varthabharthi


ಸಂಪಾದಕೀಯ

ಚುನಾವಣೆ ಗೆಲ್ಲಲು ಅಧಿಕಾರ ದುರ್ಬಳಕೆ

ವಾರ್ತಾ ಭಾರತಿ : 29 Dec, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಭಾರತದ ಅತ್ಯಂತ ದೊಡ್ಡ ರಾಜ್ಯವೆಂದು ಹೆಸರಾದ ಉತ್ತರಪ್ರದೇಶ ಚುನಾವಣೆಯ ಹೊಸ್ತಿಲಲ್ಲಿದೆ. ಅಲ್ಲಿನ ವಿಧಾನಸಭಾ ಚುನಾವಣೆ ಬಿಜೆಪಿಗೆ ಅದರಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಕಳೆದ ಐದು ವರ್ಷಗಳ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರದ ದುರಾಡಳಿತದಿಂದ ರೋಸಿ ಹೋಗಿರುವ ಮತದಾರರು ತಿರುಗಿ ಬೀಳುವ ಸೂಚನೆಗಳಿವೆ. ಇದರಿಂದಾಗಿ ಸ್ವತಃ ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕೆ ಇಳಿದು ಬೆವರು ಸುರಿಸುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಎಷ್ಟು ಬದಲಾಗಿದೆಯೆಂದರೆ ಪ್ರಧಾನಿ ಮೋದಿ ಅವರ ಪ್ರಚಾರ ಸಭೆಗಳಿಗೆ ಜನ ಸೇರುತ್ತಿಲ್ಲ. ಕಾನಪುರದಲ್ಲಿ ಅವರ ಸಭೆಗಳಿಗೆ ಜನರನ್ನು ಸೇರಿಸಲು ಸರಕಾರದ ವಿವಿಧ ಇಲಾಖೆಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆರೋಗ್ಯ, ತೋಟಗಾರಿಕೆ, ಆಹಾರ, ಗ್ರಾಮೀಣಾಭಿವೃದ್ಧಿ, ಮತ್ತಿತರ ಇಲಾಖೆಗಳಿಗೆ ಈ ರೀತಿಯ ಸುತ್ತೋಲೆ ಹೋಗಿದೆ. ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್‌ಗಳ ಸಹಾಯಕರು ಹಾಗೂ ಇತರರು ಪ್ರಧಾನಮಂತ್ರಿ ಮೋದಿಯವರ ಬಿಜೆಪಿ ಪ್ರಚಾರ ಸಭೆಗೆ ಹಾಜರಿರಬೇಕೆಂದು ಸೂಚಿಸಲಾಗಿದೆ. ಪ್ರಧಾನಿ ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ಸಾರಿಗೆ, ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಮಾಡಬೇಕೆಂದು ತಿಳಿಸಲಾಗಿದೆ. ಇದು ಸರಕಾರಿ ಆಡಳಿತ ಯಂತ್ರದ ದುರುಪಯೋಗವಲ್ಲದೆ ಬೇರೇನೂ ಅಲ್ಲ.

ಪ್ರಧಾನಿ ಮೋದಿ ಮಾತ್ರವಲ್ಲ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸಭೆಗಳಿಗೂ ಜನ ಬರುತ್ತಿಲ್ಲ. ರವಿವಾರ ಪ್ರಯಾಗ್‌ರಾಜ್‌ನಲ್ಲಿ ನಡೆದ ಸಭೆಯಲ್ಲಿ ಸರಕಾರಿ ನೌಕರರು ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಪ್ರಯಾಗ್‌ರಾಜ್ ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿತ್ತು. ಪ್ರಧಾನಿ ಸಭೆ ನಡೆಯುವ ಜಾಗಕ್ಕೆ ಜನರನ್ನು ಕರೆದೊಯ್ಯಲು ಪ್ರಾದೇಶಿಕ ಸಾರಿಗೆ ಕಚೇರಿಯ ಮೂಲಕ ಒತ್ತಡ ತಂದು ಸಾವಿರಾರು ಖಾಸಗಿ ಮತ್ತು ಸರಕಾರಿ ಬಸ್‌ಗಳನ್ನು ನಿಯೋಜಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಪಕ್ಷದ ಸಭೆಗಳಿಗಾಗಿ ಸರಕಾರಿ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

