varthabharthi


ಅನುಗಾಲ

ಮಾನವತ್ವದ ಕೊನೆಯ ದಿನಗಳು

ವಾರ್ತಾ ಭಾರತಿ : 23 Dec, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಪರಂಪರೆಯಿಂದ ಬಂದ ರೂಪಕಗಳು, ಹೋಲಿಕೆಗಳು, ಅಲಂಕಾರಗಳು ಇಂದು ಅಪ್ರಸ್ತುತವಾಗುತ್ತಿವೆ. ಬಹುಜನರು ಮಂಡಿಸುವ ವಾದವೇ ಸ್ವೀಕಾರಾರ್ಹವೆನಿಸುತ್ತಿವೆ. ಆದರೆ ಇದು ಇಂದು ನಿನ್ನೆಯ ಕತೆಯಲ್ಲ, ಮನುಷ್ಯನ ನೆನಪು ಎಷ್ಟು ಹಿಂದಕ್ಕೆ ಜಾರಬಲ್ಲದೋ ಅಲ್ಲಿಯವರೆಗೂ ಇದು ಸತ್ಯವೇ. ಬಹುತೇಕ ಎಲ್ಲ ಮಹಾತ್ಮರು, ಸಂವೇದನಾಶೀಲರು ಆಡಳಿತದ ಆಗ್ರಹಕ್ಕೆ ತುತ್ತಾಗಿದ್ದಾರೆ. ಆದರೆ ಅಂತಹ ಜೀವವೊಂದು ಈ ಭೂಮಿಯೆಂಬ ಗ್ರಹದಲ್ಲಿ ತನ್ನ ಪಾದಗಳನ್ನು ಊರಿತ್ತಲ್ಲ, ನಡೆದಾಡಿತ್ತಲ್ಲ ಎಂಬ ನೆನಪೇ ಒಂದು ಹೊಸ ಆತ್ಮವಿಶ್ವಾಸವನ್ನು ನೀಡಬಲ್ಲುದು.
 


 ವರ್ಷದ ಕೊನೆಯ ದಿನಗಳಲ್ಲಿ ಯೇಸುಕ್ರಿಸ್ತನ ಜನ್ಮದಿನ. ಅದಕ್ಕಾಗಿ ಕ್ರಿಸ್‌ಮಸ್ ಶುಭಾಶಯಗಳು.
ಯೇಸುವಿನ ಜನ್ಮದಿನವು ಸುಖ ಸಂತೋಷವನ್ನು ಕೊಡುವುದರೊಂದಿಗೇ ಒಬ್ಬ ಉದಾತ್ತ ಹೃದಯಿಯು ಪಟ್ಟ ನೋವನ್ನೂ ನೆನಪಿಸುತ್ತದೆ. ಮಾನವತ್ವದ ಕೊನೆಯನ್ನು ಜ್ಞಾಪಿಸುವ ಯೇಸುವಿನ ಕೊನೆಯ ದಿನಗಳು ಮತ್ತೆ ಮತ್ತೆ ಬರುತ್ತವೆಂದೇ ಅದು ವರ್ಷದ ಕೊನೆಯಲ್ಲಿದೆಯೇನೋ? ತನಗಾಗಿ ಬದುಕುವುದು ಬದುಕೇ ಅಲ್ಲ; ಇನ್ನೊಬ್ಬರಿಗಾಗಿ ಬದುಕುವುದೇ ನಿಜವಾದ ಬದುಕು ಎಂಬುದರ ಸಾಕಾರ ರೂಪದ ಯೇಸು ಶಕ ಪುರುಷನೆೆಂದೇ ಆತನ ಹೆಸರಿನ ಶಕೆ ಚಾಲ್ತಿಯಲ್ಲಿದೆ. ಯಾವೊಬ್ಬ ಮಹಾನುಭಾವನ ಬದುಕಿನ ಕೊನೆಯ ದಿನಗಳು ಹೇಗಿರುತ್ತವೆ? ಭಾರತೀಯ ಪುರಾಣಪುರುಷರಾದ ರಾಮ-ಕೃಷ್ಣ, ಸಾರಿಪುತ್ರ, ಸಾಕ್ರೆಟಿಸ್, ಯೇಸು, ಬಸವಣ್ಣ, ಕೊನೆಗೆ ಗಾಂಧಿ- ಹೀಗೆ ಪಟ್ಟಿಮಾಡಿ ನೋಡಿದರೆ ಇವರ್ಯಾರೂ ನಾವು ನಂಬುವ ಭೌತಿಕ ಸುಖಪಡಲೇ ಇಲ್ಲ. ಬದುಕಿನ ಘನಘೋರ ದುರಂತವನ್ನು