varthabharthi


ಕಲೆ - ಸಾಹಿತ್ಯ

ಮೈಸೂರು ರಂಗಾಯಣ ಮತ್ತು ಅಡ್ಡಡ್ಡ ರಂಗ ಪ್ರಹಸನಗಳು

ವಾರ್ತಾ ಭಾರತಿ : 27 Dec, 2021
ಮಲ್ಲಿಕಾರ್ಜುನ ಕಡಕೋಳ

ರಂಗಾಯಣಗಳ ಅಭಿವೃದ್ಧಿ, ಏಳುಬೀಳುಗಳ ಉಸ್ತುವಾರಿ ನೋಡುವ ಹೊಣೆ ರಂಗಸಮಾಜದ್ದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಗಳೇ ರಂಗಸಮಾಜದ ಅಧ್ಯಕ್ಷರು. ಏಳುಮಂದಿ ಸದಸ್ಯರನ್ನು ಹೊಂದಿರುವ ಆಡಳಿತ ಮಂಡಳಿಯೇ ರಂಗಸಮಾಜ. ರಂಗಸಮಾಜದ ಆಯ್ಕೆಯ ಮೇರೆಗೆ ರಂಗಾಯಣದ ನಿರ್ದೇಶಕರನ್ನು ಸರಕಾರ ನೇಮಿಸಬೇಕು. ಇದೆಲ್ಲ ಬೈಲಾದಲ್ಲಿರುವುದು. ಈಗ ಆಗಿರುವುದು ಮತ್ತು ಆಗುತ್ತಿರುವುದೇ ಬೇರೆ. ಮೈಸೂರು ರಂಗಾಯಣದ ಇಷ್ಟೆಲ್ಲಾ ರಗಳೆ ರಾದ್ಧಾಂತಗಳು ಕಂಡು ಕೇಳಿಬಂದರೂ ರಂಗಸಮಾಜ ಕುರುಡು ಕಿವುಡನಂತೆ ವಿಸ್ಮತಿಗೆ ಸರಿದಂತಿದೆ. ಅಲ್ಲಿನ ಆಡಳಿತಾಧಿಕಾರಿ ಸರಕಾರಕ್ಕೆ ಅದೇನು ವರದಿ ಸಲ್ಲಿಸಿದ್ದಾರೆಂದು ರಂಗಸಮಾಜ ತುರ್ತುಸಭೆ ಸೇರಿ ಬಹಿರಂಗವಾಗಿ ಹೇಳಬೇಕಿದೆ.


ಬದಲಾದ ಸರಕಾರದ ಒಳಹೇತುಗಳು ಬದಲಾಗಿಲ್ಲ. ಹೇರಿಕೆಯೋ, ತೋರಿಕೆಯೋ ಅದೆಲ್ಲ ಗೊತ್ತಿಲ್ಲ. ಒಟ್ಟಿನಲ್ಲಿ ತನ್ನ ಹಿಡನ್ ಅಜೆಂಡಾಗಳನ್ನು ತೂರಿಸಿಯೇ ತೀರುವ ತೀರ್ಮಾನ. ಸಿಕ್ಕಿರುವ ಸಂದರ್ಭಗಳಲ್ಲೇ ಎಲ್ಲ ದಕ್ಕಿಸಿಕೊಳ್ಳುವ ಒಳ ಅಲ್ಲ ನೇರಹುನ್ನಾರಗಳ ಧಾರ್ಷ್ಟ. ರಾಜಕೀಯ ಅಧಿಕಾರ ಸಿಕ್ಕಿರುವಾಗ ಶಿಕ್ಷಣ ಮತ್ತು ಸಂಸ್ಕೃತಿಯಂತಹ ಸೂಕ್ಷ್ಮವಲಯಗಳನ್ನು ತನ್ನ ಒಳಮುಷ್ಟಿಗೆ ಒಪ್ಪಿಸಿಕೊಳ್ಳುವ ಹವಣಿಕೆ. ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ಬಹುಪಾಲು ಉದ್ದೇಶಗಳು ಭಾರತೀಯ ಶಿಕ್ಷಣ ಮಂಡಲದ ಹಿಕಮತ್ತುಗಳೇ ಆಗಿವೆ. ಅಂತೆಯೇ ಅದಕ್ಕೆ ಗೆಲುವಿನ ಉಮೇದು.

