varthabharthi


ನಿಮ್ಮ ಅಂಕಣ

ಮೊಟ್ಟೆ: ಲಿಂಗಾಯತರ ದಾರಿ ತಪ್ಪಿಸಬೇಡಿ

ವಾರ್ತಾ ಭಾರತಿ : 17 Dec, 2021
ಶಿವಕುಮಾರ್ ಉಪ್ಪಿನ, ವಿಜಯಪುರ

ನಾನು ಚಿಕ್ಕವನಿದ್ದಾಗ ತೆಳ್ಳಗಿದ್ದೇನೆ ಎಂದು ಡಾಕ್ಟರ್ ‘‘ಇವನಿಗೆ ತತ್ತಿ ಕೊಡ್ರಿ’’ ಅಂದಿದ್ರು. ನಮ್ಮ ಕಾಕಾ ಆಗ ಸಂತೆಯಲ್ಲಿ ಸಿಗುತ್ತಿದ್ದ ಜವಾರಿ ಮೊಟ್ಟೆ ತಂದು, ಹಾಲಲ್ಲಿ ಹಾಕಿ ಕುಡಿಸಲು ಮತ್ತು ಕುದಿಸಿ ತಿನ್ನಿಸಲು ಶುರು ಮಾಡಿದರು. ಹಾಗೆ ನನಗೆ ಮೊಟ್ಟೆ ಮೊದಲ ಬಾರಿಗೆ ಪರಿಚಯವಾಗಿ ಹತ್ತಿರವಾಯಿತು. ನಾವು ಮನೆಯಲ್ಲಿ ಹಲವರು ಈಗಲೂ ಮೊಟ್ಟೆ ತಿನ್ನುತ್ತೇವೆ. ನಮ್ಮ ಮಕ್ಕಳಿಗೂ ತಂದು ಕೊಡುತ್ತೇವೆ. ನನ್ನಾಕೆ ಮಾತ್ರ ಮೊಟ್ಟೆ ತಿನ್ನುವುದಿಲ್ಲ. ಮಾಂಸ ತಿನ್ನುವುದು ಬೇಡ ಅಂತ ಪ್ರಜ್ಞಾಪೂರ್ವಕವಾಗಿ ನಾವು ತಿನ್ನುವುದಿಲ್ಲ. ತಿನ್ನುವವರನ್ನೂ ನಿಕೃಷ್ಟವಾಗಿ ನಾವು ಕಾಣುವುದಿಲ್ಲ. ಹಾಗೆ ಕಾಣುವುದು ಶರಣರ ಧರ್ಮ ಅಲ್ಲವೇ ಅಲ್ಲ. ಈಗ ಮೊಟ್ಟೆ ಬೇಕು, ಕೊಡಿ ಎನ್ನುವವರನ್ನು ನೀವು ‘ಲಿಂಗಾಯತರಲ್ಲ’ ಅಂತ ಹೇಳುವ ಮನಸ್ಥಿತಿ ನೋಡಿದರೆ ಖೇದವಾಗುತ್ತೆ. ನಿಜಕ್ಕೂ ಇದು ‘ಲಿಂಗಾಯತ’ಕ್ಕೇ ಅಪಾಯಕಾರಿ. ಚರ್ಚೆ ಮಾಡಲಿ, ತಮ್ಮ ಅಭಿಪ್ರಾಯ ಹೇಳಲಿ. ಯಾಕೆ ಬೇಕು, ಬೇಡ ಅಂತ ವಿನಯದಿಂದ ತಿಳಿಸಲಿ. ಆದರೆ, ಅಭಿಪ್ರಾಯ ಭೇದವಿದ್ದವರನ್ನು ಕೀಳಾಗಿ ಕಾಣುವುದು, ನೀವು ಲಿಂಗಾಯತರೇ ಅಲ್ಲ ಅನ್ನುವುದು ಯಾವ ಆಚಾರ? ಸದಾಚಾರದ ಹೆಸರಲ್ಲಿ ಸಸ್ಯಾಹಾರಿಗಳಿಗೇ ಬೇರೆ ಶಾಲೆ ಮಾಡಬೇಕಾ? ಇದೆಷ್ಟು ಸರಿ? ‘ನಾನ್ ವೆಜ್ ಸ್ಕೂಲ್’, ‘ವೆಜ್ ಸ್ಕೂಲ್’ ಅಂತ ಮಕ್ಕಳನ್ನು ವಿಭಜಿಸಿದರೆ ಮುಂದೆ ಅವರ ಗತಿ ಏನಾಗಲಿದೆ ಯೋಚಿಸಿ!

