ಇನ್ನು ಮಥುರಾದ ಸರದಿಯೇ?: ಜೀವ ಪಡೆದುಕೊಳ್ಳುತ್ತಿರುವ ಕೃಷ್ಣ ಜನ್ಮಭೂಮಿ ವಿಷಯ
ಮಧ್ಯ ಮುಂಬೈಯ ದಾದರ್‌ನಲ್ಲಿ ಒಂದು ಚೌಕವಿದೆ. ಆ ಚೌಕದಲ್ಲಿ ದೇವಾಲಯ, ಮಸೀದಿ ಮತ್ತು ಚರ್ಚ್ ಒಂದಕ್ಕೊಂದು ತಾಗಿಕೊಂಡು ಇವೆ. 1992-93ರ ಮುಂಬೈ ಗಲಭೆಯ ಭೀಕರ ಹಂತದಲ್ಲೂ ಯಾರೂ ಅದನ್ನು ಮುಟ್ಟಿಲ್ಲ. ವಿವಿಧ ಧರ್ಮಗಳ ಅನುಯಾಯಿಗಳು ಅತ್ಯಂತ ಗೌರವ ಭಾವನೆಯಿಂದ ಅದರತ್ತ ನೋಡುತ್ತಾರೆ. ಸೌಹಾರ್ದ ಸಾರುವಂತಹ ಚೌಕಗನ್ನು ಒಂದಲ್ಲ ಒಂದು ನೆವದಿಂದ ಅಳಿಸಿ ಹಾಕುವ ಬದಲು, ಇಂತಹ ಚೌಕಗಳು ತುಂಬಿರುವ ಭಾರತವನ್ನು ನಾವು ಗೌರವಿಸೋಣವೇ?
ಇನ್ನೇನು ಕೆಲವೇ ತಿಂಗಳುಗಳಲ್ಲಿ ಉತ್ತರಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ವಾಸ್ತವ ಬದುಕಿನೊಂದಿಗೆ ಸಂಪರ್ಕ ಹೊಂದಿರುವ ರಾಜಕೀಯ ವಿಶ್ಲೇಷಕರ ಪ್ರಕಾರ, ಬಿಜೆಪಿ ಮತ್ತು ಮೋದಿ-ಯೋಗಿಯ ಜನಪ್ರಿಯತೆ ಕುಸಿಯುತ್ತಿದೆ. ಇದಕ್ಕೆ ಹಲವು ಕಾರಣಗಳನ್ನೂ ಅವರು ಕೊಡುತ್ತಾರೆ. ಕೊರೋನ ಲಾಕ್‌ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರು ನಡೆಸಿದ ಜೀವನ್ಮರಣ ಹೋರಾಟ, ರೈತರ ಚಳವಳಿ, ಎಲ್ಲೆಲ್ಲೂ ನಿರುದ್ಯೋಗ ತಾಂಡವವಾಡುತ್ತಿರುವುದು, ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆಗಳು ಏರುತ್ತಿರುವುದು, ಜನರ ಆರೋಗ್ಯ ರಕ್ಷಣೆಯಲ್ಲಿ ಸರಕಾರದ ಕಳಪೆ ನಿರ್ವಹಣೆ. ಇವೆಲ್ಲವುಗಳಿಂದಾಗಿ ಸಾಮಾನ್ಯಜನತೆ ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ, ಕಳೆದ ಎರಡು ದಶಕಗಳ ಅವಧಿಯಲ್ಲಿ ತಮ್ಮ ಮೇಲೆ ಹೇರಲಾಗಿದ್ದ ಕೋಮು ಧ್ರುವೀಕರಣದ ತೆಕ್ಕೆಯಿಂದ ಜನರು ನಿಧಾನವಾಗಿ ಹೊರ ಬರುತ್ತಿರುವಂತೆ ಕಾಣುತ್ತಿದೆ.
ಈ ಹಿನ್ನೆಲೆಯಲ್ಲಿ, ಉತ್ತರಪ್ರದೇಶದ ಉಪ ಮುಖ್ಯಮಂತ್ರಿಗಳ ಪೈಕಿ ಒಬ್ಬರಾದ ಕೇಶವ ದೇವ್ ಮೌರ್ಯರ ಟ್ವೀಟ್‌ಗಳನ್ನು ಗಮನಿಸಬೇಕು.
