varthabharthi


Social Media

ದಕ ಉಡುಪಿಯ ಕೊರಗರು ಮತ್ತು ಮಹಮ್ಮದರು

ವಾರ್ತಾ ಭಾರತಿ : 29 Dec, 2021
ನವೀನ್‌ ಸೂರಿಂಜೆ

Photo: Firstpost.com/GreeshmaKuttar

ಉಡುಪಿಯ ಕೊರಗ ಸಮುದಾಯದ ಮದುವೆ ಮನೆಯೊಳಗೆ ಲಾಠಿ ಬೀಸಿದ ಪೊಲೀಸರು ಮತ್ತು ಇದೇ ವಾರದಲ್ಲಿ ಉಡುಪಿಯಲ್ಲಿ ಸಂಸದ ತೇಜಸ್ವಿ ಸೂರ್ಯರವರು ಹಿಂದೂ ಧರ್ಮ - ಮುಸ್ಲೀಮರ ಬಗ್ಗೆ ಮಾತನಾಡಿದ ಘಟನೆಯನ್ನು ಒಟ್ಟಾಗಿ ನೋಡಬೇಕು. ಕೊರಗರಿಗೆ ಲಾಠಿ ಬೀಸಿದ ಜಿಲ್ಲಾಡಳಿತ ಮತ್ತು ಸಂಸದರು ಪ್ರತಿನಿಧಿಸುವ ಶಾಸಕಾಂಗವು ಕೊರಗರ ಬಗೆಗಿನ ಡಾ. ಮಹಮ್ಮದ್ ಪೀರ್​ ವರದಿಯನ್ನು ಒಮ್ಮೆ ಓದಬೇಕು. ಇವತ್ತೇನಾದರೂ ಕೊರಗರು ಎಂಬ ಅಸ್ಪೃಶ್ಯರಿಗೇ ಅಸ್ಪೃಶ್ಯವಾಗಿದ್ದ ಸಮುದಾಯದ ಮದುವೆ ಮನೆಯಲ್ಲಿ ಡಿಜೆ ಹಾಕಿ ಕುಣಿಯುವ ಮಟ್ಟಕ್ಕೆ ಬಂದಿದ್ದಾರೆ ಎಂದರೆ ಅದಕ್ಕೆ ಕಾರಣ ಡಾ ಮಹಮ್ಮದ್​ ಪೀರ್​ ವರದಿ. 

ಸಂಸದ ತೇಜಸ್ವಿ ಸೂರ್ಯ ಉಡುಪಿಯ ಮಠದಲ್ಲಿ ಪ್ರತಿಪಾದಿಸಿದ ಯಾವ ಹಿಂದೂ ಧರ್ಮವೂ, ಕಾಯ್ದೆ ಕಾನೂನುಗಳನ್ನು ಜಾರಿಗೆ ತರುವ ಹೊಣೆ ಹೊತ್ತ ಯಾವ ಪೊಲೀಸನ ಲಾಠಿಗಳೂ ಕೊರಗರ ಅಭಿವೃದ್ದಿಯನ್ನಾಗಲೀ, ಅಸ್ಪೃಶ್ಯತೆ, ಅಸಮಾನತೆಯ ನಿವಾರಣೆಯನ್ನಾಗಲೀ ಮಾಡಲಿಲ್ಲ. ಕೊರಗರ ಕೈ ಹಿಡಿದಿದ್ದು ಮಂಗಳೂರು ವಿವಿಯ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಮಹಮ್ಮದ್ ಪೀರ್​ ವರದಿ ಮಾತ್ರ. 

