ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ
ಸಂಪಾದಕೀಯ
ವಾರ್ತಾಭಾರತಿ ಬಳಗಕ್ಕೆ 19ನೇ ಹೆಜ್ಜೆಯ ಗಮ್ಮತ್ತು

ಇಂದು ನಿಮ್ಮ ‘ವಾರ್ತಾಭಾರತಿ’ ಬಳಗವು, ಹೆಜ್ಜೆ ಹೆಜ್ಜೆಯೂ ಅವಿಸ್ಮರಣೀಯವಾಗಿದ್ದ ತನ್ನ ಪ್ರಯಾಣದಲ್ಲಿ 19ನೇ ವರ್ಷವನ್ನು ಪ್ರವೇಶಿಸುತ್ತಿದೆ. ತೀರಾ ಪ್ರತಿಕೂಲ ಹಾಗೂ ಪರೀಕ್ಷಾತ್ಮಕ ಸನ್ನಿವೇಶಗಳನ್ನೆಲ್ಲ ಎದುರಿಸಿ ಇದನ್ನು ಸಾಧ್ಯಗೊಳಿಸಿದ ನಮ್ಮ ತಂಡದ ಪ್ರತಿಯೊಬ್ಬ ಸಕ್ರಿಯ ಸದಸ್ಯರಿಗೆ ಮನಸಾರೆ ಅಭಿನಂದನೆಗಳು. ಹಾಗೆಯೇ, ಪ್ರಯಾಣದುದ್ದಕ್ಕೂ ನಮಗೆ ಎಲ್ಲ ಬಗೆಯ ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಾ ಬಂದಿರುವ ‘ವಾರ್ತಾಭಾರತಿ’ ಬಳಗದ ಎಲ್ಲ ಬೆಂಬಲಿಗರಿಗೆ ಹೃತ್ಪೂರ್ವಕ ಧನ್ಯವಾದಗಳು. ಜೊತೆಗೆ, ನಮ್ಮ ಒಂದೊಂದು ನಡೆಯನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಾ ಪದೇ ಪದೇ ಕೆದಕಿ, ಕೆಣಕಿ, ಬಯ್ದು, ಹಂಗಿಸಿ, ದೂಷಿಸಿ, ನಿಂದಿಸಿ, ಬೆದರಿಸಿ ನಮ್ಮನ್ನು ತಿದ್ದಲು ಅಥವಾ ತಡೆಯಲು ಯತ್ನಿಸುವ ಮೂಲಕ ನಿತ್ಯವೂ ನಮ್ಮಲ್ಲಿ ಹೊಸ ಅದಮ್ಯ ಹುಮ್ಮಸ್ಸನ್ನು ಚಿಗುರಿಸುತ್ತಾ ಬಂದಿರುವ ನಮ್ಮ ಮಾನ್ಯ ವಿಮರ್ಶಕರಿಗೂ ವಿನಯಪೂರ್ವಕ ವಂದನೆಗಳು.