ಬಸವಣ್ಣನವರು ‘ಸದು ವಿನಯವೇ ಸದಾ ಶಿವನೊಲುಮೆ..’ ಎಂದು ಹೆಂಡದ ಜತೆ ಮಾಂಸ ತಿನ್ನುವವರನ್ನೂ ಅಪ್ಪಿಕೊಂಡು-ಒಪ್ಪಿಕೊಂಡು ಶರಣರನ್ನಾಗಿಸಿದರು. ಅವರ ಮತ್ತು ಉಳಿದ ಶರಣರ ಅನೇಕ ವಚನಗಳಲ್ಲಿ ಇದೆಲ್ಲ ನಾವು ಕಾಣಲ್ಲವೆ? ಕಂಡೂ ವಿತಂಡ ವಾದಕ್ಕೆ ಬಿದ್ದು, ನಮ್ಮದೇ ಸರಿಯೆಂದು ಉಳಿದೆಲ್ಲ ಲಿಂಗಾಯತರ ಹೆಸರಲ್ಲಿ ಹೆದರಿಸುವುದು ಸಾಧುವಲ್ಲ. ಇದಕ್ಕೆ ಎಲ್ಲ ಲಿಂಗಾಯತರ ಬೆಂಬಲವೂ ಇಲ್ಲ. ಇದು ಬಸವಾದಿ ಶರಣರ, ಮಾತೆ ಮಹಾದೇವಿಯವರ, ಲಿಂಗಾನಂದ ಶ್ರೀಗಳ ಆಶಯವಾಗಿರಲೂ ಇಲ್ಲ. ಅವರಿದ್ದಿದ್ದರೆ ಹೀಗೆ ಸರಿಯಾಗಿ ಯೋಚಿಸದೆ, ದಿನಕ್ಕೊಂದು ಏನೇನೋ ಹೇಳುತ್ತ, ಯಾರೊಂದಿಗೋ ಸೇರಿ ವಿರೋಧಿಸುತ್ತ ‘ನೀವು ಲಿಂಗಾಯತರಲ್ಲ’ ಅನ್ನುತ್ತಿರಲಿಲ್ಲ!

ಲಿಂಗಾಯತ ಧರ್ಮವನ್ನು ಜಾಗತಿಕ ಮಟ್ಟದಲ್ಲಿ ಈಗೆಲ್ಲ ಒಪ್ಪಲಾಗುತ್ತಿದೆ. ಇಂತಹ ಸಂದರ್ಭ ಆಹಾರದ ವಿಷಯದಲ್ಲಿ ಹೀಗೆ ಬಸವಣ್ಣನವರ ಹಾದಿಯನ್ನು ಸಂಕುಚಿತಗೊಳಿಸಿ, ಈ ಕಡೆ ವಾಲುವವರನ್ನೂ ಇರಿಸು ಮುರಿಸುಗೊಳಿಸಬೇಡಿ. ಬಸವ ಧರ್ಮ ವಿಶಾಲವಾದದ್ದು, ಎಲ್ಲರನ್ನೂ ಒಪ್ಪಿಕೊಳ್ಳುವುದು, ಪ್ರೇಮದಿಂದ ಕಾಣುವುದೇ ಆಗಿದೆ. ಮಾಂಸ ತಿನ್ನುವವರನ್ನು ಪ್ರತ್ಯೇಕವಾಗಿಟ್ಟು, ದೇವಸ್ಥಾನಕ್ಕೂ ಬಿಡದ ಸಂದರ್ಭದಲ್ಲಿ ಅವರನ್ನು ಅಪ್ಪಿಕೊಂಡ ಬಸವಣ್ಣನವರು, ಅವರೂ ಮನುಷ್ಯರೇ ಎಂದು ಹೇಳುತ್ತ ‘ದಮನಿತರ ಮಗ ನಾನು’ ಅಂತ ಸಾರಿ ಸಾರಿ ಅವರಿಗೆ ಕಕ್ಕುಲಾತಿ ತೋರಿ ಶರಣರಾಗಿಸಿದ್ದರು.

ಈಗ ಮೊಟ್ಟೆ ತಿನ್ನುವವರನ್ನು ಬೇರೆ ಕೂಡಿಸಿ ಅಂತ ಹೇಳುವುದು ಮತ್ತೊಂದು ಬಗೆಯ ಅಸ್ಪೃಶ್ಯತೆಯಲ್ಲವೇ? ಬಸವಣ್ಣ ಕೂಡಿಸಿದ್ದನ್ನು ನೀವು ಕಳೆಯುತ್ತೀರಾ? ಇದು ತಾವಷ್ಟೇ ‘ಪ್ಯೂರ್ ಲಿಂಗಾಯತ’ರೆಂದು ತಿಳಿದವರು ಮಾಡಬೇಕೇ? ಖಂಡಿತ ಇಲ್ಲ.

 ದಯವಿಟ್ಟು ಮನವಿ ಮಾಡುವೆ, ಬಿಟ್ಟು ಬಿಡಿ ಇದೆಲ್ಲ. ಸದ್ಯ ಸರಕಾರವೂ ಸುಮ್ಮನಾಗಿದೆ. ಮತ್ತೇಕೆ ಈ ಹೋರಾಟ, ಗೊಂದಲ? ನಿಜ ‘ಲಿಂಗಾಯತ’ವನ್ನು, ಬಸವಣ್ಣನವರನ್ನು ಅವರ ವಿಶ್ವ ಮಾನವ ವಿಚಾರಗಳನ್ನು ಕುಬ್ಜಗೊಳಿಸಬೇಡಿ. ನೀವು ಭ್ರಮಿಸಿರುವ ‘ಲಿಂಗಾಯತ’ ಲಿಂಗಾಯತವೇ ಅಲ್ಲ. ಅದರ ಬೆಳಗು ಬೇರೆಯೇ ಇದೆ. ನನ್ನನ್ನೂ ನೀವು ಲಿಂಗಾಯತ ಅಲ್ಲ ಅಂದರೂ ಚಿಂತೆ ಇಲ್ಲ. ‘ಮಕ್ಕಳಿಗೆ ಮೊಟ್ಟೆ ಬೇಕಿದ್ದರೆ ಕೊಡಲಿ, ತಿನ್ನಬೇಕು ಅನ್ನಿಸಿದವರೂ ತಿನ್ನಲಿ’.

ಹಾಗಾಗಿ ಹೆಮ್ಮೆಯಿಂದ ಹೇಳುವೆ, ‘ಬಸವಾದಿ ಶರಣರ’ ಹಾದಿಯ ನಿಜವಾದ ಲಿಂಗಾಯತ ನಾನು!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)