ತನ್ನ ಸರಕಾರದ ಕಾನೂನು ಮತ್ತು ವ್ಯವಸ್ಥೆಯ ಬಗ್ಗೆ ತಾನೇ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅದರೊಂದಿಗೆ ಕೋಮು ವಿಭಜನೆ ಉದ್ದೇಶದ ನಂಜನ್ನೂ ಕಾರಿದರು. ಟೋಪಿಧಾರಿ ಲುಂಗಿವಾಲಾಗಳು ನಡೆಸುವ ಅಪರಾಧಗಳು, ಅಪಹರಣಗಳು, ಭೂಕಬಳಿಕೆಗಳಿಂದ ನಮ್ಮ ಸರಕಾರವು ಜನರಿಗೆ ಮುಕ್ತಿ ನೀಡಿದೆ ಎಂಬುದಾಗಿ ಅವರು ಟ್ವೀಟ್ ಮಾಡಿದರು. ಮುಸ್ಲಿಮರನ್ನು ಗುರಿಯಾಗಿಸಿ ಅವರು ಈ ಮಾತುಗಳನ್ನು ಹೇಳಿರುವುದು ಸ್ಪಷ್ಟ.
ಅದೇ ವೇಳೆ, ಅಯೋಧ್ಯೆ ಮತ್ತು ಕಾಶಿಯಲ್ಲಿ ಭವ್ಯ ದೇವಾಲಯ ನಿರ್ಮಾಣದ ಸಿದ್ಧತೆಗಳು ನಡೆಯುತ್ತಿವೆ ಹಾಗೂ ಮುಂದಿನ ಸರದಿ ಮಥುರಾ ಎಂಬುದಾಗಿ ಅವರು ಇನ್ನೊಂದು ಸಂದರ್ಭದಲ್ಲಿ ಟ್ವೀಟ್ ಮಾಡಿದ್ದಾರೆ. ಡಿಸೆಂಬರ್ 6ರಂದು ಈದ್ಗಾದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವುದಾಗಿ ಹಲವು ಕೋಮುವಾದಿ ಸಂಘಟನೆಗಳು ಬೆದರಿಕೆ ಹಾಕಿದ್ದವು.
ಮಂದಿರ-ಮಸೀದಿ ವಿವಾದಗಳನ್ನು ಮತ ಗಳಿಸುವ ವಿಷಯಗಳಾಗಿ 1984ರಲ್ಲಿ ಕೈಗೆತ್ತಿಕೊಳ್ಳಲಾಯಿತು. ಅಯೋಧ್ಯೆಯಲ್ಲಿ ಶ್ರೀರಾಮ್, ವಾರಣಾಸಿಯಲ್ಲಿ ಶಿವ ಮತ್ತು ಮಥುರಾದಲ್ಲಿ ಶ್ರೀಕೃಷ್ಣನ ಭವ್ಯ ದೇಗುಲಗಳನ್ನು ನಿರ್ಮಿಸಬೇಕು ಎಂಬುದಾಗಿ ವಿಶ್ವ ಹಿಂದೂ ಪರಿಷತ್ 1986ರಲ್ಲಿ ನಿರ್ಣಯ ಕೈಗೊಂಡಿತು. ಬಾಬರಿ ಮಸೀದಿಯನ್ನು ಕೆಡವಿದಾಗ ಅವರ ಘೋಷಣೆಗಳು ಹೀಗಿತ್ತು: ಇದು ಆರಂಭ ಮಾತ್ರ, ಮುಂದೆ ಕಾಶಿ ಮತ್ತು ಮಥುರಾ. 1991ರಲ್ಲಿ ಧಾರ್ಮಿಕ ಸ್ಥಳಗಳ ಕಾಯ್ದೆ ಜಾರಿಗೆ ಬಂತು. ಪ್ರಾರ್ಥನಾ ಸ್ಥಳಗಳ ವಿಷಯದಲ್ಲಿ, 1947ರ ಆಗಸ್ಟ್ 15ರಂದು ಇದ್ದಂತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳ ಲಾಗುವುದು ಎಂದು ಈ ಕಾಯ್ದೆ ಹೇಳುತ್ತದೆ.
