ರೈತರ ಆತ್ಮಹತ್ಯೆ ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕೆ
ರೈತರಿಲ್ಲದೆ ಪ್ರಪಂಚದ ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎಂಬುದು ಕೃಷಿಯ ಶ್ರೇಷ್ಠತೆಯನ್ನು ಸಾರುತ್ತದೆ. ಭಾರತ ಕೃಷಿ ಪ್ರಧಾನ ದೇಶ. ಕೃಷಿಯನ್ನು ಭಾರತದಲ್ಲಿ ಪ್ರಾಥಮಿಕ ವಲಯವೆಂದು ಪರಿಗಣಿಸಲಾಗುತ್ತದೆ, ಅಂದರೆ ಕೃಷಿ ಆರ್ಥಿಕತೆಯು ಪ್ರಾಬಲ್ಯಯುತ ವಲಯವಾಗಿದೆ. ಭಾರತದಲ್ಲಿ ದ್ವಿತೀಯ ಮತ್ತು ತೃತೀಯ ಕ್ಷೇತ್ರಗಳು ಶೀಘ್ರ ದರದಲ್ಲಿ ಬೆಳೆಯುತ್ತಿದ್ದರೂ ಇಂದಿಗೂ ಬಹುಪಾಲು ಭಾರತೀಯರು ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಭಾರತದಲ್ಲಿ ಅತಿ ಹೆಚ್ಚಿನ ಉದ್ಯೋಗಾವಕಾಶವನ್ನು ಒದಗಿಸಿರುವ ಕ್ಷೇತ್ರವೆಂದರೆ ಅದು ಕೃಷಿರಂಗ.
ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ. ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನವನ್ನು ಕಿಸಾನ್ ದಿವಸ್ ಎಂದು ಘೋಷಿಸಲಾಗಿದೆ. 1952ರಲ್ಲಿ ಅವರು ಉತ್ತರ ಪ್ರದೇಶದ ಕಂದಾಯ ಸಚಿವರಾಗಿದ್ದಾಗ ಜಮೀನ್ದಾರಿ ಪದ್ಧತಿ ನಿಷೇಧಿಸುವ ಮತ್ತು ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಮಹತ್ವದ ನಿಧಾರ ಕೈಗೊಂಡರು. ಮುಂದೆ ಇದು ದೇಶದ ರೈತರ ಬದುಕಿನಲ್ಲಿ ಮಹತ್ವದ ಕ್ರಾಂತಿಕಾರಕ ಬದಲಾವಣೆಗೆ ನಾಂದಿಹಾಡಿತು.
ಚರಣ್ ಸಿಂಗ್‌ರವರು ಜುಲೈ 28, 1979 ರಿಂದ 1980ರ ಜನವರಿ 14ರವರೆಗೆ ಅಲ್ಪ ಅವಧಿಗೆ ಮಾತ್ರ ಪ್ರಧಾನಿ ಹುದ್ದೆಯಲ್ಲಿ ಇದ್ದರು. ಈ ಅವಧಿಯಲ್ಲಿ ರೈತರ ಕಲ್ಯಾಣಕ್ಕಾಗಿ ಅವರು ತಂದ ಯೋಜನೆಗಳು ಇಂದಿಗೂ ಜನಪ್ರಿಯ. ರೈತರ ಪರವಾಗಿ ರೈತಸ್ನೇಹಿ ಯೋಜನೆಗಳನ್ನು ತಂದದ್ದಕ್ಕಾಗಿ ಅವರ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ ಮತ್ತು ಇನ್ನಿತರ ರಾಜ್ಯಗಳಲ್ಲಿ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ.
