ಚಿತ್ರಕರ್ತ ಗೀತೆಗಳು
ಅಭಿನಂದನೆಗಳು ಶ್ರೀಮತಿ ಜ್ಯೋತಿ ಗುರುಪ್ರಸಾದ್ ಅವರೆ! ತಮ್ಮ ಅಭಿರುಚಿಯ ಕೃಷಿ ಫಲಕೊಟ್ಟಿದೆ. ಋತುಮಾನ ಮೀರಿ... ಹೊಸಗಾನ ತೋರಿ... ಎನುವ ಕವಿವಾಣಿಯಂತೆ... ಚಲಚಿತ್ರಗೀತೆಗಳಿಗೊಂದು ಮೀಮಾಂಸಾ ಪ್ರಕಾರವನ್ನು ಗ್ರಂಥಸ್ಥವಾಗಿಸುವ ತಮ್ಮ ಹೊಸ ಗಾನ ಮಾದರಿ ನಿಜಕ್ಕೂ ಶ್ಲಾಘನೀಯ.
ಚಲನಚಿತ್ರಗಳು ಜನಮಾನಸ ಚಿತ್ತದಲ್ಲಿ ಚಿರಕಾಲ ಉಳಿದಿರುತ್ತವೆ. ಅದರೊಟ್ಟಿಗಿನ ಪ್ರಿಯವಾದ ಗೀತೆಗಳು ನಮ್ಮ ಬದುಕಿನ ಜೊತೆ ಪ್ರಯಾಣಿಸುತಾ... ‘‘ದುಡಿಮೆಯೆ ನಂಬಿ ಬದುಕು... ಅದರಲೆ ದೇವರ ಹುಡುಕು’’ ಎನ್ನುತ್ತಾ ಸಹಚಾರೀ ಭಾವವನ್ನು ಉದ್ದೀಪಿಸುತ್ತಾ ಕಾಡುತ್ತಿರುತ್ತವೆ.
‘‘ಜನಬಿಂಬ’’ದಲ್ಲಿನ ತಮ್ಮ ಅಂಕಣದ ಹೂರಣವು ಈ ಹೊತ್ತಗೆಯಲ್ಲಿ ಮಾಗಿದ ಸುಸ್ವರಗಳಾಗಿ ಪಲ್ಲವಿಸಿವೆ! ಜನಕ್ಕೆ ಹಾಡು ಬೇಕು... ಹಳತೂ-ಹೊಸತೂ ಎಲ್ಲವೂ ಬೇಕು! ಮಾಧ್ಯಮಗಳು ಈ ಜನತಾಜಿಹ್ವೆಯನ್ನು ಸ್ವಾದಿಷ್ಟ ವಿನ್ಯಾಸಗಳಿಂದ ಜನಕ್ಕೆ ತಲುಪಿಸಿ ಮನ ತಣಿಸಲೇಬೇಕು. ಅದೊಂದು ವಾಙ್ಮಯ ವಿಧಿ!
ಹೆಚ್ಚಿನ ಕಾರಣವೇನೆಂದರೆ, ಪ್ರಪಂಚ ಸಿನೆಮಾ ಪ್ರಪಂಚಗಳಲ್ಲಿ, ಭಾರತೀಯ ಸಿನೆಮಾ ಪ್ರಪಂಚವು ಪ್ರತ್ಯೇಕ ಸ್ಥಾನದಲ್ಲಿ ಯಾಕಿದೆಯೆಂದರೆ ಅದರ ಸಂಗೀತದ ಗುಣದಿಂದ! ಹಾಡುಗಳಿಲ್ಲದೆ ಭಾರತೀಯ ಸಿನೆಮಾ ಪ್ರಪಂಚವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸಿನೆಮಾ ಹಾಡುಗಳೂ ಸಹ ನಮ್ಮ ಸಂಸ್ಕೃತಿಯ ಭಾಗವೇ ಆಗಿರುವುದರಿಂದ, ಸದಾಶಯ, ಸಾಹಿತ್ಯಿಕ, ಸೃಜನಶೀಲ ಸಂಯೋಜನೆಗಳ ಸಿನೆಮಾ ಹಾಡುಗಳನ್ನು ಆರಿಸಿ, ಆದರಿಸಿ ಗೀತಮಾಲೆಗಳನ್ನಾಗಿಸುವುದು ನಮ್ಮ ಕರ್ತವ್ಯವೇ ಆಗಿದೆ.
