varthabharthi


ಸಂಪಾದಕೀಯ

ಕನ್ನಡ ಅಸ್ಮಿತೆಯ ಮೇಲೆ ದಾಳಿ ನಡೆಸುತ್ತಿರುವವರು!

ವಾರ್ತಾ ಭಾರತಿ : 20 Dec, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಬೆಳಗಾವಿಯಲ್ಲಿಂದು ಏನು ನಡೆಯುತ್ತಿದೆಯೋ ಅದು ಅನಿರೀಕ್ಷಿತವೇನೂ ಅಲ್ಲ. ಬೆಳಗಾವಿಯಲ್ಲಿ ಕನ್ನಡದ ಮೇಲೆ ಹಾಡಹಗಲೇ ನಡೆಯುತ್ತಿರುವ ದಾಳಿಯಲ್ಲಿ ಹಿಂದುತ್ವವಾದಿ ಸಂಘಟನೆಗಳು ಮತ್ತು ಶಿವಸೇನೆ ಜೊತೆ ಜೊತೆಯಾಗಿ ಕೆಲಸ ಮಾಡಿವೆ. ಕರ್ನಾಟಕದಲ್ಲಿ ಆರೆಸ್ಸೆಸ್ ಗಟ್ಟಿಯಾಗಿ ಬೇರಿಳಿಸಿದ ದಿನದಿಂದಲೇ ಇಲ್ಲಿ ಮರಾಠರ ಮತ್ತು ಇತರ ಅಸ್ಮಿತೆಗಳನ್ನು ಹೇರುವ ಪ್ರಯತ್ನ ನಡೆಯುತ್ತ ಬಂದಿದೆ. ಬೆಳಗಾವಿಯಲ್ಲಿ ನಡೆದಿರುವುದು ಮೇಲ್ನೋಟಕ್ಕೆ ಭಾಷಾ ಸಂಘರ್ಷವೆಂದು ಕಂಡರೂ , ಇದು ಕನ್ನಡ ಸಂಸ್ಕೃತಿಯ ಮೇಲೆ ಉತ್ತರ ಭಾರತೀಯ ಸಂಸ್ಕೃತಿಯ ಹೇರುವಿಕೆಯ ಮುಂದುವರಿದ ಭಾಗವಾಗಿದೆ. ಹಿಂದುತ್ವವಾದಿಗಳ ಪೊಳ್ಳು ಸಾಂಸ್ಕೃತಿಕ ಅಸ್ಮಿತೆಗಳಿಗೆ ಕನ್ನಡತನ ಸವಾಲು ಹಾಕುತ್ತಿರುವುದರಿಂದ, ಅವರು ಕನ್ನಡದ ಒಂದೊಂದೇ ಗುರುತುಗಳನ್ನು ನಾಶ ಮಾಡಲು ಹೊರಟಿದ್ದಾರೆ. ಪುಲಕೇಶಿ, ವಿಕ್ರಮಾದಿತ್ಯ, ಕದಂಬ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಟಿಪ್ಪುಸುಲ್ತಾನ್‌ನಂತಹ ಐತಿಹಾಸಿಕ ಗುರುತುಗಳ ಮೂಲಕ ನಮ್ಮತನವನ್ನು ಪ್ರದರ್ಶಿಸುತ್ತಿರುವ ಕನ್ನಡಿಗರ ಮೇಲೆ , ಮಹಾರಾಷ್ಟ್ರದ ಶಿವಾಜಿ, ಉತ್ತರ ಭಾರತದ ರಾಣಾ ಪ್ರತಾಪಸಿಂಹ, ಪೃಥ್ವೀರಾಜ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಇವರನ್ನೆಲ್ಲ ಹೇರುವ ಪ್ರಯತ್ನವನ್ನು ಆರೆಸ್ಸೆಸ್ ಮೂಲಕ ಉತ್ತರಭಾರತೀಯರು ನಡೆಸುತ್ತಿದ್ದಾರೆ. ತಮಿಳುನಾಡು ಮತ್ತು ಕೇರಳ ಈ ಸಂಚಿನ ವಿರುದ್ಧ ಈಗಾಗಲೇ ಪ್ರಬಲ ಪ್ರತಿರೋಧಗಳನ್ನು ಮಾಡಿವೆ. ಕೇರಳಿಗರ ‘ಓಣಂ’ನ್ನು ‘ವಾಮನ ಜಯಂತಿ’ ಮಾಡಲು ಹೊರಟು, ಅಮಿತ್ ಶಾ ಮುಖಭಂಗ ಅನುಭವಿಸಿದ್ದು