ಪ್ರೀತಿ, ಪ್ರೇಮ, ವಿರಹಗಳ ಗೊಂಚಲು
‘ಕಾವ್ಯಗೊಂಚಲು’ ನೂರ್ ಜಹಾನ್‌ರವರ ಕವಿತೆಗಳ ಸಂಗ್ರಹ. ಭಾಷೆ ಮತ್ತು ಬರವಣಿಗೆಯ ಜೊತೆ ಜೊತೆಗೆ ಹೆಜ್ಜೆ ಹಾಕುವ ನೂರ್ ಜಹಾನ್‌ರವರು ಅಪ್ಪಟ ಸಮಾಜ ಸೇವಕಿಯೂ ಹೌದು. ಆದುದರಿಂದಲೇ, ಸಮಾಜದ ಕುರಿತ ಹೃದ್ಯ ಭಾವಗಳನ್ನು ಅವರ ಪ್ರತಿ ಕವನಗಳಲ್ಲೂ ಕಾಣಬಹುದು.
ಮಾಗಿದ ಅಪಾರ ಜೀವನಾನುಭವ, ಬದುಕಿನಲ್ಲಿ ಎದುರಾದ ಸವಾಲುಗಳು, ವೈಯಕ್ತಿಕ ಸುತ್ತಮುತ್ತಲಿನ ನೋವುಗಳು, ಸಾಮಾಜಿಕ, ರಾಜಕೀಯ ಬದುಕಿನ ದೈನಂದಿನ ಒಳಸುಳಿಗಳು, ಪ್ರಕೃತಿ, ಭೂಕಂಪ, ಸಾವು, ನೋವು, ಬಡತನ, ಶೋಷಣೆ, ದುಡಿಯುವ ಮಹಿಳೆಯರ ಅತಂತ್ರ ಸ್ಥಿತಿ, ಲೈಂಗಿಕ ಕಿರುಕುಳಗಳು, ಕೌಟುಂಬಿಕ ಹಿಂಸೆ, ಜನರ ಬಂಧು ಬಾಂಧವರ ಸಣ್ಣತನ, ದೇವರು, ಅನ್ನದಾನಿ, ಇಂತಹ ಎಲ್ಲ ವಿಷಯ ವಸ್ತುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕಾವ್ಯವಾಗಿಸಲು ಯತ್ನಿಸಿದ್ದಾರೆ. ಕೆಲವು ಕವಿತೆಗಳು ಕಥನಗುಣವನ್ನು ಹೊಂದಿದ್ದರೆ, ಇನ್ನು ಕೆಲವು ವಾಚ್ಯವನ್ನು ಅವಲಂಬಿಸಿಕೊಂಡಿವೆ.
ಹಾಗೆಯೇ ಹೆಚ್ಚಿನ ಕವಿತೆಗಳಲ್ಲಿ ಪ್ರೀತಿ ಸ್ಥಾಯಿಯಾಗಿದೆ. ಅದರ ಮೂಲಕ ತೆರೆದುಕೊಳ್ಳುವ ಒಂಟಿತನ ಅವರ ಹೆಚ್ಚಿನ ಕವಿತೆಗಳಲ್ಲಿ ಕಾಡುತ್ತವೆ. ಕೆಲವೊಮ್ಮೆ ಕವಿತೆಗಳಲ್ಲಿ ಮಾತುಗಳೇ ಜಾಸ್ತಿಯಾಯಿತೇನೋ ಅನ್ನಿಸುತ್ತದೆ. ಆದರೆ ಸಾಲುಗಳಲ್ಲಿರುವ ಒಳ ತುಡಿತ ಮತ್ತು ಪ್ರಾಮಾಣಿಕತೆ ನಮ್ಮನ್ನು ತಟ್ಟದೇ ಇರುವುದಿಲ್ಲ.
‘‘ಜನ ವ್ಯಾಪಾರವಲ್ಲ
ಇಷ್ಟೇ ಜೀವಿಸಬೇಕು ಎಂದು ಹೇಳಲು
ಜೀವನ ಸಮಜಾಯಿಷಿಯ ಮರುರೂಪವಲ್ಲ
ಸರಿದೂಗಿಸಿಕೊಂಡು ಹೋಗಲು
ಜೀವನವೆಂದರೆ ತನ್ನ ಇಷ್ಟದಂತೆ ಸಂತೋಷವಾಗಿ
ಸುಖವಾಗಿ ಎಷ್ಟು ಬೇಕೋ ಅಷ್ಟು ಜೀವಿಸಬೇಕು...’’
ಎನ್ನುವ ಜೀವನ ದರ್ಶನವನ್ನು ಹಲವು ಕವಿತೆಗಳಲ್ಲಿ ಪದೇ ಪದೇ ಕಾಣಬಹುದಾಗಿದೆ.
ಪೂಜಾ ಪ್ರಕಾಶನ, ಬೀದರ ಕೃತಿಯನ್ನು ಹೊರತಂದಿದೆ. ಪುಟಗಳು 156. ಮುಖಬೆಲೆ 150. ಆಸಕ್ತರು 81051 27682 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.