ಒಮೈಕ್ರಾನ್ ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚು ಸಾಂಕ್ರಾಮಿಕ: ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಡಿ.21: ನೂತನ ಕೋವಿಡ್ ರೂಪಾಂತರಿ ಒಮೈಕ್ರಾನ್ ಡೆಲ್ಟಾ ತಳಿಗಿಂತ ಮೂರು ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಕೇಂದ್ರವು ಮಂಗಳವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ಎಚ್ಚರಿಕೆಯನ್ನು ನೀಡಿದೆ.
ಒಮೈಕ್ರಾನ್ ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ,ಜೊತೆಗೆ ಡೆಲ್ಟಾ ವೈರಸ್ ಕೂಡ ಈಗಲೂ ದೇಶದ ವಿವಿಧ ಭಾಗಗಳಲ್ಲಿ ಅಸ್ತಿತ್ವದಲ್ಲಿದೆ.ಹೀಗಾಗಿ ‘ವಾರ್ ರೂಮ್’ಗಳ ಸಕ್ರಿಯಗೊಳಿಸುವಿಕೆ,ಕೋವಿಡ್ನ ಎಲ್ಲ ಪ್ರವ್ರತ್ತಿಗಳು ಮತ್ತು ಉಲ್ಬಣಗಳ ವಿಶ್ಲೇಷಣೆ ಹಾಗೂ ಜಿಲ್ಲೆ ಅಥವಾ ಸ್ಥಳೀಯ ಮಟ್ಟಗಳಲ್ಲಿ ಕಂಟೈನ್ಮೆಂಟ್ ಕ್ರಮ ಸೇರಿದಂತೆ ಎಲ್ಲ ಪೂರ್ವ ನಿಯಾಮಕ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ ಭೂಷಣ ಅವರು ಪತ್ರದಲ್ಲಿ ಸಲಹೆ ನೀಡಿದ್ದಾರೆ.
ಕಂಟೈನ್ಮೆಂಟ್,ಪರೀಕ್ಷೆ,ಸಂಪರ್ಕ ಪತ್ತೆ,ಕಣ್ಗಾವಲು,ಕ್ಲಿನಿಕಲ್ ವ್ಯವಸ್ಥಾಪನೆ,ಲಸಿಕೆ ನೀಡಿಕೆ ಮತ್ತು ಕೋವಿಡ್ ಶಿಷ್ಟಾಚಾರಗಳ ಪಾಲನೆ ಸೇರಿದಂತೆ ಮಧ್ಯಪ್ರವೇಶದ ವ್ಯೆಹಾತ್ಮಕ ಕೇತ್ರಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆಯೂ ಕೇಂದ್ರವು ರಾಜ್ಯಗಳಿಗೆ ಸೂಚಿಸಿದೆ.
ಕಂಟೈನ್ಮೆಂಟ್ಗೆ ಸಂಬಂಧಿಸಿದಂತೆ ಭೂಷಣ ಅವರು,ರಾತ್ರಿ ಕರ್ಫ್ಯೂ ಜಾರಿ,ಬೃಹತ್ ಸಾರ್ವಜನಿಕ ಸಮಾವೇಶಗಳು,ಮದುವೆಗಳು ಮತ್ತು ಅಂತ್ಯಸಂಸ್ಕಾರಗಳ ಮೇಲೆ ನಿಯಂತ್ರಣ,ಕಚೇರಿಗಳಿಗೆ ತೆರಳುವವರು ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸುವವರ ಸಂಖ್ಯೆಯನ್ನು ಸೀಮಿತಗೊಳಿಸುವುದು ಇತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.
ಕೋವಿಡ್ ಪಾಸಿಟಿವ್ ಪ್ರಕರಣಗಳ ಎಲ್ಲ ನೂತನ ಕ್ಲಸ್ಟರ್ಗಳಿಗೆ ಸಂಬಂಧಿಸಿದಂತೆ ಕಂಟೈನ್ಮೆಂಟ್ ಝೋನ್ ಮತ್ತು ಬಫರ್ ಝೋನ್ ಗಳ ಸೂಕ್ತ ಅಧಿಸೂಚನೆಗಳನ್ನು ಹೊರಡಿಸಬೇಕು. ಕ್ಲಸ್ಟರ್ಗಳಲ್ಲಿಯ ಎಲ್ಲ ಸ್ಯಾಂಪಲ್ಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್ಗಾಗಿ ವಿಳಂಬವಿಲ್ಲದೆ ಐಎನ್ಎಸ್ಎಸಿಒಜಿ ಪ್ರಯೋಗಾಲಯಗಳಿಗೆ ರವಾನಿಸಬೇಕು ಎಂದೂ ಅವರು ತಿಳಿಸಿದ್ದಾರೆ.