1993 ರಲ್ಲಿ ಕೊರಗ ಅಭಿವೃದ್ದಿ ವೇದಿಕೆಯ ಅಧ್ಯಕ್ಷರಾಗಿದ್ದ ಗೋಕುಲದಾಸರು ಕೊರಗರ ಹಕ್ಕೊತ್ತಾಯಗಳಿಗಾಗಿ ಮಂಗಳೂರಿನ ಅಂಬೇಡ್ಕರ್​​ ಸರ್ಕಲ್​​ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರ್ಯಾಲಿ ನಡೆಸಿದರು. ಮೊದಲ ಬಾರಿ ಕೊರಗ ಸಮುದಾಯ ಬೀದಿಗಿಳಿದ ಐತಿಹಾಸಿಕ ದಿನವಿದು. ಆಗಿನ ಜಿಲ್ಲಾಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸಿ ಡಾ ಮಹಮ್ಮದ್ ಪೀರ್ ಅಧ್ಯಕ್ಷತೆಯಲ್ಲಿ ಅಧ್ಯಯನ ಸಮಿತಿ ರಚಿಸಿದರು. ಡಾ ಮಹಮ್ಮದ್​ ಪೀರ್​ ರವರು ಮಂಗಳೂರು, ಉಡುಪಿ ಜಿಲ್ಲೆಯನ್ನು ಓಡಾಡಿ 1994 ರಲ್ಲಿ ಸಮಗ್ರವಾದ ವರದಿ ನೀಡಿದರು. 

ಈ ವರದಿಯಲ್ಲಿ ಪ್ರತೀ ಕೊರಗ ಕುಟುಂಬಕ್ಕೆ ಎರಡು ಎಕರೆ ಜಮೀನು ನೀಡಬೇಕು ಎಂದು ಶಿಫಾರಸ್ಸು ಮಾಡಿದರು. ಅಲ್ಲಿಯವರೆಗೂ ಕಾಡಂಚಿನಲ್ಲಿ ಮನೆಯೂ ಇಲ್ಲದೇ, ಜಮೀನು ಇಲ್ಲದೆ ಬದುಕುತ್ತಿದ್ದ ಕೊರಗ ಸಮುದಾಯ ಮೊದಲ ಬಾರಿ ಜಮೀನಿಗಾಗಿ ಎದ್ದು ನಿಂತಿತ್ತು. ಗೋಕುಲದಾಸರು ಕಾಳತ್ತೂರು ಚಲೋ ಎಂಬ ಹೋರಾಟವನ್ನು ನಡೆಸಿದರು. ಈ ಹೋರಾಟದ ಪ್ರತಿಫಲವಾಗಿ 300 ಎಕರೆ ಜಮೀನನ್ನು 270 ಕುಟುಂಬಗಳಿಗೆ ಹಂಚಲಾಯ್ತು. ಇದೇ ಉಡುಪಿಯ ಕಾಳತ್ತೂರಿನಲ್ಲಿದ್ದ 108 ಎಕರೆ ಸರ್ಕಾರಿ ಭೂಮಿಯನ್ನು ಭೂಮಿಯಿಲ್ಲದ ಕೊರಗರಿಗೆ ನೀಡಬೇಕು ಎಂದು ಒತ್ತಾಯಿಸಲಾಯಿತು. ಆದರೆ ಸರ್ಕಾರ ನೀಡದೇ ಇದ್ದಾಗ ಭೂಮಿ ಒತ್ತುವರಿ ಚಳುವಳಿ ಮಾಡಲು ನಿರ್ಧರಿಸಿತು. 