ಇದೇ ಆಗಸ್ಟ್ ತಿಂಗಳ ಆರಂಭದಲ್ಲಿ ನಾವು ಒಂದು ಅಭಿಯಾನವನ್ನು ಆರಂಭಿಸಿದೆವು. ತನ್ನ ಅಪಾರ ಜನಪ್ರಿಯತೆಯ ಹೊರತಾಗಿಯೂ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ‘ವಾರ್ತಾಭಾರತಿ’ಯನ್ನು ಉಳಿಸಿ ಬೆಳೆಸುವುದಕ್ಕಾಗಿ, ಭಾರತದಲ್ಲಿ ಮಾತ್ರವಲ್ಲ, ನೂರಕ್ಕೂ ಹೆಚ್ಚಿನ ಇತರ ದೇಶಗಳಲ್ಲೂ ಕ್ಷಿಪ್ರವಾಗಿ ವಿಸ್ತರಿಸುತ್ತಿರುವ ‘ವಾರ್ತಾಭಾರತಿ’ಯ ಅಭಿಮಾನಿ ವಲಯದ ಸಕ್ರಿಯ ಸಹಕಾರ ಕೋರೋಣ ಎಂಬುದು ಅಭಿಯಾನದ ಇಂಗಿತವಾಗಿತ್ತು. ಪತ್ರಿಕೆಯ ಅಭಿಮಾನಿಗಳ ಪೈಕಿ ಕೇವಲ 10 ಸಾವಿರ ಮಂದಿ, ತಮ್ಮ ವಾರ್ಷಿಕ ಆನ್‌ಲೈನ್ ಶುಲ್ಕದ ರೂಪದಲ್ಲಿ ತಲಾ ರೂ. 5 ಸಾವಿರ ಪಾವತಿಸಿದರೆ ಒಂದಷ್ಟು ದಿನ ಸಾಲಮುಕ್ತರಾಗಿ ಬದುಕಬಹುದು ಎಂಬುದು ನಮ್ಮ ಲೆಕ್ಕಾಚಾರವಾಗಿತ್ತು. ಈ ಕುರಿತು ಪ್ರತಿದಿನ ಸೂಚನೆ, ಪ್ರಕಟನೆ ಮತ್ತು ಮನವಿಗಳನ್ನೂ ಪ್ರಕಟಿಸಲಾಗಿತ್ತು.ಇದೆಲ್ಲದರ ಫಲಶ್ರುತಿಯಾಗಿ, ಅಭಿಯಾನದ ಮೊದಲ ತಿಂಗಳು ಮುಗಿಯುವ ಹೊತ್ತಿಗೆ ಸುಮಾರು 70 ಮಂದಿ ರೂ. 5 ಸಾವಿರ ಪಾವತಿಸಿ ವಾರ್ಷಿಕ ಆನ್‌ಲೈನ್ ಸದಸ್ಯತ್ವ ಪಡೆದಿದ್ದರು. ಹೀಗೆ, ಆರು ತಿಂಗಳಲ್ಲಿ, 10 ಸಾವಿರ ಸದಸ್ಯರನ್ನು ಪಡೆಯುವ ನಮ್ಮ ಲೆಕ್ಕಾಚಾರ ತಲೆಕೆಳಗಾಯಿತು.
ಓದುಗರಿಂದ ಬಂದ ಈ ತರದ ಪ್ರತಿಕ್ರಿಯೆಯು ನಮ್ಮ ಬಳಗದ ಅಸ್ತಿತ್ವಕ್ಕೆ ಸಂಬಂಧಿಸಿದ ಕೆಲವು ಮೂಲಭೂತ ಪ್ರಶ್ನೆಗಳಿಗೆ ಜನ್ಮ ನೀಡಿದೆ. ಹಾಗೆಯೇ, ಇದು ನಮ್ಮ ಓದುಗರು ಮತ್ತು ಬೆಂಬಲಿಗರು ಕೂಡ ಸ್ವಲ್ಪ ಗಟ್ಟಿಧ್ವನಿಯಲ್ಲಿ ಪರಸ್ಪರ ಚರ್ಚಿಸುವುದಕ್ಕೆ ಅರ್ಹವಾದ ವಿಷಯವಾಗಿದೆ. ಚರ್ಚೆ ಗಟ್ಟಿಧ್ವನಿಯಲ್ಲಿದ್ದರೆ, ಈ ಕುರಿತು ಯಾರ ತೀರ್ಮಾನ ಏನು ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ತಿಳಿಯುವ ಸಾಧ್ಯತೆ ಇರುತ್ತದೆ. ಅನ್ಯಥಾ ಪ್ರತಿಯೊಬ್ಬರೂ, ಇತರರೆಲ್ಲಾ ಶುಲ್ಕ ಪಾವತಿಸಿರಬಹುದು, ನಾನೊಬ್ಬ ಪಾವತಿಸದಿದ್ದರೇನಂತೆ - ಎಂಬ ಭ್ರಮೆಯಲ್ಲಿರುವ ಭಯಾನಕ ಸಾಧ್ಯತೆ ಇದೆ. 