ಕೊಳೆಯುತ್ತಿದೆ ಬಜೆಟ್ ಅನುದಾನ!
ಬಹುತೇಕ ಇಲಾಖೆಗಳಲ್ಲಿ ಆಯವ್ಯಯ ವೆಚ್ಚ ಶೇ.50ರ ಗಡಿಯನ್ನೂ ದಾಟಿಲ್ಲ
ಬೆಂಗಳೂರು, ಡಿ.22: 2021-22ನೇ ಸಾಲಿನ ಆರ್ಥಿಕ ವರ್ಷ ಕೊನೆಗೊಳ್ಳಲು ಇನ್ನೂ ಮೂರು ತಿಂಗಳಿದ್ದರೂ ಆಯವಯ್ಯದಲ್ಲಿ ನಿಗದಿಪಡಿಸಿ ಮೀಸಲಿರಿಸಿದ್ದ ಒಟ್ಟು ಅನುದಾನವನ್ನು ಖರ್ಚು ಮಾಡುವಲ್ಲಿ ಬಹುತೇಕ ಇಲಾಖೆಗಳು ಹಿಂದೆ ಬಿದ್ದಿವೆ. ಆಯವ್ಯಯದಲ್ಲಿ ಘೋಷಿಸಿದ್ದ ವಿವಿಧ ಜನಪ್ರಿಯ ಯೋಜನೆಗಳು ಮತ್ತು ಚಾಲ್ತಿಯಲ್ಲಿರುವ ಯೋಜನೆಗಳ ಮುಂದುವರಿಕೆಗೆ ಇಲಾಖೆಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ಮೀಸಲಿರಿಸಿದ್ದರೂ ವೆಚ್ಚ ಮಾಡುವುದರಲ್ಲಿ ಬಹುತೇಕ ಇಲಾಖೆಗಳು ಶೇ.50ರ ಗಡಿಯನ್ನೂ ದಾಟಿಲ್ಲ.
ಯಶವಂತರಾಯಗೌಡ ಪಾಟೀಲ್ ಗೌಡ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯನ್ನು ಬಹಿರಂಗಗೊಳಿಸಿದ್ದಾರೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿಯೇ ಹಲವು ಯೋಜನೆಗಳು ಅನುಷ್ಠಾನದಲ್ಲಿ ಮುಗ್ಗರಿಸಿ ಬಿದ್ದಿವೆ. ಹೀಗಾಗಿಯೇ ವರ್ಷ ಕಳೆದರೂ ಯೋಜನೆಗಳ ಲಾಭವು ಫಲಾನುಭವಿಗಳಿಗೆ ದೊರಕುತ್ತಿಲ್ಲ.
2021-22ನೇ ಸಾಲಿನ ಆಯವ್ಯಯದಲ್ಲಿ ಒಟ್ಟು 46 ಆಡಳಿತ ಇಲಾಖೆಗಳಿಗೆ ಒದಗಿಸಿದ್ದ 2,46,206.92 ಕೋಟಿ ರೂ.ಯಲ್ಲಿ ಅಕ್ಟೋಬರ್ ಅಂತ್ಯಕ್ಕೆ 1,11,456.19 ಕೋಟಿ ರೂ. ವೆಚ್ಚವಾಗಿದೆ. ಆಯವಯ್ಯದಲ್ಲಿ ಒದಗಿಸಿದ್ದ ಒಟ್ಟು ಅನುದಾನದ ಪೈಕಿ ಶೇ.45ರಷ್ಟು ಮಾತ್ರ ವೆಚ್ಚ ಮಾಡಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.
