೂ ಸಂಘಪರಿವಾರದ ತಾತ್ವಿಕತೆಗೆ ಹೊದಿಸಿದ್ದ ಸಾಂಸ್ಕೃತಿಕ ಮುಸುಕನ್ನು ಕಳಚಿಹಾಕಿದ ಅಧಿಕಾರಸ್ಥರು, ಶಿಕ್ಷಣತಜ್ಞರು, ಸಂಸ್ಕೃತಿಚಿಂತಕರು, ತಾಂತ್ರಿಕ ಪರಿಣತರು ಮತ್ತು ರಾಜಕೀಯ ಕಾಲಾಳುಗಳು ಎಲ್ಲ ಕ್ಷೇತ್ರಗಳಲ್ಲೂ ಈಗ ಯಾವ ಮುಸುಕೂ ಇಲ್ಲದ ಹೆಮ್ಮೆಯ ಹಿಂದುತ್ವವಾದಿಗಳಾಗಿಯೇ ಕಾಣಸಿಗುತ್ತಾರೆ. ರಾಜ್ಯಗಳ ಮತ್ತು ಕೇಂದ್ರದ ಆರ್ಥಿಕ ನಿಯಂತ್ರಣದಲ್ಲಿ ಅರೆ ಸರಕಾರಿ ಸಂಸ್ಥೆಗಳಾಗಿದ್ದ ವಿವಿಧ ಅಕಾಡಮಿಗಳು, ಈಗ ನೇರವಾಗಿ ಸಂಘಪರಿವಾರದ ಜನರಿಂದ ನಿರ್ವಹಿಸಲ್ಪಡುತ್ತಿವೆ. ಕರ್ನಾಟಕದ ಸಂದರ್ಭದಲ್ಲಿ ಹೇಳುವುದಾದರೆ, ರಂಗಾಯಣ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಆಕಾಶವಾಣಿಗಳೂ ಇದಕ್ಕೆ ಹೊರತಾಗಿಲ್ಲ.

ಲೇಖಕರು, ಚಿತ್ರನಿರ್ಮಾಪಕರು, ಕಲಾವಿದರು, ಸಂಸ್ಕೃತಿಚಿಂತಕರು ಮೊದಲಾದ ಸೃಜನಶೀಲರು ಮತ್ತು ಬುದ್ಧಿಜೀವಿಗಳು ಸಂಘಪರಿವಾರದೊಂದಿಗೆ ಸೈದ್ಧಾಂತಿಕವಾಗಿ ಗುರುತಿಸಿಕೊಳ್ಳುವುದು ಅನೈತಿಕವೇ, ಅಪರಾಧವೇ ಎಂಬ ಪ್ರಶ್ನೆಗಳಿಗೆ ಈಗಿರುವ ಪ್ರಜಾತಾಂತ್ರಿಕ ಚೌಕಟ್ಟಿನೊಳಗೇ ಉತ್ತರಿಸುವುದಾದರೆ, ತಾಂತ್ರಿಕವಾಗಿ ಇಲ್ಲ ಎಂಬ ಖಚಿತ ಉತ್ತರ ಸಾಧ್ಯ. ಎಲ್‌ಪಿಜಿ ಆರ್ಥಿಕತೆ ಮತ್ತು ಸಾಮಾಜಿಕತೆಯ ಸಂದರ್ಭದಲ್ಲಿ ಲೇಖಕರು, ಚಿತ್ರನಿರ್ಮಾಪಕರು, ಕಲಾವಿದರು, ಸಂಸ್ಕೃತಿಚಿಂತಕರು ಮೊದಲಾದ ಸೃಜನಶೀಲರು ಮತ್ತು ಬುದ್ಧಿಜೀವಿಗಳಲ್ಲಿ ಅನೇಕರು ಸೈದ್ಧಾಂತಿಕವಾಗಿ ಬಂಡವಾಳವಾದದೊಂದಿಗೆ, ಉದಾರವಾದದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವೇ ಪ್ರಶ್ನೆಗಳನ್ನು ಅಂತಹವರ ಬಗ್ಗೆ ಕೇಳಿದಾಗಲೂ ಈಗಿರುವ ಪ್ರಜಾತಾಂತ್ರಿಕ ಚೌಕಟ್ಟಿನೊಳಗೆ ಸಿಗುವ ಉತ್ತರ ಇಲ್ಲ ಎಂಬುದೇ ಆಗಿದೆ. ಹಾಗಿದ್ದರೆ ಸಂಘಪರಿವಾರದೊಂದಿಗೆ ಸೈದ್ಧಾಂತಿಕವಾಗಿ ಗುರುತಿಸಿಕೊಂಡ ವಿವಿಧ ರಂಗದ ಸೃಜನಶೀಲರು ಮತ್ತು ಬುದ್ಧಿಜೀವಿಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಸುಪ್ತವಾಗಿ ಅಥವಾ ಅಧಿಕೃತವಾಗಿ ಸೇರಿಕೊಂಡರೆ ಏನು ತೊಂದರೆ? ಅಂತಹವರು ಯೋಜಿಸುವ ಸಾರ್ವಜನಿಕ ಕ್ರಿಯೆಗಳ ಮೂಲಕ ಅವರ ಸೈದ್ಧಾಂತಿಕ ನಿಲುವನ್ನು ಮುನ್ನೊತ್ತುವುದಕ್ಕೆ ವಿರೋಧ ಯಾಕೆ? ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ತೊಂದರೆ ಇರುವುದು ಸಂಘಪರಿವಾರದ ಸೃಜನಶೀಲರು ಮತ್ತು ಬುದ್ಧಿಜೀವಿಗಳು ಅಥವಾ ಯಾರೇ ಆಗಲಿ, ಅವರು ಮೈಗೂಡಿಸಿಕೊಂಡಿರುವ ಅಥವಾ ಆಯ್ಕೆಯ ಸಿದ್ಧಾಂತದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ಕ್ರಿಯೆಯಲ್ಲಿ ಅಲ್ಲ. ಹಾಗೆ ಗುರುತಿಸಿಕೊಳ್ಳುವ ಸಿದ್ಧಾಂತವು ಜನಸಮುದಾಯದ ಅಂದರೆ ಸಾಮಾಜಿಕವಾಗಿ ದುಡಿಯುವ, ರಾಜಕೀಯವಾಗಿ ಆಳಿಸಿಕೊಳ್ಳುವ ಸಾಮಾನ್ಯ ಜನರ ಹಿತಾಸಕ್ತಿಗಳನ್ನು ಬೆಂಬಲಿಸುವ ಸಿದ್ಧಾಂತವಾಗಿದೆಯೋ, ಇಲ್ಲವೋ ಎಂಬುದು. ಅಂದರೆ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವಾದಿ ಸಿದ್ಧಾಂತವಾಗಿದೆಯೋ ಇಲ್ಲವೋ ಎಂಬುದರಲ್ಲಿ.

ಎರಡನೆಯ ಕಾರಣ, ಸಂಘಪರಿವಾರವು ತನ್ನ ರಾಜಕೀಯ ಆಯ್ಕೆ ಮತ್ತು ಆರ್ಥಿಕ ಆದ್ಯತೆಗಳನ್ನು ಅವುಗಳ ನಿಜರೂಪದಲ್ಲಿ ಮಂಡಿಸುವ ಬದಲು ಸಂಸ್ಕೃತಿಯ ಹೆಸರಿನಲ್ಲಿ ಅಭಿವ್ಯಕ್ತಗೊಳಿಸುತ್ತದೆ. ಭಾರತೀಯ ಸಂಸ್ಕೃತಿ, ಸನಾತನ ಭಾರತ, ವೈದಿಕಪರಂಪರೆ, ಆರ್ಷಜ್ಞಾನ, ವೇದವಿಜ್ಞಾನ, ವಿಶ್ವಗುರು ಹೀಗೆ ಸಂಘಪರಿವಾರವು ತನ್ನ ಸಂಕಥನಗಳಲ್ಲಿ ಮತ್ತೆ ಮತ್ತೆ ಬಳಸುವ ಯಾವ ಪದಗುಚ್ಛವನ್ನು ನೋಡಿದರೂ ಅದರ ಹಿಂದಿರುವುದು ದಿವ್ಯ-ಭವ್ಯವೆಂದು