varthabharthi


ನಿಮ್ಮ ಅಂಕಣ

ಕುವೆಂಪು ಅವರೊಟ್ಟಿಗೆ ಕಳೆದ ಆ ಎರಡು ತಾಸುಗಳು...

ವಾರ್ತಾ ಭಾರತಿ : 26 Dec, 2021

‘ಬಹುರೂಪಿ’ ಪ್ರಕಾಶನ ಪ್ರಕಟಿಸಿರುವ ಹಿರಿಯ ಸಾಹಿತಿ, ಸಾಮಾಜಿಕ ಚಿಂತಕ ಎಸ್. ಜಿ. ಸಿದ್ದರಾಮಯ್ಯನವರ ಆತ್ಮಕಥನ ‘ಯರೆಬೇವು’ ಇಂದು (ಡಿಸೆಂಬರ್ 26ರಂದು) ಬೆಂಗಳೂರಿನ ಗಾಂಧಿ ಭವನದಲ್ಲಿ ಲೋಕಾರ್ಪಣೆಯಾಗುತ್ತಿದೆ. ಸಿದ್ದರಾಮಯ್ಯನವರ ತುಂಬು 75 ವಸಂತಗಳ ಬಗ್ಗೆ ಗಮನ ಹರಿಸುವ ಕೃತಿ ಇದು. ಸಿಂಗಾಪುರ ಗುರುಭಕ್ತಯ್ಯ ಸಿದ್ದರಾಮಯ್ಯ ಕಾರಣಿಕ ಶಿಶುವಾಗಿ ಹುಟ್ಟಿ ನಾಡಿನ ಪ್ರಮುಖ ವೈಚಾರಿಕ ಚಿಂತಕರಾಗಿ ಬೆಳೆದ ಬಗೆ ಇಲ್ಲಿದೆ. ಈ ಕೃತಿಯ ಆಯ್ದ ಭಾಗ ಇಲ್ಲಿದೆ.

ನನ್ನ ಪುಸ್ತಕ ಬಿಡುಗಡೆಯಾದ ಮೇಲೆ ಒಮ್ಮೆ ಮೈಸೂರಿಗೆ ಬಂದಿದ್ದೆ. ಆಗ ಕೆ.ಎಸ್. ಭಗವಾನ್ ಅವರ ಮನೆಗೆ ಹೋಗಿದ್ದೆ. ಅವರು ನನ್ನನ್ನು ಕುವೆಂಪು ಅವರ ಮನೆಗೆ ಕರೆದುಕೊಂಡು ಹೋದರು. ಅಷ್ಟು ಹೊತ್ತಿಗಾಗಲೇ ಹ್ಯಾಮ್ಲಟ್ ಮತ್ತು ರಕ್ತಾಕ್ಷಿ ಕುರಿತು ತೌಲನಿಕ ಅಧ್ಯಯನ ಮಾಡಿದ ಅವರ ಲೇಖನ ಬಂದಿತ್ತು.

ಆ ಲೇಖನದಲ್ಲಿ ಕುವೆಂಪು ಅವರನ್ನು ಕಟುವಾದ ವಿಮರ್ಶೆಗೆ ಒಳಗು ಮಾಡಿದ್ದರು. ಆ ಲೇಖನವನ್ನು ಓದಿದ ಯಾರಿಗಾದರೂ ಸಹಜವಾಗಿ ಅನ್ನಿಸುತ್ತಿದ್ದದ್ದು ಇವರು ಕುವೆಂಪು ದ್ವೇಷಿನಾ? ಕುವೆಂಪು ಅವರು ಆ ಲೇಖನವನ್ನು ಓದಿದ್ದಾರೆ. ಅಷ್ಟೇ ಅಲ್ಲ ಅವರು ಮನೆಗೆ ಹೋದಾಗ ಗೌರವದಲ್ಲಿ ನಡೆಸಿಕೊಂಡಿದ್ದಾರೆ. ನನಗೂ ಆ ಲೇಖನವನ್ನು ಓದಿದಾಗ ಕೆ.ಎಸ್. ಭಗವಾನ್ ಎಂದರೆ ಯಾರೋ ವೈದಿಕನಿರಬೇಕು ಅನ್ನುವ ಅಭಿಪ್ರಾಯ ಮೂಡಿತ್ತು. ಕಾರಣ ಅಷ್ಟು ಹೊತ್ತಿಗಾಗಲೇ ಅಡಿಗರ ಗುಂಪು ಕುವೆಂಪು ಕವಿಯೇ ಅಲ್ಲ ಎನ್ನುವ ಅತಿರೇಕದ ಹೇಳಿಕೆಗೂ ಹೋಗಿತ್ತು. ಆ ಅರಿವಿದ್ದ ನನಗೆ ಹೀಗನ್ನಿಸಿದ್ದು ಸಹಜವಿತ್ತು. ಬೋರೇಗೌಡರ ಪರಿಚಯದ ನಂತರ ಭಗವಾನರು ಯಾರೆಂದು ಗೊತ್ತಾಗಿ ಅವರ ನಿಷ್ಠುರ ವಿಮರ್ಶೆಯ ಬಗ್ಗೆ ಆಸಕ್ತಿ ಹೆಚ್ಚಾಗಿತ್ತು.