  ಕಳೆದ ಕೆಲವು ವಾರಗಳಿಂದ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಪ್ರದೇಶ ರಾಜ್ಯಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ.ಒಂದಾದ ಮೇಲೆ ಒಂದರಂತೆ ಹೊಸ ಯೋಜನೆಗಳನ್ನು ಉದ್ಘಾಟಿಸುತ್ತಿದ್ದಾರೆ. ಪೂರ್ಣಗೊಂಡ ಯೋಜನೆಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುತ್ತಿದ್ದಾರೆ. ವಾಯುಪಡೆಯ ವಿಮಾನದಿಂದ ಕಾಶಿಗೆ ಬಂದು ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟಿಸಿದರು. ಮೋದಿಯವರು ಭಾಗವಹಿಸುತ್ತಿರುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಕೋಮು ಆಧಾರದಲ್ಲಿ ಜನರನ್ನು ವಿಭಜಿಸುವ ರಾಜಕೀಯ ಲೆಕ್ಕಾಚಾರದ ಹಿಂದುತ್ವದ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಉತ್ತರಪ್ರದೇಶದಲ್ಲಿ ಅತ್ಯಂತ ಕೆಟ್ಟ ಆಡಳಿತ ನೀಡಿದ ಮುಖ್ಯಮಂತ್ರಿ ಆದಿತ್ಯನಾಥ್‌ರ ವೈಫಲ್ಯಗಳನ್ನು ಮರೆಮಾಚಲು ಮೋದಿಯವರು ಮತ್ತೆ ಧಾರ್ಮಿಕ ಧ್ರುವೀಕರಣದ ಮೊರೆ ಹೋಗುತ್ತಿದ್ದಾರೆ. ಕಾಶಿಯ ಸಭೆಯಲ್ಲಿ ಮಾತಾಡುತ್ತಾ ಔರಂಗಜೇಬರ ಮತ್ತು ಶಿವಾಜಿ ಅವರ ಹೆಸರುಗಳನ್ನು ಅನಗತ್ಯವಾಗಿ ಪ್ರಸ್ತಾವಿಸಿದರು. ಯಾವುದೇ ಚುನಾವಣೆಯಲ್ಲಿ ಮತದಾರರ ಮುಂದೆ ತಮ್ಮ ಪಕ್ಷದ ಪ್ರಣಾಳಿಕೆ ಹಾಗೂ ತಮ್ಮ ಸರಕಾರದ ಸಾಧನೆಗಳ ಪಟ್ಟಿ ಹಿಡಿದುಕೊಂಡು ಹೋಗುವುದು ಸತ್ಸಂಪ್ರದಾಯ.ಇದಕ್ಕೆ ವ್ಯತಿರಿಕ್ತವಾಗಿ ಇತಿಹಾಸ ಪುರುಷರ ಹೆಸರುಗಳನ್ನು ವರ್ತಮಾನದ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಉನ್ನತ ಸ್ಥಾನದಲ್ಲಿ ಇರುವ ಮೋದಿಯವರಿಗೆ ಶೋಭೆ ತರುವುದಿಲ್ಲ.

   ಯಾವುದೇ ರಾಜ್ಯದ ಯಾವುದೇ ಸರಕಾರದ ಯೋಜನೆಗಳು ತೆರಿಗೆದಾರರ ಹಣವನ್ನು ಬಳಸಿಕೊಂಡು ರೂಪಿಸಿದ ಯೋಜನೆಗಳಾಗಿವೆ. ಈ ಯೋಜನೆಗಳನ್ನು ಒಂದು ರಾಜಕೀಯ ಪಕ್ಷದ ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ಅದಷ್ಟೇ ಅಲ್ಲ ಪ್ರಧಾನಿ ಮೋದಿಯವರು ತಮ್ಮ ಧಾರ್ಮಿಕ ನಂಬಿಕೆಗಳನ್ನು ರಾಜಕೀಯ ಲಾಭಗಳಿಕೆಗೆ ಬಳಸಿಕೊಳ್ಳುವುದು ಸರಿಯಲ್ಲ. ಭಾರತದಂತಹ ವೈವಿಧ್ಯಮಯ ಬಹುಮುಖಿ ದೇಶದ ಪ್ರಧಾನಿ ಸ್ಥಾನದಲ್ಲಿ ಇರುವ ಮೋದಿಯವರು ಅಯೋಧ್ಯೆ ಹಾಗೂ ಕಾಶಿಯ ಮಂದಿರಗಳಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿರುವುದು ಪ್ರಜಾಪ್ರಭುತ್ವದ ಸತ್ಸಂಪ್ರದಾಯದ ಲಕ್ಷ್ಮಣ ರೇಖೆ ದಾಟಿದಂತಲ್ಲದೆ ಬೇರೇನೂ ಅಲ್ಲ. ಪ್ರಧಾನಿ ಮೋದಿಯವರು ಭಾರತದ ಎಲ್ಲ ಧಾರ್ಮಿಕ ಜನಸಮುದಾಯಗಳಿಗೆ ಸೇರಿದ 135 ಕೋಟಿ ಜನರ ಪ್ರತಿನಿಧಿ. ಇನ್ನು ಮುಂದೆ ಸಾರ್ವಜನಿಕವಾಗಿ ಅವರ ವರ್ತನೆ ಶಿಷ್ಟಾಚಾರದ ಮಿತಿಯೊಳಗೆ ಇದ್ದರೆ ಕ್ಷೇಮ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಜೀವನದಲ್ಲಿ ಇರುವವರು ಅದರಲ್ಲೂ, ಚುನಾಯಿತ ಸ್ಥಾನ ಮಾನಗಳನ್ನು ಹೊಂದಿದವರು ಸಾಂವಿಧಾನಿಕ ಚೌಕಟ್ಟಿನಲ್ಲಿ ಒಪ್ಪಿತ ಮೌಲ್ಯಗಳ ಗೆರೆ ದಾಟದೆ ಕಾರ್ಯ ನಿರ್ವಹಿಸಬೇಕು.ವೈಯಕ್ತಿಕ ನಂಬಿಕೆಗಳನ್ನು ರಾಜಕೀಯ ಲಾಭಕ್ಕೋಸ್ಕರ ಸಾರ್ವಜನಿಕವಾಗಿ ಪ್ರದರ್ಶಿಸಬಾರದು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಚುನಾವಣಾ ಪ್ರಚಾರವನ್ನು ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಮುಂಚಿತವಾಗಿಯೇ ಆರಂಭಿಸಿದ್ದಾರೆ. ಅದಕ್ಕೆ ಅಭ್ಯಂತರವಿಲ್ಲ. ಆದರೆ ಇದಕ್ಕಾಗಿ ಸರಕಾರದ ಆಡಳಿತ ಯಂತ್ರವನ್ನು ಬಳಸಿಕೊಳ್ಳುವುದು ಸರಿಯಲ್ಲ. ಚುನಾವಣಾ ಆಯೋಗ ಈ ಬಗ್ಗೆ ಗಮನಿಸುವುದು ಸೂಕ್ತ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)