ಕೀರ್ತಿಸುವ ವರ್ಣವ್ಯವಸ್ಥೆಯೇ. ಜಾತಿತಾರತಮ್ಯ ಆಧಾರಿತ ಉತ್ತಮಿಕೆಯ ಬ್ರಾಹ್ಮಣ ಯಾಜಮಾನ್ಯವೇ. ನಂಬಿಕೆಯನ್ನು ವಿಜ್ಞಾನವೆಂದು, ಪುರಾಣಗಳನ್ನು ಚರಿತ್ರೆಯೆಂದು, ಜಾತಿ ತಾರತಮ್ಯಗಳನ್ನು ನೈಸರ್ಗಿಕ ಭೇದಗಳೆಂದು ನಂಬುವ, ತನ್ನ ನಂಬಿಕೆಯೇ ಚಾರಿತ್ರಿಕ ಮತ್ತು ವಸ್ತುನಿಷ್ಠ ಸಾರ್ವಕಾಲಿಕ ಸತ್ಯವೆಂದು ಪ್ರತಿಪಾದಿಸುವ ಸಂಘಪರಿವಾರದ ಸೈದ್ಧಾಂತಿಕತೆಯ ಹಿಂದೆ ಯಾವ ವೈಚಾರಿಕತೆಗೂ ಜಗ್ಗದ ಮೌಢ್ಯವಿದೆ. ತನ್ನ ಅಜ್ಞಾನವನ್ನು ಸಮರ್ಥಿಸಿಕೊಳ್ಳುವ ಹುಂಬತನವಿದೆ. ತಾರ್ಕಿಕವಾಗಿ ಎದುರಿಸಲಾಗದವರನ್ನು ಬಗ್ಗುಬಡಿಯುವ ಕ್ರೌರ್ಯವಿದೆ. ಕ್ರಿಯೆಯ ಹೊಣೆಗಾರಿಕೆಯಿಂದ ಜಾರಿಕೊಳ್ಳಬಲ್ಲ ಕುತರ್ಕ- ಜಾಣ್ಮೆಗಳಿವೆ. ನೈತಿಕತೆ-ಅನೈತಿಕತೆ, ನ್ಯಾಯ-ಅನ್ಯಾಯ, ಸುಳ್ಳು-ಸತ್ಯಗಳ ನಡುವಿನ ಗೆರೆಯನ್ನು ಅಳಿಸಿ ಅಥವಾ ಅಚೀಚೆ ತಳ್ಳಿ ಗೊಂದಲದ ಲಾಭವನ್ನು ಪಡೆಯುವ ವ್ಯಾಪಾರಿಯ ಧೂರ್ತತೆ ಇದೆ. ಸಮಯಕ್ಕೊಂದು ಹೆಸರು, ಉದ್ದೇಶಕ್ಕೊಂದು ಸಂಘಟನೆಯನ್ನು ಹುಟ್ಟುಹಾಕಿ ತನ್ನೆಲ್ಲ ಹುಸಿಗಳನ್ನೂ ನಿಜವೆಂದು ತೋರುವಂತೆ ಪೋಷಿಸಬಲ್ಲ ಅಗಾಧ ಕಲ್ಪನಾಶಕ್ತಿ ಇದೆ. ಬಂಡವಾಳವಾದಿ ಸಿದ್ಧಾಂತವು ಪ್ರತಿಪಾದಿಸುವ ಪ್ರಜಾಪ್ರಭುತ್ವವು ಕೇವಲ ತೋರಿಕೆಯದು ಅಥವಾ ಅದು ಆಳುವವರ್ಗಕ್ಕೆ ಮಾತ್ರ ಅನ್ವಯವಾಗುವಂತಹ ಪ್ರಜಾತಂತ್ರ. ಹಾಗಿದ್ದರೂ ಅದರಲ್ಲಿ ಆಳಿಸಿಕೊಳ್ಳುವ ಜನಸಮುದಾಯದ ಆಶೋತ್ತರಗಳ ಭಿನ್ನ ನೆಲೆಗಳ ಅಭಿವ್ಯಕ್ತಿಗೆ ಮತ್ತು ಸೀಮಿತ ಮಟ್ಟದ ಭಿನ್ನಮತಕ್ಕೆ ಸ್ವಲ್ಪವಾದರೂ ಅವಕಾಶವಿದೆ. ಅದು ಕೇವಲ ಆಳುವವರ ಅಧಿಕಾರವನ್ನು ಛಿದ್ರವಾಗದಂತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಎಂಬುದು ನಿಜ. ಹೀಗಿದ್ದರೂ ಒಟ್ಟು ಫಲಿತದಲ್ಲಿ, ಪ್ರಭುತ್ವದ ಬುನಾದಿಯನ್ನು ಅಲುಗಿಸದ ಭಿನ್ನಮತ ಮತ್ತು ಭಿನ್ನ ನಿಲುವುಗಳು ಜನಸಾಮಾನ್ಯರ ಅಸ್ಮಿತೆ ಮತ್ತು ಅನನ್ಯತೆಗಳಿಗೆ ಸ್ಥಳಾವಕಾಶವನ್ನು ಒದಗಿಸುತ್ತದೆ ಎಂಬುದೂ ಅಷ್ಟೇ ನಿಜ. ತನ್ನ ಗರ್ಭದಲ್ಲಿ ಆರ್ಥಿಕ ತಾರತಮ್ಯವನ್ನು ಪೋಷಿಸುತ್ತಲೇ ಸಮಾಜದ ಮೇಲ್ಪದರಗಳಲ್ಲಿ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ತೋರಿಕೆಯ ಇಲ್ಲವೇ ಸಾಂಕೇತಿಕವಾದ ಸಮಾನತೆಯನ್ನು ಬಂಡವಾಳವಾದವು ತಾತ್ವಿಕವಾಗಿಯಾದರೂ ಮಾನ್ಯಮಾಡುತ್ತದೆ. ಈ ಕಾರಣಕ್ಕಾಗಿಯೇ ಬಂಡವಾಳವಾದಿ ಪ್ರಜಾತಂತ್ರವು ಪ್ರಜಾಪ್ರಭುತ್ವದ ಹೆಸರಿನಲ್ಲಿ ವಿಶ್ವದ ಎಲ್ಲ ಭಾಗಗಳಲ್ಲಿಯೂ ಜನಪ್ರಿಯವಾದ ಜನತಂತ್ರವಾಗಿದೆ.

ಬಂಡವಾಳವಾದಿ ಪ್ರಭುತ್ವದ ತೀವ್ರ ಸ್ವರೂಪವಾದ ಫ್ಯಾಶೀವಾದದ ಸೈದ್ಧಾಂತಿಕ ಚೌಕಟ್ಟಿನೊಳಕ್ಕೆ ವರ್ಗಭೇದದ ಜೊತೆಗೆ ವರ್ಣಭೇದ ಮತ್ತು ಜನಾಂಗ ಭೇದಗಳು ಸೇರಿಕೊಳ್ಳುತ್ತವೆ. ಈ ಸ್ಥಿತಿಯಲ್ಲಿ ಜನಸಮುದಾಯದ ಪರವಾದ ಭಿನ್ನಮತಕ್ಕೆ ಯಾವ ಅವಕಾಶವೂ ಇಲ್ಲ. ಮಾತ್ರವಲ್ಲ, ಭಿನ್ನಮತವೆಂಬುದೇ ಇರಬಾರದೆಂಬ ಏಕಾಧಿಕಾರದ ನಿಲುವು ಫ್ಯಾಶೀವಾದದ ಅವಿಭಾಜ್ಯ ಅಂಗ. ಇನ್ನೂ ತೀವ್ರಸ್ಥಿತಿಯಲ್ಲಿ ಭಿನ್ನನಿಲುವನ್ನು ಹೊಂದಿರುವ ಜನರ ಅಸ್ಮಿತೆ, ಅನನ್ಯತೆ ಮತ್ತು ಅಸ್ತಿತ್ವಗಳು ಏಕಾಧಿಕಾರದ ಮೂಸೆಯಲ್ಲಿ ಕರಗಿಹೋಗಬೇಕು ಇಲ್ಲವೇ ನಾಶವಾಗಬೇಕು ಎಂಬ ಪರ್ಯಾಯವನ್ನು ಫ್ಯಾಶೀವಾದವು ಜನರಮುಂದೆ ಇಡುತ್ತದೆ. ನಾಶವಾಗುವುದಕ್ಕಿಂತ ಬದುಕಿರುವುದೇ ಎಲ್ಲರ, ಅದರಲ್ಲೂ ನಿರ್ಬಲರ ಸ್ವಾತಂತ್ರ್ಯದ ಪ್ರಾಥಮಿಕ ಅಭಿವ್ಯಕ್ತಿಯಾದ್ದರಿಂದ ಅವರ ಪ್ರತಿರೋಧವಿಲ್ಲದ ಜೀವನಶೈಲಿಯು ಫ್ಯಾಶೀವಾದಿ ಪ್ರಭುತ್ವಕ್ಕೆ ಜನರ ಸಮ್ಮತಿಯಾಗಿ ಪರಿವರ್ತಿತವಾಗುತ್ತದೆ.