ಅನುಭವಿಸಿದವರೇ. ನೀಲಕಂಠನ ಹಾಗೆ ವಿಷವನ್ನು ಕುಡಿದು ಅಮೃತವನ್ನು ನೀಡಿದವರು. ನಾವು ಮಾತ್ರ ಟಿವಿ ಸೀರಿಯಲ್ಲಿನ ಒಂದು ಕಂತನ್ನು, ನಾಟಕ-ಸಿನೆಮಾಗಳ ಒಂದು ದೃಶ್ಯವನ್ನಷ್ಟೇ ಆಯ್ದು ಇವರು ಸುಖವಾಗಿದ್ದರು ಎಂಬ ಕತೆ ಸೃಷ್ಟಿಸುತ್ತೇವೆ. ಶ್ರೀರಾಮನ ಕತೆಯಲ್ಲಿ ನಮಗೆ ಸೀತೆಯ ದುರಂತ ಮರೆಯಾಗಿ, ಆತನು ಪಟ್ಟ ಅಥವಾ ಪಟ್ಟಿರಬಹುದಾದ ನೋವು, ಸಂಕಟ ಮರೆಯಾಗಿ ಆತನ ಒಡ್ಡೋಲಗದ ದೃಶ್ಯವಷ್ಟೇ ಆಯ್ಕೆಯಾಗುತ್ತದೆ. ಇದು ನಮ್ಮ ಅನುಕೂಲಕ್ಕೆ; ಸಾಮಾಜಿಕ ಅನುಕೂಲಕ್ಕೆ. ನಿತ್ಯ ಜೀವನದಲ್ಲಿ ಹರಕಲು ಬಟ್ಟೆ ಹಾಕುವವನೂ ಮದುವೆ ಸಮಾರಂಭಗಳಿಗೆ ಧರಿಸುವುದಕ್ಕೆಂದು ಒಳ್ಳೆಯ ಬಟ್ಟೆಗಳನ್ನು ಶೇಖರಿಸಿಡುವಂತೆ ನಾವು ನಮ್ಮ ಖುಶಿಗಳನ್ನು ಇಂತಹ ಆಯ್ಕೆಗಳಿಗೆ ಮೀಸಲಾಗಿಡುತ್ತೇವೆ. ಸಂಕಟದ ಮುಖಕ್ಕೆ ನಗುವಿನ ಮುಖವಾಡ ಸೃಷ್ಟಿಯಾಗುತ್ತದೆ. ಬದುಕಿನಲ್ಲಿ ತಪ್ಪು ಮಾಡದವರು ಮಾತ್ರ ಕಲ್ಲೆಸೆಯಿರಿ ಎಂದು ಕರೆಕೊಟ್ಟು ಪತಿತೆಯನ್ನು ಪಾರುಮಾಡಿದ ಹೃದಯವಂತಿಕೆಯನ್ನು ಯೇಸು ಪ್ರದರ್ಶಿಸಿದ ಐತಿಹ್ಯವಿದೆ. (ಸಾವಿಲ್ಲದ ಮನೆಯ ಸಾಸಿವೆಯ ಕಿಸಾಗೌತಮಿಯ ಕತೆಯೂ ಭಿನ್ನವಾಗಿ ಇದೇ ತತ್ವವನ್ನು ಹೇಳುತ್ತದೆ!) ಕಲ್ಲೆಸೆಯುವ ಮಂದಿ ಬೇಕಾದಷ್ಟಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿಕೊಂಡು ಇನ್ನೊಬ್ಬರನ್ನು ದೂಷಿಸುವುದೇ ನವನಾಗರಿಕತೆಯ ಕತೆಯಾಗಿದೆ. ಒಂದು ಚಿಕ್ಕ, ಆದರೆ ದೊಡ್ಡದಾದ ಘಟನೆಯನ್ನು ನೆನಪಿಸಿಕೊಳ್ಳೋಣ:

ಕರ್ನಾಟಕದ ವಿಧಾನಸಭೆಯ ಮಾಜಿ ಸಭಾಪತಿ ಮತ್ತು ಈಗ ಶಾಸಕರಾಗಿರುವ ಸುಶಿಕ್ಷಿತ ರಾಜಕಾರಣಿಯೊಬ್ಬರು ಒಂದು ಆಂಗ್ಲ ನುಡಿಗಟ್ಟನ್ನು ಹೇಳಿದರು. ಅದು ಮಹಿಳೆಯರನ್ನು ಅಪಮಾನಿಸುವಂತಿತ್ತು ಎಂದು ಎಲ್ಲರೂ ತೋಳ ಹಳ್ಳಕ್ಕೆ ಬಿದ್ದರೆ ಅಳಿಗೊಂದು ಕಲ್ಲು ಎಂಬ ರೀತಿಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಸಂಸತ್ತಿನಲ್ಲೂ ಇದು ಪ್ರತಿಧ್ವನಿಸಿತು. ಬಹುತೇಕ ರಾಜಕೀಯ ಸೇಡಿಗಾಗಿ ಈ ದೂಷಣೆ ಬಳಕೆಯಾಯಿತು. ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗಗಳು ಅವರು ಕ್ಷಮಾಯಾಚನೆ ಮಾಡಬೇಕೆಂದು ಒತ್ತಾಯಿಸಿದವು. ಅವರು ಕ್ಷಮೆ ಕೇಳಿದರಾದರೂ ಅವರನ್ನು ಜೀವಂತ ಸಾಯಿಸಲಾಯಿತು. ಅವರೇ ತಾನು ಸತ್ತಿದ್ದೇನೆ, ಬದುಕಿದವರನ್ನು ಮಾತನಾಡಿಸಿ ಎಂದು ಹೇಳುವ ಸ್ಥಿತಿಗೆ ಅವರನ್ನು ತಳ್ಳಲಾಯಿತು. ಇಷ್ಟಕ್ಕೂ ಈ ನುಡಿಗಟ್ಟು ಅವರದ್ದೇನಲ್ಲ. ಅದು ಇಂಗ್ಲಿಷ್ ಭಾಷೆ, ಸಾಹಿತ್ಯದೊಳಗೆ ಲಾಗಾಯ್ತಿನಿಂದಿದೆ. ಅನೇಕ ಕಡೆ, ಅನೇಕ ಬಾರಿ ಅದು ಬಳಕೆಯಾದದ್ದಿದೆ. ನಗುನಗುತ್ತ ನೇಣುಗಂಬವನ್ನೇರುವ ರೂಪಕವೂ ಇದೇ ರೀತಿಯದ್ದು. ಆದರೆ ಈಗ ಅದು ಅಕ್ಷಮ್ಯವಾಯಿತು. ಇದು ಮಹಿಳೆಯರ ನ್ನುದ್ದೇಶಿಸಿ ರಚಿಸಿದ ಕಾಲ ಯಾವುದೋ? ಅದನ್ನು ವಾಚ್ಯಾರ್ಥದಲ್ಲಿ ಸ್ವೀಕರಿಸುವ ಸಂವೇದನೆ ನಮ್ಮದಾಯಿತೇ? ಪ್ರಾಯಃ ಸಮಾಜದ ವ್ಯಷ್ಟಿ-ಸಮಷ್ಟಿ ಸಹನೆಯೇ ಇಲ್ಲವಾದಂತೆ ಪ್ರತಿಕ್ರಿಯಿಸುವ ಈ ಜಾಯಮಾನಕ್ಕೆ ಏನು ಹೇಳಬೇಕು? ಕಾಲವೇ ಉತ್ತರಿಸಬೇಕು.

ಈಗ ಶೇಕ್ಸ್‌ಪಿಯರ್ ಬದುಕಿದ್ದರೆ ಆತನ ನುಡಿಗಟ್ಟು ಕುವೆಂಪು ಕನ್ನಡಿಸಿದ ಪದಗಳಲ್ಲಿ ಹೇಳುವುದಾದರೆ ‘‘ಚಂಚಲತೆ ನಿನ್ನ ಪೆಸರೇ ಪೆಣ್ಣಲ್ತೆ!’’ ಮಹಿಳೆಯ ರನ್ನು ಅಪಮಾನಿಸುವ ಮಾತು. ಈ ಕಾರಣಕ್ಕೆ ನಾವು ಶೇಕ್ಸ್‌ಪಿಯರ್ ಕೃತಿಗಳನ್ನು ಬಹಿಷ್ಕರಿಸಬೇಕು, ಬಹಿಷ್ಕರಿಸಿದರೆ ಸಾಲದು; ಸುಡಬೇಕು. ಆತನ ಪರವಾಗಿ ಯಾರಾದರೂ ಕ್ಷಮೆ ಕೇಳಬೇಕು. ಅಲೆಗ್ಸಾಂಡರ್ ಪೋಪ್ ‘ರೇಪ್ ಆಫ್ ದ ಲಾಕ್’ (ಕೂದಲಿನ ಮಾನಭಂಗ) ಎಂಬ ಕವಿತೆಯನ್ನು ಬರೆದ. ಅದರಲ್ಲಿ ಬರುವ ರೇಪ್ ಪದ ಮಹಿಳೆಯರನ್ನು ಅಪಮಾನಿಸುತ್ತದೆಯಲ್ಲವೇ? ಆತನಿಗೂ ಇದೇ ಶಿಕ್ಷೆಯಾಗಬೇಕಲ್ಲವೇ?