ಮಂದಿರ-ಮಸೀದಿ ವಿವಾದವು ಮತಗಳಿಕೆಗಾಗಿ ಬಿಜೆಪಿ-ಆರೆಸ್ಸೆಸ್‌ನ ಬತ್ತಳಿಕೆಯಲ್ಲಿರುವ ಶಕ್ತಿಶಾಲಿ ಆಯುಧಗಳ ಪೈಕಿ ಒಂದಾಗಿದೆ. ಅವುಗಳು ಈ ಅಸ್ತ್ರವನ್ನು ಬಳಸಿ ಸಮಾಜವನ್ನು ಧರ್ಮಗಳ ಆಧಾರದಲ್ಲಿಒಡೆದು ಮತಗಳನ್ನು ಗಳಿಸುತ್ತವೆ. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ ರಾಮ ಮಂದಿರವನ್ನು ನಿರ್ಮಿಸುವ ಉದ್ದೇಶದ ರಾಮ ಮಂದಿರ ಅಭಿಯಾನದ ಮೂಲಕ ಅವುಗಳು ಇದನ್ನು ಪ್ರಾಯೋಗಿಕವಾಗಿ ಸಾಬೀತುಪಡಿಸಿವೆ.
ಬಾಬರಿ ಮಸೀದಿ ಪ್ರಕರಣದಲ್ಲಿಯೂ, ಅವರು ಹೇಳಿಕೊಂಡ ಸಂಗತಿಗಳು ಎಲ್ಲವೂ ಸೃಷ್ಟಿ ಮಾಡಿದಂಥವುಗಳು. ಸುಪ್ರೀಂಕೋರ್ಟ್ ಹಲವು ವೈಫಲ್ಯಗಳ ನಡುವೆಯೂ, 1949ರಲ್ಲಿ ಮಸೀದಿಯಲ್ಲಿ ರಾಮ್‌ಲಲ್ಲಾ ಪ್ರತಿಮೆಗಳ ಸ್ಥಾಪನೆಯು ಅಪರಾಧವಾಗಿದೆ, 1992ರಲ್ಲಿ ಮಸೀದಿ ಧ್ವಂಸವು ಅಪರಾಧವಾಗಿದೆ, ಮಸೀದಿಯ ಕೆಳಗೆ ರಾಮ ಮಂದಿರವಿದೆ ಎನ್ನುವುದಕ್ಕೆ ಪುರಾವೆಯಿಲ್ಲ ಹಾಗೂ ಅಂತಿಮವಾಗಿ ಶ್ರೀರಾಮನು ನಿಖರವಾಗಿ ಅದೇ ಸ್ಥಳದಲ್ಲಿ ಜನಿಸಿದ ಎನ್ನುವುದಕ್ಕೆ ಪುರಾವೆಯಿಲ್ಲ ಎಂಬುದಾಗಿ ಹೇಳಿತು. ಆದರೆ, ಇವೆಲ್ಲವುಗಳ ಹೊರತಾಗಿಯೂ ರಾಮ ಮಂದಿರ ಅಭಿಯಾನ ಮತ್ತು ಬಾಬರಿ ಮಸೀದಿ ಧ್ವಂಸವು ವಿಭಜನವಾದಿ ರಾಜಕೀಯಕ್ಕೆ ಭರ್ಜರಿ ಪ್ರತಿಫಲವನ್ನು ನೀಡಿತು. ಅದರ ಫಲವಾಗಿಯೇ ಇಂದು ದೇಶದಲ್ಲಿ ಬಲಪಂಥೀಯ ರಾಜಕೀಯವು ಪ್ರಾಬಲ್ಯವನ್ನು ಪಡೆದಿದೆ.
