varthabharthi


ಸಂಪಾದಕೀಯ

ಸಾಂವಿಧಾನಿಕ ಸಂಸ್ಥೆಗಳಲ್ಲಿ ಸರಕಾರದ ಹಸ್ತಕ್ಷೇಪ ಸರಿಯಲ್ಲ

ವಾರ್ತಾ ಭಾರತಿ : 23 Dec, 2021

 ಚುನಾವಣಾ ಆಯೋಗ ಸ್ವಾಯತ್ತ ಸ್ಥಾನಮಾನ ಹೊಂದಿರುವ ಸಾಂವಿಧಾನಿಕ ಸಂಸ್ಥೆ. ಯಾವುದೇ ಪಕ್ಷ ಒಕ್ಕೂಟ ಸರಕಾರದ ಸೂತ್ರ ಹಿಡಿದಿರಲಿ ಅದು ಎಂತಹ ಸನ್ನಿವೇಶದಲ್ಲೂ ಸ್ವಾಯತ್ತ ಸಂವಿಧಾನಾತ್ಮಕ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುವುದು ಔಚಿತ್ಯದ ಸ್ಪಷ್ಟ ಉಲ್ಲಂಘನೆಯಾಗುತ್ತದೆ.ಆದರೆ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಗೆ ಚ್ಯುತಿ ತರುವಂತಹ ಘಟನೆಗಳು ನಡೆಯುತ್ತಲೇ ಇವೆ.ಇತ್ತೀಚೆಗೆ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ನಡೆಯುವ ಅನೌಪಚಾರಿಕ ಸಭೆಯಲ್ಲಿ ಭಾಗವಹಿಸಬೇಕೆಂದು ಚುನಾವಣಾ ಆಯೋಗದ ಆಯುಕ್ತರಿಗೆ ಕಾನೂನು ಸಚಿವಾಲಯ ಸೂಚನೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರೂ ಭಾಗವಹಿಸಬೇಕೆಂದು ಪ್ರಧಾನ ಮಂತ್ರಿಗಳ ಮುಖ್ಯ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಅವರು ನಿರೀಕ್ಷಿಸುತ್ತಾರೆ ಎಂಬ ಸರಕಾರದ ಸೂಚನೆಯ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ನಡೆದ ಮೊದಲ ಸಭೆಯಲ್ಲಿ ಅವರು ಪಾಲ್ಗೊಳ್ಳಲಿಲ್ಲ. ಆದರೆ ನಂತರ ಯಾವುದೋ ಒತ್ತಡಕ್ಕೆ ಒಳಗಾಗಿ ಇತರ ಇಬ್ಬರು ಸಹ ಆಯುಕ್ತರೊಂದಿಗೆ ಪ್ರಧಾನಿ ಕಾರ್ಯಾಲಯದ ಅನೌಪಚಾರಿಕ ಸಭೆಯಲ್ಲಿ ಪಾಲ್ಗೊಂಡರು. ಅದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಆಯೋಗದ ಪಾತ್ರದ ಬಗ್ಗೆ ಎಲ್ಲರಿಗೂ ಗೊತ್ತಿದೆ.ಅದು ಸ್ವತಂತ್ರ ಸ್ವಾಯತ್ತ ಸಂಸ್ಥೆ. ಸರಕಾರ ಕೂಡ ಅದರ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಟಿ.ಎನ್.ಶೇಷನ್ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಚುನಾವಣಾ ಆಯೋಗದ ನಿಷ್ಪಕ್ಷಪಾತ ಕ್ರಿಯಾಶೀಲತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಬಿಜೆಪಿ ಒಕ್ಕೂಟ ಸರಕಾರದ ಸೂತ್ರ ಹಿಡಿದ ನಂತರ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಪಾರದರ್ಶಕತೆ ಬಗ್ಗೆ ಸಂದೇಹದ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಲೇ ಇದೆ.

ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳನ್ನು ಮುಕ್ತವಾಗಿ ನಡೆಸುವ ಹೊಣೆಗಾರಿಕೆ ಚುನಾವಣಾ ಆಯೋಗದ ಮೇಲಿದೆ. ಅದನ್ನು ಯಾವುದೇ ರಾಜಕೀಯ ಪಕ್ಷವಾಗಲಿ, ಸರಕಾರವಾಗಲಿ ನಿಯಂತ್ರಿಸಲು ಅವಕಾಶವಿಲ್ಲ.ಅದರ ಸ್ವತಂತ್ರ ಕಾರ್ಯನಿರ್ವಹಣೆಯಲ್ಲಿ ಕೈ ಹಾಕುವಂತಿಲ್ಲ. ಇಂತಹ ಉನ್ನತ ಮಟ್ಟದ ಸ್ವಾಯತ್ತಾಧಿಕಾರವನ್ನು ಚುನಾವಣಾ ಆಯೋಗ ಹೊಂದಿದೆ.

 ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನಾಗಲಿ ಇತರ ಆಯುಕ್ತರನ್ನಾಗಲಿ ಸರಕಾರದ ಯಾವುದೇ ಸಚಿವಾಲಯದ ಅಧಿಕಾರಿಗಳು ಸಭೆಗೆ ಕರೆಯುವಂತಿಲ್ಲ. ಚುನಾವಣಾ ಆಯುಕ್ತರು ಕೂಡ ಸರಕಾರದ ಯಾವುದೇ ಅಧಿಕಾರಿಯ ಬಳಿ ಹೋಗಿ ಯಾವುದೇ ವಿಷಯದ ಬಗ್ಗೆ ವಿವರಣೆ ನೀಡುವಂತಿಲ್ಲ. ವಾಸ್ತವಾಂಶ ಹೀಗಿರುವಾಗ ಚುನಾವಣಾ ಆಯೋಗದ ಆಯುಕ್ತರನ್ನು ಅನೌಪಚಾರಿಕ ಸಭೆಗೆ ಕರೆದ ಪ್ರಧಾನಿ ಕಾರ್ಯಾಲಯದ ಮುಖ್ಯ ಕಾರ್ಯದರ್ಶಿ ಗಳ ಔಚಿತ್ಯದ ಬಗ್ಗೆ ರಾಜಕೀಯ ಪಕ್ಷಗಳು ಮಾತ್ರವಲ್ಲ, ರಾಜಕೀಯ ಪರಿಣಿತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಒಕ್ಕೂಟ ಸರಕಾರ ಚುನಾವಣಾ ಆಯೋಗವನ್ನು ತನ್ನ ಅಧೀನ ಇಲಾಖೆ ಎಂಬಂತೆ ನೋಡಿಕೊಳ್ಳಬಾರದು. ಆಯೋಗದ ಸಾಂವಿಧಾನಿಕ ಸ್ವಾಯತ್ತತೆಗೆ ಧಕ್ಕೆ ತರಬಾರದು.ಅಧಿಕಾರದಲ್ಲಿರುವ ಪಕ್ಷ ತನ್ನ ರಾಜಕೀಯ ಹಿತಾಸಕ್ತಿಯ ಸಲುವಾಗಿ ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುವುದು, ಅದನ್ನು ದುರ್ಬಲಗೊಳಿಸುವುದು ಜನತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿದಂತೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ಕೇವಲ ಏಳು ವರ್ಷಗಳ ಹಿಂದೆ ಅತ್ಯುನ್ನತ ಸಾಂವಿಧಾನಿಕ ಸ್ಥಾನಮಾನ ಹೊಂದಿದ್ದ ಚುನಾವಣಾ ಆಯೋಗ ಇತ್ತೀಚಿನ ಏಳು ವರ್ಷಗಳಲ್ಲಿ ವ್ಯಾಪಕ ಟೀಕೆಗೆ ಒಳಗಾಗುತ್ತಿದೆ.ಅಧಿಕಾರದಲ್ಲಿರುವ ಪಕ್ಷದ ಪರವಾಗಿ ಅದು ಕಾರ್ಯ ನಿರ್ವಹಿಸುತ್ತಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ.