ಈ ಎಲ್ಲ ಹಿನ್ನೆಲೆಯಲ್ಲಿ ಭಗವಾನರ ಜೊತೆ ನಾನು ಕುವೆಂಪು ಅವರ ಮನೆಗೆ ಹೋಗಿದ್ದೆ. ನಾವು ಹೋದಾಗ ಉದಯರವಿಯ ಹುಲ್ಲುಹಾಸಿನ ಮೇಲೆ ಕುರ್ಚಿಯೊಂದರಲ್ಲಿ ಕುಳಿತಿದ್ದ ಕುವೆಂಪು ಬನ್ನಿ ಬನ್ನಿ ಎಂದು ಕರೆದರು. ನಾನು ಕುವೆಂಪು ಅವರನ್ನು ನೋಡಿದ್ದು ಅದೇ ಮೊದಲು. ಬಿಳಿಜುಬ್ಬ ಬಿಳಿ ಪೈಜಾಮಧಾರಿ ಕುವೆಂಪು. ಅವರ ಪೈಜಾಮ ದೊಗಳೆ ಪೈಜಾಮ. ನಮಗೆ ಅಲ್ಲಿ ಕೂರುವುದಕ್ಕೆ ಕುರ್ಚಿಗಳೇನೂ ಇರಲಿಲ್ಲ. ಭಗವಾನ್ ನನ್ನನ್ನೂ ಕವಿಗೆ ಪರಿಚಯಿಸಿದಾಗ ನನ್ನ ಸಂಕಲನದ ಹೆಸರು ಹೇಳಿದ್ದೂ ಅಲ್ಲದೆ ‘ಇವರ ಬಿರುಕು ಪದ್ಯದ ಬಗ್ಗೆ ನಾನು ನಿಮಗೆ ವಿವರಿಸಿದ್ದೇನಲ್ಲ ಅದೇ ಕವಿ’ ಎಂದು ಹೇಳಿದರು. ಮಡಿಕೇರಿಯಿಂದ ನಿಮ್ಮನ್ನು ನೋಡಲೆಂದೇ ಬಂದಿದ್ದಾರೆ ಎಂದರು. ನಾನು ಬಾಗಿ ಕೈಮುಗಿದೆ. ಅವರೂ ಪ್ರತಿನಮಸ್ಕಾರ ಹೇಳಿದರು.

