ಸರ್ವಾಧಿಕಾರಿ ಧೋರಣೆಗಾಗಿ ಅಡ್ಡಂಡ ಕಾರ್ಯಪ್ಪರನ್ನು ವಿರೋಧಿಸುತ್ತೇನೆ
ಹೀಗೊಂದು ಪತ್ರ
ಮಾನ್ಯರೇ,
ಕನ್ನಡದ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆ, ಮೈಸೂರಿನ ರಂಗಾಯಣದಲ್ಲಿ ವಿವಾದ ಸೃಷ್ಟಿಯಾಗಿರುವುದು ಹಾಲಿ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ ಅವರ ಕಾರ್ಯವೈಖರಿ, ಸರ್ವಾಧಿಕಾರಿ ಧೋರಣೆ ಮತ್ತು ಏಕಸಂಸ್ಕೃತಿಯನ್ನು ಹೇರುವ ಕಾರಣಗಳಿಗಾಗಿ. ಬಹುರೂಪಿ ನಾಟಕೋತ್ಸವಕ್ಕೆ ಸಮಾರೋಪ ಉಪನ್ಯಾಸ ಮಾಡುವ ಅತಿಥಿಗಳ ಆಯ್ಕೆಯಲ್ಲಿ, ರಂಗಭೂಮಿಗೆ ಸಂಬಂಧವೇ ಇಲ್ಲದ, ನಿರ್ದಿಷ್ಟ ಕೋಮಿನ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಮತ್ತು ಸಮಾಜದಲ್ಲಿ ಕೋಮು ದ್ವೇಷವನ್ನು ಹರಡುವ ವ್ಯಕ್ತಿಗಳಿಗೆ ಆದ್ಯತೆ ನೀಡಿರುವುದೇ ಪ್ರಸ್ತುತ ವಿವಾದಕ್ಕೆ ಮೂಲ ಕಾರಣ. ಆದರೆ ಅದೊಂದೇ ಕಾರಣವಲ್ಲ. ರಂಗಾಯಣ ನಿರ್ದೇಶಕ ಸ್ಥಾನದಲ್ಲಿರುವವರು ತಮ್ಮ ನಿರ್ಧಾರಗಳ ವಿರುದ್ಧ ಮತ್ತು ರಂಗಾಯಣದ ಚಟುವಟಿಕೆಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವವರನ್ನು ಆದರದಿಂದ ಕಾಣುವ ವ್ಯವಧಾನವನ್ನೇ ಕಳೆದುಕೊಂಡಿರುವುದು ವಿವಾದ ಉಲ್ಬಣಿಸಲು ಕಾರಣವಾಗಿದೆ. ವಿರೋಧ ವ್ಯಕ್ತಪಡಿಸುವವರೆಲ್ಲರನ್ನೂ ಅವಹೇಳನಕಾರಿಯಾಗಿ ದೂಷಿಸುವುದೇ ಅಲ್ಲದೆ, ಅಸಭ್ಯ ಮತ್ತು ಅಶ್ಲೀಲ ಪದಬಳಕೆಯ ಮೂಲಕ ಅಪಮಾನಗೊಳಿಸುವ ಅಡ್ಡಂಡ ಕಾರ್ಯಪ್ಪಅವರ ಧೋರಣೆಯೂ ರಂಗಕರ್ಮಿಗಳ, ರಂಗಾಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
32 ವರ್ಷಗಳಿಂದಲೂ ಯಾವುದೇ ನಿರ್ದಿಷ್ಟ ಸೈದ್ಧಾಂತಿಕ ಒಲವು ಇಲ್ಲದೆಯೇ, ಒಂದು ಸಾಂಸ್ಕೃತಿಕ ವೇದಿಕೆಯಾಗಿ ರಂಗಭೂಮಿಯ ಸೇವೆ ಸಲ್ಲಿಸುತ್ತಾ ಬಂದಿರುವ ರಂಗಾಯಣದಲ್ಲಿ ಎಡ-ಬಲ ಪಂಥೀಯ ವಾದಗಳನ್ನು ಮುನ್ನೆಲೆಗೆ ತರುವ ಮೂಲಕ ಹಾಲಿ ನಿರ್ದೇಶಕರು ಬಿ.ವಿ. ಕಾರಂತರ ಕನಸಿನ ಕೂಸನ್ನು ಕಲುಷಿತಗೊಳಿಸಲು ಮುಂದಾಗಿದ್ದಾರೆ. ಇದು ಮೂಲತಃ ಮೈಸೂರಿನ ಸಾಂಸ್ಕೃತಿಕ ಮನಸ್ಸುಗಳು, ರಂಗಾಸಕ್ತರು, ರಂಗಭೂಮಿ ಕಲಾವಿದರು ಮತ್ತು ರಾಜ್ಯದ ಸಾಹಿತ್ಯಾಸಕ್ತ ಮನಸ್ಸುಗಳು ವ್ಯಕ್ತಪಡಿಸುತ್ತಿರುವ ಪ್ರತಿರೋಧವಾಗಿದೆ. ಇಲ್ಲಿ ಅಡ್ಡಂಡ ಕಾರ್ಯಪ್ಪಆ ನಿರ್ದೇಶಕ ಸ್ಥಾನದಲ್ಲಿರುವುದರಿಂದ ಅವರು ಉತ್ತರದಾಯಿಯಾಗುತ್ತಾರೆ. ಅವರ ಕೊಡವ ಅಸ್ಮಿತೆ ಎಲ್ಲಿಯೂ ಮುನ್ನೆಲೆಗೆ ಬಂದಿಲ್ಲ ಅಥವಾ ಚರ್ಚೆಗೊಳಗಾಗಿಲ್ಲ. ಕೊಡವ ಸಮುದಾಯಕ್ಕೆ ಅಪಚಾರವಾಗುವಂತಹ ರೀತಿಯಲ್ಲಿ ಯಾವುದೇ ಅಭಿಪ್ರಾಯಗಳೂ ಈ ಪ್ರತಿರೋಧದ ದನಿಗಳಲ್ಲಿ ಕೇಳಿ ಬಂದಿಲ್ಲ.
ಹಾಗಿದ್ದರೂ ಮೈಸೂರಿನ ಕೊಡವ ಸಮಾಜ, ಅಡ್ಡಂಡ ಕಾರ್ಯಪ್ಪ ಅವರು ಕೊಡವರು ಎಂಬ ಏಕೈಕ ಕಾರಣದಿಂದ ಇದನ್ನು ಸಮುದಾಯದ ಪ್ರತಿಷ್ಠೆಯ ಪ್ರಶ್ನೆಯಾಗಿ ಮುನ್ನೆಲೆಗೆ ತಂದಿರುವುದು ಅಪ್ರಬುದ್ಧತೆಯ ಪರಾಕಾಷ್ಠೆ ಎಂದಷ್ಟೇ ಹೇಳಬಹುದು. ಈ ಹಿಂದೆ ರಂಗಾಯಣದ ನಿರ್ದೇಶಕ ಸ್ಥಾನದಲ್ಲಿದ್ದ ಯಾರೂ ತಮ್ಮ ವೈಯಕ್ತಿಕ ಸಾಮುದಾಯಿಕ ಅಸ್ಮಿತೆಯನ್ನು ಅಥವಾ ವ್ಯಕ್ತಿಗತ ಸೈದ್ಧಾಂತಿಕ ನೆಲೆಯನ್ನು ಮುನ್ನೆಲೆಗೆ ತಂದ ನಿದರ್ಶನವಿಲ್ಲ. ವ್ಯಕ್ತಿಗತ ಎಡ-ಬಲಪಂಥೀಯ ಧೋರಣೆಯ ವ್ಯಕ್ತಿಗಳೂ ಇಲ್ಲಿ ನಿರ್ದೇಶಕ ಸ್ಥಾನದಲ್ಲಿದ್ದು, ರಂಗಭೂಮಿಗೆ ಅಪಚಾರ ಎಸಗದಂತೆ ಕಾರ್ಯನಿರ್ವಹಿಸಿ ಹೋಗಿದ್ದಾರೆ. ರಂಗಭೂಮಿ ಇದನ್ನೇ ಬಯಸುತ್ತದೆ. ಬಿ.ವಿ. ಕಾರಂತರು ಇದನ್ನೇ ಬಯಸಿದ್ದರು. ಆದರೆ ಕಾರ್ಯಪ್ಪನವರು ತಮ್ಮನ್ನು ಆರೆಸ್ಸೆಸ್ ಸಂಘಟನೆಯೊಡನೆ ಗುರುತಿಸಿಕೊಳ್ಳುವುದೇ ಅಲ್ಲದೆ, ಕೊಡವ ಸಮುದಾಯದೊಡನೆಯೂ ಗುರುತಿಸಿಕೊಳ್ಳುವ ಮೂಲಕ ರಂಗಭೂಮಿಗೆ ಅಪಚಾರ ಎಸಗಿದ್ದಾರೆ.
ಈ ವಿವಾದದ ಒಳ ಹೊರಗುಗಳನ್ನು ಅರಿಯದೆ, ಸತ್ಯಾಸತ್ಯತೆಗಳನ್ನು ಪರಾಮರ್ಶಿಸದೆ, ರಂಗಭೂಮಿಯ ಆದ್ಯತೆಗಳನ್ನು ಪರಿಗಣಿಸದೆ, ಮೈಸೂರಿನ ಕೊಡವ ಸಮಾಜ ಈ ವಿವಾದವನ್ನು ಸಾಮುದಾಯಿಕ ಪ್ರತಿಷ್ಠೆಯಂತೆ ಭಾವಿಸಿರುವುದು ದುರಂತ. ಮೈಸೂರಿನ ಮತ್ತು ರಾಜ್ಯದ ರಂಗಾಸಕ್ತರು ಅಡ್ಡಂಡ ಕಾರ್ಯಪ್ಪ ಅವರು ಕೊಡವರು ಎಂಬ ಕಾರಣಕ್ಕಾಗಿ ವಿರೋಧಿಸುತ್ತಿಲ್ಲ ಎಂಬ ಸರಳ ವಾಸ್ತವವನ್ನು ಅರಿಯುವಷ್ಟಾದರೂ ವ್ಯವಧಾನ ಕೊಡವ ಸಮಾಜಕ್ಕೆ ಇರಬೇಕಿತ್ತಲ್ಲವೇ?