ಕಳೆದು ಹೋದ ಶತಮಾನಗಳಲ್ಲಿ ಮುಸ್ಲಿಮ್ ರಾಜರು ದೇವಾಲಯಗಳನ್ನು ಧ್ವಂಸಗೊಳಿಸಿರುವುದನ್ನು ವಿವಿಧ ವಿಧಾನಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ. ಆ ವಿಷಯವನ್ನು ಸಾಮಾಜಿಕ ಸಾಮಾನ್ಯ ಪ್ರಜ್ಞೆಯ ಭಾಗವನ್ನಾಗಿ ಮಾಡುವುದುಇದರ ಹಿಂದಿನ ಉದ್ದೇಶ. ದೇವಾಲಯಗಳನ್ನು ಮುಸ್ಲಿಮ್ ರಾಜರು ಧ್ವಂಸಗೊಳಿಸಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ದೇವಾಲಯಗಳನ್ನು ಹಿಂದೂ ರಾಜರುಗಳೂ ಧ್ವಂಸಗೊಳಿಸಿದ್ದಾರೆ. ಸೋಮನಾಥ ದೇವಾಲಯದ ಮೇಲೆ ಮುಹಮ್ಮದ್‌ಘಜನಿ ದಾಳಿ ಮಾಡಿದನು. ಆದರೆ ಅವನು ಹಾಗೆ ಮಾಡಿದ್ದು ಮತೀಯ ಕಾರಣಕ್ಕಾಗಿಯೇ ಅಥವಾ ದೇವಸ್ಥಾನದಲ್ಲಿದ್ದ ಸಂಪತ್ತನ್ನು ಕೊಳ್ಳೆ ಹೊಡೆಯುವುದಕ್ಕಾಗಿಯೇ ಎನ್ನುವುದು ಪ್ರಶ್ನೆಯಾಗಿದೆ.
ಕಲ್ಹಣನ ರಾಜತರಂಗಿಣಿ ಕೃತಿಯು 11ನೇ ಶತಮಾನದ ರಾಜ ಹರ್ಷದೇವ್ ಬಗ್ಗೆ ಹೇಳುತ್ತದೆ. ದೇವಾಲಯಗಳಲ್ಲಿರುವ ಮುತ್ತು ಮತ್ತು ರತ್ನ ಖಚಿತ ಚಿನ್ನ ಮತ್ತು ಬೆಳ್ಳಿಯ ವಿಗ್ರಹಗಳನ್ನು ಕೆಡವಲು ಅವನು ವಿಶೇಷ ಅಧಿಕಾರಿಯೊಬ್ಬನನ್ನು ನೇಮಿಸಿದ್ದನು ಎಂದು ರಾಜತರಂಗಿಣಿ ಹೇಳುತ್ತದೆ. ಈ ಕ್ರಮದ ಹಿಂದಿನ ಪ್ರಧಾನಉದ್ದೇಶ ಸಂಪತ್ತು. ಹಲವು ಹಿಂದೂ ರಾಜರು ತಮ್ಮ ವೈರಿ ರಾಜರುಗಳ ಕುಲದೇವತೆಗಳ ವಿಗ್ರಹಗಳನ್ನು ಒಡೆದಿದ್ದಾರೆ ಎಂದು ಖ್ಯಾತ ವಿದ್ವಾಂಸ ರಿಚರ್ಡ್ ಈಟನ್ ಹೇಳುತ್ತಾರೆ. ಔರಂಗಜೇಬನು ಗೋಲ್ಕೊಂಡದಲ್ಲಿರುವ ಮಸೀದಿಯೊಂದನ್ನೂ ಕೆಡವಿಸಿದ್ದನು. ಸ್ಥಳೀಯ ರಾಜ ತಾನಾ ಶಾನುಕಪ್ಪಕಾಣಿಕೆಯನ್ನು ಕೊಡಲು ಹಲವು ವರ್ಷಗಳ ಕಾಲ ನಿರಾಕರಿಸಿದಾಗ ಆಕ್ರೋಶಗೊಂಡು ಔರಂಗಜೇಬನು ಈ ಕೃತ್ಯವನ್ನು ನಡೆಸಿದ್ದನು.