ಮೇಲ್ವರ್ಗ, ಪ್ರಭುತ್ವದ ಎದುರು ಬಿಡಿ, ಇನ್ನುಳಿದ ದಲಿತ ಸಮುದಾಯದ ಎದುರೇ ನಿಂತುಕೊಳ್ಳಲು ಅಶಕ್ತವಾಗಿದ್ದ ಕೊರಗ ಸಮುದಾಯ ಅಂದು ಬೆನ್ನಮೂಳೆಯನ್ನು ನೇರ ಮಾಡಿ ನಿಂತುಕೊಂಡು ಬಿಡ್ತು. ಮದ್ಯಾಹ್ನ ಸರಿಯಾಗಿ 12 ಗಂಟೆಗೆ ಸರ್ಕಾರಿ ಭೂಮಿಯಲ್ಲಿ ತೆಂಗಿನ ಗಿಡ ನೆಟ್ಟು, ನೀರು ಹಾಕುವ ಮೂಲಕ ತಮಗೆ ತಾವೇ ಭೂಮಿಯನ್ನು ಹಂಚಿಕೊಂಡರು. ಆಗ ಇದೇ ಉಡುಪಿಯ ಪೊಲೀಸರು ಕೊರಗರನ್ನು ಭೂಮಿ ಅತಿಕ್ರಮಣಕ್ಕಾಗಿ ಬಂಧಿಸಿದ್ದರು. ಗರ್ಭಿಣಿ ಕೊರಗ ಮಹಿಳೆಯನ್ನೂ ಮಂಗಳೂರಿನ ಜೈಲಿಗೆ ಹಾಕಿ ಇದೇ ಪೊಲೀಸರು ಅಮಾನವೀಯತೆ ಮೆರೆದರು. 

1994 ರಿಂದ ಆರಂಭವಾದ ಕೊರಗರ ಭೂಮಿ ಹಕ್ಕಿನ ಹೋರಾಟದಲ್ಲಿ ಇಲ್ಲಿಯವರೆಗೆ ಸುಮಾರು 900 ಎಕರೆ ಭೂಮಿಯನ್ನು ಕೊರಗರು ಪಡೆದಿರಬಹುದು. ಕುಂದಾಪುರದ ಮದ್ದೂರಿನಲ್ಲಿ 60 ಎಕರೆ,  ಕಾರ್ಕಳದ ಮುನಿಯಾಲಿನಲ್ಲಿ 7 ಎಕರೆ, ಬೈಲೂರಿನಲ್ಲಿ 5 ಎಕರೆ, ಬೋಳಾದಲ್ಲಿ 3 ಎಕರೆ ಸೇರಿದಂತೆ ಉಡುಪಿಯ ನೀಲಾವರ, ಆರೂರು, ಶಿರೂರು, ಬೆಳ್ಳಂಪಳ್ಳಿ, ಚಾಂತ್ಯಾರು, ಮಂಗಳೂರಿನ ಪುತ್ತಿಗೆ, ಉಲಾಯಿಬೆಟ್ಟುವಿನಲ್ಲಿ ಕೊರಗರಿಗೆ ಭೂಮಿ ಮಂಜೂರಾಗಿದೆ. ಇದೆಲ್ಲವೂ ಸಾಧ್ಯವಾಗಿಸಿದ್ದು ಡಾ ಮಹಮ್ಮದ್ ಪೀರ್ ವರದಿ ಮತ್ತು ಕೊರಗರ ಸಂಘಟಿತ ಹೋರಾಟ. ಆದರೂ ಇನ್ನೂ ಶೇಕಡಾ 50 ರಷ್ಟು ಕೊರಗರು ಭೂರಹಿತರಾಗಿ ಅದೇ ಕಾಡಂಚಿನಲ್ಲಿ ವಾಸವಾಗಿದ್ದಾರೆ. ಉಡುಪಿಗೆ ಬಂದು ಹಿಂದೂ ಧರ್ಮದ ಬಗ್ಗೆ ಮಾತನಾಡುವ ಸಂಸದರು ಅದಕ್ಕಾಗಿ ಡಾ ಮಹಮ್ಮದ್ ಪೀರ್ ವರದಿಯನ್ನು ಓದಬೇಕು.

