ಮಳೆಗಾಲ ಪೂರ್ತಿ ಗುಡುಗು-ಮಿಂಚಿನ ಆರ್ಭಟ
► ಉಡುಪಿಯಲ್ಲಿ ಸಿಡಿಲಾಘಾತ ಹೆಚ್ಚಳ ► ವಾತಾವರಣದ ಉಷ್ಣತೆಯೇ ಕಾರಣ
ಉಡುಪಿ, ಡಿ.19: ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಇತಿಹಾಸದಲ್ಲೇ ಕೇಳರಿಯದ ರೀತಿಯಲ್ಲಿ ಸಿಡಿಲಿನ ಅಬ್ಬರ ಜೋರಾಗಿತ್ತು. ಈ ವರ್ಷ ಮಳೆಗಾಲಕ್ಕೆ ಮೊದಲೇ ಆರಂಭಗೊಂಡ ಗುಡುಗು ಮಿಂಚಿನ ಆರ್ಭಟ, ನವೆಂಬರ್ ತಿಂಗಳ ಅಂತ್ಯದವರೆಗೂ ಮುಂದುವರೆದಿತ್ತು. ಇದರ ಪರಿಣಾಮ ಸಿಡಿಲಾಘಾತಕ್ಕೆ ಜಿಲ್ಲೆಯಾದ್ಯಂತ ಅಪಾರ ಹಾನಿ ಎದುರಿಸಬೇಕಾಯಿತು. ಜೂನ್ ತಿಂಗಳಿಗೆ ಮೊದಲೇ ಮುಂಗಾರು ಮಳೆ ಪ್ರಾರಂಭವಾಗಿ, ಸೆಪ್ಟೆಂಬರ್ ಅಂತ್ಯದಲ್ಲಿ ಮಳೆ ಕೊನೆಗೊಳ್ಳುತ್ತದೆ. ನಂತರ ಹಿಂಗಾರು ಮಳೆ ಪ್ರಾರಂಭವಾಗಿ ಆಗಲೇ ಮುಗಿದು ಅಕ್ಟೋಬರ್ ಅಂತ್ಯಕ್ಕೆ ಚಳಿಗಾಲ ಪ್ರಾರಂಭವಾಗುವುದು ವಾಡಿಕೆಯಾಗಿದೆ. ಆದರೆ ಈ ವರ್ಷ ಮಾತ್ರ ಸೆಪ್ಟಂಬರ್‌ಗೆ ಕೊನೆಗೊಳ್ಳಬೇಕಾದ ಮಳೆ, ಡಿಸೆಂಬರ್ ಆರಂಭದವರೆಗೂ ಮುಂದುವರಿದಿತ್ತು.
ಅದರಲ್ಲೂ ಮಳೆಯ ಕ್ರಮವೇ ವ್ಯತ್ಯಾಸವಾಗಿದೆ. ಬೆಳಗ್ಗೆ ಬಿಸಿಲು, ಸಂಜೆ ಮಳೆ ಹಾಗೂ ರಾತ್ರಿ ಚಳಿಯ ವಾತಾವರಣ ಕಂಡುಬರುತ್ತಿದ್ದವು. ಅಲ್ಲದೆ ಒಮ್ಮೆಲೆ ಧಾರಕಾರ ಮಳೆ ಸುರಿದು ಅಪಾರ ಹಾನಿ ಕೂಡ ಸೃಷ್ಠಿಸುತ್ತಿದ್ದವು. ಇದರ ಜೊತೆ ಸಿಡಿಲಿನ ಅಬ್ಬರ ಕೂಡ ಜನರ ನಿದ್ದೆಗೆಡಿಸಿ ಬಿಟ್ಟಿದ್ದವು. ಇದು ಎಲ್ಲರಲ್ಲೂ ಆತಂಕಕ್ಕೆ ಕಾರಣವಾಗಿತ್ತು.