ಜಾತಿ, ಮತ, ಧರ್ಮ, ಸಂಸ್ಕೃತಿಗಳ ಸೂಕ್ಷ್ಮ್ಮಾತೀಸೂಕ್ಷ್ಮ ಸಂವೇದನೆಗಳನ್ನು ಅಗದಿ ಶ್ಯಾಣೇತನಗಳಿಂದ ಹ್ಯಾಂಡಲ್ ಮಾಡುವ ಘಾತುಕರನ್ನೇ ಅದು ಸಾಕಿಕೊಂಡಿದೆ. ಏಕಕಾಲಕ್ಕೆ ಹರಕಲು ಬಾಯಿಬಡುಕತನದ ಅಡ್ಡಾದಿಡ್ಡಿ ಮಾತುಗಳ ಅಡ್ಡಡ್ಡ ನಡೆಯವರನ್ನೂ ಆಯ್ಕೆ ಮಾಡಿಕೊಂಡಂತಿದೆ. ಅಂತಹ ಯಡವಟ್ಟು ಆಯ್ಕೆಗಳಿಂದ ಸರಕಾರಕ್ಕೂ ಮುಜುಗರ ಆಗಬಲ್ಲದೆಂಬುದನ್ನು ಪ್ರಭುತ್ವ ಅರಿಯದೆ ಹೋದರೆ ಸಾರ್ವಜನಿಕ ಬದುಕಿನ ಮೇಲೆ ಕೆಟ್ಟ ಪರಿಣಾಮ ಕಟ್ಟಿಟ್ಟ ಬುತ್ತಿ. ಅಷ್ಟು ಮಾತ್ರವಲ್ಲ, ಅದರಿಂದ ಜನಸಂಸ್ಕೃತಿಯ ಮಾನವೀಯ ತಳಾಶಯಗಳು ಮುಕ್ಕಾಗಬಲ್ಲವು. ಬಹುಳಪ್ರಜ್ಞೆಯ ಬಹುತ್ವ ಸಂಸ್ಕೃತಿಗೆ ಧಕ್ಕೆ ಉಂಟಾಗಬಲ್ಲದು.

ಈ ಹಿಂದೆ ಕನ್ನಡ ಸಂಸ್ಕೃತಿ ಸಚಿವರೊಬ್ಬರು ಮಂತ್ರಿಯಾದ ಹೊಸತರಲ್ಲಿ ಪ್ರಗತಿಪರ ಸಾಹಿತಿ, ಜನಸಂಸ್ಕೃತಿ ಚಿಂತಕರನ್ನು ‘‘ಮನೆಹಾಳ’’ರೆಂದು ಕರೆದು ಪ್ರತಿರೋಧದ ಶಾಕ್ ಹೊಡೆಸಿಕೊಂಡರು. ಪಾಪ ಅವರು ಉಲ್ಲಾಸದಿಂದ ಚುರುಕಾಗಿ ಮಾತಾಡುತ್ತಿದ್ದರಷ್ಟೇ. ಸ್ವತಂತ್ರ ನಿಲುವಿನಿಂದ ಕನ್ನಡ ಸಂಸ್ಕೃತಿಗೆ ಒಳಿತನ್ನು ಮಾಡುವ ಗಟ್ಟಿಮುಟ್ಟಾದ ಸ್ವಾತಂತ್ರ್ಯ ಹೊಂದಿರಲಿಲ್ಲ. ಹಾಗೆ ಹೊಂದಿದ್ದೇ ಆಗಿದ್ದರೆ ರಂಗಸಮಾಜದ ಸದಸ್ಯರ ಆಯ್ಕೆ ಮತ್ತು ರಂಗಾಯಣದ ನಿರ್ದೇಶಕರ ಆಯ್ಕೆಯಲ್ಲಿ ಅಪಸವ್ಯಗಳಿಗೆ ಅವಕಾಶಗಳಿರುತ್ತಿರಲಿಲ್ಲ. ಹೀಗಾಗಿ ರಂಗಸಂಸ್ಕೃತಿಯ ಅಸಲಿ ಗಂಧಗಾಳಿ ಇಲ್ಲದವರು, ಕೋಮುವಾದಿ ಸಂಘಟನೆ ಮತ್ತು ರಾಜಕೀಯ ಪಕ್ಷದ ಕೆಲವು ಕಾರ್ಯಕರ್ತರು ಸಂಸ್ಕೃತಿ ದೇಗುಲಗಳಿಗೆ ಅಮರಿಕೊಂಡರು. ಅಂತಹವರಿಂದ ಸೋಪಜ್ಞಶೀಲ ಸಾಂಸ್ಕೃತಿಕ ಫಲಿತಾಂಶ ನಿರೀಕ್ಷಿಸಲು ಹೇಗೆ ಸಾಧ್ಯ.? ಅದಕ್ಕೆ ಬದಲು ಹೇವರಿಕೆಯ ಹೇಷಾರವಗಳ ಅಟ್ಟಹಾಸ.