‘ಕುಳಿತುಕೊಳ್ಳುವುದಕ್ಕಿಂತ ಹೀಗೇ ವಾಕ್ ಹೋಗಿ ಬರೋಣ, ಬಿಸಿಲಿಳಿಯಲಿ ಹೋಗೋಣ ಎಂದು ಕಾಯುತ್ತಿದ್ದೆ’ ಎಂದರು. ನಾವು ಸಂತೋಷದಿಂದ ಅವರೊಟ್ಟಿಗೆ ಒಂದು ಕಿಲೋಮೀಟರ್‌ಗೂ ಹೆಚ್ಚಿನ ದೂರದವರೆಗೆ ರಸ್ತೆಯಲ್ಲಿ ನಡೆದು ಹೋದೆವು. ದಾರಿಯಲ್ಲಿ ಮಕ್ಕಳು ಹಿರಿಯರು ಕವಿಗಳಿಗೆ ನಮಸ್ಕರಿಸಿದಾಗ ಅವರೂ ಪ್ರತಿನಮಸ್ಕಾರ ಹೇಳಿ ಮುಂದೆ ನಡೆದರು. ಮಾತು ಪ್ರಾರಂಭವಾಗಿದ್ದೇ ಸಂಕ್ರಮಣ ಪತ್ರಿಕೆ ಕುರಿತು. ನನಗೆ ಕವಿಗಳ ಆ ಮಾತು ಕೇಳಿ ಆಶ್ಚರ್ಯವಾಯಿತು. ಕಾರಣ ಸಂಕ್ರಮಣದಲ್ಲಿ ವಿಮರ್ಶಕಿಯೊಬ್ಬಳು ಗೊರೂರರ ‘ಅಮೆರಿಕೆಯಲ್ಲಿ ಗೊರೂರು’ ಪ್ರವಾಸಾನುಭವದ ಕೃತಿ ಬಗ್ಗೆ ಲೇಖನ ಬರೆದಿದ್ದಳು. ಕುವೆಂಪು ಆ ಲೇಖನದ ಬಗ್ಗೆ ಶ್ಲಾಘನೆಯ ಮಾತು ಹೇಳುತ್ತಿದ್ದರು. ಅಮೆರಿಕದ ನದಿಯೊಂದರಲ್ಲಿ ಗೊರೂರು ಅವರು ತಮ್ಮ ಹಿರೀಕರಿಗೆ ಶ್ರಾದ್ಧ ಮಾಡಿ ತರ್ಪಣ ಕೊಟ್ಟದ್ದನ್ನು ವಿರೋಧಿಸಿ ಆ ವಿಮರ್ಶಕಿ ‘‘ಅಮೆರಿಕೆಗೆ ಹೋದರೂ ಹೋಗದ ವೈದಿಕ ಮೌಢ್ಯ’’ ಎಂದು ಟೀಕಿಸಿ ಬರೆದಿದ್ದಳು. ಆ ಹೆಣ್ಣು ಮಗಳ ಬಗ್ಗೆ ಮೆಚ್ಚುಗೆಯ ಮಾತಾಡುತ್ತಾ ಕುವೆಂಪು ಬ್ರಾಹ್ಮಣ್ಯದ ಜಡತ್ವದ ಬಗ್ಗೆ ಶಿಕ್ಷಣದ ವೈಚಾರಿಕ ಚಿಂತನೆ ಇಲ್ಲದ ಸಂಪ್ರದಾಯವಾದಿ ಮನಸ್ಸುಗಳು ಹೇಗೆ ಜಾತಿ ಶ್ರೇಣೀಕರಣವನ್ನು ಪೋಷಿಸುತ್ತವೆ ಎಂಬುದನ್ನು ವಿವರಿಸುತ್ತಾ ದೇಶ ವಿದೇಶಗಳಿಗೂ ಈ ಜಾತಿಯ ಪೆಡಂಭೂತ ಹಬ್ಬುವ ಆತಂಕದ ಬಗ್ಗೆಯೂ ಅವರ ಮಾತು ಬೆಳೆಯಿತು.

ಕುವೆಂಪು ಅವರ ಅಂದಿನ ಆತಂಕ ಇಂದು ವಾಸ್ತವವಾಗಿದೆ. ವಿದೇಶಗಳಲ್ಲಿ ದೇವಸ್ಥಾನಗಳು ತಲೆ ಎತ್ತಿವೆ. ವೈದಿಕ ಪೂಜಾರಿಗಳು, ಪುರೋಹಿತರು, ಜೋತಿಷಿಗಳು ಮೌಢ್ಯ ಪ್ರಸಾರಕ ಮಧ್ಯವರ್ತಿಗಳಾಗಿ ಅದೊಂದು ದಂಧೆಯಾಗಿ ಬೆಳೆದಿದೆ. ನನಗೆ ಆಶ್ಚರ್ಯವೆನ್ನಿಸಿದ್ದು ಕುವೆಂಪು ಅವರು ಸಂಕ್ರಮಣ, ಶೂದ್ರದಂತಹ ಪತ್ರಿಕೆಗಳನ್ನು ಅದರಲ್ಲಿ ಬರೆಯುವ ಎಳೆಯರ ಬರಹಗಳನ್ನು ಓದುವುದಲ್ಲದೆ ಅವುಗಳ ಬಗ್ಗೆ ಚರ್ಚಿಸುವ ಅವರ ಗಂಭೀರ ಓದಿನ ಕುರಿತು ಮಾತನಾಡಿದ್ದು.