ಸಮುದ್ರದ ಉಷ್ಣತೆ ಹೆಚ್ಚಳ : ವಿಜ್ಞಾನಿಗಳ ಪ್ರಕಾರ ಅರಬಿ ಸಮುದ್ರದ ಸರಾಸರಿ ಉಷ್ಣತೆ 28 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ. ಆದರೆ ಬಂಗಾಳ ಕೊಲ್ಲಿಯ ಉಷ್ಣತೆ 31 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು. ಆದುದರಿಂದ ಅರಬಿ ಸಮುದ್ರದಲ್ಲಿ ಚಂಡಮಾರುತ ಗಳು ಸಾಕಷ್ಟು ವಿರಳವಾಗಿರುತ್ತದೆ. ಚಂಡಮಾರುತ ಸೃಷ್ಟಿಯಾಗಬೇಕಾದರೆ ಸಮುದ್ರದ ಉಷ್ಣತೆ ಮಿತಿ 28 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರಬೇಕು. ಈಗ ಅರಬಿ ಸಮುದ್ರದ ಉಷ್ಣತೆ ಮಾಮೂಲಿಗಿಂತ ಹೆಚ್ಚಾಗಿರುವುದು ಕಂಡುಬಂದಿದೆ. ಸರಾಸರಿ 27 ಡಿಗ್ರಿ ಉಷ್ಣತೆಯಿಂದ ತಂಪಾಗಿದ್ದ ಅರಬಿ ಸಮುದ್ರ ಈಗ 29 ಡಿಗ್ರಿಗಿಂತಲೂ ಅಧಿಕ ಬಿಸಿಯಾಗಿದೆ. ಇದರ ಪರಿಣಾಮ ಬಂಗಾಳ ಕೊಲ್ಲಿಯಂತೆ ಇಲ್ಲೂ ಕೂಡ ಚಂಡಮಾರುತಗಳು ಹೆಚ್ಚಾಗಿವೆ. ಈ ವರ್ಷ ಅರಬಿ ಸಮುದ್ರದಲ್ಲಿ ಬಂಗಾಳ ಕೊಲ್ಲಿಗಿಂತ ಹೆಚ್ಚು ಚಂಡಮಾರುತ ಕಂಡು ಬಂದಿದೆ ಎನ್ನುತ್ತಾರೆ ನಿವೃತ್ತ ಭೌತಶಾಸ್ತ್ರ ಉಪನ್ಯಾಸಕ ಡಾ.ಎ.ಪಿ.ಭಟ್.
ಮಿಂಚು ಗುಡುಗಿನ ಆರ್ಭಟ: ಸಮುದ್ರ, ಭೂಮಿ, ಆಕಾಶದ ವಾತಾವರಣದಲ್ಲಿ ವ್ಯತ್ಯಾಸ ಉಂಟಾದಾಗ ಆಗುವ ಪ್ರತಿಕ್ರಿಯೆಗಳೇ ಮಿಂಚು ಗುಡುಗು. ಇದಕ್ಕೆ ಸೂರ್ಯನ ಬೆಳಕು, ಪ್ರಖರತೆ, ಭೂಮಿ ಮತ್ತು ಮೋಡದಲ್ಲಿರುವ ತೇವಾಂಶ ಎಲ್ಲವೂ ಕಾರಣವಾಗುತ್ತದೆ. ಮಳೆಗಾಳದ ಆರಂಭ ಮತ್ತು ಕೊನೆಯಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವುದು ಸಮುದ್ರ ತೀರದಲ್ಲಿ ಸಾಮಾನ್ಯ.
