ಎಪಿಎಂಸಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ಬಳಿಕ ಎಪಿಎಂಸಿಗಳು ಆರ್ಥಿಕ ನಷ್ಟದತ್ತ
ಬೆಂಗಳೂರು, ಡಿ.24: ಎಪಿಎಂಸಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತಂದ ನಂತರ ರಾಜ್ಯದ ಎಪಿಎಂಸಿಗಳಲ್ಲಿ ವ್ಯಾಪಾರ ವಹಿವಾಟುಗಳು ತೀರಾ ಕಡಿಮೆಯಾಗಿದೆ ಮತ್ತು ಎಪಿಎಂಸಿಗಳು ಆರ್ಥಿಕ ನಷ್ಟ ಅನುಭವಿಸುತ್ತಿದೆ ಎಂದು ಸರಕಾರ ಇದೀಗ ಅಧಿಕೃತವಾಗಿ ಒಪ್ಪಿಕೊಂಡಿದೆ.
ಕೃಷಿ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿಯೇ ಮಾರಾಟ ಮಾಡಬೇ ಕೆಂಬ ನಿರ್ಬಂಧ ತೆರವುಗೊಳಿಸಿದ ನಂತರ ಎಪಿಎಂಸಿಗಳು ಆರ್ಥಿಕ ನಷ್ಟ ಅನುಭವಿಸುತ್ತಿವೆ. ರೈತ ಸಂಘಟನೆಗಳು ನಡೆಸಿದ್ದ ದೀರ್ಘಾವಧಿ ಪ್ರತಿಭಟನೆ, ಧರಣಿ ಒತ್ತಡಕ್ಕೆ ಮಣಿದಿದ್ದ ಕೇಂದ್ರ ಸರಕಾರವು ಕೃಷಿ ಮಸೂದೆ ಹಿಂಪಡೆದ ಬೆನ್ನಲ್ಲೇ ರಾಜ್ಯದ ಎಪಿಎಂಸಿಗಳಲ್ಲಿ ವ್ಯಾಪಾರ ವಹಿವಾಟುಗಳು ತೀರಾ ಕಡಿಮೆಯಾಗಿರುವುದು ಮತ್ತು ಆರ್ಥಿಕ ನಷ್ಟ ಅನುಭವಿಸುತ್ತಿರುವ ಸಂಗತಿಯು ಮುನ್ನೆಲೆಗೆ ಬಂದಿದೆ.
ದಿನಸಿ ಪದಾರ್ಥಗಳ ಖರೀದಿ ಮತ್ತು ಮಾರಾಟಕ್ಕೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ ಎಂದು ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರಾಜ್ಯ ಬಿಜೆಪಿ ಸರಕಾರವು ಸಮ ರ್ಥಿಸಿಕೊಂಡಿದ್ದರೇ ಖಾಸಗಿ ಕಂಪೆನಿಗ ಳಿಗೆ ಲಾಭ ಒದಗಿಸಿ ಕೊಡುವುದೇ ಈ ತಿದ್ದುಪಡಿ ಹಿಂದಿನ ಹುನ್ನಾರ ಎಂದು ರೈತರು ಬಲವಾಗಿ ಪ್ರತಿಪಾದಿಸಿದ್ದರು. ಹೀಗಾಗಿ ರಾಜ್ಯ ದಲ್ಲಿಯೂ ಎಪಿಎಂಸಿ ಮಾರುಕಟ್ಟೆ ಕಾಯ್ದೆಗೆ ತಂದಿದ್ದ ತಿದ್ದುಪಡಿಯು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಎಪಿಎಂಸಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತಂದ ನಂತರ ರಾಜ್ಯದ ಎಪಿಎಂಸಿಗಳಲ್ಲಿ ವ್ಯಾಪಾರ ವಹಿವಾಟು ತೀರಾ ಕಡಿಮೆಯಾಗಿರುವುದು ಸರಕಾರದ ಗಮನಕ್ಕೆ ಬಂದಿದೆಯೇ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಎಸ್. ಟಿ.