ವೆಚ್ಚ ಮಾಡುವುದರಲ್ಲಿ ಹಿಂದೆ ಬಿದ್ದಿರುವುದಕ್ಕೆ ಯಾವುದೇ ಕಾರಣಗಳನ್ನು ನೀಡಿಲ್ಲ. ಕೋವಿಡ್ ಎರಡನೇ ಅಲೆ ವೇಳೆಯಲ್ಲಿ 2 ತಿಂಗಳ ಕಾಲ ಲಾಕ್ಡೌನ್ ಘೋಷಿಸಿದ್ದರಿಂದಾಗಿ ವೆಚ್ಚ ಮಾಡುವುದರಲ್ಲಿ ಹಿಂದೆ ಬಿದ್ದಿದೆ ಎಂದು ಹೇಳಲಾಗುತ್ತಿದೆಯಾದರೂ ಲಾಕ್ಡೌನ್ ತೆರವುಗೊಂಡ 5 ತಿಂಗಳ ನಂತರವೂ ನಿಗದಿಪಡಿಸಿದ್ದ ಅನುದಾನವನ್ನು ಖರ್ಚು ಮಾಡುವುದರಲ್ಲಿ ಅಧಿಕಾರಿಗಳು ಹಿಂದುಳಿದಿದ್ದಾರೆ. ಇಲಾಖಾ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿಯನ್ನು ಮುಖ್ಯ ಕಾರ್ಯದರ್ಶಿಗಳು ಪ್ರತಿ ತಿಂಗಳೂ ಪರಾಮರ್ಶಿಸಿದರೂ ವೆಚ್ಚದಲ್ಲಿ ಮಾತ್ರ ಏರಿಕೆ ಕಾಣುತ್ತಿಲ್ಲ.
ಮತೀಯ ಮತ್ತು ಧಾರ್ಮಿಕ ವಿಚಾರಗಳಿಗೇ ಹೆಚ್ಚು ಮಹತ್ವ ನೀಡುತ್ತಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರು ನಿಭಾಯಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಲ್ಲಿ ಶೇ.43ರಷ್ಟು ಮಾತ್ರ ವೆಚ್ಚವಾಗಿದೆ. ಅದೇರೀತಿ ವಸತಿಹೀನರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರೊಂದಿಗೆ ವಾಗ್ವಾದಕ್ಕಿಳಿದು ಸವಾಲು ಎಸೆದಿರುವ ಸಚಿವ ಸೋಮಣ್ಣ ನಿಭಾಯಿಸುವ ವಸತಿ ಇಲಾಖೆಯಲ್ಲಿ ಅಕ್ಟೋಬರ್ ಅಂತ್ಯಕ್ಕೆ ಕೇವಲ ಶೇ.24ರಷ್ಟು ಮಾತ್ರ ವೆಚ್ಚವಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಶೇ.38ರಷ್ಟು ಮಾತ್ರ ವೆಚ್ಚ ಮಾಡಿದ್ದರೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಶೇ.44, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಶೇ.51, ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆಯು ಶೇ.54ರಷ್ಟು ಮಾತ್ರ ವೆಚ್ಚ ಮಾಡಿದೆ. 10 ಇಲಾಖೆಗಳು ಶೇ.35ಕ್ಕಿಂತ ಕಡಿಮೆ ವೆಚ್ಚ ಮಾಡಿವೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 2,373.54 ಕೋಟಿ ರು ಅನುದಾನ ಒದಗಿಸಿತ್ತು. ಆದರೆ ಈ ಇಲಾಖೆಯು 2,597.54 ಕೋಟಿ ರೂ. ವೆಚ್ಚ ಮಾಡುವ ಮೂಲಕ ಒಟ್ಟು ಅನುದಾನಕ್ಕಿಂತ ಶೇ.109ರಷ್ಟು ವೆಚ್ಚ ಮಾಡಿ ಮೊದಲ ಸ್ಥಾನದಲ್ಲಿದೆ.