ಈ ಎಲ್ಲ ವಿಷಯಗಳು ಹಲವು ಐತಿಹಾಸಿಕ ದಾಖಲೆಗಳಲ್ಲಿ ದಾಖಲಾಗಿವೆ. ಬ್ರಿಟಿಷರು ‘ಒಡೆದು ಆಳುವ’ ತಮ್ಮ ನೀತಿಯನ್ನು ಮತ್ತಷ್ಟು ತೀವ್ರಗೊಳಿಸುವುದಕ್ಕಾಗಿ ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷ ಬಿತ್ತಲು ಯೋಚಿಸಿದರು. ಅದರ ಭಾಗವಾಗಿ ಪ್ರಾರ್ಥನಾಲಯಗಳ ಮೇಲೆ ನಡೆದ ದಾಳಿಗಳ ಆಯ್ದ ಭಾಗಗಳನ್ನು ಸಾರ್ವಜನಿಕವಾಗಿ ಬಿಂಬಿಸಿದರು. ಅಂದಿನ ಕಾಲದ ವಾಸ್ತವಾಂಶಗಳ ಬಗ್ಗೆ ಇಂದು ತರ್ಕಬದ್ಧವಾಗಿ ಮಾತನಾಡುವುದನ್ನು ಅಪಹಾಸ್ಯ ಮಾಡಲಾಗುತ್ತದೆ. ಇಂತಹ ವಾದಗಳನ್ನು ಕೋಮುವಾದಿ ಇತಿಹಾಸದಿಂದ ಆಯ್ದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಅದೇ ವೇಳೆ, ದೇವಾಲಯಗಳ ಧ್ವಂಸದ ವಿಷಯದಲ್ಲಿ ಮುಸ್ಲಿಮ್ ರಾಜರನ್ನು ರಾಕ್ಷಸರಂತೆ ಬಿಂಬಿಸುವುದು ಮುಂದುವರಿಯುವಂತೆ ಕೋಮು ಸಂಘಟನೆಯು ತನ್ನ ಶಾಖೆಗಳು-ಶಾಲೆಗಳು-ಮಾಧ್ಯಮಗಳ ಜಾಲದ ಮೂಲಕ ನೋಡಿಕೊಳ್ಳುತ್ತಿದೆ.
‘‘ಮೊಘಲರ ಆಡಳಿತದ ಅವಧಿಯಲ್ಲಿದ್ದ ಸಾವಿರಾರು ಹಿಂದೂ ಮತ್ತುಜೈನ ದೇವಾಲಯಗಳ ಪೈಕಿ ಎಲ್ಲ ಅಲ್ಲದಿದ್ದರೂ ಹೆಚ್ಚಿನವು ಔರಂಗಜೇಬನ ಆಳ್ವಿಕೆ ಮುಗಿದ ಬಳಿಕವೂ ಹಾಗೇ ಇದ್ದವು’’ ಎಂದು ರಿಚರ್ಡ್ ಈಟನ್ ಹೇಳುತ್ತಾರೆ. ಔರಂಗಜೇಬನ ಆಳ್ವಿಕೆಯ ಅವಧಿಯಲ್ಲಿ ರಾಜನ ಆಜ್ಞೆಯಂತೆ ಸುಮಾರು 1ರಿಂದ 12 ದೇವಾಲಯಗಳು ಧ್ವಂಸಗೊಂಡಿರಬಹುದು ಎಂದು ರಿಚರ್ಡ್ ಈಟನ್ ಅಂದಾಜಿಸುತ್ತಾರೆ ಎಂಬುದಾಗಿ ಈ ಪುಸ್ತಕದಲ್ಲಿ ಹೇಳಲಾಗಿದೆ. ರಾಜಕೀಯ ಕಾರಣಗಳಿಂದ ಪ್ರೇರಿತನಾಗಿಔರಂಗಜೇಬನು ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿದನು. ಉದಾಹರಣೆಗೆ; 1669ರಲ್ಲಿ ಕಾಶಿ ವಿಶ್ವನಾಥ ದೇವಾಲಯವನ್ನು ಧ್ವಂಸಗೊಳಿಸುವಂತೆ ಹಾಗೂ 1670ರಲ್ಲಿ ಮಥುರಾ ಕೇಶವದೇವ ದೇವಸ್ಥಾನವನ್ನು ಧ್ವಂಸಗೊಳಿಸುವಂತೆ ಔರಂಗಜೇಬನು ಆದೇಶ ನೀಡಿದನು. ಈ ಎರಡೂ ಪ್ರಕರಣಗಳಲ್ಲಿ, ದೇವಾಲಯಗಳಿಗೆ ಸಂಬಂಧಿಸಿದವರ ರಾಜಕೀಯ ‘ತಪ್ಪು ನಡೆ’ಗಳನ್ನು ಶಿಕ್ಷಿಸುವುದು ಹಾಗೂ ಮುಂದೆ ಅವರು ಮೊಘಲ್ ಸಾಮ್ರಾಜ್ಯಕ್ಕೆ ತಲೆಬಾಗುವಂತೆ ಖಾತರಿಪಡಿಸುವುದು ಔರಂಗಜೇಬನ ಉದ್ದೇಶವಾಗಿತ್ತು ಎಂದು ಟ್ರಶ್ಕೆತನ್ನ ಪುಸ್ತಕದಲ್ಲಿ ಬರೆಯುತ್ತಾರೆ.