ಸೋಮಶೇಖರ್ ಅವರು ‘ಬಂದಿದೆ’ ಎಂದು ಉತ್ತರಿಸಿದ್ದಾರೆ. ಆದರೆ ಎಪಿಎಂಸಿಗಳಲ್ಲಿನ ವ್ಯಾಪಾರ ವಹಿವಾಟುಗಳು ಎಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ ಮತ್ತು ಇದರಿಂದ ಸಂಭವಿಸಿರುವ ನಷ್ಟದ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ದಿ) ಅಧಿನಿಯಮ 1966 ಕಾಯ್ದೆ (ಸಂಖ್ಯೆ; 59/2020) ಮೂಲಕ ಕಲಂ 8(2) ಹಾಗೂ ಕಲಂ 117ಕ್ಕೆ ತಿದ್ದುಪಡಿ ಮಾಡಿ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿಯೇ ಮಾರಾಟ ಮಾಡಬೇಕು ಎಂಬ ನಿರ್ಬಂಧ ತೆರವುಗೊಳಿಸಿದೆ. ಹಾಗೆಯೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ನಿಯಂತ್ರಣವನ್ನು ಪ್ರಾಂಗಣಕ್ಕಷ್ಟೇ ಸೀಮಿತಗೊಳಿಸಿದೆ. ಕಲಂ 8(2)ರ ಉಲ್ಲಂಘನೆಗೆ ದಂಡ ಮತ್ತು ಸಜೆ ಶಿಕ್ಷೆಯನ್ನು ವಿಧಿಸುತ್ತಿದ್ದ ಕಲಂ 117ನ್ನೂ ಕೈ ಬಿಡಲಾಗಿದೆ ಎಂದು ಸಚಿವ ಸೋಮಶೇಖರ್ ವಿವರ ಒದಗಿಸಿದ್ದಾರೆ. 'ಕಾಯ್ದೆ ತಿದ್ದುಪಡಿ ನಂತರ ರಾಜ್ಯದಲ್ಲಿನ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಹಿಂದಿನಂತೆ ಪ್ರಾಂಗಣದಲ್ಲಿ ಲೈಸೆನ್ಸ್ ಹೊಂದಿರುವ ನೇರ ಖರೀದಿ ಕೇಂದ್ರ, ರೈತ-ಗ್ರಾಹಕ ಮಾರುಕಟ್ಟೆ ಪ್ರಾಂಗಣ, ಖಾಸಗಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ಅಥವಾ ತಮ್ಮ ಹೊಲದಲ್ಲೇ ತಮ್ಮ ಇಚ್ಛೆಯಂತೆ ಮಾರಾಟ ಮಾಡಲು ಅವಕಾಶ ಲಭ್ಯವಾಗಿದೆ. ಹಾಗಾಗಿ ರೈತ ಸಮುದಾಯಕ್ಕೆ ಅನುಕೂಲವಾಗಿದೆ. ರೈತರು ತೊಂದರೆಗೊಳಾಗಿರುವುದು ಕಂಡು ಬಂದಿರುವುದಿಲ್ಲ,’ ಎಂದು ಉತ್ತರಿಸಿದ್ದಾರೆ. ಇನ್ನು ಖಾಸಗಿ ವ್ಯಾಪಾರಿಗಳಿಂದ ವಂಚನೆಗೊಳಗಾಗಿರುವ ಬಗ್ಗೆ ಯಾವುದೇ ರೈತರಿಂದ ದೂರುಗಳು ಸ್ವೀಕೃತವಾಗಿಲ್ಲ. ಎಪಿಎಂಸಿಗಳು ಆರ್ಥಿಕ ನಷ್ಟ ಅನುಭವಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ ಎಂದು ಉತ್ತರಿಸಲಾಗಿದೆ ಯಾದರೂ ತಿದ್ದುಪಡಿ ಕಾಯ್ದೆ ಜಾರಿಗೊಂಡ ನಂತರ ಎಷ್ಟು ಪ್ರಮಾಣದಲ್ಲಿ ಆರ್ಥಿಕ ನಷ್ಟವಾಗಿದೆ ಎಂಬ ಮಾಹಿತಿ ಒದಗಿಸಿಲ್ಲ.