ಶೇ.35ಕ್ಕಿಂತ ಕಡಿಮೆ ವೆಚ್ಚ ಮಾಡಿರುವ ಇಲಾಖೆಗಳಿವು
ಋಣ ಮೇಲು ಸ್ತುವಾರಿಗೆ ನೀಡಿದ್ದ 43,725.64 ಕೋಟಿ ರೂ.ಯಲ್ಲಿ 14,428.12 ಕೋ.ರೂ.(ಶೇ.33) ವೆಚ್ಚವಾಗಿದೆ. ಕೃಷಿ ಇಲಾಖೆಗೆ ಒದಗಿಸಿದ್ದ 5,728.49 ಕೋಟಿ ರೂ. ಅನುದಾನದಲ್ಲಿ 1,276.02 ಕೋ.ರೂ.(ಶೇ.22) ಖರ್ಚಾಗಿದೆ. ಇದು ಒಟ್ಟು ಅನುದಾನದ ಪೈಕಿ. ತೋಟಗಾರಿಕೆ ಇಲಾಖೆಯ 1,112.52 ಕೋಟಿ ರೂ.ನಲ್ಲಿ 300.33 ಕೋ.ರೂ.(ಶೇ.27) ವೆಚ್ಚ ವಾಗಿದೆ. ಇ-ಆಡಳಿತಕ್ಕೆ 107.46 ಕೋಟಿ ರೂ. ಒದಗಿಸಿದ್ದು, ಇದರಲ್ಲಿ 31.90 ಕೋ.ರೂ. (ಶೇ.30) ಖರ್ಚು ಮಾಡಿದೆ. ಪ್ರವಾಸೋದ್ಯಮಕ್ಕೆ ಒದಗಿಸಿದ್ದ 258.60 ಕೋ.ರೂ.ನಲ್ಲಿ 48.46 ಕೋ.ರೂ. (ಶೇ.19) ವೆಚ್ಚ ಮಾಡಿದೆ.
ಅದೇರೀತಿ ವಸತಿ ಇಲಾಖೆಗೆ ನೀಡಿದ್ದ 2,982.06 ಕೋಟಿ ರೂ.ನಲ್ಲಿ 709.97 ಕೋ.ರೂ. (ಶೇ.24) ವೆಚ್ಚವಾಗಿದೆ. ಕೈ ಮಗ್ಗ ಜವಳಿ ಇಲಾಖೆಯಲ್ಲಿ 400.95 ಕೋ.ರೂ. ಪೈಕಿ 106.35 ಕೋ.ರೂ. ಶೇ(.27) ವೆಚ್ಚವಾಗಿದ್ದರೆ, ಸಣ್ಣ ಕೈಗಾರಿಕೆಗೆ ಒದಗಿಸಿದ್ದ 547.24 ಕೋ.ರೂ.ನಲ್ಲಿ 119.94 ಕೋ.ರೂ. (ಶೇ.22 )ವೆಚ್ಚ ಮಾಡಲಾಗಿದೆ. ಗಣಿ ಇಲಾಖೆಗೆ 98.63 ಕೋ.ರೂ.ನಲ್ಲಿ 27.37 ಕೋ.ರೂ. (ಶೇ.28), ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಿದ್ದ 210.21 ಕೋ.ರೂ.ನಲ್ಲಿ 62.33 ಕೋ.ರೂ.(ಶೇ.30), ಯೋಜನೆ ಸಾಂಖ್ಯಿಕ ವಿಜ್ಞಾನ ತಂತ್ರಜ್ಞಾನ- 2,367.56 ಕೋ.ರೂ.ನಲ್ಲಿ 757.56 ಕೋ.ರೂ. (ಶೇ.32) ವೆಚ್ಚವಾಗಿದೆ.
ಶೇ.35ರಿಂದ 60ರಷ್ಟು ವೆಚ್ಚ
ರೇಷ್ಮೆ ಇಲಾಖೆಗೆ ನೀಡಿದ್ದ 386.41 ಕೋ.ರೂ.ನಲ್ಲಿ 191.49 ಕೋ.ರೂ.(ಶೇ.50)ರಷ್ಟು ಖರ್ಚು ಮಾಡಲಾಗಿದೆ. ಪಶು ಸಂಗೋಪನೆ ಇಲಾಖೆಗೆ ಒದಗಿಸಿದ್ದ 2,408.27 ಕೋ.ರೂ.ನಲ್ಲಿ 1,604.88 ಕೋ.ರೂ.(ಶೇ.67) 263.66 ಕೋ.ರೂ. ಪಡೆದುಕೊಂಡಿದ್ದ ಮೀನುಗಾರಿಕೆ ಇಲಾಖೆಯು 155.59 ಕೋ.ರೂ. (ಶೇ.59) ಆರ್ಥಿಕ ಇಲಾಖೆಯು 25,572.66 ಕೋ.ರೂ.ನಲ್ಲಿ 11,063.98 ಕೋ.ರೂ.(ಶೇ.40) ಖರ್ಚು ಮಾಡಿದೆ.
ಅದೇರೀತಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು 900.98 ಕೋ.ರೂ.ಲ್ಲಿ 428.35 (ಶೇ. 48) ಕೋ.ರೂ., ಒಳಾಡಳಿತ ಇಲಾಖೆಯು 8,077.03 ಕೋ.ರೂ.ನಲ್ಲಿ 4,160.11 ಕೋ.ರೂ. (ಶೇ.52) ವೆಚ್ಚ ಮಾಡಿದೆ. ಸಾರಿಗೆ ಇಲಾಖೆಯು 1,954,30 ಕೋ.ರೂ.ಲ್ಲಿ 1,054.73 ಕೋ.ರೂ. (ಶೇ.54) ವೆಚ್ಚ ಮಾಡಿದ್ದರೆ, ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್ ಇಲಾಖೆಯು 15,914.82 ಕೋ.ರೂ.ನಲ್ಲಿ 6,857.49 ಕೋ.ರೂ. (ಶೇ. 43) ಬಳಕೆ ಮಾಡಿದೆ.
ಅರಣ್ಯ ಇಲಾಖೆಯು 1,818.69 ಕೋಟಿ ರೂ.ನಲ್ಲಿ 794.01 ಕೋ.ರೂ.(ಶೇ.44), ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿ 10.32 ಕೋ.ರೂ. ಪೈಕಿ 4.70 ಕೋ.ರೂ. (ಶೇ.46), ಸಹಕಾರ ಇಲಾಖೆಯು 1,604.02 ಕೋ.ರೂ.ನಲ್ಲಿ 724.50 ಕೋ.ರೂ.(ಶೇ.45), ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕೆ ನೀಡಿದ್ದ 3,710.48 ಕೋ.ರೂ. ಪೈಕಿ 2,015.16 ಕೋ.ರೂ. (ಶೇ.54), ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು 1,395.79 ಕೋ.ರೂ.ನಲ್ಲಿ 620.25 ಕೋ.ರೂ.(ಶೇ.44), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2,244.26 ಕೋ.ರೂ.ನಲ್ಲಿ 1,151.50 ಕೋ.ರೂ.(ಶೇ.51) ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡಿದ್ದ 1,335.63 ಕೋಟಿ ರೂ.ನಲ್ಲಿ 511.85 ಕೋ.ರೂ.(ಶೇ 38) ಖರ್ಚಾಗಿದೆ. ಹಾಗೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಒದಗಿಸಿದ್ದ 4,506.78 ಕೋ.ರೂ.ನಲ್ಲಿ 2,206.64 ಕೋ.ರೂ. (ಶೇ.49) ವೆಚ್ಚ ಮಾಡಲಾಗಿದೆ. ವಾರ್ತೆ ಇಲಾಖೆಯ 227.75 ಕೋ.ರೂ.ನಲ್ಲಿ 89.18 ಕೋ.ರೂ.(ಶೇ.39), ಕಂದಾಯ ಇಲಾಖೆಯಲ್ಲಿ 11,258.46 ಕೋಟಿ ರೂ. ಪೈಕಿ 5,821.11 ಕೋ.ರೂ.(ಶೇ.52) ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನಕ್ಕೆ ನೀಡಿದ್ದ 78.84 ಕೋ.ರೂ.ಲ್ಲಿ 38.99 ಕೋ.ರೂ.(ಶೇ.49), ಉನ್ನತ ಶಿಕ್ಷಣಕ್ಕೆ ಒದಗಿಸಿದ್ದ 4,501.88 ಕೋಟಿ ರೂ.ನಲ್ಲಿ 2,288.65 ಕೋ.ರೂ. (ಶೇ.51), ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಇಲಾಖೆಯು 24,273.07 ಕೋಟಿ ರೂ.ನಲ್ಲಿ 16,505.30 ಕೋ.ರೂ.(ಶೇ.68) ವೆಚ್ಚ ಮಾಡಲಾಗಿದೆ.