ಕುವೆಂಪು ನಮ್ಮ ಕಾಲದ ಬಹುದೊಡ್ಡ ಕವಿ; ಯುಗಪ್ರಜ್ಞೆಯ ದಾರ್ಶನಿಕ ಕವಿ ಎಂಬುದು ಬರೀ ಅವರ ಬರಹಕ್ಕಲ್ಲ ಅವರ ಬದುಕಿಗೂ ಅನ್ವಯಿಸುವ ಸತ್ಯ. ಬ್ರಾಹ್ಮಣ್ಯದ ವಿರುದ್ಧ ಅವರ ಹೋರಾಟ ಏಕಾಂಗಿಯಾದ ಹೋರಾಟ. ಅದು ಯಾವುದೇ ವ್ಯಕ್ತಿ ಗುಂಪು ಹೀಗೆ ನಿರ್ದಿಷ್ಟ ಸೀಮಿತ ದ್ವೇಷದ ಪ್ರತಿಕ್ರಿಯೆಯಾಗಿರಲಿಲ್ಲ. ಅದು ಈ ದೇಶದ ಸಾಮಾಜಿಕ ಬದುಕಿನ ಅನಿಷ್ಠವಾಗಿ ಶೋಷಣೆಯ ಅಮಾನವೀಯ ನಡವಳಿಕೆಯಾಗಿ ವ್ಯಕ್ತಿ ಸಮಷ್ಠಿಯ ವಿಕಾಸಕ್ಕೆ ಕಂಟಕವಾಗಿರುವುದರ ವಿರುದ್ಧ ನಡೆಸಿದ ಹೋರಾಟವಾಗಿತ್ತು. ಆದ್ದರಿಂದಲೇ ಅವರು ‘‘ಇದರ ನಾಶ ಹೊರಗೆ ಇರುವುದಲ್ಲ ನಿಮ್ಮೆಳಗೆ ಇರುವುದು. ಗುಂಡಿನ ಗುರಿ ಹೊರಗೆ ಹರಿಯಬೇಕಾದ್ದಲ್ಲ ನಿಮ್ಮ ತಲೆಗೆ ಮೊದಲು ನೀವೇ ಗುರಿ ಇಟ್ಟುಕೊಳ್ಳಬೇಕಾದ್ದು’’ ಎಂದು ಎಚ್ಚರಿಸಿದ್ದು.

ನಿರಂಕುಶಮತಿತ್ವದ ಅವರ ಪ್ರಖರ ವಿಚಾರಗಳಿಂದ ಪ್ರಭಾವಿತನಾಗಿದ್ದ ನನಗೆ ಆ ಕವಿಯನ್ನು ಕಂಡದ್ದು ಅವರೊಟ್ಟಿಗೆ ಎರಡು ತಾಸು ಸುದೀರ್ಘವಾಗಿ ಓಡಾಡುತ್ತಾ ಅವರ ಮಾತುಗಳನ್ನು ಕೇಳಿದ್ದು ನನ್ನ ಬಾಳಿನ ಅಮೂಲ್ಯವಾದ ಸಮಯ. ಇದನ್ನು ಒದಗಿಸಿದ ಭಗವಾನರಿಗೆ ಈಗಲೂ ಆಗಾಗ ಆ ಘಟನೆ ನೆನಪಿಸುತ್ತಾ ಕೃತಜ್ಞತೆ ಹೇಳುತ್ತೇನೆ.