ಅದೇ ಆಗ ನೇಮಕಗೊಂಡ ಹೊಸ ಸರಕಾರದ ಸಾಂಸ್ಕೃತಿಕ ಅಕಾಡಮಿಯೊಂದು ತಾನು ಅಧಿಕಾರ ವಹಿಸಿಕೊಂಡ ವಾರವೊಪ್ಪತ್ತಿನಲ್ಲಿ ಮಾಡಿದ ಘನಂಧಾರಿ ಕೆಲಸವೇನು ಗೊತ್ತೆ.? ಹಿಂದಿನ ಸರಕಾರದ ಅಂದಿನ ಅಕಾಡಮಿಯು ನಾಡಿನ ಹತ್ತಾರು ಮಂದಿ ಅರ್ಹ ಕಲಾವಿದರಿಗೆ ಘೋಷಣೆ ಮಾಡಿದ್ದ ವಾರ್ಷಿಕ ಪ್ರಶಸ್ತಿ, ಗೌರವ ಪ್ರಶಸ್ತಿಗಳನ್ನೆಲ್ಲ ರದ್ದುಗೊಳಿಸಿತು. ಇದು ರಾಜಕೀಯ ಸೇಡಿನ ಉಪಕ್ರಮವೆಂದು ತಕ್ಷಣ ಸಾರ್ವಜನಿಕರಿಂದ ಪ್ರಖರ ಟೀಕೆಗಳ ಸುರಿಮಳೆ. ಅದರಿಂದ ಸರಕಾರಕ್ಕೆ ಇರಿಸು ಮುರಿಸು. ಇವೆಲ್ಲಕ್ಕಿಂತ ಅತ್ಯಂತ ಮುಜುಗರದ ಸಂಗತಿಯೆಂದರೆ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದ ಹಿರಿಯ ಕಲಾವಿದರಿಗೆ ಆಗಲೇ ಅಕಾಡಮಿಯಿಂದ ಪತ್ರಗಳು ಹೋಗಿದ್ದವು. ಪತ್ರಿಕೆಗಳಲ್ಲಿ ಆ ಎಲ್ಲ ಹಿರಿಯ ಕಲಾವಿದರ ಫೋಟೊಗಳ ಸಮೇತ ಪ್ರಶಸ್ತಿ ಘೋಷಣೆ ಸುದ್ದಿಗಳು ಸಹ ಪ್ರಕಟವಾಗಿದ್ದವು. ಅಂತಹದ್ದನ್ನು ರದ್ದು ಮಾಡುವ ಮೂಲಕ ಸರಕಾರದ ಸಾಂಸ್ಕೃತಿಕ ಅಕಾಡಮಿಯೊಂದು ನಮ್ಮ ಸಮಾಜದ ಹಿರಿಯ ಕಲಾವಿದರನ್ನು ಅವಕೃಪೆಗೆ ಈಡು ಮಾಡಿದ್ದು ಅಕ್ಷರಶಃ ಅಕ್ಷಮ್ಯ ಅಪರಾಧ. ಇದು ಹಿಂದೆಂದೂ ಕನ್ನಡ ಸಂಸ್ಕೃತಿ ಇತಿಹಾಸದಲ್ಲಿ ಜರುಗಿರಿದ ಅವಮಾನಕರ ಪ್ರಕ್ರಿಯೆ. ಕಳೆದ ಒಂದೆರಡು ವಾರಗಳಿಂದ ಮೈಸೂರು ರಂಗಾಯಣ ಸುಡು ಸುಡುವ ಸುದ್ದಿಗಳ ಕೆಂಡದ ಕುಂಡವಾಗಿದೆ. ಅದರ ವಿದ್ಯಮಾನಗಳು ಬೀದಿಗೆ ಬಿದ್ದಿವೆ. ಹೊಲಬುಗೇಡಿ ಪಕ್ಷ ರಾಜಕಾರಣದ ಹೊಲಸುನಾತ ಬೀರತೊಡಗಿದೆ. ಜಾಗತಿಕ ಮಟ್ಟದ ರಂಗನಕಾಶೆಯಲ್ಲಿ ಸ್ಥಾನಮಾನ ಹೊಂದಿದ್ದ ರಂಗಾಯಣ ಅಡ್ಡಾದಿಡ್ಡಿ ಹೇಳಿಕೆ ಮತ್ತು ನಡವಳಿಕೆಗಳ ನಡುವೆ ನಲುಗುತ್ತಿದೆ. ಹಿಂದೆಂದೂ ಕಾಣದಂತಹ ಅದರ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ಕುಂದು ಬಂದಿದೆ. ಇದನ್ನು ಮನಗಂಡ ಮೈಸೂರಿನ ಪ್ರಾಜ್ಞರು, ಸಂಸ್ಕೃತಿ ಚಿಂತಕರು ಸುಮ್ಮನೆ ಕುಳಿತಿಲ್ಲ. ರಂಗಾಯಣದ ಸಾಂಸ್ಥಿಕ ಹಿರಿಮೆ ಗರಿಮೆಗಳನ್ನು ಕಾಪಾಡಲು ಪಣತೊಟ್ಟು ಹೋರಾಟದ ಹಾದಿ ಹಿಡಿದಿದ್ದಾರೆ. ‘‘ಸೋಲಿಸಬೇಡ ಗೆಲಿಸಯ್ಯ ಮೂಲೋಕದಯ್ಯ’’ ಎಂಬ ಹಾಡಿಯ ಸೋಲಿಗರ ಹಾಡಿನೊಂದಿಗೆ ಮೈಸೂರು ರಂಗಾಯಣ ಮೂವತ್ತೆರಡು ವರ್ಷಗಳ ಹಿಂದೆ 1989ರ ಮಕರ ಸಂಕ್ರಮಣದಂದು ರಂಗಭೀಷ್ಮ ಬಿ. ವಿ. ಕಾರಂತರ ಕನಸಿನ ಕೂಸಾಗಿ ಕಾಲೂರಿತು. ಅದು ಮೂರು ದಶಕಗಳ ಕಾಲ ಬಹುತ್ವದ ರಂಗಸಂಸ್ಕೃತಿ ಬಿತ್ತಿ ಬೆಳೆದಿದೆ. ಇದೀಗ ಅದಕ್ಕೆ ಎಡಬಲ ಪಂಥಗಳ ಪಿಡುಗು. ಅಡನಾಡಿ ಪಿಡುಗಿನಿಂದ ಪಾರುಮಾಡಲು ಪ್ರಜ್ಞಾವಂತ ಕನ್ನಡಿಗರು ಪ್ರತಿಭಟನೆಗಿಳಿದಿದ್ದಾರೆ. ಮೈಸೂರು ರಂಗಾಯಣ ಎಂಬುದು ಕನ್ನಡಿಗರೆಲ್ಲರ ಸ್ವಾಭಿಮಾನದ ಸಾಂಸ್ಕೃತಿಕ ಸಂಕೇತ. ಎಡಬಲಗಳೆಂಬ ಎಡಬಿಡಂಗಿ ಹೇಳಿಕೆಗಳನ್ನು ಧಿಕ್ಕರಿಸಿ ರಂಗಾಯಣದ ಅಪ್ಪಟ ರಂಗಸಂಸ್ಕೃತಿ ಉಳಿಸಲು ಸಂಸ್ಕೃತಿ ಚಿಂತಕರೆಲ್ಲರೂ ಒಗ್ಗಟ್ಟಿನಿಂದ ಸಿದ್ಧವಾಗಿದ್ದಾರೆ. ಸರ್ವಾಧಿಕಾರಿ ಮನಸಿನ ಜನಪರ ಸಂಸ್ಕೃತಿ ವಿರೋಧಿಗಳಿಗೆ ಪಾಠ ಕಲಿಸದೆ ವಿರಮಿಸಲಾರರು. ರಂಗಾಯಣ ಉಳಿಸಿ ಹೋರಾಟಕ್ಕೆ ಸಮುದಾಯ ಸೇರಿದಂತೆ ರಾಜ್ಯಾದ್ಯಂತ ಬೆಂಬಲ ದೊರಕಿದೆ.