ಚುನಾವಣಾ ಆಯೋಗ ಇತ್ತೀಚೆಗೆ ನಿಗದಿಪಡಿಸುವ ಚುನಾವಣಾ ವೇಳಾಪಟ್ಟಿ, ಚುನಾವಣಾ ನೀತಿ ಸಂಹಿತೆಯ ಕುರಿತ ಅದರ ನಿರ್ಣಯಗಳು ಅಧಿಕಾರದಲ್ಲಿರುವ ಪಕ್ಷಕ್ಕೆ ಅನುಕೂಲಕರವಾಗಿವೆ ಎಂಬ ಕಾರಣಕ್ಕಾಗಿ ಅದು ವಿವಾದದ ಸುಳಿಗೆ ಸಿಲುಕುತ್ತಲೇ ಇದೆ.ಈಗ ಕೆಲ ಮಹತ್ವದ ರಾಜ್ಯಗಳ ವಿಧಾನ ಸಭಾ ಚುನಾವಣೆ ನಡೆಯುತ್ತಿರುವ ಸೂಕ್ಷ್ಮ ಸಂದರ್ಭದಲ್ಲಿ ಪ್ರಧಾನಿ ಕಾರ್ಯಾಲಯದ ಸಭೆಗೆ ಚುನಾವಣಾ ಆಯೋಗದ ಆಯುಕ್ತರನ್ನು ಆಹ್ವಾನಿಸಿರುವುದು ಅನೌಚಿತ್ಯ ಮಾತ್ರವಲ್ಲ ಆಕ್ಷೇಪಾರ್ಹ ಕ್ರಮವಾಗಿದೆ. ಇನ್ನು ಮುಂದಾದರೂ ಚುನಾವಣಾ ಆಯೋಗದ ಸ್ವಾಯತ್ತತೆಗೆ ಧಕ್ಕೆಯಾಗದಂತೆ ಒಕ್ಕೂಟ ಸರಕಾರ ನಡೆದುಕೊಳ್ಳಲಿ.

ಒಕ್ಕೂಟದ ಸೂತ್ರ ಹಿಡಿದಿರುವ ಬಿಜೆಪಿ ಸರಕಾರ ತನ್ನ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಈಗಾಗಲೇ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯಗಳನ್ನು (ಐಟಿ)ಸಾಕಷ್ಟು ದುರುಪಯೋಗ ಪಡಿಸಿಕೊಳ್ಳುತ್ತ ಬಂದಿದೆ. ಈಗ ಚುನಾವಣೆಯ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಸಮಾಜವಾದಿ ನಾಯಕ ಅಖಿಲೇಶ್ ಯಾದವರ ಆಪ್ತರ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ. ಇದು ಮಾತ್ರವಲ್ಲ ಯಡಿಯೂರಪ್ಪನವರ ಬಾಯಿ ಮುಚ್ಚಿಸಲು ಅವರ ಆಪ್ತರ ಮನೆಯ ಮೇಲೆ ನಡೆದ ಸಿಬಿಐ ದಾಳಿ ಹಾಗೂ ಮಹಾರಾಷ್ಟ್ರ ಮತ್ತಿತರ ಕಡೆ ರಾಜಕೀಯ ಎದುರಾಳಿಗಳನ್ನು ಮೂಲೆ ಗುಂಪು ಮಾಡಲು ಸಿಬಿಐ ಮತ್ತು ಐಟಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗಕ್ಕೆ ಆ ದುರ್ಗತಿ ಬಾರದಿರಲಿ.

ಒಕ್ಕೂಟ ಸರಕಾರದ ಸೂತ್ರ ಹಿಡಿದಿರುವ ಪಕ್ಷಕ್ಕೆ ಅನುಕೂಲಕರವಾಗುವಂತೆ ಚುನಾವಣಾ ವೇಳಾಪಟ್ಟಿಯನ್ನು, ದಿನಾಂಕಗಳನ್ನು ನಿಗದಿಪಡಿಸುವಂತೆ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಲಾಗುತ್ತದೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಮೂಡಿರುವ ಸಂದೇಹ ನಿವಾರಣೆಯಾಗುವಂತೆ ಒಕ್ಕೂಟ ಸರಕಾರ ನಡೆದುಕೊಳ್ಳಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)