ಎರಡು ವರ್ಷಗಳಿಂದ ವಿಲೇವಾರಿಯಾಗದ ಕಡತಗಳು
ಸಿಎಂ ನೀಡಿದ್ದ ಎಚ್ಚರಿಕೆಗೆ ಕ್ಯಾರೇ ಎನ್ನದ ಅಧಿಕಾರಿಗಳು!
ಆರ್ಥಿಕ ಇಲಾಖೆಯ 69 ಶಾಖೆಗಳಲ್ಲಿ 7 ದಿನದವರೆಗೆ 8 ರಿಂದ 15 ದಿನ, 16 ರಿಂದ 30 ದಿನ, 31ರಿಂದ 60 ದಿನ ಮತ್ತು 60 ದಿನಗಳ ನಂತರ ದಿನಗಳಲ್ಲಿ ಸೃಜಿಸಲಾದ ಕಡತಗಳು ಕೊಳೆಯುತ್ತಿವೆ. 0-7 ದಿನಗಳವರೆಗೆ ವಿಲೇವಾರಿಯಾಗದಿರುವ ಕಡತಗಳ ಸಂಖ್ಯೆ 1,484ರಷ್ಟಿದೆ. 8-15 ದಿನದವರೆಗೆ 329, 16-30 ದಿನದವರೆಗೆ 292, 31-60 ದಿನದವರೆಗೆ 348, 60 ದಿನಗಳ ನಂತರ ಒಟ್ಟು 898 ಕಡತಗಳು ವಿಲೇವಾರಿಯಾಗದೆ ಬಾಕಿ ಇವೆ. 18 ಇಲಾಖೆಗಳಲ್ಲಿ 16,543 ಭೌತಿಕ ಕಡತ (ಎಫ್‌ಎಂಎಸ್)ಮತ್ತು ಇ-ಆಫೀಸ್ ವಿಭಾಗದಲ್ಲಿ 14,765 ಕಡತಗಳು ವಿಲೇವಾರಿಗೆ ಬಾಕಿ ಇವೆ. ಅ.25ರ ಅಂತ್ಯಕ್ಕೆ ವಿಲೇವಾರಿಯಾಗದೇ ಕಡತಗಳು ಬಾಕಿ ಇದ್ದವು. ವಿಶೇಷವೆಂದರೆ ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದ ಅವಧಿಯಲ್ಲಿಯೇ ಒಳಾಡಳಿತ ಇಲಾಖೆಯಲ್ಲಿ ಜುಲೈ 2021ರಿಂದ ಆಗಸ್ಟ್ 23ರವರೆಗೆ ಒಟ್ಟು 10,866 ಕಡತಗಳು ಬಾಕಿ ಇದ್ದವು.
ಬೆಂಗಳೂರು, ಡಿ.20: ರಾಜ್ಯ ಸರಕಾರಿ ಇಲಾಖೆಗಳಲ್ಲಿ 2 ವರ್ಷಗಳಿಂದಲೂ ಕಡತಗಳು ವಿಲೇವಾರಿಯಾಗದೇ ಬಾಕಿ ಇವೆ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ. ಕಡತ ವಿಲೇವಾರಿಗೆ ಬಾಕಿ ಇರುವ ಕಡತಗಳ ಸಂಖ್ಯೆ ಬೆಟ್ಟದಷ್ಟು ಏರಿಕೆಯಾಗುತ್ತಿದ್ದರೂ ಯಾವೊಬ್ಬ ಅಧಿಕಾರಿ, ಸಿಬ್ಬಂದಿಯೂ ತ್ವರಿತಗತಿಯಲ್ಲಿ ಕಡತ ವಿಲೇವಾರಿಗೆ ಮುಂದಾಗುತ್ತಿಲ್ಲ. ಕಡತ ವಿಲೇವಾರಿ ಮಾಡದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ದಿನದಂದೇ ನೀಡಿದ್ದ ಎಚ್ಚರಿಕೆಯನ್ನು ಅಧಿಕಾರಶಾಹಿಯು ಕಾಲಕಸವನ್ನಾಗಿಸಿದೆ ಎಂಬುದಕ್ಕೆ ವಿಲೇವಾರಿಗೆ ಬಾಕಿ ಇರುವ ಕಡತಗಳೇ ಸಾಕ್ಷವನ್ನು ಒದಗಿಸಿದಂತಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸರಕಾರವನ್ನು ಪತನಗೊಳಿಸಿ ಅಧಿಕಾರಕ್ಕೇರಿದ್ದ ಬಿಜೆಪಿ ಸರಕಾರ ಈಗಾಗಲೇ 2 ವರ್ಷವನ್ನು ಪೂರ್ಣಗೊಳಿಸಿದ್ದರೂ ಆಡಳಿತಕ್ಕೆ ಚುರುಕು ಮುಟ್ಟಿಸಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಆಡಳಿತ ಸುಧಾರಣೆ) ಸರಕಾರದ ಕಾರ್ಯದರ್ಶಿ ಮುನೀಶ್ ಮೌದ್ಗಿಲ್ 2021ರ ಡಿ.17ರಂದು ಮತ್ತೊಂದು ಸುತ್ತೋಲೆ ಹೊರಡಿಸಿದ್ದಾರೆ. ‘ರಾಜ್ಯ ಸರಕಾರದ ಇಲಾಖೆಗಳಲ್ಲಿ 2 ವರ್ಷಗಳಿಂದಲೂ ಕಡತಗಳು ವಿಲೇವಾರಿಗೆ ಬಾಕಿ ಇವೆ. ಇದನ್ನು ಮುಖ್ಯಮಂತ್ರಿ ಗಮನಿಸಿದ್ದಾರೆ’ ಎಂಬ ಸಂಗತಿಯು ಮುನೀಶ್ ಮೌದ್ಗಿಲ್ ಹೊರಡಿಸಿರುವ ಸುತ್ತೋಲೆಯಿಂದ ತಿಳಿದು ಬಂದಿದೆ. ಈ ಸುತ್ತೋಲೆಯ ಪ್ರತಿ ‘The-File’ಗೆ ಲಭ್ಯವಾಗಿದೆ.