ಗೊತ್ತೇ ಇದೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ನಾಯಕರ ಗುಲಾಮಿ ಮನಸ್ಥಿತಿಯ ಪರಿಣಾಮವಾಗಿ ಕನ್ನಡದ ಎಲ್ಲ ಅಸ್ಮಿತೆಗಳೂ ಮೂಲೆಗುಂಪಾಗುತ್ತಿವೆ. ಆ ಸ್ಥಾನದಲ್ಲಿ ಉತ್ತರ ಭಾರತೀಯರನ್ನು ತಂದು ಕೂರಿಸಲಾಗುತ್ತಿದೆ. ಆರೆಸ್ಸೆಸ್ ಕಚೇರಿಗಳಲ್ಲಿ ಸಿದ್ಧವಾಗುತ್ತಿರುವ ಚಂದಮಾಮನ ಕತೆಗಳನ್ನು ಕನ್ನಡ ಇತಿಹಾಸದ ಮೇಲೆ ಹೇರಲಾಗುತ್ತಿದೆ.

ಕರ್ನಾಟಕದ ಇತಿಹಾಸವನ್ನು ಇಂದು ಸಂಘಪರಿವಾರ ಕುಬ್ಜಗೊಳಿಸುತ್ತಿದೆ. ಉತ್ತರ ಭಾರತದ ರಾಜಾ ಹರ್ಷವರ್ಧನನನ್ನು ಸೋಲಿಸಿದ ಇಮ್ಮಡಿ ಪುಲಿಕೇಶಿ ಆಳಿದ ನಾಡಿದು. ಈತನ ವಂಶಜ ವಿಕ್ರಮಾದಿತ್ಯ ಭಾಗಶಃ ಭಾರತವನ್ನು ಆಳಿದ ಎಂದು ಇತಿಹಾಸ ಹೇಳುತ್ತದೆ. ಕರ್ನಾಟಕದಲ್ಲಿ ಹುಟ್ಟಿದ ಟಿಪ್ಪು ಸುಲ್ತಾನ್ ಇಂದು ಬೇರಾವುದೇ ರಾಜ್ಯದಲ್ಲಿ ಹುಟ್ಟಿದ್ದರೆ ಆತನನ್ನು ಮುಂದಿಟ್ಟು ತಮ್ಮ ರಾಜ್ಯದ ಹಿರಿಮೆಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದರು. ಆದರೆ ಕರ್ನಾಟಕದ ಹೆಮ್ಮೆಯಾಗಿರುವ ಟಿಪ್ಪು ಸುಲ್ತಾನ್‌ನನ್ನು ಕುಬ್ಜಗೊಳಿಸುವ ಕೆಲಸವನ್ನು ರಾಜ್ಯದೊಳಗೆ ಸಂಘಪರಿವಾರವೇ ಮಾಡುತ್ತಿದೆ. ಬ್ರಿಟಿಷರನ್ನೇ ದಿಗ್ಭ್ರಮೆಗೊಳಿಸಿದ, ಮೈಸೂರು ಪ್ರಾಂತಕ್ಕಷ್ಟೇ ಸೀಮಿತವಾಗಿದ್ದ ನೆಲೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದ, ಕೃಷಿ , ವಿಜ್ಞಾನಗಳಲ್ಲಿ ಕ್ರಾಂತಿ ಮಾಡಿದ್ದ ಟಿಪ್ಪು ಕನ್ನಡದ ಇತಿಹಾಸದ ಇನ್ನೊಂದು ರತ್ನ. ಉತ್ತರ ಭಾರತದಲ್ಲೆಲ್ಲೂ ಟಿಪ್ಪು ಸುಲ್ತಾನನಂತಹ ಒಂದೇ ಒಂದು ವ್ಯಕ್ತಿತ್ವವಿಲ್ಲ. ಈ ಕೀಳರಿಮೆಯ ಕಾರಣದಿಂದಲೇ, ಆರೆಸ್ಸೆಸ್ ಮೂಲಕ ಟಿಪ್ಪು ಸುಲ್ತಾನನ ಇತಿಹಾಸವನ್ನು ವಿರೂಪಗೊಳಿಸಲಾಗುತ್ತಿದೆ. ಇದು ಕನ್ನಡದ ವರ್ಚಸ್ಸಿಗೆ ಮಾಡುವ ಅವಮಾನ ಎನ್ನುವುದನ್ನು ಕನ್ನಡಿಗರು ಕಂಡುಕೊಂಡ ದಿನ, ಉತ್ತರ ಭಾರತೀಯರ ಸಂಚು ವಿಫಲವಾಗುತ್ತದೆ.