ಮಳೆಗಾಲದ ಮನೆಯಲ್ಲಿ

ಮಡಿಕೇರಿಯಲ್ಲಿ ಮಳೆ ಪ್ರಾರಂಭವಾದರೆ ಮೊದಮೊದಲು ಹಾರುವ ಹೊಗೆ ಮೋಡದಂತೆ ಪ್ರಾರಂಭವಾಗುವ ಮಾರುತ ಹನಿಯೊಡೆದಂತೆ ಹಗಲುರಾತ್ರಿ ಒಂದೇ ಸಮನೆ ಸುರಿಯುವುದೇ ಆಗುತ್ತಿತ್ತು. ಮಳೆ ಬಿಟ್ಟು ಬಿಟ್ಟು ಬರುತ್ತಿದ್ದರೂ ಜಿಟಿಜಿಟಿ ಹನಿ ಮಾತ್ರ ನಿಲ್ಲುತ್ತಲೇ ಇರಲಿಲ್ಲ. ಒಮ್ಮೆ ಮುಂಗಾರು ಸುರುವಾದರೆ ಕಾಣೆ ಯಾದ ಸೂರ್ಯ ಮತ್ತೆ ಇನ್ನು ಕಾಣಿಸಿಕೊಳ್ಳುವುದು ನಾಲ್ಕಾರು ತಿಂಗಳು ಕಳೆದ ಮೇಲೆಯೇ. ಆವರೆಗೆ ಹಗಲೆಂದರೆ ಮಬ್ಬು ಬೆಳಕಿನ ಹನಿಮಳೆಯ ಕೆಲವೊಮ್ಮೆ ಧೋ ಸುರಿವ ಮಳೆಯ ಹಗಲು. ಇರುಳೆಂದರೆ ಒಂದೇ ಸಮ ಮಳೆಸುರಿತದಲ್ಲಿ ಜನರಹಿತ ವಾತಾವರಣದ ಕತ್ತಲೋ ಕತ್ತಲಿನ ಇರುಳು.

ಏಕೆಂದರೆ ಒಮ್ಮಮ್ಮೆ ನಾವಿದ್ದ ಕಡೆ ವಿದ್ಯುತ್ ಹೊದರೆ 8-10 ದಿನಗಳಾದರೂ ಬರುತ್ತಿರಲಿಲ್ಲ. ಆಗೆಲ್ಲ ಟಾರ್ಚು ಕಂದೀಲು ಇವುಗಳೇ ಗತಿ. ಇನ್ನು ಬಟ್ಟೆ ತೊಳೆಯುವುದು ಒಣಗಿಸುವುದು ಬಿದಿರಿನಿಂದ ಅಥವಾ ವಾಟೆಕಡ್ಡಿಯಿಂದ ಮಾಡಿದ ಬಳಂಜಿಯಲ್ಲಿ. ಅದರೊಳಕ್ಕೆ ಅಗ್ಗಿಷ್ಟಕೆ ಇಟ್ಟು ಹೊಗೆ ಹಾಕಿದರೆ ಆ ಶಾಖಕ್ಕೆ ಬಟ್ಟೆ ಒಣಗಬೇಕು. ಹೊರಗೆ ಹೋಗಿ ಮಳೆಯಲ್ಲಿ ನೆನೆದು ಬಂದಾಗಲೂ ಆ ಬಟ್ಟೆ ಒಣಗಿಸುವುದಕ್ಕೆ ಈ ಬಳಂಜಿಯನ್ನೇ ಬಳಸುತ್ತಿದ್ದದ್ದು ರೂಢಿ. ಮಳೆ ಸುರಿಯುವುದು ಜಾಸ್ತಿಯಾದಂತೆ ತಿಂಗಳೊಪ್ಪತ್ತಿನಲ್ಲಿ ಚಳಿ ಸುರುವಾಗುತ್ತಿತ್ತು. ಆ ಚಳಿ ರಾತ್ರಿ ಹೊತ್ತಿನಲ್ಲಂತೂ ಕರುಳು ನಡುಗಿಸುವಂತೆ ಕಿಟಕಿ ಬಾಗಿಲುಗಳ ಸಂದಿನಲ್ಲಿ ಒಳಕ್ಕೆ ತೂರಿ ಬರುತ್ತಿತ್ತು. ನಾವಂತೂ ನಮ್ಮ ಚಿಕ್ಕನಾಯಕನ ಹಳ್ಳಿಯ ಉಜ್ಜುಗಂಬಳಿಗಳನ್ನು ತೆಗೆದುಕೊಂಡು ಹೋಗಿದ್ದೆವು. ಅದರಿಂದಾಗಿ ಆ ಕಂಬಳಿಗಳ ಉಪಯೋಗ ನೇಯ್ದಿದ್ದಕ್ಕೆ ಸಾರ್ಥಕವಾಯಿತು ಎಂಬಷ್ಟು ವುಟ್ಟಿಗೆ ನಮಗೆ ಬಳಕೆಗೆ ಬಂದುವು.