19ನೇ ವರ್ಷಕ್ಕೆ ಹೆಜ್ಜೆ ಇಡುವಷ್ಟು ಕಾಲ ಬದುಕಲು ನಮಗೆ ಸಾಧ್ಯವಾಯಿತಲ್ಲಾ! ಎಂಬ ನಮ್ಮ ಸಂಭ್ರಮದ ಈ ಸಂದರ್ಭದಲ್ಲಿ, ನಮ್ಮ ಬಳಗದ ಕೆಲವು ಆಶೆ- ನಿರಾಶೆಗಳನ್ನು ಓದುಗರ ಜೊತೆ ಹಂಚಿಕೊಳ್ಳಬೇಕಾಗಿದೆ. ಕೇವಲ ಓದುಗರ ಬೆಂಬಲದಿಂದಲೇ ಮಾಧ್ಯಮ ನಡೆಯಬೇಕೆಂಬ ನಮ್ಮ ಆದರ್ಶವಾದಿ ಆಶೆ ಇನ್ನೂ ಹಾಗೆಯೇ ಉಳಿದಿದೆ. ಜಾಹೀರಾತುದಾರರ ಹಂಗಿಲ್ಲದೆ ಬದುಕಲು ಪತ್ರಿಕೆಗೆ ಸಾಧ್ಯವಾಗಬೇಕಿದ್ದರೆ ಒಂದು ಪ್ರತಿಗೆ ರೂ. 20 ಪಾವತಿಸಿ ನಿತ್ಯ ಪತ್ರಿಕೆ ಖರೀದಿಸುವ ಕೆಲವು ಸಾವಿರ ಮಂದಿ ಓದುಗರು ಸಿಗಬೇಕು ಎಂದು ಆರಂಭದಿಂದಲೂ ನಾವು ರಾಗಾಲಾಪಿಸುತ್ತಾ ಬಂದಿದ್ದೇವೆ. ಆದರೂ ಈ ವಿಷಯದಲ್ಲಿ ನಮಗೆ ನಮ್ಮ ಆತ್ಮವಿಶ್ವಾಸ ಹೆಚ್ಚಿಸುವಂತಹ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.
ಕೆಲವೇ ವರ್ಷಗಳ ಹಿಂದೆ ನಾವು ಮುದ್ರಣದ ಇತಿಮಿತಿಗಳನ್ನು ಮೀರಿ, ಆನ್‌ಲೈನ್ ರಂಗಕ್ಕೆ ಕಾಲಿಟ್ಟಾಗ ಭವಿಷ್ಯದ ಸಾಧ್ಯತೆಗಳ ಕುರಿತು ಹಲವು ಸಂಶಯ ಹಾಗೂ ಆಶಂಕೆಗಳಿದ್ದವು. ಆದರೆ, ಈ ರಂಗದಲ್ಲಿ ನಮಗೆ ತುಂಬಾ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ಸಿಕ್ಕಿತು. ಅಲ್ಪಾವಧಿಯಲ್ಲೇ ಅಂತರ್ಜಾಲದ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮುಂತಾದ ಹಲವು ವೇದಿಕೆಗಳಲ್ಲಿ ‘ವಾರ್ತಾಭಾರತಿ’ಗೆ ಅಪಾರ ಜನಪ್ರಿಯತೆ ಪ್ರಾಪ್ತವಾಯಿತು. ‘ವಾರ್ತಾಭಾರತಿ’ ಕನ್ನಡ ಆನ್‌ಲೈನ್ ಸುದ್ದಿತಾಣಗಳ ಪೈಕಿ ಮುಂಚೂಣಿಯಲ್ಲಿ ಮಿಂಚುವಂತಾಯಿತು. ಮುದ್ರಿತ ರೂಪದಲ್ಲಿ ‘ವಾರ್ತಾಭಾರತಿ’ಯನ್ನು