ಆರ್ಥಿಕ ನಷ್ಟವನ್ನು ಸರಿದೂಗಿಸಲು ರಾಜ್ಯ ಸಂಚಿತ ನಿಧಿ ವಂತಿಗೆ ಶೇ.0.20ರಷ್ಟು ಹಂಚಿಕೆ ಮಾಡಲಾಗಿದೆ. ರಾಜ್ಯ ಕೃಷಿ ಮಾರಾಟ ಮಂಡಳಿಗೆ ಶೇ.0.05ರಷ್ಟು ವಂತಿಗೆ, ಅಡಮಾನ ಸಾಲ ಯೋಜನೆಗೆ ಶೇ.0.10, ಕೃಷಿ ವಿಶ್ವವಿದ್ಯಾಲಯಗಳ ವಂತಿಗೆ ಶೇ.0.01, ಆಪದ್ಧನ ಶೇ.0.04, ಅಭಿವೃದ್ಧಿ ವೆಚ್ಚಗಳು ಶೇ.0.25, ಶಾಸನೇತರ ವೆಚ್ಚಗಳು ಶೇ.0.25, ರೆಮ್ಸ್ ಸಂಸ್ಥೆ ವಹಿವಾಟು ವೆಚ್ಚ ಶೇ.0.10, ಆವರ್ತ ನಿಧಿ ಶೇ.0.40, ಮಾರುಕಟ್ಟೆ ಸುಧಾರಣೆ ನಿಧಿ ಶೇ.0.10 ವಂತಿಗೆ ಮರು ಹಂಚಿಕೆ ಮಾಡಿದೆ. ಇದರಂತೆ ಮಾರುಕಟ್ಟೆ ಸಮಿತಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ವೇತನ, ಭತ್ತೆ, ಮಾರುಕಟ್ಟೆ ಸಮಿತಿಗಳ ಚುನಾವಣೆ ವೆಚ್ಚ ಮುಂತಾದ ಬಾಬ್ತುಗಳಿಗೆ ತಗಲುವ ವೆಚ್ಚವನ್ನು ಮಾರುಕಟ್ಟೆ ಕಾಯ್ದೆ ಕಲಂ 91ರ ಮೇರೆಗೆ ಇಲಾಖೆ ನಿರ್ದೇಶಕರು ನಿಗದಿಪಡಿಸುವ ದರದಲ್ಲಿ ಮಾರುಕಟ್ಟೆ ಸಮಿತಿಗಳು ರಾಜ್ಯ ಸಂಚಿತ ನಿಧಿಗೆ ವಂತಿಗೆ ರೂಪದಲ್ಲಿ ಪಾವತಿಸಬೇಕಿತ್ತು. ಕಾಯ್ದೆ ಕಲಂ 64ರ ಮೇರೆಗೆ ರಾಜ್ಯ ಸರಕಾರವು ಸ್ಥಾಪಿಸಿರುವ ಆವರ್ತ ನಿಧಿಗೆ ಜಮೆ ಮಾಡಬೇಕಿತ್ತು.
ಮಾರುಕಟ್ಟೆ ಸಮಿತಿಗಳು ಆಕರಿಸುವ ಮಾರುಕಟ್ಟೆ ಶುಲ್ಕ, ಬಳಕೆದಾರರ ಶುಲ್ಕವನ್ನು ಶೇ.0.60ಕ್ಕೆ ನಿಗದಿಪಡಿಸಿದೆ. ಹಾಗೆಯೇ ರಾಜ್ಯ ಸಂಚಿತ ನಿಧಿಗೆ ಸಮಿತಿಗಳಿಂದ ಪಾವತಿಸಬೇಕಿದ್ದ ವಂತಿಗೆಗೆ ವಿನಾಯಿತಿ ನೀಡಿ ಈ ವೆಚ್ಚವನ್ನೂ ಸರಕಾರವೇ ಭರಿಸಲು ಕ್ರಮ ವಹಿಸಿದೆ ಎಂಬ ಉತ್ತರ ನೀಡಿದ್ದಾರೆ.
