varthabharthi


ನಿಮ್ಮ ಅಂಕಣ

ನಮ್ಮ ದೇಶವು ‘ಆರೋಗ್ಯ ಭಾರತ’ ಆಗುವುದೆಂದು?

ವಾರ್ತಾ ಭಾರತಿ : 21 Dec, 2021
ಕಸ್ತೂರಿ ತುಮಕೂರು

2000ದ ಆರಂಭದಿಂದ ನಮ್ಮ ದೇಶದಲ್ಲಿ ಆರೋಗ್ಯ ಹೆಚ್ಚಿನ ಪ್ರಾಧಾನ್ಯತೆ ಪಡೆದುಕೊಂಡಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆಯಾದರೂ ಅನಾರೋಗ್ಯಕರ ಅಭ್ಯಾಸಗಳು, ಆಲೋಚನೆಗಳಿಂದ ಅಸ್ವಸ್ಥಗೊಳ್ಳುತ್ತಿವೆ. ಯೋಗ, ಧ್ಯಾನ, ಜಿಮ್‌ಗಳ ಮೇಲೆ ಅವಲಂಬಿತರಾಗುತ್ತಿರುವ ಮೇಲ್ತರಗತಿಯ ಯುವಜನ, ಮಧ್ಯವಯಸ್ಕರು ಬಲಪಂಥೀಯರ ಜೀವನ ವಿಧಾನವೇ ಶ್ರೇಷ್ಠ ಎಂಬ ಮೇಲರಿಮೆಯ ರೋಗಕ್ಕೆ ಒಳಗಾಗಿದ್ದಾರೆ. ಮೊಟ್ಟೆ, ಮಾಂಸಾಹಾರಗಳಿಗಿಂತ ಮಾನವನ ಆರೋಗ್ಯಕ್ಕೆ ಸಸ್ಯಾಹಾರವೇ ಹೆಚ್ಚು ಪೂರಕವೆನ್ನುವವರು ಆ ಸಸ್ಯಾಹಾರ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರಬೇಕು ಎಂಬುದನ್ನು ಅರಿತಿರಬೇಕು. ಹಣ್ಣು, ತರಕಾರಿಗಳ ಬೆಲೆ ಆಕಾಶಕ್ಕೇರಿರುವಾಗ ದಮನಿತ ಕೆಳವರ್ಗದ ಮಕ್ಕಳು ದೃಢಕಾಯರಾಗಿ ಚುರುಕಾಗಿ ಬೆಳೆಯುವುದು ಹೇಗೆ ಸಾಧ್ಯ?

ಮೊಟ್ಟೆ ವಿರೋಧಿಸುತ್ತಿರುವ ಯಾವ ಸಾಧು, ಸಂತರೂ ಬೆಲೆ ಏರಿಕೆ ಬಗ್ಗೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿಲ್ಲ ಅಥವಾ ತಮ್ಮ ಮಠ-ಸಂಸ್ಥೆಯ ವತಿಯಿಂದ ಶಾಲೆಯನ್ನು ದತ್ತು ಪಡೆದು ಪೌಷ್ಟಿಕ ಬಿಸಿಯೂಟ ಒದಗಿಸುವುದಾಗಿ ಹೇಳುತ್ತಿಲ್ಲ. ಇನ್ನು ಸ್ವಘೋಷಿತ ಭಾಷಾ ಆಂದೋಲನಕಾರರು ನಿರ್ಜೀವ ವಿಗ್ರಹ, ಧ್ವಜಗಳ ಮೇಲಷ್ಟೇ ಕಾಳಜಿ ವ್ಯಕ್ತಪಡಿಸಬೇಕೆಂದು ರೂಲ್ಸ್ ಮಾಡಿಕೊಂಡು ನಿಂತಿದ್ದಾರೆ. ಇವರ ಮಧ್ಯೆ ‘ವೇಗನ್’ ಎಂಬ ಕಿರು ಸಮುದಾಯವೊಂದು ಸೃಷ್ಟಿಯಾಗಿದೆ. ಈ ಗುಂಪು ಹಾಲು, ಮೊಸರು, ತುಪ್ಪಗಳನ್ನು ತಿರಸ್ಕರಿಸುತ್ತದೆ. ರೇಷ್ಮೆ ವಸ್ತ್ರ ಬೇಡ, ಜೇನುತುಪ್ಪವನ್ನು ಇವರು ಮುಟ್ಟುವುದಿಲ್ಲ. ಪ್ರಾಣಿ ಚರ್ಮದಿಂದ ಆದ ಬ್ಯಾಗ್, ಚಪ್ಪಲಿಯಿಂದಲೂ ಕೆಲವರು ದೂರ. ಆದರೆ ಯಾರಿಗೂ ಮನುಷ್ಯನ ಖಾಲಿ ಹೊಟ್ಟೆಗಳತ್ತ ಕಾಳಜಿಯಿಲ್ಲ.
ಹಾಲು, ಮೊಸರು ನಿಷೇಧಿಸಿದರೆ ‘‘ಗೋಮಾತೆಯ ಹಾಲು ಕುಡಿದು ಅವಳನ್ನೇ ತಿನ್ನುತ್ತೀರಾ?’’ ಎಂದು ಕಂಡವರನ್ನು ತಿವಿಯ ಹೋಗುವ ಮಾನವ ಗೂಳಿಗಳಿಗೆ ತಡೆ ಉಂಟಾಗುತ್ತದೆ ಎಂಬುದು ನಿಜ. ಆದರೆ ಡೇರಿ ಉದ್ಯಮ ಕುಸಿದು ಸಾವಿರಾರು ಜನ ಕೆಲಸ ಕಳೆದುಕೊಳ್ಳುತ್ತಾರೆ. ಹಾಗಾಗಿಯೇ ಆರೋಗ್ಯ ಸಾಧನೆಯೆಂಬುದು ಪರ್ವತ ಏರಿದಷ್ಟೇ ಕಷ್ಟ.
ಇದ್ದುದರಲ್ಲಿ ಉಪ್ಪು, ಸಕ್ಕರೆ, ಮಸಾಲೆಗಳನ್ನು ಕನಿಷ್ಠ ಪ್ರಮಾಣದಲ್ಲಿ ಬಳಸಬೇಕು. ವನ,ಜಲಗಳನ್ನು ಧ್ವಂಸ ಮಾಡುವ ಕೈಗಾರಿಕೆಗಳನ್ನು ಮುಚ್ಚಬೇಕು. ದೇಗುಲ, ಧಾರ್ಮಿಕ ಉತ್ಸವ, ವಿಗ್ರಹಗಳಿಗೆ ಸುರಿಯುವ ಹಣವನ್ನು ಮಕ್ಕಳಿಗೆ ಒಳ್ಳೆಯ ಆಹಾರ, ಶಿಕ್ಷಣ, ಹಿರಿಯರಿಗೆ ಚಿಕಿತ್ಸೆಗಳಿಗೆ ವೆಚ್ಚ ಮಾಡುವಂತಹ ಸರಕಾರವನ್ನು ಚುನಾಯಿಸಿಕೊಂಡರಷ್ಟೇ ನಮ್ಮದು ಆರೋಗ್ಯ ಭಾರತ ಆಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)