ಬೀರ್ ಸಿಂಗ್ ಬುಂದೇಲಾ 1618ರಲ್ಲಿ ಮಥುರಾದಲ್ಲಿ ನಿರ್ಮಿಸಿದ ಕೃಷ್ಣ ದೇವದೇವಾಲಯವನ್ನು ನಾಶಗೊಳಿಸುವಂತೆ ಔರಂಗಜೇಬನು 1670ರಲ್ಲಿ ಆದೇಶ ನೀಡುತ್ತಾನೆ. ಅದು ರಾಜಕೀಯ ಕಾರಣಗಳಿಗಾಗಿ. 1666ರಲ್ಲಿ ಆಗ್ರಾದಿಂದ ಶಿವಾಜಿ ತಪ್ಪಿಸಿಕೊಳ್ಳಲು ಮಥುರಾದ ಬ್ರಾಹ್ಮಣರು ಸಹಾಯ ಮಾಡಿರಬಹುದು ಎಂಬ ಸಂಶಯದಿಂದ ಅವನು ಈ ಆದೇಶ ನೀಡಿದನು. ಕುತೂಹಲದ ಸಂಗತಿಯೆಂದರೆ, ಇದಕ್ಕೂ ಮೊದಲು ಮೊಘಲ್‌ದೊರೆ ಶಾಜಹಾನನ ಹಿರಿಯ ಪುತ್ರ ಹಾಗೂ ಔರಂಗಜೇಬನ ಅಣ್ಣದಾರಾ ಶಿಕೋಹ್ ಈ ದೇವಾಲಯದ ಪೋಷಕನಾಗಿದ್ದನು.
ರಾಜರು ಮುಖ್ಯವಾಗಿ ಅಧಿಕಾರ ಮತ್ತು ಸಂಪತ್ತಿಗಾಗಿ ಆಳ್ವಿಕೆ ನಡೆಸುತ್ತಾರೆ ಎನ್ನುವುದನ್ನು ಇತಿಹಾಸದ ಘಟನೆಗಳ ವೈಜ್ಞಾನಿಕ ಅಧ್ಯಯನವು ನಮಗೆ ತೋರಿಸಿಕೊಡುತ್ತದೆ. ಬ್ರಿಟಿಷರು ಆರಂಭಿಸಿದ ಕೋಮುವಾದಿ ಇತಿಹಾಸವು ರಾಜರನ್ನು ಮುಖ್ಯವಾಗಿಅವರ ಮತಗಳೊಂದಿಗೆ ಗುರುತಿಸಿತು. ಈ ಕುಟಿಲ ತಂತ್ರದ ಮೂಲಕ ಮುಸ್ಲಿಮ್ ದೊರೆಗಳ ಕೃತ್ಯಗಳ ಉತ್ತರದಾಯಿತ್ವವನ್ನು ಇಂದಿನ ಕಾಲದ ಮುಸ್ಲಿಮರ ಮೇಲೆ ಹೊರಿಸಲಾಯಿತು. ಈ ತಂತ್ರದ ಅವ್ಯಾಹತ ಪ್ರಚಾರದ ಫಲವೇ ಇಂದಿನ ಸಾಮಾಜಿಕ ಸಾಮಾನ್ಯ ಪ್ರಜ್ಞೆ. ಅದು ಇಂದು ಅತ್ಯಂತ ಪ್ರಭಾವಶಾಲಿಯಾಗಿ ಮಾರ್ಪಟ್ಟಿದೆ. ಈ ಸಾಮಾಜಿಕ ಸಾಮಾನ್ಯ ಪ್ರಜ್ಞೆಯು ದೇವಾಲಯ ಧ್ವಂಸಗಳು ಮತ್ತು ಮತಾಂತರಗಳನ್ನು ಇಸ್ಲಾಮ್‌ನೊಂದಿಗೆ ಮತ್ತು ಮುಸ್ಲಿಮ್ ದೊರೆಗಳೊಂದಿಗೆ ಸಮೀಕರಿಸುತ್ತದೆ. ಇವಷ್ಟೇ ಅಲ್ಲದೆ, ಇಂದಿನ ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸುವ ವಿಷಯಗಳ ದೊಡ್ಡ ಪಟ್ಟಿಯೇಇದೆ. ಇದರ ಆಧಾರದಲ್ಲಿ ಕೋಮು ಹಿಂಸಾಚಾರ ಮತ್ತು ಧ್ರುವೀಕರಣವನ್ನು ನಡೆಸಲಾಗುತ್ತಿದೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡವಲಾಗುತ್ತದೆ.
ಕೃಷ್ಣ ಜನ್ಮಭೂಮಿ ಮತ್ತು ಈದ್ಗಾಗಳು ಜೊತೆ ಜೊತೆಯಾಗಿರುವುದನ್ನು ನಮ್ಮ ಸಂಸ್ಕೃತಿಯ ಧನಾತ್ಮಕ ಅಂಶವನ್ನಾಗಿ ಪರಿಗಣಿಸಬೇಕು. ಈವರೆಗೆ ಇಲ್ಲಿನ ಹಿಂದೂಗಳು ಮತ್ತು ಮುಸ್ಲಿಮರು ಜೊತೆ ಜೊತೆಯಾಗಿ ಬದುಕುತ್ತಾ ಬಂದಿದ್ದಾರೆ ಹಾಗೂ ಹಬ್ಬಗಳಂದು ಪರಸ್ಪರರನ್ನು ಅಭಿನಂದಿಸಿದ್ದಾರೆ. ಈ ಪರಿಸ್ಥಿತಿಯು ಮುಂಬೈಯ ಟ್ರಾಫಿಕ್ ಚೌಕವನ್ನು (ಟ್ರಾಫಿಕ್‌ಐಲ್ಯಾಂಡ್) ಹೋಲುತ್ತದೆ.
ಇಂತಹ ಒಂದು ಚೌಕವು ಮಧ್ಯ ಮುಂಬೈಯ ದಾದರ್‌ನಲ್ಲಿದೆ. ಅಲ್ಲಿ ದೇವಾಲಯ, ಮಸೀದಿ ಮತ್ತು ಚರ್ಚ್ ಒಂದಕ್ಕೊಂದು ತಾಗಿಕೊಂಡು ಇವೆ. 1992-93ರ ಮುಂಬೈ ಗಲಭೆಯ ಭೀಕರ ಹಂತದಲ್ಲೂ ಯಾರೂ ಅದನ್ನು ಮುಟ್ಟಿಲ್ಲ. ವಿವಿಧ ಧರ್ಮಗಳ ಅನುಯಾಯಿಗಳು ಅತ್ಯಂತ ಗೌರವ ಭಾವನೆಯಿಂದ ಅದರತ್ತ ನೋಡುತ್ತಾರೆ. ಸೌಹಾರ್ದ ಸಾರುವಂತಹ ಚೌಕಗಳನ್ನು ಒಂದಲ್ಲ ಒಂದು ನೆವದಿಂದ ಅಳಿಸಿ ಹಾಕುವ ಬದಲು, ಇಂತಹ ಚೌಕಗಳು ತುಂಬಿರುವ ಭಾರತವನ್ನು ನಾವು ಗೌರವಿಸೋಣವೇ?