ಭಾರೀ ಮತ್ತು ಮಧ್ಯಮ ಕೈಗಾರಿಕೆಗೆ ಮೀಸಲಿರಿಸಿದ್ದ 1,138.32 ಕೋ.ರೂ.ನಲ್ಲಿ 482.34 ಕೋ.ರೂ. (ಶೇ.42), ನಗರಾಭಿವೃದ್ಧಿ ಇಲಾಖೆಗೆ 14,237.60 ಕೋಟಿ ರೂ.ನಲ್ಲಿ 7,730.01 ಕೋ.ರೂ.(ಶೇ.54) ಲೋಕೋಪಯೋಗಿ ಇಲಾಖೆಯಲ್ಲಿ 9,081.85 ಕೋ.ರೂ. ಪೈಕಿ 3,893.27 ಕೋ.ರೂ. (ಶೇ.43) ಭಾರೀ ನೀರಾವರಿಗೆ ನೀಡಿದ್ದ 17,063.09 ಕೋ.ರೂ.ನಲ್ಲಿ 6,038.33 ಕೋ.ರೂ.(ಶೇ.35), ಸಣ್ಣ ನೀರಾವರಿ ನೀಡಲಾಗಿದ್ದ 2,261.25 ಕೋಟಿ ರೂ.ನಲ್ಲಿ 1,202.99 ಕೋ.ರೂ.(ಶೇ.53) ವೆಚ್ಚವಾಗಿದೆ.
ವೈದ್ಯಕೀಯ ಶಿಕ್ಷಣಕ್ಕೆ 3,685.69 ಕೋಟಿ ರೂ.ನಲ್ಲಿ 1,576.48 ಕೋ.ರೂ.(ಶೇ.43), ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ನೀಡಿದ್ದ 8,126.98 ಕೋಟಿ ರೂ.ನಲ್ಲಿ 4,272.46 ಕೋ.ರೂ.(ಶೇ.53) ಕಾರ್ಮಿಕ ಇಲಾಖೆಗೆ ಹಂಚಿಕೆಯಾಗಿದ್ದ 706.97 ಕೋಟಿ ರೂ.ನಲ್ಲಿ 291.01 ಕೋ.ರೂ.(ಶೇ.41), ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಒದಗಿಸಿದ್ದ 1,087.70 ಕೋ.ರೂ.ನಲ್ಲಿ 667.05 ಕೋ.ರೂ.(ಶೇ.61), ಇಂಧನ ಇಲಾಖೆಗೆ ಒದಗಿಸಿದ್ದ 12,655.42 ಕೋ.ರೂ.ನಲ್ಲಿ 5,195.51 ಕೋ.ರೂ.(ಶೇ.41), ಕಾನೂನು ಇಲಾಖೆಗೆ 1,459.53 ಕೋ.ರೂ.ಲ್ಲಿ 797.37 ಕೋ.ರೂ. (ಶೇ 55), ಸಂಸದೀಯ ವ್ಯವಹಾರಗಳ ಇಲಾಖೆಯಲ್ಲಿ 283.02. ಕೋ.ರೂ.ನಲ್ಲಿ 194.19 ಕೋ.ರೂ.(ಶೇ.69) ಖರ್ಚಾಗಿದೆ.
ಆರ್ಥಿಕ ಇಲಾಖೆಯು ಹೊರಡಿಸುವ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಆದೇಶದನ್ವಯ ವಿವಿಧ ಇಲಾಖೆಗಳಿಗೆ ಆಯವಯ್ಯದಲ್ಲಿ ಮೀಸಲಿರಿಸಲಾದ ಅನುದಾನವನ್ನು ತ್ರೈಮಾಸಿಕಗಳಲ್ಲಿ ವಿವಿಧ ಇಲಾಖೆಗಳ ಯೋಜನೆಗಳಿಗೆ ಹಾಗೂ ಇಲಾಖೆಗಳಡಿ ಬರುವ ನಿಗಮ ಮಂಡಳಿಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಉದ್ದೇಶಗಳಿಗಾಗಿ ಅನುದಾನವನ್ನು ಬಿಡುಗಡೆಗೊಳಿಸಲಾಗುತ್ತದೆ.
ಆಡಳಿತ ಇಲಾಖೆಗಳು ಮತ್ತು ನಿಗಮ, ಮಂಡಳಿಗಳು ರೂಪಿಸಿಕೊಂಡಿರುವ ಕ್ರಿಯಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮಾರ್ಚ್ 31ರವರೆಗೆ ಕಾಲಾವಕಾಶ ಇರುತ್ತದೆ.