ಪರಂಪರೆಯಿಂದ ಬಂದ ರೂಪಕಗಳು, ಹೋಲಿಕೆಗಳು, ಅಲಂಕಾರಗಳು ಇಂದು ಅಪ್ರಸ್ತುತವಾಗುತ್ತಿವೆ. ಬಹುಜನರು ಮಂಡಿಸುವ ವಾದವೇ ಸ್ವೀಕಾರಾರ್ಹವೆನಿಸುತ್ತಿವೆ. ಆದರೆ ಇದು ಇಂದು ನಿನ್ನೆಯ ಕತೆಯಲ್ಲ, ಮನುಷ್ಯನ ನೆನಪು ಎಷ್ಟು ಹಿಂದಕ್ಕೆ ಜಾರಬಲ್ಲದೋ ಅಲ್ಲಿಯವರೆಗೂ ಇದು ಸತ್ಯವೇ. ಬಹುತೇಕ ಎಲ್ಲ ಮಹಾತ್ಮರು, ಸಂವೇದನಾಶೀಲರು ಆಡಳಿತದ ಆಗ್ರಹಕ್ಕೆ ತುತ್ತಾಗಿದ್ದಾರೆ. ಆದರೆ ಅಂತಹ ಜೀವವೊಂದು ಈ ಭೂಮಿಯೆಂಬ ಗ್ರಹದಲ್ಲಿ ತನ್ನ ಪಾದಗಳನ್ನು ಊರಿತ್ತಲ್ಲ, ನಡೆದಾಡಿತ್ತಲ್ಲ ಎಂಬ ನೆನಪೇ ಒಂದು ಹೊಸ ಆತ್ಮವಿಶ್ವಾಸವನ್ನು ನೀಡಬಲ್ಲುದು.

ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು ಯೇಸು ಮತ್ತು ಬುದ್ಧ ಈ ಇಬ್ಬರು ಮಹಿಮರ ಕಡೆಯ ದಿನದ ಕುರಿತು ಖಂಡಕಾವ್ಯಗಳನ್ನು ರಚಿಸಿದ್ದಾರೆ: ಗೊಲ್ಗೊಥಾ ಮತ್ತು ವೈಶಾಖಿ. ಈ ಕೃತಿಗಳ ಕುರಿತು ಡಾ.ಜಿ. ವರದರಾಜರಾವ್ ಅವರು ‘ಮಹಾತ್ಮರ ಮರಣ’ ಎಂಬ ಲೇಖನವನ್ನು ಬರೆದಿದ್ದಾರೆ. ಅದರಲ್ಲಿ ಅವರು ಹೇಳುವ ಈ ಮಾತುಗಳು ಗಮನಾರ್ಹವಾಗಿವೆ: ‘‘ಮಹಾತ್ಮರ ಜನನ, ಜೀವನಗಳು ಎಷ್ಟು ಮಹತ್ವಪೂರ್ಣವೋ ಅವರ ಮರಣವೂ ಅಷ್ಟೇ ವಿಶಿಷ್ಟವಾದುದು. ಯಾವುದೋ ಒಂದು ಧ್ಯೇಯಕ್ಕಾಗಿ ಬದುಕಿ ಬಾಳಿದ ಹುತಾತ್ಮರು ಸಾವಿಗೆ ಅಂಜುವುದಿಲ್ಲ. ಅದು ಯಾವ ರೂಪದಲ್ಲಿಯೇ ಬರಲಿ, ಅದನ್ನು ನಗುನಗುತ್ತ ಸ್ವಾಗತಿಸುವರು. ಮೃತ್ಯುವಿನ ಶೀತಲ ಸ್ಪರ್ಶದಿಂದ ಅಂತಹವರ ಬದುಕು ಅಮರವಾಗುವುದೇ ವಿನಾ ಎಂದೆಂದಿಗೂ ಕೊನೆಗಾಣುವುದಿಲ್ಲ.’’ ಈ ಮಹಾತ್ಮರ ಕುರಿತು ಕಾವ್ಯ ರಚಿಸಿದವರು ಮತಪ್ರಚಾರಕ್ಕೆಂದು ಕಾವ್ಯ ಬರೆದಿಲ್ಲ. ಮಹಾತ್ಮರ ಬದುಕಿನಂತೆ ಸಾವು ಕೂಡಾ ಎಷ್ಟು ಅರ್ಥಪೂರ್ಣ ಎಂಬುದನ್ನು ಕವಿಹೃದಯವು ಅರ್ಥಮಾಡಿಕೊಳ್ಳಬಲ್ಲುದು. ಆಗ ಧರ್ಮ, ಮತ, ಜಾತಿ ಇವೆಲ್ಲ ದಿಗಂತದಾಚೆಗೆ ಜಾರಿ ವ್ಯಕ್ತಿತ್ವದ ಹೊಳಪಷ್ಟೇ ತನ್ನ ಮೆರುಗನ್ನು ಉಳಿಸಿಕೊಂಡು ಬಾಳುತ್ತದೆ. ಅಮರತ್ವದ ಕಲ್ಪನೆ ಪ್ರಾಯಃ ಇದೇ ಇರಬಹುದು. ಅದನ್ನು ಜಾತಿ, ಮತ, ಧರ್ಮಗಳ ಪರಿಕಲ್ಪನೆಗೆ ಅಂಟಿಸಿ ಕೈತೊಳೆದುಕೊಳ್ಳುವ ಮಹಾತಪ್ಪನ್ನು ಸಮಾಜ ತನಗರಿವಿದ್ದೋ ಇಲ್ಲದೆಯೋ ಮಾಡುತ್ತದೆ. ಹೀಗಾಗಿ ಎಲ್ಲರಿಗೂ ಸಲ್ಲುವವರು ಕೆಲವೇ ಮಂದಿಯ ಅಥವಾ ಸಮುದಾಯಗಳ ಬಂಧಿಯಾಗಿರಬೇಕಾಗುತ್ತದೆ. ಕೃತಕ ಗೋಡೆಗಳನ್ನು ಸೃಷ್ಟಿಸುವುದರಿಂದ ಆಗುವ ದುಷ್ಪರಿಣಾಮವೆಂದರೆ ಮೌಲ್ಯಗಳು ಅಳಿದು ಇವರು ನಮ್ಮವರು, ಇವರು ಹೊರಗಿನವರು ಎಂಬ ಸಂಕುಚಿತ ದೃಷ್ಟಿಕೋನವು ಪ್ರಾಪ್ತವಾಗುತ್ತದೆ. ಜಾರ್ಜ್ ಆರ್ವೆಲ್ ಬರೆದ ‘1984’ ಎಂಬ ಪ್ರಸಿದ್ಧ ಕಾದಂಬರಿಯಲ್ಲಿ.

ಚರಿತ್ರೆಯನ್ನು, ದಾಖಲೆಗಳನ್ನು, ವ್ಯಕ್ತಿಗಳನ್ನು, ವ್ಯಕ್ತಿತ್ವಗಳನ್ನು ಅಳಿಸುವ ಪ್ರಕ್ರಿಯೆಯನ್ನು ಆಡಳಿತವು ಮಾಡುವ ರೀತಿಯನ್ನು ವಿವರಿಸಲಾಗಿದೆ. ಆದರೆ ಮಹಾತ್ಮರ ಜೀವನ ಮತ್ತು ಮರಣ ಈ ಅಳಿಸುವ ಕಾರ್ಯದಿಂದಾಗಿ ಅಳಿದುಹೋಗುವುದಿಲ್ಲ. ಅದು ಕಿವಿಯಿಂದ ಕಿವಿಗೆ, ಕೊನೆಗೆ ಜನಪದೀಯ ಐತಿಹ್ಯಗಳ ಮೂಲಕವೂ ತಲೆಮಾರಿನಿಂದ ತಲೆಮಾರಿಗೆ ಪ್ರವಹಿಸುತ್ತದೆ. ಅವುಗಳ ಉಳಿವಿಗೆ ಶಾಸನಗಳ ಅಗತ್ಯವಿರುವುದಿಲ್ಲ ಮತ್ತು ಶಾಸನಗಳ ಮೂಲಕ ಇತಿಹಾಸವನ್ನು, ಬದುಕುಗಳನ್ನು ಅಳಿಸುತ್ತೇವೆಂದು ಯಾರೇ ತಿಳಿದರೂ ಅದು ಭ್ರಮೆಯೆಂಬುದನ್ನು ಇತಿಹಾಸ ಮತ್ತೆ ಮತ್ತೆ ತೋರಿಸಿಕೊಟ್ಟಿದೆ. ಪ್ರತಿಮೆಗಳ ಮೂಲಕ ಯಾರನ್ನೂ ಹೇಗೆ ಉಳಿಸಿಕೊಳ್ಳಲು ಸಾಧ್ಯವಿಲ್ಲವೋ ಹಾಗೆಯೇ ಪ್ರತಿಮಾಭಂಗವೂ ಅಳಿವನ್ನು ಸಾಧ್ಯವಾಗಿಸದು. ಮನುಷ್ಯ ಹೆಚ್ಚು