ಓದುತ್ತಿದ್ದವರ ಸಂಖ್ಯೆಗೆ ಹೋಲಿಸಿದರೆ ಹಲವು ನೂರು ಪಟ್ಟು ಹೆಚ್ಚು ಓದುಗರು, ವೀಕ್ಷಕರು ಮತ್ತು ಶ್ರೋತೃಗಳು ವಿವಿಧ ಆನ್‌ಲೈನ್ ವೇದಿಕೆಗಳ ಮೂಲಕ ‘ವಾರ್ತಾಭಾರತಿ’ ಬಳಗವನ್ನು ಸೇರಿಕೊಂಡು ಅದರ ಜೊತೆ ಭಾವನಾತ್ಮಕ ನಂಟನ್ನು ಬೆಳೆಸಿಕೊಂಡರು. ಇದೀಗ ಈ ಹೊಸ, ವಿಶಾಲ ವಲಯದ ಕೆಲವು ಮಂದಿಯಾದರೂ, ಸಣ್ಣ ವಾರ್ಷಿಕ ಶುಲ್ಕವೊಂದನ್ನು ಪಾವತಿಸಿ, ಸುದ್ದಿ, ವಿಚಾರಗಳನ್ನು ಓದುವ ಮತ್ತು ವೀಕ್ಷಿಸುವ ಸಂಸ್ಕೃತಿಯನ್ನು ಬೆಳೆಸಿಕೊಂಡರೆ, ಸದ್ಯ ತುಂಬಾ ಇಕ್ಕಟ್ಟಿನ ಸ್ಥಿತಿಯಲ್ಲಿರುವ ನಮ್ಮ ಮಾಧ್ಯಮ ಬಳಗದ ಪ್ರಯಾಣ ಒಂದಷ್ಟು ಸುಲಭವಾಗುವ ನಿರೀಕ್ಷೆ ಇದೆ.
ಸದ್ಯ ನಮ್ಮ ಓದುಗರಲ್ಲಿ ಹೆಚ್ಚಿನವರು, ಶುಲ್ಕ ಪಾವತಿಸಿ ಸದಸ್ಯರಾಗುವ ಪ್ರಕ್ರಿಯೆಯನ್ನು ಮುಂದೂಡುತ್ತಾ ಇರುವುದರಿಂದ ಅನಿವಾರ್ಯವಾಗಿ ನಾವಿನ್ನೂ ನಮ್ಮ ಅಸ್ತಿತ್ವಕ್ಕಾಗಿ ಜಾಹೀರಾತುಗಳನ್ನೇ ಅವಲಂಬಿಸಿದ್ದೇವೆ. ಆದರೂ ನಿಶ್ಶರ್ತ ಜಾಹೀರಾತುಗಳನ್ನು ಮಾತ್ರ ಸ್ವೀಕರಿಸುತ್ತೇವೆಂಬ, ಮೊದಲ ದಿನದಿಂದಲೇ ನಾವು ಪಾಲಿಸುತ್ತಾ ಬಂದಿರುವ ನಿಲುವನ್ನು, ಇಂದಿನವರೆಗೂ ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದ್ದೇವೆ. ಈ ನಮ್ಮ ನಿಲುವಿನಿಂದಾಗಿ ನಮಗೆ ಅಪಾರ ಕಾಠಿಣ್ಯಗಳು ಎದುರಾಗಿವೆ. ನಮ್ಮ ಮೇಲೆ ಪ್ರಭಾವ ಬೀರಿ ನಮ್ಮನ್ನು ತಮ್ಮ ಮುಖವಾಣಿಯಾಗಿಸಲು ಶ್ರಮಿಸಿ ಸೋತಿರುವ ಹಲವು ಉದ್ಯಮಿಗಳು, ಪುಢಾರಿಗಳು, ಅಧಿಕಾರಿಗಳು, ಪುರೋಹಿತರು ಮತ್ತು ಹಲವು ಪಕ್ಷ ಹಾಗೂ ಸಂಘಟನೆಗಳು ನಮ್ಮನ್ನು ದಂಡಿಸುವ ಪ್ರಯತ್ನಗಳನ್ನೂ ಮಾಡಿವೆ. ಆದರೆ ಅವರು ತಂದೊಡ್ಡಿದ ಯಾವ ಸವಾಲನ್ನೂ ನಾವು ಯಾವುದೇ ಮಟ್ಟದ ರಾಜಿಗೆ ಸಬೂಬಾಗಿ ಬಳಸಿಲ್ಲ. ಯಾರ ಜೊತೆಗೂ ಯಾವುದೇ ಮಟ್ಟದ ರಾಜಿ ಮಾಡಿಕೊಂಡಿಲ್ಲ.