ಕಲಾವಿದನಾಗುವುದೆಂದರೆ ವಿನಯವಂತ ಮನುಷ್ಯನಾಗುವುದು. ಕಲಾವಿದನಿಗೆ ರಾಜಕೀಯ ಪ್ರಜ್ಞೆ ಇರಬೇಕು. ಆದರೆ ರಾಜಕೀಯ ಪಕ್ಷದ ಕಾರ್ಯಕರ್ತನಾಗುವುದು, ಅದರಲ್ಲೂ ಕೋಮುವಾದಿ ಸಂಘಟನೆಗಳ ಕಾರ್ಯಕರ್ತನಾಗುವುದು ಸಾಧುವಲ್ಲ. ಹೀಗಿರುವಾಗ ‘‘ನಾನು ಆರೆಸ್ಸೆಸ್ ಕಾರ್ಯಕರ್ತ. ಅದಕ್ಕಾಗಿಯೇ ನನ್ನನ್ನು ಸರಕಾರ ನೇಮಕ ಮಾಡಿದೆ ಹೊರತು ರಂಗ ಸಮಾಜವಲ್ಲ. ರಂಗಸಮಾಜದ ನೋಂದಣಿ ನವೀಕರಣಗೊಂಡಿಲ್ಲ. ಅದರ ಅವಧಿ ಮುಗಿದು ಬಹಳೇ ದಿನ ಕಳೆದಿವೆ. ನಾನು ರಂಗಸಮಾಜವನ್ನೇ ಬರಖಾಸ್ತು ಗೊಳಿಸಬಲ್ಲೆ. ಇನ್ನೊಂದು ಅವಧಿಗೂ ನಾನೇ ನಿರ್ದೇಶಕ. ನನ್ನನ್ನು ಯಾರೂ ಅಲುಗಾಡಿಸಲಾಗದು.’’ ತಾನು ರಂಗಾಯಣ ಗುಡಿಸಿ ಗುಂಡಾಂತರಿಸಿಯೇ ಹೋಗುವ ಠೇಂಕಾರ. ಏನೇನೋ ಚಿತ್ರ ವಿಚಿತ್ರದ ವದಂತಿ ವರ್ತಮಾನಗಳು ಕಲಾಮಂದಿರದ ಆವರಣದ ತುಂಬೆಲ್ಲ ತೇಲಿ ಬರುತ್ತಲಿವೆ. ಈ ಹಿಂದೆ ರಂಗಾಯಣ ನಿರ್ದೇಶಕರಾಗಿದ್ದ ಬಹುಪಾಲು ಎಡಪಂಥೀಯ ಎಡಚರೆಲ್ಲ ಮಾವೋವಾದಿಗಳಂತೆ. ನೆತ್ತಿನೇರದ ನಿಂದನೆ ಅಲ್ಲಿಗೆ ನಿಲ್ಲವುದಿಲ್ಲ. ನಿಕಟಪೂರ್ವ ನಿರ್ದೇಶಕಿ ಭಾಗೀರಥಿಬಾಯಿ ಅವರ ಮೇಲೆರಗುತ್ತದೆ. ಅವರ ಅಂತರ್ಜಾತೀಯ ವೈವಾಹಿಕ ಬದುಕಿನ ಕುರಿತು ಅಸಹಿಷ್ಣುತೆ ತುಂಬಿದ ಹೀಗಳಿಕೆಯ ಮಾತುಗಳು. ಇಂತಹ ತನ್ನ ನಡವಳಿಕೆಗಳನ್ನು ಪ್ರಶ್ನಿಸಿ ವಿರೋಧಿಸುವ ಬುದ್ಧಿಜೀವಿಗಳೆಲ್ಲ ಲದ್ದಿ ಜೀವಿಗಳು, ಪುಟಗೋಸಿಗಳು, ಪಿತೂರಿಕೋರರು. ಇನ್ನೂ ಏನೇನೋ ತರಹೇವಾರಿ ಕಿರುಚಾಟದ ಕಿಡಿನುಡಿಗಳು. ಮೂದಲಿಕೆಯ ಮಾತುಗಳು. ರಂಗಾಯಣದ್ದೇ ಓರ್ವ ಹಿರಿಯ ಕಲಾವಿದ ರಂಗಾಯಣದ ಹತ್ತಿರವೂ ಸುಳಿಯದಂತೆ ದಿಗ್ಬಂಧನದ ಹೇರಿಕೆ. ನೆನಪಿರಲಿ., ಮೈಸೂರು ರಂಗಾಯಣದ ಪ್ರತಿಯೊಬ್ಬ ಹಿರಿಯ ಕಲಾವಿದ ರೆಪರ್ಟರಿಗಳ ನಿರ್ದೇಶಕರಾಗುವ ಅರ್ಹತೆ ಉಳ್ಳವರಾಗಿದ್ದಾರೆಂಬುದು ಅರ್ಥವಾಗದೇ? ನಿಂತಲ್ಲಿ ನಿಲ್ಲಲಾಗದ, ಕುಂತಲ್ಲಿ ಕೂಡಲಾಗದ ಹುಚ್ಚು ನಡೆದಾಟ ಮತ್ತು ಅರಚಾಟದ ಅವರದು ‘ಗುಣಮುಖ’ ನಾಟಕದ ನಾದೀರನ ಮನೋಸ್ಥಿತಿ. ಬೇರೆಯವರು ಸಮಾಧಾನದಿಂದ ಮಾತಾಡುವುದನ್ನು ಸಹನೆಯಿಂದ ಕೇಳುವುದನ್ನೇ ಕಳೆದೆರಡು ವರ್ಷಗಳಿಂದ ಕಳೆದು ಕೊಂಡಂತಾಗಿದೆ. ಅವರಿಗೆ ಕಿವಿಗಳಿಲ್ಲ ಬಾಯಿಮಾತ್ರ ಎನ್ನುವಂತಿದೆ. ಗರ್ಭಗುಡಿ ಸಂಘಿಗಳ ಪಾಳಯವನ್ನು ಹೇಗಾದರೂ ಮಾಡಿ ಸಂತುಷ್ಟಿಗೊಳಿಸುವ ಉಮೇದು. ತೆವಲಿಗೆ ಬಿದ್ದು ತಾನೇನು ಮಾತಾಡುತ್ತಿದ್ದೇನೆಂಬ ಎಚ್ಚರ ಹಾರಿ ಹೋಗಿರಬಹುದು.

ಸಣ್ಣಗೆ ಹೊತ್ತಿ ಉರಿಯುತ್ತಿದ್ದ ಕೊಳ್ಳಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅತಿಥಿಗಳ ಹೆಸರು ಘೋಷಣೆಯೊಂದಿಗೆ ಬಹಿರಂಗ ವಿರೋಧಕ್ಕೆ ಅಣಿಗೊಂಡ ಅಗ್ನಿಕುಂಡದ ಅಖಾಡವಾಗಿದೆ. ಬಹುರೂಪಿ ನಾಟಕೋತ್ಸವಕ್ಕೆ ರಾಷ್ಟ್ರಮಟ್ಟದ ಸಾಂಸ್ಕೃತಿಕ ಮಹತ್ವವಿದೆ. ಅಂತಹ ರಂಗಜಾತ್ರೆಯನ್ನು ಉದ್ದೇಶಿತ ವಿರೋಧಗಳ ಕಲಹಕ್ಕೆ ಆಹ್ವಾನಿಸಿದಂತಾಗಿದೆ. ನಿರ್ದೇಶಕರ ನಡೆಗೆ ಮೈಸೂರಿನ ಪ್ರಬುದ್ಧ ಸಂಸ್ಕೃತಿ ಚಿಂತಕರಲ್ಲದೆ ನಾಡಿನ ಬೇರೆ ಬೇರೆ ಕಡೆಯಿಂದಲೂ ತಾತ್ವಿಕ ಪ್ರತಿರೋಧ ವ್ಯಕ್ತವಾಗಿದೆ. ಸರಕಾರಕ್ಕೂ ಬಿಸಿ ಮುಟ್ಟಿಸುತ್ತಿದ್ದಾರೆ. ಹೊಸದೊಂದು ಬೆಳವಣಿಗೆ ಎಂದರೆ ಆರೆಸ್ಸೆಸ್ ಕಾರ್ಯಕರ್ತನ ಬಹುರೂಪಿಗೆ ಪರ್ಯಾಯ ಬಹುರೂಪಿ ರಂಗೋತ್ಸವದ ಸಿದ್ಧತೆಗಳು ನಡೆದಿವೆ ಎಂಬ ಸುದ್ದಿಗಳು ಬರುತ್ತಿವೆ. ಇವೆಲ್ಲ ಗಮನಿಸಿದರೆ 1979ರ ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿಕೊಂಡ ನೆನಪುಗಳು ದಟ್ಟವಾಗಿ ಕಾಡುತ್ತವೆ.