ಹೆಚ್ಚು ನಾಗರಿಕನಾಗಲು ಬಯಸಿದಷ್ಟೂ ಆತನ ವಿಕೃತಿಗಳು, ವಿಕಾರಗಳು ಹೆಚ್ಚು ಸ್ಫುಟವಾಗಿ ಪ್ರದರ್ಶನಗೊಳ್ಳುತ್ತವೆ. ಇವು ಸ್ವಭಾವತಃ ಮೌಲ್ಯಗಳನ್ನು ನಾಶಗೊಳಿಸುವ ಕಾರ್ಯಕ್ಕೆ ಮನಗೊಡುತ್ತವೆ. ತನ್ನೆದುರು ಸ್ಪಷ್ಟವಾಗಿ ಕಾಣುವ ವ್ಯಕ್ತಿತ್ವದ/ಗಳ ವರ್ಚಸ್ಸನ್ನು ಮುರಿಯಲು ದೈಹಿಕ ಶಕ್ತಿಯಿಂದ, ಸಾಮೂಹಿಕ ಬಲದಿಂದ ಪ್ರಯತ್ನಿಸಿದಷ್ಟೂ ಆ ವ್ಯಕ್ತಿತ್ವವು/ಗಳು ಶಾಶ್ವತವಾಗುತ್ತದೆ/ವೆ. ಪ್ರಸಿದ್ಧ ಆಂಗ್ಲ ಕವಿ ಯೇಟ್ಸ್ ಈ ವಿಶ್ವಾಸವನ್ನೇ ತನ್ನ ‘ಪುನರಾಗಮನ’ (ಛಿ ಖಛ್ಚಿಟ್ಞ ಇಟಞಜ್ಞಿಜ) ಎಂಬ ಕವಿತೆಯಲ್ಲಿ ಕಾಣಿಸಿದ. ‘‘ಛೂಬಿಟ್ಟ ಹಾಗಿದೆ ಅರಾಜಕತೆಯನ್ನೇ ಇಡಿಯ ಲೋಕದ ತುಂಬ; ರಕ್ತಮಂದ ಪ್ರವಾಹ ಕಟ್ಟೊಡೆದು ನುಗ್ಗಿದೆ ಮುಗ್ಧತೆಯ ಉತ್ಸವ ಮುಳುಗಿ ತಳ ಸೇರಿದೆ, ಉತ್ತಮರಿಗಿಲ್ಲ ದೃಢನಂಬಿಕೆ, ನಿಕೃಷ್ಟರಿಗೆ ತೀವ್ರ ಭಾವೋನ್ಮಾದಪರತೆ.’’ ಎಂದು ಇಂದಿನ ಜಗತ್ತನ್ನು ಚಿತ್ರಿಸಿದ ಕವಿಯು ‘‘ಮುಂದೆ ಯಾವುದೋ ದರ್ಶನಕ್ಕಿದು ಕಾಲ ಖಂಡಿತ, ಪುನರವತಾರಕ್ಕೆ ಕಾಲ ಇದು ಖಂಡಿತ.’’ ಮತ್ತು ‘‘ಇಪ್ಪತ್ತು ಶತಕಗಳ ಗಾಢನಿದ್ದೆಯ ಕಾಡಿ ದುಃಸ್ವಪ್ನ ಬಡಿಸಿದ್ದು. ತನ್ನ ಜನನದ ಗಳಿಗೆ ಇನ್ನೇನು ಬಂತೆಂದು ತೂಗಿ ಚಲಿಸುತ್ತಿದೆಯೊ ಹೇಗೆ ಈ ಘೋರ ಮೃಗ ಬೆತ್ಲಹೆಮ್ಮಿನ ಕಡೆಗೆ?’’ ಎಂದು ತನ್ನ ಕವಿತೆಯನ್ನು ಮುಗಿಸುತ್ತಾನೆ. (ಇಲ್ಲಿರುವ ಕನ್ನಡಿತ ಉಲ್ಲೇಖ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಅನುವಾದವನ್ನು ಅಶ್ರಯಿಸಿದೆ.) ಆತ ಕ್ರೈಸ್ತ ಧರ್ಮದ ಯೇಸುವನ್ನು ತನ್ನ ಕವಿತೆಯ ಪ್ರತಿಮೆಯಾಗಿ ಬಳಸಿದ್ದಾನೆ. ಆದರೆ ಆತನದ್ದು ಧಾರ್ಮಿಕ ನಂಬಿಕೆಯಲ್ಲ; ಆಧ್ಯಾತ್ಮಿಕ ನಂಬಿಕೆ; ಅದೊಂದು ಅನುಭೂತಿ.