ರಾಜ್ಯ ಸರಕಾರವು ನಿಗದಿಪಡಿಸಿದ ಶೇ.0.60 ಮಾರುಕಟ್ಟೆ ಶುಲ್ಕ, ಬಳಕೆದಾರರ ಶುಲ್ಕದಲ್ಲಿ ಮರು ಹಂಚಿಕೆ ಮಾಡಿತ್ತು. ಆವರ್ತ ನಿಧಿಗೆ ಶೆ.0.10, ಕೃಷಿ ಮಾರಾಟ ಮಂಡಳಿಗೆ ವಂತಿಗೆ ಶೇ.0.05, ಮತ್ತು ಪ್ರಾಂಗಣದಲ್ಲಿ ಮೂಲಭೂತ ಸೌಕರ್ಯ, ನಿರ್ವಹಣೆ ಮತ್ತು ಸಮಿತಿ ಆಡಳಿತ ವೆಚ್ಚಕ್ಕೆ ಶೇ.0.44, ರೆಮ್ಸ್ ಸಂಸ್ಥೆಗೆ ವಹಿವಾಟು ಶುಲ್ಕದ ರೂಪದಲ್ಲಿ ಶೇ.0.01ರಷ್ಟು ಮರು ಹಂಚಿಕೆ ಮಾಡಿದೆ ಎಂದು ಉತ್ತರದಲ್ಲಿ ವಿವರಿಸಿದ್ದಾರೆ. ಪ್ರತಿಪಕ್ಷಗಳ ವಿರೋಧದ ನಡುವೆಯೂ ಎಪಿಎಂಸಿ ಕಾಯ್ದೆ ಜಾರಿಗೊಳಿಸಲು ರಾಜ್ಯ ಬಿಜೆಪಿ ಸರಕಾರವು ಸುಗ್ರೀವಾಜ್ಞೆ ಹೊರಡಿಸಿತ್ತು. ಕೇಂದ್ರದ 2017ರ ಮಾದರಿ ಎಪಿಎಲ್ಎಂ ಕಾಯಿದೆಯ ಅನುಸಾರ ರಾಜ್ಯದಲ್ಲೂ ತಂದಿದ್ದ ವಿಧೇಯಕಕ್ಕೆ ವಿರೋಧ ವ್ಯಕ್ತವಾಗಿತ್ತು.
ಕಾಯ್ದೆಯಲ್ಲೇನಿದೆ?
ವಿಧೇಯಕದ ನಂತರ ವ್ಯಾಪಾರಸ್ಥರು, ನಾನಾ ಕಂಪೆನಿಯವರು ನೇರವಾಗಿ ರೈತರ ಮನೆ ಬಾಗಿಲಿಗೆ ತೆರಳಿ ಬೆಳೆ ಖರೀದಿಸಬಹುದಾಗಿದೆ. ರೈತರು ರಾಜ್ಯದ ಯಾವುದೇ ಜಿಲ್ಲೆಯ ಎಪಿಎಂಸಿಯಲ್ಲಿ ಬೆಳೆ ಮಾರಾಟಕ್ಕೆ ವ್ಯವಹಾರ ನಡೆಸಬಹುದು. ರೈತರು ಬೆಳೆದ ಉತ್ಪನ್ನಗಳ ಮಾರಾಟ ಸಂಬಂಧ ಆನ್ಲೈನ್ ಮಾರ್ಕೆಟಿಂಗ್ ಸೌಲಭ್ಯದ ಲಾಭ ಪಡೆಯಬಹುದು.
ರಾಜ್ಯದ ಹಳೆಯ ಕಾಯಿದೆಯಂತೆ ವರ್ತಕರು ನೇರವಾಗಿ ರೈತರ ಹೊಲದಿಂದ ಬೆಳೆ ಖರೀದಿಸುವಂತಿಲ್ಲ. ಇಂತಹ ಪ್ರಕರಣಗಳಲ್ಲಿ ವರ್ತಕರ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶವಿದೆ. ಇನ್ನು ಮುಂದೆ ಈ ಕ್ರಮ ಇರುವುದಿಲ್ಲ. ಹೊಸ ಕಾಯಿದೆ ಎಪಿಎಂಸಿಗಳನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುವ ಉದ್ದೇಶ ಹೊಂದಿದೆ. ತಿದ್ದುಪಡಿಯು ರೈತ, ಸಣ್ಣ ವ್ಯಾಪಾರಸ್ಥರ ವಿರೋಧಿಯಾಗಿದೆ. ವಿದೇಶಿ ವ್ಯಾಪಾರಸ್ಥರ ಎದುರು ರೈತರನ್ನು ನಿಲ್ಲಿಸಿದೆ. ಕೃಷಿ ಮಾರುಕಟ್ಟೆಯನ್ನು ಹಾಳುಗೆಡವಿ ಬಹುರಾಷ್ಟ್ರೀಯ ಕಂಪನಿಗಳ ಕೈಯಲ್ಲಿ ಕೃಷಿಯನ್ನು ಕೊಡಲು ಸರಕಾರ ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.