ಭಾರತೀಯ ಆರ್ಥಿಕತೆಯ ಬೆಳವಣಿಗೆಗೆ ಸಂಬಂಧಿಸಿದ ಪ್ರತಿಯೊಂದು ಯೋಜನೆಯು ಕೃಷಿ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದೆ. ಆದ್ದರಿಂದ ಆರ್ಥಿಕ ಬೆಳವಣಿಗೆಯ ದರಗಳನ್ನು ಸಾಧಿಸುವ ನಿಟ್ಟಿನಲ್ಲಿ ಮೊದಲು ಆರ್ಥಿಕತೆಯ ಪ್ರಮುಖ ವಲಯವಾದ ಕೃಷಿ ವಲಯದ ಬೆಳವಣಿಗೆಯ ದರವನ್ನು ಸುಧಾರಿಸುವುದು ಅತ್ಯಂತ ಮುಖ್ಯವಾಗಿದೆ. ಮೊದಲ ಪಂಚವಾರ್ಷಿಕ ಯೋಜನೆಯಿಂದ ಭಾರತದ ಗಮನವನ್ನು ಕೃಷಿಯ ಮೇಲೆ ಕೇಂದ್ರೀಕರಿಸಲಾಗಿದೆ. ಭಾರತೀಯ ಕೃಷಿ ತಾಂತ್ರಿಕವಾಗಿ ಪ್ರಗತಿಗೊಳ್ಳುತ್ತಿದ್ದರೂ ಇಂದು ರೈತರು ಆತ್ಮಹತ್ಯೆಯ ಮೊರೆ ಹೋಗುವುದು ಮುಂದುವರಿದೇ ಇದೆ. ಕೃಷಿಯೇ ಬೆನ್ನೆಲುಬಾದ ದೇಶದಲ್ಲಿ ರೈತರು ಆತ್ಮಹತ್ಯೆಯ ಮೊರೆ ಹೋಗುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷಟ್ರೆ, ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಡ್ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಿದೆ. ಹೀಗೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರಲ್ಲಿ ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂ ಹಿಡುವಳಿ ಹೊಂದಿದ್ದ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರೇ ಹೆಚ್ಚು. ತಮ್ಮ ಕುಟುಂಬದ ಸದಸ್ಯರ ಎರಡೊತ್ತಿನ ಊಟಕ್ಕಾಗಿ ದೇಶದ ಉಳಿದ ನಾಗರಿಕರಿಗೆ ಆಹಾರವನ್ನು ಬೆಳೆಯಲು ಶ್ರಮ ಮತ್ತು ತ್ಯಾಗ ಮಾಡುತ್ತಿರುವ ರೈತ ಸಮುದಾಯ ಇಂದು ಸಂಕಷ್ಟದಲ್ಲಿದೆ. ಸಣ್ಣ ಮತ್ತು ಅತಿಸಣ್ಣ ರೈತರು ತಮ್ಮ ಜಮೀನುಗಳಲ್ಲಿ ಬರುವ ವರಮಾನ ಸಾಕಾಗದೆ ಕೃಷಿ ಕಾರ್ಮಿಕರಾಗಿಯೂ ದುಡಿಯುತ್ತಿದ್ದಾರೆ. ಆದ್ದರಿಂದ ಕೃಷಿ ಕೂಲಿಕಾರರಿಗೆ ಕೆಲಸದ ಭದ್ರತೆ, ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗಳನ್ನು ಒದಗಿಸಬೇಕಾಗಿದೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದ ಕೃಷಿ ವಲಯದ ಪ್ರಗತಿ ಇತ್ತೀಚಿನ ವರ್ಷಗಳಲ್ಲಿ ಬಹಳ ಇಳಿಮುಖವಾಗುತ್ತಿದೆ. ಇದರ ಪರಿಣಾಮವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಭಾರತೀಯ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿರುವ ಸಮಯದಲ್ಲಿಯೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಭಾರತೀಯ ಆರ್ಥಿಕತೆಯ ಬೆನ್ನೆಲುಬಾದ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವುದು ಗಂಭೀರವಾದ ವಿಷಯವಾಗಿದೆ. ಹಾಗಾದರೆ ರೈತರನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಗಂಭೀರ ಸಮಸ್ಯೆಗಳು ಯಾವುವು? ಉತ್ತರಗಳನ್ನು ಹುಡುಕಲು ಹೊರಟರೆ ಹತ್ತಾರು ಕಾರಣಗಳು ಸಿಗುತ್ತವೆ. ಕೊಳವೆ ಬಾವಿ ವೈಫಲ್ಯದಿಂದ ಹೆಚ್ಚಾದ ಸಾಲದ ಹೊರೆ, ನೀರಿನ ಕೊರತೆಯಿಂದ ಬೆಳೆದ ಬೆಳೆಯ ಫಸಲು ಸರಿಯಾಗಿ ಬರದೇ ಕೃಷಿಗಾಗಿ ಮಾಡಿದ ಸಾಲದ ಹೊರೆ ಹೆಚ್ಚುತ್ತಾ ಹೋಗುವುದು, ವಾಣಿಜ್ಯ ಬೆಳೆಗಳಾದ ಹೊಗೆಸೊಪ್ಪು, ಕಬ್ಬು, ಆಲೂಗಡ್ಡೆ, ದಾಳಿಂಬೆ, ರೇಷ್ಮೆ ಮುಂತಾದುವುಗಳನ್ನು ನಿರಂತರವಾಗಿ ಬೆಳೆದು ಇಳುವರಿ ಕಡಿಮೆಯಾಗುತ್ತಿರುವುದು. ನಕಲಿ ಬೀಜ, ಗೊಬ್ಬರ ಮತ್ತು ನಕಲಿ ಕ್ರಿಮಿನಾಶಕ ಕಂಪೆನಿಗಳ ಹಾವಳಿ, ಅತಿಯಾದ ರಾಸಾಯನಿಕಗಳ ಬಳಕೆಯಿಂದ ಕೃಷಿ ಇಳುವರಿ ಕಡಿಮೆಯಾಗಿರುವುದು, ಸಂಕಷ್ಟದಲ್ಲಿರುವ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು (10 ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರು ) ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಾಧ್ಯವಾಗದೇ ಇರುವುದು ಮತ್ತು ಅವುಗಳ ಬಗ್ಗೆ ಮಾಹಿತಿಯ ಕೊರತೆ, ದುಬಾರಿ ಬೀಜ , ರಸಗೊಬ್ಬರಗಳು, ಲಾಭದ ದೃಷ್ಟಿಯನ್ನಿಟ್ಟುಕೊಂಡು ಸಾಂಪ್ರದಾಯಿಕ ಬೆಳೆಗಳಿಂದ ವಾಣಿಜ್ಯ ಬೆಳೆಗಳತ್ತ ಹೆಚ್ಚು ಗಮನ ನೀಡಿದ್ದರಿಂದ ಉಂಟಾದ ಅತಿಯಾದ ಉತ್ಪಾದನಾ ವೆಚ್ಚ, ಅಸಾಂಪ್ರದಾಯಿಕ ಮತ್ತು ಅವೈಜ್ಞಾನಿಕ ಸಾಗುವಳಿ ಪದ್ಧ್ದತಿಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು, ಭಾರತೀಯ ರೈತರ ಹತ್ತಿರದ ಸಂಬಂಧಿಯೆಂದರೆ ಸಾಲ, ಎಂಬ ವ್ಯಂಗ್ಯೋಕ್ತಿ ಮೊದಲಿನಿಂದಲೂ ಇದೆ. ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿಗೆ ಕೃಷಿಗಾಗಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿರುವುದು ಇದರಿಂದ ಕೃಷಿ ಚಟುವಟಿಕೆಗಳಿಗಾಗಿ ಖಾಸಗಿ ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿಗೆ ಪಡೆದ ಸಾಲವನ್ನು ಪಾವತಿಸಲು ಸಾಧ್ಯವಾಗದಿರುವುದು ಮತ್ತು ಅದರಿಂದ ಉಂಟಾದ ಸಾಮಾಜಿಕ ಅಪಮಾನ, ಶಿಕ್ಷಣ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬದಲಾವಣೆ ಮತ್ತು ಮೂಲ ಕಸುಬಿಗೆ ಪರ್ಯಾಯವಾಗಿ ಉದ್ಯೋಗ ಸಿಗದೇ ಇರುವುದು, ಅವಿಭಕ್ತ ಕುಟುಂಬಗಳಲ್ಲಿ ಸಮಸ್ಯೆಯ ಹೊಣೆಗಾರಿಕೆ ಹಾಗೂ ವ್ಯವಹಾರ ನಡೆಸುವ ಯಜಮಾನನ ಮೇಲೆ ಹೆಚ್ಚುತ್ತಿರುವ ಒತ್ತಡ, ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದೇ ಇರುವುದು, ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಅವುಗಳನ್ನು ಕೆಡದಂತೆ ರಕ್ಷಿಸಿಡಲು ಅಗತ್ಯವಾದ ಕೋಲ್ಡ್ ಸ್ಟೋರೇಜ್‌ಗಳ ಕೊರತೆಯಿಂದಾಗಿ ವರ್ಷಾನುಗಟ್ಟಲೆ ರೈತ ಪಟ್ಟ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ. ಹೆಚ್ಚುತ್ತಿರುವ ಜೀವನ ನಿರ್ವಹಣೆಯ ಖರ್ಚು ಹೀಗೆ ಭಾರತೀಯ ರೈತರ ಸಮಸ್ಯೆಗಳು ಮತ್ತು ಆತ್ಮಹತ್ಯೆಗಳಿಗೆ ಕಾರಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ರೈತರ ವ್ಯಯಕ್ತಿಕ ಬದುಕು , ಕೌಟಂಬಿಕ ಖರ್ಚು ಕೂಡ ಆತ್ಮಹತ್ಯೆಗೆ ಕಾರಣ ಎಂದು ದೊಡ್ಡದಾಗಿ ಬಿಂಬಿಸಲು ಕೆಲವರು ಹೊರಟಿರುವುದರಲ್ಲಿ ಸತ್ಯಾಂಶವಿಲ್ಲ. ಮದುವೆ ಮತ್ತು ಹಬ್ಬ-ಹರಿದಿನಗಳು ಸೇರಿದಂತೆ ವ್ಯಯಕ್ತಿಕ ಖರ್ಚು ಕೂಡ ಆತ್ಮಹತ್ಯೆಗೆ ಕಾರಣವಾಗಿದ್ದರೂ ಅದು ಕೇವಲ ನಿಮಿತ್ತ ಮಾತ್ರ. ಗ್ರಾಮಾಂತರ ಪ್ರದೇಶದ ಸಂಕೀರ್ಣ ಕೌಟಂಬಿಕ ವ್ಯವಸ್ಥೆಯಲ್ಲಿ ಜೀವನ ಸಾಗಿಸುತ್ತಿರುವ ರೈತರ ಜೀವನವೆದಂರೆ ಕೇವಲ ಕೃಷಿಯೊಂದೇ ಅಲ್ಲ. ಆದರೆ ಕೃಷಿ ಅವನ ಜೀವನದ ಆಧಾರ ಸ್ತಂಭವಾಗಿದೆ. ಆತನಿಗೂ ಕುಟುಂಬವನ್ನು ನಡೆಸಬೇಕಾದ ಒತ್ತಡಗಳಿವೆ. ಮಕ್ಕಳ ಮದುವೆ, ಕುಟುಂಬದ ಸದಸ್ಯರ ಆರೋಗ್ಯ ಸೇರಿದಂತೆ ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸುವುದೂ ಕೂಡ ಭಾರತೀಯ ರೈತನ ಕರ್ತವ್ಯಗಳಾಗಿವೆ. ವ್ಯವಸಾಯ ಎಂದರೆ ಮನೆ ಮಕ್ಕಳೆಲ್ಲಾ ಸಾಯ ಎನ್ನುವ ಗಾದೆ ಮಾತು ರೂಢಿಯಲ್ಲಿದೆ. ಮುಖ್ಯವಾಗಿ ಭಾರತೀಯ ಕೃಷಿ ಮುಂಗಾರು ಮಾರುತಗಳ ಮೇಲೆ ಅವಲಂಬಿತವಾಗಿದೆ. ಆದ್ದರಿಂದಲೇ ಭಾರತೀಯ ಕೃಷಿಯನ್ನು ಮಳೆಯೊಂದಿಗೆ ಆಡುವ ಜೂಜು ಎಂದು ಕರೆಯಲಾಗುತ್ತದೆ. ಒಂದೆಡೆ ಬರ ಮತ್ತೊಂದೆಡೆ ಅತೀವೃಷ್ಟಿಗಳು ಭಾರತೀಯ ರೈತರನ್ನು ದಿಕ್ಕೆಡಿಸಿವೆ. ಸೂಕ್ತ ಸಮಯಕ್ಕೆ ಮಳೆ ಬರದಿರುವುದು ಹಾಗೂ ಬೆಳೆ ಫಸಲಿಗೆ ಬಂದಾಗ ಕಟಾವಿನ ಹಂತದಲ್ಲಿ ಅತಿಯಾದ ಮಳೆ ಬಂದು ಬೆಳೆ ನಾಶವಾಗುತ್ತಿರುವುದು. ರೈತ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆಯ ಕೊರತೆ ಇದೆ. ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚು. ಯಾವುದೇ ಒಂದು ಉತ್ಪನ್ನವನ್ನು ರೈತ ಮಾರಾಟ ಮಾಡಬೇಕು ಎಂದರೆ ಆತನಿಗೆ ನೇರ ಮಾರುಕಟ್ಟೆ ಸಂಪರ್ಕ ಇರುವುದಿಲ್ಲ. ಯಾಕಂದರೆ ಭಾರತೀಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಅವಿದ್ಯಾವಂತರಾಗಿರುವುದು. ಜೊತೆಗೆ ಮಾರುಕಟ್ಟೆ ಜ್ಞಾನ ಕಡಿಮೆ ಇರುವುದು. ಇದು ಕೂಡ ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಇರುವುದಕ್ಕೆ ಪ್ರಮುಖ ಕಾರಣ. ಅವರಿಗೆ ಮಾರುಕಟ್ಟೆ ದರ, ಮಾರಾಟದ ಬಗ್ಗೆ ಅಷ್ಟೊಂದು ಜ್ಞಾನವಿಲ್ಲದಿರುವುದರಿಂದ ಕಮಿಷನ್ ಏಜೆಂಟ್‌ಗಳು ರೈತರ ದಾರಿ ತಪ್ಪಿಸುತ್ತಾರೆ. ದಿನದ 24 ಗಂಟೆ ವಿದ್ಯುತ್ ಅಲಭ್ಯತೆ. ವ್ಯವಸ್ಥಿತ ಸಾರಿಗೆಯ ಕೊರತೆ ಕೂಡ ರೈತರ ನಿರಂತರ ಆತ್ಮಹತ್ಯೆಗೆ ಕಾರಣಗಳಾಗಿವೆ.