ಮಳೆ ಹೆಚ್ಚಾದಂತೆ ಮಿಂಚು ಕೂಡ ಜಾಸ್ತಿಯಾಗುತ್ತದೆ. ಅದರಂತೆ ಈ ವರ್ಷ ಡಿಸೆಂಬರ್ ಅಂತ್ಯದವರೆಗೆ ಮಳೆಯಾಗಿರುವುದರಿಂದ ಅದರ ಜೊತೆ ಮಿಂಚು ಗುಡುಗು ಬಂದಿದೆ. ಈ ವರ್ಷ 15 ದಿನ ಬಿಸಿಲು, 15 ದಿನ ಧಾರಕಾರ ಮಳೆ ಸುರಿಯುವ ವಿಚಿತ್ರ ವರ್ತನೆ ವಾತಾರಣದಲ್ಲಿ ಕಂಡುಬಂದಿದೆ. ಅದೇ ರೀತಿ ಮಿಂಚು ಗುಡುಗುಗಳು ಬಂದವು. ಈ ಬಾರಿ ಮಧ್ಯ ಮಳೆಗಾಲದಲ್ಲೂ ಮಿಂಚು ಗುಡುಗು ಬಂದಿರುವುದು ವಿಶೇಷ. ಮಳೆ ಹಾಗೂ ಮಿಂಚು ಹೆಚ್ಚಾಗಲು ವಾತಾವರಣದ ಉಷ್ಣತೆಯೇ ಪ್ರಮುಖ ಕಾರಣವಾಗಿದೆ ಎಂದು ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
ಸಿಡಿಲಾಘಾತಕ್ಕೆ ಅಪಾರ ಹಾನಿ: 2021ರಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸಿಡಿಲು ಬಡಿದ ಪರಿಣಾಮ ಒಟ್ಟು ಇಬ್ಬರು ಮೃತಪಟ್ಟಿದ್ದು, 11 ಜಾನುವಾರುಗಳು ಸಾವನ್ನಪ್ಪಿದೆ. ಅದೇ ರೀತಿ ಈ ವರ್ಷ ಒಟ್ಟು 49 ಮನೆಗಳಿಗೆ ಸಿಡಿಲು ಬಡಿದು ಹಾನಿಯಾಗಿದೆ. ಇದರಿಂದ ಒಟ್ಟು 3.33ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಒಟ್ಟಾರೆ ಈ ವರ್ಷದ ಗಾಳಿಮಳೆಗೆ 7,02,800ರೂ. ನಷ್ಟ ಉಂಟಾಗಿ ರುವ ಬಗ್ಗೆ ಅಂದಾಜಿಸಲಾಗಿದೆ.
ಆದರೆ ಕಳೆದ ವರ್ಷ ಈ ವರ್ಷದಷ್ಟು ಸಿಡಿಲು ಬಡಿದ ಪ್ರಕರಣಗಳು ದಾಖ ಲಾಗಿಲ್ಲ. 2020ರಲ್ಲಿ ಸಿಡಿಲಾಘಾತಕ್ಕೆ ಮೂವರು ಮೃತಪಟ್ಟು, 8 ಜಾನುವಾರು ಗಳು ಸಾವನ್ನಪ್ಪಿದೆ. ಕೇವಲ ಎರಡು ಮನೆಗಳಿಗೆ ಮಾತ್ರ ಹಾನಿಯಾಗಿವೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಭೂಮಿಯ ಸರಾಸರಿ ಉಷ್ಣತೆ ಹೆಚ್ಚಾದಂತೆ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಇದು ಮಿಂಚಿಗೆ ಕಾರಣವಾಗುತ್ತಿದೆ. ಒಟ್ಟಾರೆಯಾಗಿ ನಮ್ಮ ವಾತಾವರಣದಲ್ಲಿ ಉಷ್ಣತೆ ಹೆಚ್ಚಳ ಆಗಿದೆ. ಆದುದರಿಂದ ಇನ್ನು ಪ್ರತಿವರ್ಷ ಮಳೆ ಹೆಚ್ಚು ಸುರಿಯುತ್ತದೆ. ಅದು ಕೂಡ ಅನಿಯಮಿತವಾಗಿ ಶಿಸ್ತುಬದ್ಧವಾಗಿ ಸುರಿಯದ ಮಳೆಯಿಂದ ಪ್ರಕೃತಿಗೆ ಹಾನಿಯೇ ಹೆಚ್ಚು.
ಡಾ.ಎ.ಪಿ.ಭಟ್, ನಿವೃತ್ತ ಭೌತಶಾಸ್ತ್ರ ಉಪನ್ಯಾಸಕರು