 ​ಕೊರಗ ಸಮುದಾಯದ ನಿರಂತರ ಹೋರಾಟದ ಫಲವಾಗಿ ಅಜಲು ಪದ್ದತಿ ನಿಷೇದ ಕಾಯ್ದೆಯು 2000 ನೇ ಇಸವಿಯಲ್ಲಿ ಜಾರಿಗೆ ಬಂದಿತ್ತು. 10 ಗಂಟೆಯ ನಂತರ ಡಿಜೆ ಹಾಕಬಾರದು ಎಂಬುದು ಸರ್ಕಾರದ ಆದೇಶವೇ ಹೊರತು ಕಾಯ್ದೆಯಲ್ಲ. ಪೊಲೀಸರ ಮೊದಲ ಆಧ್ಯತೆ ಕಾಯ್ದೆಗಳ ಜಾರಿಯಾಗಿರಬೇಕು. ಕೊರಗರ ಮೇಲೆ ಲಾಠಿ ಚಾರ್ಜ್​​ ಮಾಡಿದ ಪೊಲೀಸರು ಎಷ್ಟು ಅಜಲು ಪದ್ದತಿ ನಿಷೇದ ಕಾಯ್ದೆಯಡಿಯಲ್ಲಿ ಬಂಟರು, ಬ್ರಾಹ್ಮಣರ ಮೇಲೆ ಕೇಸು ದಾಖಲಿಸಿದ್ದಾರೆ ? ತೀರಾ ಇತ್ತಿಚ್ಚಿನವರೆಗೂ ಬಂಟರ ಸೀಮಂತದಲ್ಲಿ ಗರ್ಬಿಣಿಯ ಕೂದಲು ಬೆರೆಸಿದ ಊಟವನ್ನು ಕೊರಗರಿಗೆ ನೀಡುವ ಪದ್ದತಿ ಇತ್ತು. ಎಷ್ಟು ಬಂಟ ಸಮುದಾಯದ ಸೀಮಂತಕ್ಕೆ ಪೊಲೀಸರು ದಾಳಿ ಇಟ್ಟು ಲಾಠಿ ಚಾರ್ಜ್​​ ಮಾಡಿದ್ದಾರೆ ?  ಕಂಬಳದಲ್ಲಿ ಬಂಟರ ಕೋಣಗಳು ಓಡುವುದಕ್ಕೂ ಮೊದಲು ಕೊರಗರನ್ನು ಓಡಿಸಲಾಗುತ್ತಿತ್ತು. ಯಾವುದಾದರೂ ಗಾಜಿನ ಚೂರುಗಳು ಇದ್ದರೆ ಬಂಟರ ಕೋಣಗಳಿಗೆ ತಾಗದೇ ಕೊರಗರಿಗೆ ತಾಗಿ ಪತ್ತೆಯಾಗಲಿ ಎಂಬುದು ಇದರ ಉದ್ದೇಶ. ಎಷ್ಟು ಕಂಬಳ ಸಮಿತಿಯ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ ? 

ಕರಾವಳಿಯ ಮುಂಡಾಸುಧಾರಿಗಳು ನಡೆಸುವ ಎಷ್ಟು ಕಂಬಳಗಳ ಮೇಲೆ ಪೊಲೀಸರು ಲಾಠಿ ಚಾರ್ಜ್​​ ಮಾಡಿದ್ದಾರೆ. ಕಂಬಳವನ್ನು ಕಾಯಲು ಗದ್ದೆಯಲ್ಲಿ ಪನಿ ಕುಲ್ಲುನು ಎಂಬ ಸಂಪ್ರದಾಯ ಆಚರಿಸಲು ಕೊರಗರನ್ನು ಗದ್ದೆಯಲ್ಲಿ ರಾತ್ರಿಯಿಡೀ ನಿಲ್ಲಿಸಲಾಗುತ್ತಿತ್ತು. ಇಂತಹ ಎಷ್ಟು ಕಂಬಳದ ಮೇಲೆ ಪೊಲೀಸರು ಲಾಠಿ ಚಾರ್ಜ್​​ ಮಾಡಿದ್ದಾರೆ ? ಇದೆಲ್ಲಾ ಐದಾರು ವರ್ಷಗಳ ಹಿಂದೆ ನಡೆಯುತ್ತಿತ್ತು. ಬಿಟ್ಟು ಬಿಡೋಣಾ, ಈಗಲೂ ಅಂದರೆ ಈಗಲೂ ರಾತ್ರಿಯಿಡೀ ದೈವದ ಕೋಲ ನಡೆಯುವಾಗ ದೂರದ ಗದ್ದೆಯಲ್ಲಿ ನಿಂತು ಡೋಲು ಬಾರಿಸಬೇಕು. ಎಷ್ಟು ಕೋಲದ ಮೇಲೆ ಲಾಠಿ ಚಾರ್ಜ್​​ ಮಾಡಲಾಗಿದೆ ? ಈಗಲೂ ದೇವಸ್ಥಾನದಲ್ಲಿ ಜಾತ್ರೆ ಆಗುವಾಗ ದಲಿತರು ದೇವಸ್ಥಾನದಿಂದ ಒಂದು ಕಿಮಿ ದೂರದ ಗದ್ದೆಯಲ್ಲೋ, ಗುಡ್ಡದ ಬದಿಯಲ್ಲೋ ನಿಂತು ಡೋಲು ಬಾರಿಸಬೇಕು. ಎಷ್ಟು ಜಾತ್ರೆಯ ಮೇಲೆ ಲಾಠಿ ಚಾರ್ಜ್​​ ಆಗಿದೆ ? ಇಂತಹ ಅಜಲು ಪದ್ದತಿಯ ದೂರು ಬಂದರೂ ಪೊಲೀಸರು ಕಟ್ಟಿ ಹಾಕಿದ ಅ ಬಲಾಢ್ಯರು, ಧಾರ್ಮಿಕ ಮುಖಂಡರನ್ನು ಪ್ರತಿನಿಧಿಸುವವರು ಯಾರು ? ಈ ಎಲ್ಲಾ ಅಜಲು ಪದ್ದತಿಗಳಿಗಿಂತ ಕೊರಗರು ಮದುವೆ ಮನೆಯಲ್ಲಿ ಡಿಜೆ ಹಾಕಿದ್ದೇ ಗಂಭೀರ ಅಪರಾಧವೇ ? 

ದಲಿತರು ಮತಾಂತರವಾಗುತ್ತಾರೆ ಎಂಬುದು ಹಿಂಧುತ್ವ ನಾಯಕರ ಮೊದಲ ಆಕ್ಷೇಪ. ಕೊರಗರು ಮತಾಂತರವಾದ ಒಂದೇ ಒಂದು ಉದಾಹರಣೆ ತೋರಿಸಿ. ಇಷ್ಟಕ್ಕೂ ಕೊರಗರ ಹಿರಿಯರಲ್ಲಿ ಮತ ಎಂದರೇನು ? ಧರ್ಮ ಯಾವುದು ? ಭಗವದ್ಗೀತೆ ಎಂದರೇನು ಎಂಬುದನ್ನು ಕೇಳಿ. ಈಗಿನ ಕೊರಗ ಯುವ ಸಮುದಾಯಕ್ಕೆ ಈ ಶಬ್ದಗಳನ್ನು ಕೇಳಿ ಗೊತ್ತಿರಬಹುದೇ ಹೊರತು ಕೊರಗ ಹಿರಿಯರಿಗೆ ಮತ, ಧರ್ಮ, ಧರ್ಮಗ್ರಂಥಗಳ ಬಗ್ಗೆ ಗೊತ್ತೇ ಇಲ್ಲ. ಯಾವ ಧರ್ಮಕ್ಕೂ ಜೋತು ಬೀಳದ, ಯಾವ ಧರ್ಮಕ್ಕೂ ಸೇರದ ಕೊರಗರನ್ನು ಶತಶತಮಾನಗಳಿಂದ ಕಾಡಿದ್ದು ಮಾತ್ರವಲ್ಲದೆ ಈಗಲೂ ಕಾಡುತ್ತಿರುವವರು ಯಾರು ? 

-ನವೀನ್ ಸೂರಿಂಜೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)