ಸಮಪಾಲು-ಸಮಬಾಳು ಆಶಯದೊಂದಿಗೆ ಹುಟ್ಟಿದ ಲಿಂಗಾಯತ ಧರ್ಮ ಕೂಡ ಕರ್ನಾಟಕದ ಹೆಮ್ಮೆಗಳಲ್ಲಿ ಒಂದಾಗಿದೆ. ಬಸವಣ್ಣ ನಡೆಸಿದ ಕ್ರಾಂತಿ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ಭಾರತಕ್ಕೆ ಮಾದರಿಯಾಗಬೇಕಾಗಿತ್ತು. ಪ್ರಭಾವಿಸಬೇಕಾಗಿತ್ತು. ಆದರೆ, ಲಿಂಗಾಯತ ಧರ್ಮವನ್ನು ಅಪಭ್ರಂಶಗೊಳಿಸುವಲ್ಲಿ, ಅದನ್ನು ವಿರೂಪಗೊಳಿಸುವಲ್ಲಿ ಆರೆಸ್ಸೆಸಿಗರು ಭಾಗಶಃ ಯಶಸ್ವಿಯಾಗಿದ್ದಾರೆ. ಕರ್ನಾಟಕದ ಅಸ್ಮಿತೆಯ ಪ್ರಮುಖ ಭಾಗವಾಗಿರುವ ಲಿಂಗಾಯತ ಧರ್ಮವನ್ನು ವೈದಿಕೀಕರಿಸಿ, ಅದರ ಸ್ವಂತಿಕೆಯನ್ನು ನಾಶ ಮಾಡಿದ್ದಾರೆ. ಇಲ್ಲಿರುವ ಸೂಫಿ ಸಂತರೂ ಕರ್ನಾಟಕದ ಸೌಹಾರ್ದದ ಗುರುತುಗಳಲ್ಲಿ ಒಂದು. ಸೂಫಿ ಚಿಂತನೆಗಳ ಜೊತೆಗೆ ನಾಡಿಗೆ ಕಾಫಿಯನ್ನು ಪರಿಚಯಿಸಿದ ಸೂಫಿಗಳು ಓಡಾಡಿದ ಬಾಬಾ ಬುಡಾನ್ ಗಿರಿಯೂ ಕನ್ನಡತನದ ಹಿರಿಮೆಯನ್ನು ಹೇಳುತ್ತದೆ. ಆದರೆ ಆ ಗುರುತುಗಳನ್ನು ಸಂಘಪರಿವಾರ ನಾಶ ಮಾಡಲು ಹೊರಟಿದೆ. ಹಿಂದುತ್ವವಾದ ಎಂದರೆ, ಸ್ಥಳೀಯ ಸಂಸ್ಕೃತಿ, ಹಿರಿಮೆಗಳನ್ನು ನಾಶ ಮಾಡಿ, ಉತ್ತರ ಭಾರತದ ವೈದಿಕ ಕಲ್ಪಿತ ಕತೆಗಳನ್ನು ಅಲ್ಲಿ ಸ್ಥಾಪಿಸುವುದು. ಕರ್ನಾಟಕದ ವೈಭವವನ್ನು ದೇಶಕ್ಕೆ ಮಾದರಿ ಮಾಡುವ ಬದಲು, ಗುಜರಾತ್‌ನ ಪೊಳ್ಳು ಮಾದರಿಗಳನ್ನು ಬಿಜೆಪಿ ನಾಯಕರು ರಾಜ್ಯದ ಮೇಲೆ ಹೇರಲು ಮುಂದಾಗಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡುತ್ತಾ ನೇಣುಗಂಬಕ್ಕೇರಿದ ಸಂಗೊಳ್ಳಿ ರಾಯಣ್ಣನ ಬದಲಿಗೆ, ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟ ವಿನಾಯಕ ದಾಮೋದರ ಸಾವರ್ಕರ್‌ನ್ನು ಹೇರುವ ಪ್ರಯತ್ನ ನಡೆಯುತ್ತಿದೆ. ಬೆಳಗಾವಿಯಲ್ಲಿ ನಡೆದ ಸಂಘರ್ಷದಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದು. ಮೇಲ್ನೋಟಕ್ಕಿದು ಮರಾಠಿಗರ ದಾಂಧಲೆಯಂತೆ ಕಂಡರೂ ಆಳದಲ್ಲಿ ಕನ್ನಡ ಅಸ್ಮಿತೆಯ ಮೇಲೆ ಕನ್ನಡೇತರರ ದಾಳಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ದಲಿತರು ಮತ್ತು ಮುಸ್ಲಿಮ್ ಸೇನಾನಿಗಳ ನೇತೃತ್ವದಲ್ಲಿ ಶಿವಾಜಿ ಮೊಗಲರನ್ನು ಎದುರಿಸಿದ. ಆನಂತರ ಶಿವಾಜಿಯ ಸಾಮ್ರಾಜ್ಯವನ್ನು ವಶಕ್ಕೆ ತೆಗೆದುಕೊಂಡ ಪೇಶ್ವೆಗಳು ನಿರಂತರವಾಗಿ ಕರ್ನಾಟಕದ ಮೇಲೆ ದಾಳಿ ನಡೆಸಿದರು. ಲೂಟಿ ಮಾಡಿದರು. ಈ ಸಂದರ್ಭದಲ್ಲಿ ಅವರನ್ನು ತಡೆದಿರುವುದು ಟಿಪ್ಪು ಸುಲ್ತಾನ್. ಶಿವಾಜಿಯ ನೇತೃತ್ವದಲ್ಲಿ ಬೆಳವಡಿ ಮಲ್ಲಮ್ಮನ ರಾಜ್ಯದ ಮೇಲೆ ದಾಳಿ ನಡೆಯಿತು. ಆಕೆಯ ಗಂಡನನ್ನು ಯುದ್ಧದಲ್ಲಿ ಭೀಕರವಾಗಿ ಕೊಲ್ಲಲಾಯಿತು. ಮಲ್ಲಮ್ಮನನ್ನು ವಂಚಿಸಿ ಸೆರೆ ಹಿಡಿಯಲಾಯಿತು. ಆದರೆ ಇಂದು ನಮಗೆ ಮಲ್ಲಮ್ಮನ ಶೌರ್ಯ ಮಾದರಿಯಾಗದೆ, ರಾಜ್ಯದ ಮಠ, ಮಂದಿರಗಳನ್ನು ಲೂಟಿ ಮಾಡಿದ ಪೇಶ್ವೆಗಳು ಮಾದರಿಯಾಗುತ್ತಿರುವುದು ದುರಂತವಾಗಿದೆ. ಕರ್ನಾಟಕದ ಗುರುತುಗಳನ್ನು ಅಳಿಸುವ ಸಂಚನ್ನು ಬಯಲು ಮಾಡಿ, ನಮ್ಮದೇ ನೆಲ, ಜಲ, ಇತಿಹಾಸದ ಬೆಳಕಿನಲ್ಲಿ ಕನ್ನಡವನ್ನು ಮರುಕಟ್ಟುವ ಪ್ರಯತ್ನವೊಂದು ಇನ್ನಾದರೂ ನಡೆಯಬೇಕಾಗಿದೆ. ಕನ್ನಡದ ಉಪ್ಪುಂಡ ಪ್ರತಿಯೊಬ್ಬರೂ ಇದಕ್ಕೆ ಕೈ ಜೋಡಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)