ಸಂಘಪರಿವಾರದ ಸೈದ್ಧಾಂತಿಕ ನಿಲುವು ಭಾರತದ ಬಂಡವಾಳವಾದಿ ಪ್ರಭುತ್ವದ ನವಉದಾರವಾದಿ ಆರ್ಥಿಕತೆಗೆ ಊಳಿಗಮಾನ್ಯ ಧೋರಣೆಗಳ ರಾಜಕೀಯ ಮತ್ತು ಸಾಮಾಜಿಕತೆಗಳನ್ನು ಹೊಂದಿಸಿದ ಪರಿಷ್ಕೃತ ಫ್ಯಾಶೀವಾದವೇ ಆಗಿದೆ. ಉತ್ಪಾದನೆ, ಸರಕು-ಸೇವೆ, ವಿನಿಮಯ-ಹಂಚಿಕೆಗಳ ಆರ್ಥಿಕತೆಯಲ್ಲಿ ಬಂಡವಾಳವಾದಿಯಾಗಿ, ಕೌಟುಂಬಿಕ ಸಂಬಂಧಗಳು, ಸಾಮಾಜಿಕ ಒಡನಾಟ ಮತ್ತು ಸಾಂಸ್ಕೃತಿಕ ಧೋರಣೆಗಳಲ್ಲಿ ಊಳಿಗಮಾನ್ಯ ಸಮಾಜವಾಗಿ ಇರುವ ಭಾರತದ ಸಂಕೀರ್ಣ ಸ್ವರೂಪವು ಸಂಘಪರಿವಾರದ ಅಧಿಕಾರಗ್ರಹಣಕ್ಕೆ ಅನುಕೂಲಕರವಾಗಿಯೂ, ತಮ್ಮ ಧೋರಣೆಗಳಿಗೆ ಹೊಂದುವಂತೆ ನಿಭಾಯಿಸಲು ಏಕಕಾಲಕ್ಕೆ ಕಷ್ಟಕರವಾದುದೂ ಆಗಿದೆ. ಯೂರೋಪಿನ ನಾಝಿ ಫ್ಯಾಶೀವಾದದಲ್ಲಿ ಜನಾಂಗದ್ವೇಷಕ್ಕೆ ಗುರಿಯಾಗಿದ್ದ ಯಹೂದಿಗಳ ಸ್ಥಾನದಲ್ಲಿ ಭಾರತದಲ್ಲಿ ಸಂಘಪರಿವಾರದ ವೈದಿಕ-ಸನಾತನವಾದಿ ಫ್ಯಾಶೀವಾದಕ್ಕೆ ಮುಸ್ಲಿಂ ಮತ್ತು ಕ್ರೈಸ ಧರ್ಮೀಯರು ದ್ವೇಷಯೋಗ್ಯರಾಗಿದ್ದಾರೆ. ಕಮ್ಯುನಿಸ್ಟರು ಮತ್ತು ಅರಾಜಕತಾವಾದಿಗಳು ಹಿಟ್ಲರ್ ಮತ್ತು ಮುಸೋಲಿನಿಗೆ ಹೇಗೋ ಹಾಗೆ ಭಾರತದಲ್ಲಿ ಕಮ್ಯುನಿಸ್ಟರು ಮತ್ತು ನಾಸ್ತಿಕರು ಸಂಘಪರಿವಾರಕ್ಕೆ. ಊಳಿಗಮಾನ್ಯ ಸಮಾಜದಲ್ಲಿ ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಜನಸಾಮಾನ್ಯರಿಗೆ ಸಮ್ಮತವಾದ ಸರ್ವಶಕ್ತ ದೇವರ ಆರಾಧನೆಯು, ಏಕಾಧಿಕಾರದ ಮನುಷ್ಯರೂಪದ ನೇತಾರನ ಆರಾಧನೆಯಾಗುತ್ತದೆ. ಇದಕ್ಕೆ ವಿರುದ್ಧವಾದ ಧೋರಣೆಯು ನಾಸ್ತಿಕತೆ, ದೈವದ್ರೋಹ ಮತ್ತು ರಾಜದ್ರೋಹವೆನಿಸುತ್ತದೆ. ಸಂಘಪರಿವಾರವು ಅಂತಹ ಏಕದೇವತೆಯ ಜೊತೆಗೆ ಮತ್ತು ಅದರ ಸ್ಥಾನದಲ್ಲಿ ಮಾತೃಭೂಮಿಯನ್ನು