ಈ ಮಳೆಗಾಲದಲ್ಲಿ ಅಲ್ಲಿ ಏನನ್ನೂ ಬೆಳೆಯುವುದಕ್ಕೆ ಆಗುತ್ತಿರಲಿಲ್ಲ. ಪ್ರತಿದಿನದ ಬಳಕೆಗೆ ಅಗತ್ಯಬೇಕಾದ ತರಕಾರಿಗಳನ್ನು ಮಡಿಕೇರಿಯ ಮಹದೇವ ಪೇಟೆಯ ಹತ್ತಿರ ನಡೆಯುತ್ತಿದ್ದ ಸಂತೆಗೇ ಹೋಗಿ ತರಬೇಕಾಗಿತ್ತು. ಕಾಲೇಜು ಮುಗಿದ ಮೇಲೆ ವಸತಿಗೃಹಗಳಲ್ಲಿದ್ದ ಅಧ್ಯಾಪಕರುಗಳೆಲ್ಲ ರೈನ್ ಕೋಟ್, ಗಂಬೂಟು ಹಾಕಿಕೊಂಡು ಕೊಡೆ ಹಿಡಿದು ಸಂತೆಗೆ ಹೋಗುತ್ತಿದ್ದೆವು. ಸಂತೆ ಮುಗಿಸಿ ಮನೆಗಳಿಗೆ ಹಿಂದಿರುಗುವಾಗ ಗಾಳಿಬೀಡಿನ ಕಡೆಯಿಂದ ಬೀಸುತ್ತಿದ್ದ ಆ ಮಳೆಯ ಮಾರುತಕ್ಕೆ ನಾವು ಹಿಡಿದಿದ್ದ ಕೊಡೆಗಳೆಲ್ಲ ನಮ್ಮನ್ನು ಹಿಂದಕ್ಕೆ ತಳ್ಳುತ್ತಿದ್ದವು. ನಾವು ಒಂದು ಹೆಜ್ಜೆ ಮುಂದಿಟ್ಟರೆ ಬೀಸುವ ಆ ಗಾಳಿ ಭರ್ರೋ ಎನ್ನುತ್ತ ನುಗ್ಗುತ್ತಿತ್ತು. ಅದರಲ್ಲೂ ಒಂದು ತಿರುವು ಇತ್ತು. ಅದು ಸಂತೆ ಬೀದಿಯಿಂದ ಕಾಲೇಜಿಗೆ ಪಶ್ಚಿಮಾಭಿಮುಖವಾಗಿ ತಿರುಗುತ್ತಿದ್ದ ರಸ್ತೆಯ ತಿರುವು. ಆ ತಿರುವಿನಲ್ಲಿ ಎದುರಿಗೆ ಕೊಳ್ಳದ ರೀತಿಯಲ್ಲಿ ಇದ್ದ ಕಣಿವೆ ಬಯಲು ಬಿಟ್ಟರೆ ಯಾವ ಮನೆಯಾಗಲಿ ಮರಗಿಡಗಳಾಗಲಿ ಇರದ ಜಾಗ. ಅಲ್ಲಿ ಬೀಸುವ ಗಾಳಿ ಭರ್ರೋ ಎಂಬ ಶಬ್ದದೊಂದಿಗೆ ನಮ್ಮನ್ನು ಹಾರಿಸಿಕೊಂಡು ಹೋಗುವ ರಭಸದಲ್ಲಿ ಬೀಸುತ್ತಿತ್ತು. ಆ ಜಾಗದಲ್ಲಿ ಆಯತಪ್ಪಿನಾವೇನಾದರೂ ಹಿಡಿದಿದ್ದ ಕೊಡೆಯನ್ನು ಪಶ್ಚಿಮಾಭಿಮುಖಕ್ಕೆ ಅಡ್ಡ ಹಿಡಿಯದೆ ಸ್ವಲ್ಪಮೇಲೆ ತ್ತಿದರೂ ಕೊಡೆಯೇ ಹಿಂದು ಮುಂದಾಗುವ ಅಂದರೆ ಹಿಡಿದ ಹಿಡಿಗೆ ವಿರುದ್ಧವಾಗಿ ಕೊಡೆಯ ಬಟ್ಟೆ ಅದಕ್ಕಂಟಿದ್ದ ಕಡ್ಡಿಗಳು ಎಲ್ಲ ತಿರುವು ಮುರುವಾಗುತ್ತಿದ್ದವು.

ಈ ಸ್ಥಿತಿಯನ್ನು ಎಷ್ಟು ಸಾರಿ ಅನುಭವಿಸಿದ್ದೇವೆ. ಹಾಗಾದವನನ್ನು ನೋಡಿ ನಕ್ಕಿದ್ದೇವೆ. ಅವೆಲ್ಲ ಸಂಕಟದ ಅನುಭವಗಳಾಗಿ ನಮಗೆಂದೂ ಅನ್ನಿಸಲೇ ಇಲ್ಲ. ಆನಂದದ ಆಹ್ಲಾದದ ಅನುಭವವಾಗಿ ನಾವು ಎಂಜಾಯ್ ಮಾಡುತ್ತಿದ್ದದ್ದೇ ಹೆಚ್ಚು. ಗಾಳಿಬೀಡು ನಮ್ಮ ಕಾಲೇಜಿಗೆ ಹತ್ತಿರದಲ್ಲೇ ಇದ್ದು, ಗಾಳಿಬೀಡು ಎಂಬುದರ ನಿಜವಾದ ಅನುಭವ ಆಗುತ್ತಿದ್ದದ್ದು ಇಂತಹ ಬೀಸುವ ಗಾಳಿಯ ಸುರಿಯುವ ಮಳೆಯ ನಡುವೆ ಸಂತೆಯಿಂದ ನಡೆದುಬರುತ್ತಾ ಈ ತಿರುವಿನಲ್ಲಿ ಆಗುತ್ತಿದ್ದ ಅನುಭವದಿಂದ. ಒಮ್ಮಿಮ್ಮೆ ಪ್ರೇಮಳನ್ನೂ ಕರೆದುಕೊಂಡು ಸಂತೆಗೆ ಹೋಗುತ್ತಿದ್ದೆ. ಹೋಗುವಾಗ ಏನೂ ಅನ್ನಿಸುತ್ತಿರಲಿಲ್ಲ. ಬರುವಾಗ ಎದುರು ಮಳೆಯ ಎದುರು ಗಾಳಿಯ ಈ ಅನುಭವ ವಿಶೇಷ ‘‘ನೀವೇ ಹೋಗಿ ಬನ್ನಿ’’ ಎನ್ನುವಲ್ಲಿಗೆ ನಿಲ್ಲಿಸಿತ್ತು.

ಮಳೆ ಕಳೆದು ಬಿಸಿಲು ಮೂಡಿ ಇಡೀ ಕೊಡಗು ಜಳಕಮಾಡಿದಂತೆ ಹೊಳೆಯ ತೊಡಗಿದಾಗ ಆ ಸೊಬಗಿನ ಸೌಂದರ್ಯ ಕಣ್ಣು ಮನ ತುಂಬಿದ ಅನುಭವ ದೀಪ್ತಿ. ಈ ತಿರುವಿನಲ್ಲಿ ಒಂದು ವಿಶೇಷವೆಂದರೆ ಕಾಲೇಜು ಕಡೆಯಿಂದ ಬರುವಾಗ ಈ ತಿರುವು ಏರುಗತಿಯಲ್ಲಿದ್ದು ಕಾಲೇಜು ರಸ್ತೆಯಲ್ಲಿ ನಿಂತು ನೋಡಿದರೆ ಆ ಚಿತ್ರವೇ ಒಂದು ವಿಶೇಷ. ಸಂತೆಯಿಂದ ಬರುವಾಗ ಅದೇ ತಿರುವಿನಲ್ಲಿ ಇಳಿದು ಹೋಗುವ ಅನುಭವ. ಕಾಲೇಜು ಪ್ರಾರಂಭವಾಗುವ ಬೆಳಗಿನ ಸಮಯದಲ್ಲಿ ಕಾಲೇಜಿನ ಮುಂಭಾಗದಲ್ಲಿ ನಿಂತು ನೋಡಿದರೆ ಕಾಲೇಜಿಗೆ ಬರುತ್ತಿರುವ ಹುಡುಗ ಹುಡುಗಿಯರು ಗುಂಪುಗಳಲ್ಲಿ ಬಿಟ್ಟೂ ಬಿಡದೆ ಸಾಲಿಟ್ಟು ಸಾಗುವಂತೆ ಚಲಿಸುವ ಆ ನೋಟ ಮನತುಂಬಿ ಬರುವ ನೋಟ. ಅದೂ ಮಳೆಗಾಲದಲ್ಲಿ ಒಂದು ರೀತಿ ಬಿಸಿಲು ಕಾಲದಲ್ಲಿ ಇನ್ನೊಂದು ರೀತಿ.