ಸ್ವತಂತ್ರ, ವಸ್ತುನಿಷ್ಠ, ನಿಷ್ಪಕ್ಷ ಮಾಧ್ಯಮದ ಮೌಲ್ಯವನ್ನು ಬಲ್ಲ ಪ್ರಬುದ್ಧ ಓದುಗರು ಈ ಅಂಶವನ್ನು ಗುರುತಿಸಬೇಕು. ‘ವಾರ್ತಾಭಾರತಿ’ ಮಾತ್ರವಲ್ಲ, ಕನ್ನಡ, ಹಿಂದಿ, ಇಂಗ್ಲಿಷ್ ಮುಂತಾದ ವಿವಿಧ ಭಾಷೆಗಳಲ್ಲಿ ಇದೇ ಬಗೆಯ ಮೌಲ್ಯ ನಿಷ್ಠ ಪತ್ರಿಕೋದ್ಯಮವನ್ನು ನಡೆಸುತ್ತಿರುವ ಮತ್ತು ಆ ಕಾರಣಕ್ಕಾಗಿ ಸರ್ವಾಧಿಕಾರಿ ಸರಕಾರಗಳು, ಭ್ರಷ್ಟ ಅಧಿಕಾರಿಗಳು, ಕೋಮುವಾದಿ ಪಕ್ಷ-ಸಂಘಟನೆಗಳು ಇತ್ಯಾದಿ ವಿವಿಧ ವಲಯಗಳಿಂದ ಬೆದರಿಕೆ, ಬಹಿಷ್ಕಾರಗಳನ್ನು ಎದುರಿಸುತ್ತಿರುವ ಹಲವು ಮಾಧ್ಯಮ ಸಂಸ್ಥೆಗಳಿವೆ. ಅಂತಹ ಸಂಸ್ಥೆಗಳ ಬೆಂಬಲಕ್ಕೆ ನಿಲ್ಲಬೇಕು. ಕೇವಲ ತುಟಿಸೇವೆ ಸಾಲದು. ಈ ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ಅಗತ್ಯವಿರುವ ಸಕ್ರಿಯ ಸಹಕಾರ ನೀಡಬೇಕು. ಅನ್ಯಥಾ, ನೇರ ಮಾರ್ಗದಲ್ಲಿರುವ ಮಾಧ್ಯಮಗಳನ್ನು ಕೊಲ್ಲುವುದಕ್ಕೆ ವಕ್ರಮಾರ್ಗಿಗಳು ನಡೆಸುವ ಶ್ರಮದಲ್ಲಿ, ನಿಷ್ಕ್ರಿಯ ಸಜ್ಜನರು ಪರೋಕ್ಷವಾಗಿ ಭಾಗವಹಿಸಿದಂತಾದೀತು.
ಎ.ಎಸ್. ಪುತ್ತಿಗೆ, ಪ್ರಧಾನ ಸಂಪಾದಕ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