varthabharthi


ಗಲ್ಫ್ ಸುದ್ದಿ

ಪ್ರಪ್ರಥಮ ಬಾರಿಗೆ ಮುಸ್ಲಿಮೇತರ ದಂಪತಿಗೆ ನಾಗರಿಕ ವಿವಾಹ ಲೈಸೆನ್ಸ್ ನೀಡಿದ ಯುಎಇ

ವಾರ್ತಾ ಭಾರತಿ : 28 Dec, 2021

ಸಾಂದರ್ಭಿಕ ಚಿತ್ರ

ಅಬುಧಾಬಿ, ಡಿ.28: ಇದೇ ಪ್ರಥಮ ಬಾರಿಗೆ ಯುಎಇಯಲ್ಲಿ ಮುಸ್ಲಿಮೇತರ ದಂಪತಿಗೆ ನಾಗರಿಕ ವಿವಾಹ ಲೈಸೆನ್ಸ್ ನೀಡಲಾಗಿದೆ ಎಂದು ಸರಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಯುಎಇಯಲ್ಲಿ ಸುಮಾರು 10 ಮಿಲಿಯನ್ ಜನಸಂಖ್ಯೆಯಿದ್ದು ಇದರಲ್ಲಿ 90%ದಷ್ಟು ವಿದೇಶೀಯರು. ಸಂಪ್ರದಾಯವಾದಿ ದೇಶಗಳ ವಲಯದಲ್ಲಿರುವ ಯುಎಇ ಇದೀಗ ತನ್ನ ಕಾನೂನನ್ನು ತಿದ್ದುಪಡಿಗೊಳಿಸಿ ಆಧುನೀಕರಣದತ್ತ ಹೆಜ್ಜೆ ಇರಿಸಿದೆ . ಕೆನಡಾದ ದಂಪತಿ ಮುಸ್ಲಿಮೇತರರ ವೈಯಕ್ತಿಕ ಸ್ಥಾನಮಾನಕ್ಕೆ ಸಂಬಂಧಿಸಿದ ನೂತನ ನಿಯಮದಡಿ ವಿವಾಹವಾದ ಪ್ರಥಮ ದಂಪತಿ ಎನಿಸಿಕೊಂಡಿದ್ದಾರೆ. ಈ ಪ್ರಕ್ರಿಯೆಯು ವಿಶ್ವದಾದ್ಯಂತದ ತಜ್ಞರು ಮತ್ತು ಪರಿಣತರ ಪ್ರಮುಖ ಗಮ್ಯಸ್ಥಾನ ಎಂಬ ತನ್ನ ಸ್ಥಾನಮಾನವನ್ನು ಅಬುಧಾಬಿ ಮತ್ತಷ್ಟು ದೃಢಪಡಿಸಿಕೊಂಡಿದೆ ಎಂದು ಮಾಧ್ಯಮ ಸಂಸ್ಥೆ ಹೇಳಿದೆ.

ಮುಸ್ಲಿಮರು (ಮಧ್ಯಪ್ರಾಚ್ಯ ದೇಶಗಳು), ಕ್ರಿಶ್ಚಿಯನ್ನರು ಮತ್ತು ಯಹೂದಿಗಳಲ್ಲಿ ನಾಗರಿಕ ವಿವಾಹ ಪ್ರಕರಣ ಅಸಾಮಾನ್ಯವಾಗಿದ್ದು ಸಾಮಾನ್ಯವಾಗಿ ವಿವಾಹ ಸಮಾರಂಭವನ್ನು ಧಾರ್ಮಿಕ ಪ್ರಾಧಿಕಾರದ ವ್ಯವಸ್ಥೆಯಡಿ ನಡೆಸಲಾಗುತ್ತದೆ. ಟ್ಯುನೀಷಿಯಾ ಮತ್ತು ಅಲ್ಜೀರಿಯಾದಲ್ಲಿ ನಾಗರಿಕ ವಿವಾಹಕ್ಕೆ ಅವಕಾಶವಿದೆ. ಕೆಲವು ದೇಶಗಳು ಷರತ್ತಿನಡಿ ನಾಗರಿಕ ವಿವಾಹಕ್ಕೆ ಮಾನ್ಯತೆ ನೀಡುತ್ತವೆ. ಇನ್ನೂ ಕೆಲವು ದೇಶಗಳು ವಿದೇಶದಲ್ಲಿ ನಡೆದ ನಾಗರಿಕ ವಿವಾಹಕ್ಕೆ ಮಾತ್ರ ಮಾನ್ಯತೆ ನೀಡುತ್ತವೆ. ಕಳೆದ ವರ್ಷಾಂತ್ಯದಲ್ಲಿ ಯುಎಇ ಸಾಮಾಜಿಕ ಉದಾರೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರಂತೆ ವಿವಾಹವಾಗದ ದಂಪತಿ ಒಟ್ಟಿಗೆ ವಾಸಿಸುವುದಕ್ಕೆ ವಿಧಿಸಿದ್ದ ನಿಷೇಧ ರದ್ದಾಗಿದೆ, ಮದ್ಯಸಾರದ ಮೇಲಿದ್ದ ನಿರ್ಬಂಧ ಸಡಿಲಿಕೆಯಾಗಿದೆ, ದೀರ್ಘಾವಧಿಯ ರೆಸಿಡೆನ್ಸಿ ವೀಸಾ ನೀಡಲಾಗುತ್ತಿದೆ. ಜತೆಗೆ , 2022ರ ಜನವರಿ 1ರಿಂದ ಯುಎಇಯಲ್ಲಿ ಪಾಶ್ಚಾತ್ಯ ಶೈಲಿಯ ವಾರಾಂತ್ಯ(ಶನಿವಾರ-ರವಿವಾರ) ಜಾರಿಗೆ ಬರಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)