ಒಂದು ಚಲನಚಿತ್ರ ಗೀತೆಯು ಸೃಷ್ಟಿಯಾಗುವ ಕಾಲ, ಅದರ ಕಾರಣ; ಪ್ರಯತ್ನ-ಪ್ರತಿಭೆ; ಹೂಡಿಕೆ-ಗಳಿಕೆ; ಸೋಲು-ಗೆಲುವು; ಈ ಎಲ್ಲ ವಿವರಗಳನ್ನು ತಿಳಿದುಕೊಳ್ಳಲು ಜನ ತವಕಿಸುತ್ತಾರೆ. ‘‘ಹಾಡು ಹಲಸಿನ’’ ಈ ಎಲ್ಲ ತೊಳೆಗಳನ್ನು ಬಿಡಿಸಿ ಬಿಡಿಸಿ ಕೊಟ್ಟಷ್ಟೂ ಸವಿದು ಸವಿದು ತಣಿಯುತ್ತದೆ ಶ್ರೋತೃಲೋಕ! ತಣಿದು ತಣಿದೇ ದಣಿಯುತ್ತದೆ ಅಭಿರುಚಿಯ ಅಂತರಂಗ! ಒಲವಿನ ಪೂಜೆಗೆ ಒಲವೇ ಮಂದಾರ... ಹಾಡಿನ ರಸನೆಗೆ ಹಾಡೇ ರಸಧಾರೇ!
ತಾವು ಗೀತ ಕ್ಷೀರವನ್ನೇ ಕಡೆದಿದ್ದೀರಿ! ಕೆನೆಗಟ್ಟಿದ್ದನ್ನೇ ಕಾಸಿ ಹೆಪ್ಪಿಟ್ಟಿದ್ದೀರಿ! ನವನೀತದ ಮುದ್ದೆಗಳನ್ನು ಕರಗಿಸಿ ಶೇಖರಿಸಿದ್ದೀರಿ! ಘಂ ಎನ್ನುತ್ತಿದೆ ಇಡೀ... ಗೀತ ಸಂಕಥಾ ಸಂಕಲನ! ನಾದ ಒಲಿದು ಝೇಂಕಾರ ಮಾಡಲು... ನಿಮ್ಮ ಈ ‘‘ಮನಸು ಮಾಗಿದ ಸುಸ್ವರ’’ವು ಔಚಿತ್ಯ ಶರೀರದಲ್ಲಿ ಸಂಪನ್ನವಾಗಿದೆ!
ಕರ್ನಾಟಕ ಸಂಗೀತಜ್ಞರು ಜಗತ್ಪ್ರಸಿದ್ಧರು... 22 ಶೃತಿಗಳಿಂದ ಜನಿಸಬಹುದಾದ ಎಲ್ಲ ರಾಗಗಳ ಕ್ರಮ-ಪಲ್ಲಟಗಳನ್ನು ವಿಶ್ಲೇಷಿಸಿ ಜಗದ ಮುಂದಿಟ್ಟಿದ್ದಾರೆ. ರಾಗಗಳಿಗಾಗಿ ಜಗತ್ತು ಯಾವತ್ತೂ ಭಾರತವನ್ನೇ ಅವಲಂಬಿಸುವಂತೆ ಮಾಡಿಟ್ಟಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚಿನ ರಾಗಗಳನ್ನು ಮನುಷ್ಯ ಮಾತ್ರದವರು ಒಂದು ಜೀವಿತ ಕಾಲದಲ್ಲಿ ಸಾಧಿಸುವುದು ಸಾಧ್ಯವೇ...?
ಅಸಾಧ್ಯ! ಅದಕ್ಕಾಗಿಯೇ ನಮ್ಮ ಹಿರಿಯರು 73 ಮೇಳಕರ್ತ ರಾಗಗಳಲ್ಲಿ ಸಂಗೀತ ಸಾಧನೆ ಸಾಗಲಿ ಎಂದು ಮಾರ್ಗ ಸೃಷ್ಟಿಸಿಕೊಟ್ಟಿದ್ದಾರೆ!
‘‘ಮನಸು ಮಾಗಿದ ಸುಸ್ವರ’’ದಲ್ಲಿ ಯೋಗಾಯೋಗವೆಂಬಂತೆ 73 ಚಿತ್ರಕರ್ತ ಗೀತೆಗಳಿವೆ! ಅವುಗಳ ಆಶಯ, ಪ್ರತಿಭೆ, ಪ್ರಯೋಗ, ಪ್ರಯೋಜನಗಳ ವಿವರಗಳಿವೆ! ಇದೊಂದು ಸುಂದರವಾದ ಚಿತ್ರಗೀತಾ ಮೀಮಾಂಸಾ ವಿನ್ಯಾಸ!
ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಸೌಖ್ಯಗಳ ತತ್ವದಡಿಯಲ್ಲಿ ಈ 73 ಚಿತ್ರಕರ್ತ ಗೀತೆಗಳನ್ನು ನಿಲ್ಲಿಸಿ ತೂಗುವ ಪ್ರಯತ್ನ ಇದು; ಎಂದು ತಾವು ಹೇಳಿದ್ದೀರಿ. ಇಂತಹ ತಾತ್ವಿಕ ಒರೆಗಲ್ಲಿಗೆ ಚಿತ್ರಗೀತೆಗಳು ಅರ್ಹವಾಗುತ್ತಿರುವುದು ನಿಜಕ್ಕೂ ಮಹತ್ವದ ಸಂಗತಿ.
ಸಿನೆಮಾ ಎಂದರೆ ಮುಜುಗರ ಪಟ್ಟುಕೊಳ್ಳುವ ಮನಸುಗಳಿಗೆ ಒಪ್ಪಿಗೆಯಾಗಬಹುದಾದ ಇಂತಹ ತತ್ವಾರ್ಥ ಸಾಮರ್ಥ್ಯವುಳ್ಳ ಮಾಗಿದ ಸುಸ್ವರಗಳು ಸಕಾರಾತ್ಮಕ ಪರಿಣಾಮವನ್ನು ಸೃಷ್ಟಿಮಾಡಬಲ್ಲವು. ಈ ಮಾತಿಗೆ ಮನವೇ ಸಾಕ್ಷಿ; ಈ ಭಾಷೆಗೆ ದೇವರೇ ಸಾಕ್ಷಿ!
ಮುಂದಿನ ತಮ್ಮ ಚಿತ್ರಕರ್ತ ಗೀತ ಸಂಕಥಾಸಂಕಲನದಲ್ಲಿ ಹಾಡುಗಳಿಗೆ ಬಳಸಿದ ರಾಗಗಳ ವಿವರ, ವಾದ್ಯ ಪ್ರಯೋಗಗಳ ತಜ್ಞತೆಯನ್ನೂ ಸೂಕ್ಷ್ಮವಾಗಿ ದಾಖಲಿಸಬೇಕೆನ್ನುವ ಸಲಹೆ ನನ್ನದು. ಅಂತಾ ಸಂದರ್ಭದಲ್ಲಿ ನನ್ನಿಂದಾಗುವ ಎಲ್ಲ ನೆರವು ತಮಗೆ ನೀಡಲು ಸೋದರಭಾವದಿಂದ ವಿನಂತಿಸುತ್ತಾ; ಭರವಸೆಯ ಬೆಳ್ಳಿಬೆಳಕು ಹುಡುಕಿ... ಮುಂದೆ ಸಾಗಬೇಕು... ಧೈರ್ಯ ತಾಳುತಾ... ನನ್ನ ಅಭಿಮಾನಿ ಚಿರಂಜೀವಿ ಗೌತಮನಿಗೆ ಹರಸುತಾ... ನನ್ನೆರಡು ಮಾತುಗಳಿಗೆ ವಿರಾಮ ನೀಡುತ್ತೇನೆ. ಯೋಗವು ಒಮ್ಮೆ ಬರುವುದು ನಮಗೆ... ಯೋಗ್ಯತೆ ಒಂದೇ ಉಳಿವುದು ಕೊನೆಗೆ... ಮಾಧುರ್ಯ ತುಂಬಿದಾ... ನುಡಿ ನಮ್ಮದು... ಕಸ್ತೂರಿ ಕನ್ನಡದ ಸವಿ ನಮ್ಮದು.
ಹಂಸಲೇಖ, ಬೆಂಗಳೂರು