ರೈತರು ಎದುರಿಸುತ್ತಿರುವ ಈ ಸಮಸ್ಯೆಗಳು ಇತ್ತೀಚಿನವೇನೂ ಅಲ್ಲ. ಆದರೆ ಇವುಗಳಿಗೆ ಪರಿಹಾರಗಳನ್ನು ಕಂಡಕೊಳ್ಳುವಲ್ಲಿ ವಿಫಲವಾಗಿರುವುದು ಮಾತ್ರ ಈ ದೇಶದ ದೋಡ್ಡ ದುರಂತವೇ ಸರಿ. ಬೆಳೆ ನಾಶ ಅಥವಾ ಬೆಲೆ ಕುಸಿತದಂತಹ ಸಂದರ್ಭದಲ್ಲಿ ಬೆಳೆ ಪರಿಹಾರ ಘೋಷಿಸುವುದು, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಮತ್ತು ಖಾತರಿ ಬೆಂಬಲ ಬೆಲೆ ಘೋಷಿಸಬೇಕು, ರೈತರಿಗೆ ಬಡ್ಡಿರಹಿತ ಸಾಲ ನೀಡುವುದು ಸೇರಿದಂತೆ ಸಮಗ್ರ ಸಾಲ ನೀತಿಯೊಂದನ್ನು ರೂಪಿಸುವ ಮೂಲಕ ರೈತರಿಗೆ ಲೇವಾದೇವಿಗಾರರಿಂದ ಉಂಟಾಗುತ್ತಿರುವ ಕಿರುಕುಳವನ್ನು ತಪ್ಪಿಸಬೇಕು. ನಿಗದಿತ ಅವಧಿಯಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು, ಕೋಲ್ಡ್ ಸ್ಟೋರೇಜ್ ಸಮರ್ಪಕವಾಗಿ ಆಗಬೇಕು, ರೈತರಿಗೆ ಆಧುನಿಕ ಬೇಸಾಯ ಪದ್ಧತಿಗಳ ಕುರಿತು ಮಾಹಿತಿ ನೀಡುವ ಮೂಲಕ ಫಸಲಿನ ಗುಣಮಟ್ಟ ಮತ್ತು ಪ್ರಮಾಣದ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ಸರಕಾರ ಜಾರಿಗೆ ತಂದಿರುವ ವಿಮಾ ಯೋಜನೆಗಳ ಕುರಿತು ತಿಳುವಳಿಕೆ ನೀಡಿ ರೈತರಿಂದ ಬೆಳೆ ವಿಮೆ ಮಾಡಿಸಬೇಕು. ಅಗತ್ಯ ಬಿದ್ದರೆ ಸಣ್ಣ ರೈತರ ವಿಮೆಯ ಪ್ರೀಮಿಯಂ ಮೊಬಲಗನ್ನು ಸರಕಾರವೇ ಪಾವತಿಸಬೇಕು. ಪ್ರಕೃತಿ ವಿಕೋಪಗಳಿಂದ ರೈತರಿಗೆ ನಷ್ಟವಾದಾಗ ವಿಮಾ ಕಂಪೆನಿಗಳು ರೈತನಿಗೆ ಪರಿಹಾರ ಒದಗಿಸಿಕೊಡುವುದನ್ನು ಖಾತರಿ ಪಡಿಸಿಕೊಳ್ಳುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇವುಗಳಿಗೆ ಪೂರಕವಾದ ಕಾರ್ಯಕ್ರಮಗಳನ್ನು ಸರಕಾರ ಹಾಕಿಕೊಂಡಿದ್ದರೂ ಸಹ ಇಂತಹ ಕಾರ್ಯಕ್ರಮಗಳು ಅನುಷ್ಠಾನದ ಹಂತದಲ್ಲಿ ಸೋಲುತ್ತಿವೆ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಕೂಡ ರೈತರ ಸಮಸ್ಯೆಗಳ ಪರಿಹಾರದಲ್ಲಿ ದೊಡ್ಡ ಅಡಚಣೆಯಾಗಿದೆ. ರೈತರ ಮಾನಸಿಕ ಆರೋಗ್ಯದ ಕಡೆಯೂ ಗಮನ ಹರಿಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ರೈತರು ಇಂದು ಹಲವು ಒತ್ತಡಗಳ ನಡುವೆ ಜೀವನ ಸಾಗಿಸುತ್ತಿದ್ದಾರೆ. ಈ ಒತ್ತಡಗಳಿಗೆ ಸೂಕ್ತ ಕಾರಣ ಮತ್ತು ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಮನಃಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಮತ್ತು ಆಪ್ತ ಸಲಹಾ ತಜ್ಞರಿಂದ ಸೂಕ್ತ ಮಾಹಿತಿ, ಸಲಹೆ ಮತ್ತು ತರಬೇತಿಯನ್ನು ಕೊಡಿಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಆದ್ದರಿಂದ ನಮ್ಮ ಆರೋಗ್ಯ ವ್ಯವಸ್ಥೆಯ ಸ್ವರೂಪ ಕೂಡ ಬದಲಾಗಬೇಕಾಗಿದೆ. ಭಾರತದಲ್ಲಿ ಇದುವರೆಗೂ ಮಾನಸಿಕ ಆರೋಗ್ಯದ ಕುರಿತು ಅಷ್ಟೊಂದು ಪ್ರಗತಿಯನ್ನು ಸಾಧಿಸಲಾಗಿಲ್ಲ. ರೈತರು ಇಂದಿನ ಒತ್ತಡದ ಬದುಕಿನಿಂದ ಹೊರಬರಬೇಕಾದರೆ ಮಾನಸಿಕ ತಜ್ಞರ ಸಲಹೆ ಮತ್ತು ಮಾರ್ಗದರ್ಶನ ಹಿಂದಿಗಿಂತ ಇಂದು ಹೆಚ್ಚಾಗಿದೆ. ಆದ್ದರಿಂದ ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಜಿಲ್ಲಾ ಆಸ್ಪತ್ರೆಯವರೆಗೂ ಎಲ್ಲಾ ಹಂತಗಳಲ್ಲೂ ಮಾನಸಿಕ ತಜ್ಞರ ನೇಮಕವಾಗಬೇಕಾಗಿದೆ. ಸಾರ್ವಜನಿಕರು ಮತ್ತು ಮಾಧ್ಯಮಗಳೂ ಕೂಡ ರೈತರ ಬದುಕನ್ನು ಹಸನಾಗಿಸಲು ಪ್ರಯತ್ನಗಳನ್ನು ಮಾಡಬೇಕಾಗಿದೆ. ಆದರೆ ಮಾಧ್ಯಮಗಳೂ ಕೂಡ ಕೃಷಿ ಮತ್ತು ರೈತ ಸಮುದಾಯವನ್ನು ನಿರ್ಲಕ್ಷಿಸಿವೆ ಎಂಬ ಗಂಭೀರ ಆರೋಪಗಳು ಕಳೆದ ಎರಡು ದಶಕಗಳಿಂದ ಮಾಧ್ಯಮ ವಲಯದಲ್ಲಿ ಕೇಳಿ ಬರುತ್ತಿದೆ. ಕೃಷಿ ಮತ್ತು ರೈತರ ವಿಷಯಗಳಿಗೆ ಮಾಧ್ಯಮಗಳು ನೀಡುವ ಸ್ಥಳ ಮತ್ತು ಸಮಯ ಎರಡೂ ಕೂಡ ಅತ್ಯಂತ ಕನಿಷ್ಠ ಪ್ರಮಾಣದಲ್ಲಿದೆ. ಮಾಧ್ಯಮಗಳ ಈ ಮನೋಭಾವ ಬದಲಾಗಬೇಕಾಗಿದೆ. ರೈತರ ಸಮಸ್ಯೆಗಳಿಗೆ ಮಾಧ್ಯಮಗಳು ಕಿವಿ ಮತ್ತು ಬಾಯಿಗಳಾಗಿ ಕೆಲಸ ಮಾಡಬೇಕಾಗಿದೆ. ಇದು ಮಾಧ್ಯಮಗಳ ಜವಾಬ್ದಾರಿ ಕೂಡ ಆಗಿದೆ.
ರೈತರ ಆತ್ಮಹತ್ಯೆ ನಾಗರಿಕ ಸಮಾಜಕ್ಕೆ ಒಂದು ಕಪ್ಪು ಚುಕ್ಕೆ. ದೇಶಕ್ಕೆ ಅನ್ನದಾತನ ಸಾವು ಎಂದರೆ ಅದು ಕೇವಲ ರೈತನ ಸಾವಲ್ಲ ಬದಲಾಗಿ ದೇಶದ ಸೋಲು. ರೈತರ ಆತ್ಮಹತ್ಯೆ ತಡೆಯುವ ಕೆಲಸ ಅಸಾಧ್ಯವಾದುದೇನೂ ಅಲ್ಲ. ಇಡೀ ವ್ಯವಸ್ಥೆ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ರೈತರ ಆತ್ಮಹತ್ಯೆಗಳನ್ನು ತಡೆಯುವಲ್ಲಿ ಯಶಸ್ವಿಯಾಗಬಹುದು.