ಇಲಾಖೆಗಳಲ್ಲಿ ಕಳೆದ 2 ವರ್ಷಗಳಿಂದಲೂ ಬಾಕಿ ಇರುವ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸರಕಾರದ ಎಲ್ಲ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ತಮ್ಮ ಇಲಾಖೆಗಳಲ್ಲಿ ಹಾಗೂ ಅಧೀನ ಕಚೇರಿಗಳಲ್ಲಿಯೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಸುತ್ತೋಲೆಯಲ್ಲಿ ಮುನೀಶ್ ಮೌದ್ಗಿಲ್ ಕೋರಿರುವುದು ಸುತ್ತೋಲೆಯಿಂದ ತಿಳಿದು ಬಂದಿದೆ.
2021ರ ಆಗಸ್ಟ್ ಅಂತ್ಯಕ್ಕೆ 41 ಆಡಳಿತ ಇಲಾಖೆಗಳಲ್ಲಿ 1.60 ಲಕ್ಷ ಕಡತಗಳು ವಿಲೇವಾರಿಗೆ ಬಾಕಿ ಇದ್ದವು. ಈ ಪೈಕಿ 31,077 ಕಡತಗಳು ಈ ಕಚೇರಿಯಲ್ಲಿಯೇ ವಿಲೇವಾರಿ ಆಗಿರಲಿಲ್ಲ. ನಗರಾಭಿವೃದ್ಧಿ ಇಲಾಖೆಯಲ್ಲಿ 11,250, ಕಂದಾಯ ಇಲಾಖೆಯಲ್ಲಿ 9,314, ಪ್ರಾಥಮಿಕ, ಪ್ರೌಢಶಿಕ್ಷಣದಲ್ಲಿ 7,689, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿ 5,446, ಜಲ ಸಂಪನ್ಮೂಲ ಇಲಾಖೆಯಲ್ಲಿ 5,490 ಕಡತಗಳು ಬಾಕಿ ಇದ್ದವು.
ಸೆ.2ರ ಅಂತ್ಯಕ್ಕೆ 41 ಆಡಳಿತ ಇಲಾಖೆಗಳಲ್ಲಿ 1.69 ಲಕ್ಷ ಕಡತಗಳು ವಿಲೇವಾರಿಗೆ ಬಾಕಿ ಇದ್ದವು. 2021ರ ಅ.25ರ ಅಂತ್ಯಕ್ಕೆ ಒಟ್ಟು 31,308 ಕಡತಗಳು ವಿಲೇವಾರಿಗೆ ಬಾಕಿ ಉಳಿದಿದ್ದವು. ಬಸವರಾಜ ಬೊಮ್ಮಾಯಿ ನಿಭಾಯಿಸುವ ಹಣಕಾಸು ಇಲಾಖೆಯಲ್ಲಿ 2021ರ ಅ.27ರ ಅಂತ್ಯಕ್ಕೆ 3,351 ಕಡತಗಳು ವಿಲೇವಾರಿಗೆ ಬಾಕಿ ಇದ್ದವು. ಭೌತಿಕ ಕಡತ ವಿಲೇವಾರಿಗೆ ಯಾವುದೇ ಗಡುವು ನಿಗದಿಪಡಿಸದಿದ್ದರೂ 15 ದಿನಕ್ಕಿಂತ ಹೆಚ್ಚು ಬಾಕಿ ಇರಬಾರದು ಎಂಬ ಮೌಖಿಕ ಸೂಚನೆ ಇದೆ. 15 ದಿನದೊಳಗೆ ಭೌತಿಕ ಕಡತಗಳನ್ನು ವಿಲೇವಾರಿ ಮಾಡಬೇಕು. ನ್ಯಾಯಾಲಯ ಪ್ರಕರಣ, ಭೂ ವ್ಯಾಜ್ಯ, ಇಲಾಖೆ ವಿಚಾರಣೆ ಸಂಬಂಧಿಸಿದ ಕಡತಗಳು ಆಯಾ ಪ್ರಕರಣಗಳು ಇತ್ಯರ್ಥವಾಗುವವರೆಗೂ ಕಡತಗಳು ವಿಲೇವಾರಿಗೆ ಬಾಕಿ ಇರಿಸಿಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ. ಆದರೆ, ಈ ಪ್ರಕರಣಗಳನ್ನು ಹೊರತುಪಡಿಸಿಯೂ ಹಲವು ಇಲಾಖೆಗಳಲ್ಲಿ ಸಾಮಾನ್ಯ ಕಡತಗಳೂ ವಿಲೇವಾರಿಗೆ 15 ದಿನಕ್ಕಿಂತಲೂ ಹೆಚ್ಚು ದಿನಗಳ ಕಾಲ ಕಡತಗಳನ್ನು ಬಾಕಿ ಇರಿಸಿಕೊಳ್ಳಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.