ಮಳೆಗಾಲದಲ್ಲಿ ಕಪ್ಪುಕೊಡೆಗಳು ರೈನ್‌ಕೋಟುಗಳು ಹೆಣ್ಣುಗಂಡು ಗೊತ್ತಾಗದ ಪರಿಯ ನೋಟ. ಮಳೆಬಿಟ್ಟ ಮೇಲೆ ಬಗೆಬಗೆಯ ಬಣ್ಣದುಡುಗೆಗಳಲ್ಲಿ ಬಣ್ಣಬಣ್ಣದ ಕೊಡೆ ಹಿಡಿದ ಬೆಡಗಿಯರು ಕೊಡೆಹಿಡಿಯದೆ ಹಾಗೇ ಚೈತನ್ಯದ ಬುಗ್ಗೆಗಳಂತೆ ಕಲರವಗೈಯ್ಯುತ್ತಾ ಬರುವ ಹುಡುಗರು. ಇದು ಬೆಳಗಿನ ನೋಟವಾದರೆ ಸಂಜೆಯ ನೋಟ ಇನ್ನೂ ಅದ್ಭುತ ನಯನ ಮನೋಹರ ನೋಟ. ಬೆಡಗಿಯರ ಪಾದದ ಹೊಳಪು ಪಶ್ಚಿಮದ ಸೂರ್ಯನ ರಂಗು ರಾಜುಣ ಕಾಂತಿಗೆ ಮಿಂಚುತ್ತಿದ್ದರೆ ಆ ಸಾಲಿಟ್ಟ ಕೊಡೆಗಳ ಬಣ್ಣಬಣ್ಣದ ಮೆರುಗು ಮಿಂಚಿನ ಪ್ರತಿಫಲನದಂತೆ ಕಾಣುತ್ತಿತ್ತು. ನಾನು ಹೋದ ಮೊದಲ ವರ್ಷದ ಈ ಬಿಸಿಲಿನ ಅನುಭವದ ನೋಟವನ್ನು ಕಂಡೇ ಗೆಳೆಯರೊಟ್ಟಿಗೆ ಉದ್ಗರಿಸಿದ್ದು I want to be here till my retirement . ಎಲ್ಲರೂ ನಕ್ಕಿದ್ದರು. ಆದರೆ ಆ ವಯೋಸಹಜ ಸೌಂದರ್ಯಾಕಾಂಕ್ಷೆಯ ಆ ಪ್ರತಿಕ್ರಿಯೆ ಕೊಡಗಿನ ಸೌಂದರ್ಯಕ್ಕೆ ಕೊಡಗಿನ ಪೂವಮ್ಮಗಳ ನಿಸರ್ಗಸಹಜ ಬೆಡಗಿಗೆ ಮನತುಂಬಿದಂತೆ ಹೇಳಿದ ಮಾತಾಗಿತ್ತು.

ಕೃತಿ: ಯರೆಬೇವು ಲೇಖಕರು: ಎಸ್.ಜಿ. ಸಿದ್ದರಾಮಯ್ಯ ಪ್ರಕಾಶನ: ಬಹುರೂಪಿ ಪುಟ: 624

ಬೆಲೆ: ರೂ. 750

ಸಂಪರ್ಕ: 70191 82729

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)