ಪ್ರತಿಷ್ಠಾಪನೆಗೊಳಿಸುತ್ತದೆ. ಹೀಗಾಗಿ ಜನಸಮುದಾಯವನ್ನು ದೇಶವೆಂದು ಗುರುತಿಸಿ ಗೌರವಿಸುವ ಬದಲು ಭಾರತದ ಭೌಗೋಳಿಕ ಚಿತ್ರವನ್ನೇ ಭಾರತಮಾತೆ, ನಾಡದೇವಿ ಎಂದು ಭಾವಿಸಿ ಪೂಜಿಸುವಂತಹ ದೇಶದ ಆರಾಧನೆಯು, ಸಂಘಪರಿವಾರದ ಪಾಲಿಗೆ ದೇಶಭಕ್ತಿ, ರಾಷ್ಟ್ರಭಕ್ತಿ, ನಾಡಭಕ್ತಿ ಮುಂತಾದ ಧಾರ್ಮಿಕ-ಲೌಕಿಕ ಮಿಶ್ರಣದ ರಾಜಕೀಯ ಮೌಲ್ಯವಾಗುತ್ತದೆ. ಇದರ ಬಗೆಗಿನ ಭಿನ್ನಮತವು ಸಹಜವಾಗಿಯೇ ದೇಶದ್ರೋಹ, ರಾಷ್ಟ್ರದ್ರೋಹ, ಮಾತೃಭೂಮಿಗೆ ತೋರಿಸಬಾರದ ಅಗೌರವ ಎಂದಾಗಿಬಿಡುತ್ತದೆ.

ಸಂಘಪರಿವಾರದ ಸೈದ್ಧಾಂತಿಕ ನಿಲುವಿನ ಜೊತೆ ತಮ್ಮನ್ನು ಗುರುತಿಸಿಕೊಳ್ಳುವ ಸೃಜನಶೀಲರು, ಕಲಾವಿದರು ಮತ್ತು ಬುದ್ಧಿಜೀವಿಗಳು ಬೌದ್ಧಿಕ ವಾಗ್ವಾದ ಮತ್ತು ಚರ್ಚೆಗಳಲ್ಲಿ ತಮ್ಮ ಸೈದ್ಧಾಂತಿಕ ನೆಲೆಯನ್ನು ಸ್ಪಷ್ಟವಾಗಿ ಪ್ರಕಟಿಸಿ ಸಮರ್ಥಿಸಿಕೊಳ್ಳುವ ಬದಲು ಹೀಗಿದ್ದರೇನು ತಪ್ಪು?, ಇದು ಹಿಂದಿನವರ ತೀರ್ಮಾನ, ನೀವೂ ಇದರಲ್ಲಿ ಪಾಲುದಾರರು ಮುಂತಾಗಿ ಪ್ರತಿದಾಳಿ ನಡೆಸಿ ಬಾಯಿ ಮುಚ್ಚಿಸಲು ಯತ್ನಿಸುತ್ತಾರೆ

ಸಂಘಪರಿವಾರದಲ್ಲಿ ಮುಗ್ಧ ಕಾಲಾಳುಗಳಿದ್ದಾರೆ. ಅರೆಶಿಕ್ಷಿತ ಉತ್ಸಾಹಿಗಳಿದ್ದಾರೆ. ಅಧ್ಯಯನಶೀಲರಾದ ಬೌದ್ಧಿಕರಿದ್ದಾರೆ. ಆದರೂ ಸರಕಾರದ ಅನುದಾನವನ್ನು ಪಡೆಯುವ ಅಕಾಡಮಿಗಳು, ಸಂಸ್ಕೃತಿ ಕೇಂದ್ರಗಳು, ಸಾಹಿತ್ಯ ಕೂಟಗಳು, ಚಲನಚಿತ್ರ ಸಂಸ್ಥೆಗಳು, ಕಲಾವಿದರ ಬಳಗಗಳು, ಪತ್ರಿಕಾ ಮಾಧ್ಯಮಗಳು, ದೂರದರ್ಶನ, ಆಕಾಶವಾಣಿಯಂತಹ ಪ್ರಸಾರ ಕೇಂದ್ರಗಳು ಇವುಗಳಲ್ಲಿ ತುಂಬಿಕೊಂಡಿರುವ ಸಂಘಪರಿವಾರದ ಸೃಜನಶೀಲರು ಮತ್ತು ಬುದ್ಧಿಜೀವಿಗಳು ಭಿನ್ನಮತದ ಜನರೊಂದಿಗೆ ಸಾಂಸ್ಕೃತಿಕ ಮತ್ತು ಬೌದ್ಧಿಕವಾಗಿ ನಡೆದುಕೊಳ್ಳುವುದಿಲ್ಲ. ಪ್ರಾಮಾಣಿಕ ವಿರೋಧವನ್ನು ಸುಳ್ಳು, ಅರೆ ಸತ್ಯ, ಕುಟಿಲ ಬುದ್ಧಿವಂತಿಕೆ, ಧೂರ್ತತನ ಮತ್ತು ಹುಂಬತನಗಳ ಮೂಲಕ ಗೆಲ್ಲಲು ಹವಣಿಸುತ್ತಾರೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ವೈಚಾರಿಕ ಮತ್ತು ತಾರ್ಕಿಕ ನೆಲೆಗಳಲ್ಲಿ, ಭಿನ್ನ ಸೈದ್ಧಾಂತಿಕ ನಿಲುವುಗಳ ಸೃಜನಶೀಲರು ಮತ್ತು ಬುದ್ಧಿಜೀವಿಗಳೊಂದಿಗೆ ಮುಕ್ತಚರ್ಚೆ-ವಾಗ್ವಾದಗಳ ಮೂಲಕ ಬೆರೆಯುವ ಬದಲು, ಮುಖಮರೆಸಿಕೊಂಡ ಯಾವುದ್ಯಾವುದೋ ನೆಲೆಗಳಿಂದ ಅವರ ಮೇಲೆ ದಾಳಿಮಾಡುತ್ತಾರೆ. ಎದುರಾಳಿಯನ್ನು, ಎಡಚರು, ವಾಮಮಾರ್ಗಿಗಳು, ಮಾವೋವಾದಿಗಳು ಮುಂತಾಗಿ ಹೆಸರಿಸಿ, ಭಿನ್ನಮತವನ್ನು ಚದುರಿಸುವುದು ಸಂಘಪರಿವಾರದ ಮಾಮೂಲಿ ಧೂರ್ತ ತಂತ್ರ. ಇವುಗಳಲ್ಲಿ ಪಳಗಿದ ಧೂರ್ತ ರಾಜಕಾರಣಿಗಳು ತಮ್ಮ ವಿರೋಧಿಗಳ ವಿರುದ್ಧ ಎಗ್ಗಿಲ್ಲದೆ ಬಳಸುವ ನಿಂದನೆ, ಭರ್ತ್ಸನೆಗಳನ್ನು ಸಂಘಪರಿವಾರದ ಸಾಂಸ್ಕೃತಿಕ ಸಂಘಟನೆಗಳ ಅಧಿಕಾರಸ್ಥರೂ ನಿಸ್ಸಂಕೋಚವಾಗಿ ಬಳಸಿ, ಸಾಂಸ್ಕೃತಿಕ ಮತ್ತು ಬೌದ್ಧಿಕ ಭಿನ್ನಮತವನ್ನು ಎದುರಿಸುತ್ತಾರೆ.

ಮೈಸೂರಿನ ಬಹುರೂಪಿ ನಾಟಕೋತ್ಸವಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದದಲ್ಲಿ ರಂಗಾಯಣದ ಹಾಲಿ ನಿರ್ದೇಶಕರ ನಡವಳಿಕೆಯು ಸಂಘಪರಿವಾರದ ಇಂತಹ ಅಧಿಕಾರ ಶೈಲಿಯ ಜೀವಂತ ನಿದರ್ಶನವಾಗಿದೆ. ಹೀಗಾಗಲು ಬಹು ಮುಖ್ಯ ಕಾರಣ ಸಂಘಪರಿವಾರದ ಸೈದ್ಧಾಂತಿಕ ನೆಲೆಯು ಬಂಡವಾಳವಾದದಂತೆ ಪ್ರಜಾತಾಂತ್ರಿಕವಾಗಿರದೆ, ಏಕಾಧಿಕಾರವನ್ನು ಬಯಸುವ ಫ್ಯಾಶೀವಾದವನ್ನು ಮೈಗೂಡಿಸಿಕೊಂಡಿರುವುದೇ ಆಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)