 ರಾಮಚಂದ್ರಶರ್ಮರ ಕ್ರಿಸ್‌ಮಸ್ ಪ್ರತಿಮೆಯ ಮೂರೂ ಕವನಗಳು ಈ ಚಳಿಯಲ್ಲಿ ನೆನಪಾಗಬೇಕು. ಜಾತಿ, ಮತ, ಧರ್ಮಗಳ ಎಲ್ಲೆಯನ್ನು ಮೀರಿದ ಪ್ರತಿಮೆಗಳು ಇಲ್ಲಿವೆ: ‘‘ಮುಗಿಲ ಮುಟ್ಟಿತು ಕ್ರಿಸ್ತನನಂತ ಅಪಾರ ಕರುಣೆ’’ ಎಂದು ಕವಿ ಕೋಪನ್ ಹೇಗನ್‌ನಲ್ಲಿ ಹೇಳಿದರೆ, ಲಂಡಂಡೆರಿಯಲ್ಲಿ ‘‘ಹಠಾತ್ತನೆ ಬಿಸಿಲುತಗಲಿ ಥಳಥಳ ಹೊಳೆದ ಪಿಸ್ತೂಲು ಕಂಡುಯೋಧ ಕೂಗಿದ: ನೆಲಕ್ಕೆಸೆದು ಕೈಯೆತ್ತಿ ನಿಲ್ಲು. ಮಾತು ಕೇಳದೇ ನಡೆದ ಹುಟ್ಟು ಕಿವುಡ ಹುಡುಗನೆದೆ ಹೊಕ್ಕ ಗುಂಡು ಬೆನ್ನಿಂದ ಹೊರಬಂತು.’’ ಎಂದು ಬರೆಯುತ್ತಾರೆ. ಅವರ ಇನ್ನೂ ಒಂದು ಕವಿತೆ ‘ಮೈಲಾಯ್, ವಿಯಟ್ನಾಮ್’ ನಲ್ಲಿ ‘‘ನಿಂತ ನೆಲ ತನ್ನ ಕರೆತಂದಿದ್ದ ಹಡಗಿನಷ್ಟೇ ಅಭದ್ರವಾಗಿದ್ದ ಹಾಗೆ ಯೋಧ ನಿಂತಿದ್ದ’’ ಎಂದು ಆರಂಭವಾಗಿ ‘‘ಬಲಗೈಯ ಐದು ಬೆರಳು, ಎಡದ ಕೈಯಲ್ಲಿತ್ತು ಗ್ರನೇಡು- ಸಿಂಬಳ ಸುರಿಸಿ ಸುಯ್ದು ಸುಯ್ದು ಅವ್ವನ ಮೊಲೆಗೆ ಕಣ್ಣು ಜಡಿದು ಕೂತ ಕೂಸಿನ ತಲೆಗೆ ಹಿಡಿದ ಗ್ರನೇಡು.’’ ಎಂಬ ವಿವರಗಳೊಂದಿಗೆ ಗ್ರನೇಡಿನ ವಿಚ್ಛಿದ್ರಕಾರೀ ಶಕ್ತಿಯೆದುರು ಮಮತೆ ಮತ್ತು ‘‘ಮುಗ್ಧತೆಯ ಚಿತ್ರಗಳ ಹಿಂದೆ ಹೆಪ್ಪುಗಟ್ಟಿದ ಕಪ್ಪು ಒಡೆದು ಚೂರಾದಂತೆ ಬಾರಿಸಿತು ಕಥೀಡ್ರಲಿನ ಗಂಟೆ.’’ ಎಂದು ಕೊನೆಯಾಗುತ್ತದೆ. ಮಾರ್ಮಿಕವಾದ ಈ ಚಿತ್ರಗಳು ವರ್ಷವೊಂದನ್ನು ಯುಗವಾಗಿ ಪರಿವರ್ತಿಸಿ ಅದರ ಕೊನೆಯಲ್ಲಿ ಕಾಣುವ ನೋವನ್ನು ಮತ್ತು ಕ್ರಿಸ್‌ಮಸ್ ಕೊಡುವ ಕಾಡುವ ನೆನಪಿನ ಭಾವವನ್ನು ಜೀವಂತಗೊಳಿಸಿದ್ದಾರೆ. ವರ್ಷವೆಂದರೆ ಒಂದು ಕಾಲಮಾನ. ಯುಗವೆಂಬ ದೀರ್ಘ ಮಾನದಂಡವನ್ನು ಹೃಸ್ವಗೊಳಿಸಿ ಒಂದೊಂದು ವರ್ಷಕ್ಕೆ ಸೀಮಿತಗೊಳಿಸಿ ಮೆಲುಕು ಹಾಕಲು ಅನುವು ಮಾಡಿಕೊಡುವ ಕೊನೆಯ ಕಾಲ ಕ್ರಿಸ್‌ಮಸ್. ಗೋವಿಂದಪೈಗಳ ಸೃಷ್ಟಿಯಲ್ಲಿ ವರ್ಷವೆಂದರೆ ಕಾಲನ ಕೈ. (ಯೇಟ್ಸನ ಇಪ್ಪತ್ತು ಶತಕಗಳಂತೆ ಪೈಗಳೂ ಎರಡು ಸಾವಿರ ವರ್ಷಗಳ ಕಾಲವನ್ನು ಎರಡು ಸಾವಿರ ಕೈಯ ಎಂದು ನೆನಪಿಸಿದ್ದಾರೆ.) ಇನ್ನೊಂದು ವಾರ ದಾಟಿದರೆ ಹೊಸ ವರುಷ. ಬೇಂದ್ರೆ ತನ್ನೆಲ್ಲ ನೋವುಗಳ ನಡುವೆಯೂ ಹೇಳಿದ ಹೊಸ ವರುಷಕೆ ಹೊಸ ವರುಷವ ತರುತ್ತದೆಂಬ ಆಶಯದ ಗಡುವು. ಆದರೆ ವರ್ಷದ ಕೊನೆಯಲ್ಲಿ ಯೇಸುವನ್ನು ನೆನಪಿಸಿಕೊಳ್ಳುತ್ತ ಆ ನೋವಿನ ಎದುರು ನಮ್ಮ ನೋವು ಏನೂ ಅಲ್ಲ ಎಂದು ನೆನಪುಮಾಡಿಕೊಳ್ಳುವುದು ಉಚಿತ.

ಶಿಲುಭೆಯೇರಿದ ಯೇಸುವಿನ ಆಧ್ಯಾತ್ಮಿಕ ದೃಷ್ಟಿಕೋನವನ್ನು ಗೋವಿಂದ ಪೈಗಳ ಸೃಷ್ಟಿಯಲ್ಲೇ ನೆನಪುಮಾಡಿಕೊಳ್ಳಬಹುದು: ‘‘ನನ್ನ ರಾಜ್ಯವಿದಲ್ಲ, ಈ ಲೋಕದಿಂದ ಬೇರೆಡೆಯೆ ಇದೆ’’ ಎಲ್ಲ ಬುದ್ಧಿಜೀವಿಗಳಂತೆ, ಸಾಧಕರಂತೆ, ಚಿಂತಕರಂತೆ, ಸಂವೇದನಾಶೀಲರಂತೆ ಯೇಸುವೂ ತನ್ನ ಕಾಲದ ಆಳರಸರಿಗೆ ವಿಕ್ಷಿಪ್ತನಾಗಿ, ದೇಶದ್ರೋಹಿಯಾಗಿ ಕಂಡ. ಆದರೆ ಮಹಾತ್ಮನಾಗುವ, ತಲೆಯ ಮೇಲಿನ ಮುಳ್ಳಿನಕಿರೀಟವು ಶಾಶ್ವತ ಪ್ರತಿಮೆಯಾಗಿ ಉಳಿಯುವ ಭಾಗ್ಯವನ್ನು ಪಡೆದ.
ಎಲ್ಲ ಸುಖಗಳ ಹಿಂದೆಯೂ ಅನೇಕರ ಅಪಾರವಾದ ಸಾಧನೆಯಿದೆ. ಅವುಗಳು ನೆಲದಡಿಯ ಬೇರುಗಳಂತೆ ಕಾಣಿಸದೆ ನೆಲದ ಮೇಲಣ ಕಾಂಡ ಮತ್ತು ಚಿಗುರುಗಳನ್ನು ಪೋಷಿಸುತ್ತವೆ; ಹೂ-ಹಣ್ಣುಗಳನ್ನು ನೀಡುತ್ತವೆ. ಪ್ರಕೃತಿಯ ಸೌಂದರ್ಯಕ್ಕೆ ಕಾರಣವಾಗುತ್ತವೆ. ಯಾರಿಗೋ ಹೆಮ್ಮೆಪಡಲು ಕಾರಣವಾಗುತ್ತವೆ. ಚಳಿಗೆ ಎಲೆಗಳನ್ನು ಕಳಚಿಕೊಳ್ಳುವ ಮರದಂತೆ ಕ್ರಿಸ್‌ಮಸ್ ಇಂತಹ ಚೆಲ್ಲಿದ ಚಿಂತನೆಗಳಿಗೂ ಕಾರಣವಾಗುತ್ತಿರಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)