ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಸಂಸದಿಂದ ವಿಧಾನಸೌಧ ಚಲೋ
ಬೆಂಗಳೂರು, ಡಿ.28: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ನಿಲ್ಲಿಸಬೇಕು ಸೇರಿದಂತೆ ದಲಿತರ ಸಬಲೀಕರಣಕ್ಕಾಗಿ 18 ಹಕ್ಕುಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸದಸ್ಯರು ವಿಧಾನಸೌಧ ಚಲೋ ನಡೆಸಿದರು.
ಮಂಗಳವಾರ ಇಲ್ಲಿನ ಚಿಕ್ಕಲಾಲ್‍ಬಾಗ್ ಬಳಿಯಿಂದ ವಿಧಾನಸೌಧವರೆಗೂ ಮೆರವಣಿಗೆ ನಡೆಸಿದ ದಸಂಸ ಸದಸ್ಯರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ದಲಿತರ ಏಳಿಗೆಗೆ ಶ್ರಮಿಸಬೇಕು ಎಂದು ಘೋಷಣೆ ಕೂಗಿದರು.
ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ದಸಂಸ (ಅಂಬೇಡ್ಕರ್‍ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ರಾಜ್ಯದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದು, ಪರಿಶಿಷ್ಟ ಜಾತಿ ವರ್ಗ ದೌರ್ಜನ್ಯ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ರಾಜ್ಯ ಸರಕಾರದ ಮಾದರಿಯಲ್ಲೇ ಕೇಂದ್ರ ಸರಕಾರವು ಎಸ್ಸಿ-ಎಸ್ಟಿ, ಎಸ್‍ಸಿಪಿ ಮತ್ತು ಟಿಎಸ್‍ಪಿ ಕಾಯ್ದೆಯನ್ನು ಜಾರಿಗೊಳಿಸಬೇಕು. ಅದೇ ರೀತಿ, ವಿದ್ಯಾರ್ಥಿ ವೇತನ, ಭಡ್ತಿ ಮೀಸಲಾತಿ, ಬ್ಯಾಕ್‍ಲಾಗ್ ಹುದ್ದೆಗಳ ನೇಮಕಾತಿ ಮಾಡಬೇಕೆಂದು ಒತ್ತಾಯ ಮಾಡಿದರು.
ರಾಜ್ಯ ಸರಕಾರ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಅನುಸಾರ 2014ರಿಂದ ಹಂಚಿಕೆಯಾಗಿರುವ ಹಣದ ಬಗ್ಗೆ ಸಾರ್ವಜನಿಕ ಲೆಕ್ಕ ಪರಿಶೋಧನೆ ನಡೆಸಬೇಕು ಎಂದ ಅವರು, ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಲು ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ, ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ, ಮುಖಂಡರಾದ ಇಂದಿರಾ ಕೃಷ್ಣಪ್ಪ ಸೇರಿದಂತೆ ಪ್ರಮುಖರಿದ್ದರು.