ರಂಗಾಯಣಗಳ ಅಭಿವೃದ್ಧಿ, ಏಳುಬೀಳುಗಳ ಉಸ್ತುವಾರಿ ನೋಡುವ ಹೊಣೆ ರಂಗಸಮಾಜದ್ದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಗಳೇ ರಂಗಸಮಾಜದ ಅಧ್ಯಕ್ಷರು. ಏಳುಮಂದಿ ಸದಸ್ಯರನ್ನು ಹೊಂದಿರುವ ಆಡಳಿತ ಮಂಡಳಿಯೇ ರಂಗಸಮಾಜ. ರಂಗಸಮಾಜದ ಆಯ್ಕೆಯ ಮೇರೆಗೆ ರಂಗಾಯಣದ ನಿರ್ದೇಶಕರನ್ನು ಸರಕಾರ ನೇಮಿಸಬೇಕು. ಇದೆಲ್ಲ ಬೈಲಾದಲ್ಲಿರುವುದು. ಈಗ ಆಗಿರುವುದು ಮತ್ತು ಆಗುತ್ತಿರುವುದೇ ಬೇರೆ. ಮೈಸೂರು ರಂಗಾಯಣದ ಇಷ್ಟೆಲ್ಲಾ ರಗಳೆ ರಾದ್ಧಾಂತಗಳು ಕಂಡು ಕೇಳಿಬಂದರೂ ರಂಗಸಮಾಜ ಕುರುಡು ಕಿವುಡನಂತೆ ವಿಸ್ಮತಿಗೆ ಸರಿದಂತಿದೆ. ಅಲ್ಲಿನ ಆಡಳಿತಾಧಿಕಾರಿ ಸರಕಾರಕ್ಕೆ ಅದೇನು ವರದಿ ಸಲ್ಲಿಸಿದ್ದಾರೆಂದು ರಂಗಸಮಾಜ ತುರ್ತುಸಭೆ ಸೇರಿ ಬಹಿರಂಗವಾಗಿ ಹೇಳಬೇಕಿದೆ.

ಕನ್ನಡ ಸಂಸ್ಕೃತಿ ಇಲಾಖೆಗೆ ವರ್ಷಕ್ಕೊಬ್ಬರು ಹೊಸ ಹೊಸಮಂತ್ರಿ, ಒಂದಿಬ್ಬರು ಪ್ರಧಾನ ಕಾರ್ಯದರ್ಶಿ, ನಿರ್ದೇಶಕರು ಬದಲಾವಣೆ ಆಗುತ್ತಾರೆ. ಅವರು ಇಲಾಖೆ ಮತ್ತು ರಂಗಾಯಣಗಳನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಬೇರೆಡೆಗೆ ಎತ್ತಂಗಡಿ ಆಗಿರುತ್ತಾರೆ. ಹೀಗಿರುವಾಗ ರಂಗಸಮಾಜದ ಜವಾಬ್ದಾರಿಯೇ ಗುರುತರವಾದುದು. ಪ್ರಸಕ್ತ ರಂಗಸಮಾಜವು ನಿರ್ದೇಶಕರ ಆಯ್ಕೆಯ ಸಂದರ್ಭದಲ್ಲೇ ಹೊಣೆ ಅರಿತು ನಿರ್ಧಾರಕ್ಕೆ ಬಂದಿದ್ದರೆ ಪ್ರಾಯಶಃ ಇವೆಲ್ಲ ಭಾನಗಡಿಗೆ ಇಂಬು ಇರುತ್ತಿರಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)